ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಬಂಧನಕ್ಕೆ ವ್ಯಾಪಕ ಖಂಡನೆ

Last Updated 20 ಅಕ್ಟೋಬರ್ 2012, 9:10 IST
ಅಕ್ಷರ ಗಾತ್ರ

ಶಿವಮೊಗ್ಗ: ದಂಡಾವತಿ ಅಣೆಕಟ್ಟೆ ವಿರೋಧಿ ಹೋರಾಟಗಾರರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಗುರುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಯೋಜನಾ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಲು ಗುರುವಾರ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿರುವುದು ಖಂಡನಾರ್ಹ ಆದದು. ಇದನ್ನು ವಿರೋಧಿಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವುದು ಸರ್ವಾಧಿಕಾರಿ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಸಂಚಾಲಕ ಸರ್ಜಾಶಂಕರ ಹರಳಿಮಠ, ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಪರಿಸರ ಹೋರಾಟಗಾರರಾದ ಅಶೋಕ್ ಯಾದವ್, ಡಾ.ಶೇಖರ್ ಗೌಳೇರ್, ರೈತ ಮುಖಂಡರಾದ ವೈ.ಜಿ. ಮಲ್ಲಿಕಾರ್ಜುನ, ರಾಘವೇಂದ್ರ, ವಸಂತ್‌ಕುಮಾರ್, ಸುರೇಶ್ ವಹಿಸಿದ್ದರು.

ಪ್ರಜಾಪ್ರಭುತ್ವ ವಿರೋಧಿ
ಸಾಗರ: ದಂಡಾವತಿ ಯೋಜನೆ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದ ರೈತರನ್ನು ಬಂಧಿಸಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಜೆಡಿಎಸ್ ಮುಖಂಡ ಶಿವಾನಂದ ಕುಗ್ವೆ, ಕುಂಸಿ ಹರೀಶ್, ಷಣ್ಮುಖಕೆಂಚಾಳಸರ, ಎ.ಟಿ. ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ.

ಸೊರಬ ತಾಲ್ಲೂಕಿನ ದಂಡಾವತಿ ಯೋಜನೆ ಅವೈಜ್ಞಾನಿಕವಾದ ಯೋಜನೆಯಾಗಿದೆ. ಅಲ್ಲಿನ ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಈ ಹಿಂದೆ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ದಂಡಾವತಿ ಸಂತ್ರಸ್ತ ರೈತರು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಸರ್ವೇ ಕಾರ್ಯ ನಡೆಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ನೀಡಿದ್ದ ಭರವಸೆ ಸುಳ್ಳಾಗಿದೆ. ರೈತರನ್ನು ಬಂಧಿಸಿ ಅಣೆಕಟ್ಟು ಯೋಜನೆಗೆ ಸರ್ವೇ ನಡೆಸುವುದು ದೌರ್ಜನ್ಯದ ಕ್ರಮವಾಗಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಗೆ ಬಹುಪಾಲು ರೈತರು ವಿರೋಧ ವ್ಯಕ್ತಪಡಿಸಿದರೆ ಅಲ್ಲಿ ಯಾವುದೇ ಯೋಜನೆ ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರವೆ ಕಾನೂನು ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ  ದಂಡಾವತಿ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT