ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ನೆಲದಲ್ಲಿ ಕಾಂಗ್ರೆಸ್-ಸಿಪಿಎಂ ಕದನ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ
Last Updated 3 ಏಪ್ರಿಲ್ 2013, 10:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೋರಾಟದ ನೆಲವೆಂದೇ ಪರಿಗಣಿಸುವ ಬಾಗೇಪಲ್ಲಿ ಕ್ಷೇತ್ರ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಂಚಿನಲ್ಲಿದೆ. ನೂರು ಕಿ.ಮೀ.ದೂರವಾಗುವ ರಾಜಧಾನಿ ಬೆಂಗಳೂರಿಗಿಂತ 100 ಮೀಟರ್‌ನಷ್ಟು ಸಮೀಪದಲ್ಲಿರುವ ಆಂಧಪ್ರದೇಶದ ಗಡಿಭಾಗವೇ ಹೆಚ್ಚು ಹತ್ತಿರ.

ಆಂಧ್ರಪ್ರದೇಶದ ರಾಯಲಸೀಮೆ ಸಂಸ್ಕೃತಿ ಪ್ರಭಾವ ಹೊಂದಿರುವ ಬಾಗೇಪಲ್ಲಿಯಲ್ಲಿ ಚುನಾವಣೆ ನಡೆಯುತ್ತದೆಯೆಂದರೆ ಅದು ಸಂಘರ್ಷವೆಂದೇ ಅರ್ಥ. ಪ್ರತಿ ವಿಷಯವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸುವ ಇಲ್ಲಿನ ಮತದಾರರು ಜನಪ್ರತಿನಿಧಿಯನ್ನು ಆಯ್ಕೆ ಮಾಡುವಾಗಲೂ ತಮ್ಮದೇ ಆದ ಚಿಂತನೆಗೆ ಹೆಚ್ಚು ಒತ್ತು ನೀಡುತ್ತಾರೆ.


ಹಲವು ಪಕ್ಷಗಳು ಅಸ್ತಿತ್ವಕ್ಕೆ ಬಂದರೂ ಮತ್ತು ಅವು ಕೇಂದ್ರ ಮತ್ತು ರಾಜ್ಯದಲ್ಲಿ ಆಳ್ವಿಕೆ ನಡೆಸಿದರೂ ಇಲ್ಲಿನ ಮತದಾರರು ಕಾಂಗ್ರೆಸ್ ಮತ್ತು ಸಿಪಿಎಂ ಎರಡೂ ಪಕ್ಷಗಳಿಗೆ ಹೊರತುಪಡಿಸಿದರೆ ಬೇರೆ ಯಾರಿಗೂ ಅವಕಾಶ ನೀಡಿಲ್ಲ. ಇಲ್ಲಿ ಯಾವಾಗಲೂ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ನೇರ ಹಣಾಹಣಿಯಿದ್ದು, ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಎರಡನೇ ಸ್ಥಾನ ಕೂಡ ಪಡೆಯಲು ಸಾಧ್ಯವಾಗಿಲ್ಲ. ಮತಗಳ ಅಂತರದಲ್ಲಿ ಏರುಪೇರಾದರೂ ಗದ್ದುಗೆಯು ಎರಡೇ ಪಕ್ಷಗಳಿಗೆ ಮಾತ್ರ ಸೀಮಿತವಾಗಿದೆ.

ಆಸಕ್ತಿಕರ ಸಂಗತಿಯೆಂದರೆ, ಇಲ್ಲಿ ಕಾಂಗ್ರೆಸ್‌ನಿಂದ ಬೇರೆ ಬೇರೆ ಅಭ್ಯರ್ಥಿಗಳು ಸೋಲು-ಗೆಲುವು ದಾಖಲಿಸಿದ್ದಾರೆ. ಆದರೆ ಸಿಪಿಎಂನಿಂದ ಮೂರು ಮಂದಿ ಚುನಾವಣೆಯಲ್ಲಿ ಸತತ ಸ್ಪರ್ಧಿಸಿದ್ದಾರೆ. ಮೂವರಲ್ಲಿ ಇಬ್ಬರು ಚನಾವಣೆಯಲ್ಲಿ ವಿಜಯಶಾಲಿಯಾಗಿದ್ದರೆ, ಒಬ್ಬರು ಸೋತಿದ್ದಾರೆ. 1967ರಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ಆದಿನಾರಾಯಣ ಗೆಲುವು ದಾಖಲಿಸುವಲ್ಲಿ ವಿಫಲರಾಗಿದ್ದರು. ನಂತರ 1983ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎ.ವಿ.ಅಪ್ಪಸ್ವಾಮಿರೆಡ್ಡಿಯವರು 11562 ಮತಗಳ ಅಂತರದಿಂದ ವಿಜೇತರಾದರು.

ಎ.ವಿ.ಅಪಸ್ವಾಮಿರೆಡ್ಡಿಯವರ ನಂತರ ಸಿಪಿಎಂನಿಂದ ಸತತ ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ಪಕ್ಷದ ಈಗಿನ ರಾಜ್ಯ ಘಟಕದ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ. 1985 ಮತ್ತು 1989ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅವರು 1994 ಮತ್ತು 2004ರ ಚುನಾವಣೆಯಲ್ಲಿ ವಿಜಯಶಾಲಿಯಾದರು. ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ಎನ್.ಸಂಪಂಗಿ 1999 ಮತ್ತು 2008ರ ಚುನಾವಣೆಯಲ್ಲಿ ವಿಜೇತರಾದರು. ಆದರೆ 2004ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು.

2008ರ ಚುನಾವಣೆಯು ಕಡೆಯ ಕ್ಷಣದವರೆಗೆ ತೀವ್ರ ಕುತೂಹಲ ಕಾಯ್ದುಕೊಂಡಿತ್ತು. ಜಿ.ವಿ.ಶ್ರೀರಾಮರೆಡ್ಡಿ ಮತ್ತು ಎನ್.ಸಂಪಂಗಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರಿಂದ ಯಾರು ಗೆಲ್ಲುತ್ತಾರೆ ಎಂಬುದು ಭಾರಿ ಆಸಕ್ತಿ ಕೆರಳಿಸಿತ್ತು. ಒಂದೊಂದು ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗಲೂ ಒಮ್ಮೆ ಶ್ರೀರಾಮರೆಡ್ಡಿ, ಮಗದೊಮ್ಮೆ ಎನ್.ಸಂಪಂಗಿ ಹೆಚ್ಚಿನ ಮತಗಳನ್ನು ಗಳಿಸುತ್ತಿದ್ದರು. ಇನ್ನೇನು ಅಂತಿಮ ಘಟ್ಟ ತಲುಪಿದಾಗ, ಜಿ.ವಿ.ಶ್ರೀರಾಮರೆಡ್ಡಿಯವರು ವಿಜೇತರಾಗಿದ್ದಾರೆ ಎಂದು ಘೋಷಣೆಯಾಯಿತು.

ಜಿ.ವಿ.ಶ್ರೀರಾಮರೆಡ್ಡಿ ಗೆಲುವು ಸಾಧಿಸಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸಿಪಿಎಂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದ್ದಷ್ಟೇ ಅಲ್ಲ, ಸಿಹಿ ಹಂಚಿ ಸಂತೋಷಪಟ್ಟರು. ದೃಶ್ಯ ಮಾಧ್ಯಮದಲ್ಲೂ ಸುದ್ದಿ ಪ್ರಸಾರವಾಯಿತು. ಚುನಾವಣೆಯಲ್ಲಿ ಸೋತ ನಿರಾಸೆಯಲ್ಲಿ ಎನ್.ಸಂಪಂಗಿಯವರು ಬಾಗೇಪಲ್ಲಿಯಿಂದ ನಿರ್ಗಮಿಸುತ್ತಿದ್ದರು. ಆದರೆ ಇದರ ನಡುವೆಯೇ ಮತಗಳ ಮರು ಎಣಿಕೆ ಕೂಗು ಕೇಳಿ ಬಂದಿತು. ಒತ್ತಾಯದ ಮೇರೆಗೆ ಮತಗಳ ಮರು ಎಣಿಕೆ ಕೈಗೊಂಡಾಗ, ಎಲ್ಲವೂ ಏರುಪೇರಾಯಿತು. ಎನ್.ಸಂಪಂಗಿಯವರು 938 ಮತಗಳ ಅಂತರದಿಂದ ವಿಜಯಶಾಲಿಯಾದರು. ವಿಜೇತರೆಂದು ಘೋಷಿಸಿದ್ದ ಜಿ.ವಿ.ಶ್ರೀರಾಮರೆಡ್ಡಿ ಪರಾಭವಗೊಂಡರು.

ಪ್ರಸಕ್ತ ಸಾಲಿನ ಚುನಾವಣೆಯೂ ಅಷ್ಟೇ ರೋಚಕವಾಗಿದೆ. ಆಯಾ ಪಕ್ಷದ ರಾಜಕಾರಣಿಗಳಿಗೆ ಮಾತ್ರವೇ ಸೀಮಿತವಾಗಿದ್ದ ಚುನಾವಣೆ ಕಣದಲ್ಲಿ ಸಮಾಜಸೇವಕರು ಪ್ರವೇಶಿಸುತ್ತಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾಗಿ ಕಣದಲ್ಲಿ ಇಳಿಯಲು ಬಯಸಿರುವ ಅವರು ವರ್ಷಗಳಿಂದ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ.

ಅಲ್ಲಿನ ಜನರಿಗೆ ಸವಲತ್ತುಗಳನ್ನು ವಿತರಿಸಿರುವ ಅವರು, `ಚುನಾವಣೆಯ ಸಂದರ್ಭದಲ್ಲಿ ನಮ್ಮನ್ನು ಮರೆಯಬೇಡಿ' ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಪರಿಣತ ರಾಜಕಾರಣಿಗಳು ಗೆಲುವು ಸಾಧಿಸುವರೋ ಅಥವಾ ರಾಜಕಾರಣಿಯಾಗಲು ಬಯಸಿರುವ ಸಮಾಜಸೇವಕರು ವಿಜೇತರಾಗುವುರೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT