ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ನೆಲದಲ್ಲಿ ಜಾತಿ , ಬಣಗಳದ್ದೇ ಚರ್ಚೆ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕಾರವಾರ: ಉತ್ತರಕನ್ನಡದ ಕಾಡಿನ ಮಧ್ಯೆ ಇರುವ ಗೌಳಿ ವಾಡಾಗಳಲ್ಲಿ ಈಗ ಬಿಸಿಲಿನ ಝಳ. ಸುತ್ತಲಿನ ಹಸಿರು ಒಣಗಿದೆ. ಬಿದಿರಿನ ಗೋಡೆ, ಹುಲ್ಲು ಹೊದೆಸಿದ ಕತ್ತಲೆಯ ಗುಡಿಸಲಿನ ಮಣ್ಣಿನ ನೆಲ ಮಾತ್ರ ತಂಪಾಗಿದೆ. ಗೌಳಿ ಕುಟುಂಬಗಳು ತಾವು ಸಾಕಿಕೊಂಡ ಹಸು, ಎಮ್ಮೆಗಳಿಗೆ ಹೊಟ್ಟೆ ತುಂಬ ಮೇವು ನೀಡಲು ಕಷ್ಟಪಡುತ್ತಿವೆ.

ಕಾಡಿನ ಒಳಗಿನ ಆ ಭಾಗದಲ್ಲಿ ಇನ್ನೂ ಚುನಾವಣೆಯ ಜ್ವರ ಏರಿಲ್ಲ. ಆದರೆ, ಕಾಡು, ಗುಡ್ಡಗಾಡಿನ ನಿವಾಸಿಗಳಾದ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ದಶಕದ ಹಿಂದೆ ಅವರು ಆರಂಭಿಸಿದ ಹೋರಾಟ ಈಗ ಕಾವು ಪಡೆದಿದೆ.

ಈ ಜಿಲ್ಲೆಯ ಯಲ್ಲಾಪುರ, ಜೊಯಿಡಾ, ಹಳಿಯಾಳ, ಮುಂಡ­ಗೋಡ ತಾಲ್ಲೂಕುಗಳಲ್ಲಿ ಅಂದಾಜು ೮೦ ಸಾವಿರದಷ್ಟು ಗೌಳಿಗಳಿದ್ದಾರೆ. ಮರಾಠಿ ಮಾತನಾಡುವ ಈ ಸಮುದಾ­ಯಕ್ಕೆ ಹೈನುಗಾರಿಕೆ ಕುಲಕಸುಬು.

ಚುನಾವಣೆ ಎದುರಾಗಿರುವ ಈ ಹೊತ್ತಲ್ಲಿ ಗೌಳಿಗಳು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟ ತೀವ್ರಗೊಳಿಸಲು ಹೊರಟಿ­ದ್ದಾರೆ. ಬಿಜೆಪಿ, ಕಾಂಗ್ರೆಸ್‌ನ ಅಭ್ಯರ್ಥಿ­­­ಗಳು ಮತ ಕೇಳಲು ಬಂದಾಗ ಈ ವಿಚಾರ ಮುಂದಿಡ­ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೆಚ್ಚು, ಕಡಿಮೆ ಗೌಳಿಗಳು ವಾಸಿಸುತ್ತಿರುವ ಪರಿಸರ­ದಲ್ಲೇ ಇರುವ ಸಿದ್ಧಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಕುಣಬಿಗಳನ್ನು ಆ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ.

ಈ ಬಗ್ಗೆ ಗೌಳಿ ಹೋರಾಟ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಂಡು ಪಾಟೀಲ್ ಅವರನ್ನು ಮಾತನಾಡಿಸಿ­ದಾಗ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರ ಮೇಲೆ ನೇರ ವಾಗ್ದಾಳಿ ನಡೆಸಿದರು. ಗೌಳಿ ವಾಡಾಗಳ ಕೆಲ ಹಿರಿಯರು ಚುನಾವಣೆಗೇ ಬಹಿಷ್ಕಾರ ಹಾಕಲು ಹೊರಟಿದ್ದರು. ಅವರನ್ನು ತಡೆದಿದ್ದೇವೆ. ೨೦ ವರ್ಷದಿಂದ ದೇಶಪಾಂಡೆ­ಯವರು ಒಂದಲ್ಲ ಒಂದು ಅಧಿಕಾರ ಸ್ಥಾನದಲ್ಲಿ ಇದ್ದಾರೆ. ಆದರೆ, ಸಮಸ್ಯೆ ಗೊತ್ತಿದ್ದೂ ಸ್ಪಂದಿಸುತ್ತಿಲ್ಲ. ಮತ ಕೇಳಲು ಬಂದಾಗ ಅವರ ಮುಂದೆ ಇದೇ ಪ್ರಶ್ನೆ ಇಡುತ್ತೇವೆ ಅಂದರು ಪಾಟೀಲ್.

ಗೌಳಿಗಳಷ್ಟೇ ಅಲ್ಲ, ಹೋರಾಟದ ಪ್ರಶ್ನೆ ಬಂದಾಗಲೆಲ್ಲ ಈ ಜಿಲ್ಲೆಯ ಜನ ಗಟ್ಟಿಯಾಗಿ ನಿಂತಿದ್ದಾರೆ. ಪರಿಸರಕ್ಕೆ ಮಾರಕ­ವಾಗುವ ಹತ್ತಾರು ಯೋಜನೆ­ಗಳ ಪ್ರಸ್ತಾಪ ಎದ್ದಾಗಲೆಲ್ಲ ಸಾತ್ವಿಕ ಹಾಗೂ ಸೈದ್ಧಾಂತಿಕ ಹೋರಾಟ ನಡೆಸಿಯೇ ಆ ಯೋಜನೆಗಳು ರದ್ದಾಗುವಂತೆ ನೋಡಿಕೊಂಡಿದ್ದಾರೆ.

ಶಿರಸಿ ಬಳಿ ಇತ್ತೀಚೆಗೆ ಗಣೇಶ್‌ಪಾಲ್‌­ನಲ್ಲಿ ಶಾಲ್ಮಲಾ ನದಿ­ಯಲ್ಲಿ ಮಿನಿ ಹೈಡಲ್ ಯೋಜನೆ ಕೈಗೊಳ್ಳಲು ಖಾಸಗಿ ಕಂಪೆನಿಯ ಸಮೀಕ್ಷಾ ತಂಡ ಬಂದಾಗ ಸುತ್ತಲಿನ ಹಳ್ಳಿಯ ಜನ ಒಂದಾಗಿ ಪ್ರತಿಭಟಿಸಿದರು. ಪರಿಸರವಾದಿಗಳು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಿದರು. ಯಾವ ಕಾರಣಕ್ಕೂ ಇಂತಹ ಯೋಜನೆ ಜಿಲ್ಲೆಗೆ ಬರಲು ಕೊಡುವುದಿಲ್ಲ ಎಂದು ಕೂಗೆಬ್ಬಿಸಿದ್ದರು.

‘ಇಂತಹ ಮಿನಿ ಹೈಡಲ್ ಜಲ­ವಿದ್ಯುತ್ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯೂ ಬೇಕಾಗುವು­ದಿಲ್ಲ. ೫ ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಪ್ರದೇಶ ಮುಳುಗಡೆ­ಯಾಗು­ವುದರಿಂದ ಇಂಧನ ಇಲಾಖೆಯ ಅನುಮತಿ ಸಾಕು. ಆದರೆ, ಒಮ್ಮೆ ಇಂತಹ ಯೋಜನೆ ಅನುಷ್ಠಾನ­ಗೊಂಡಲ್ಲಿ, ಜಿಲ್ಲೆಯಲ್ಲಿ­ರುವ ಸಣ್ಣ, ದೊಡ್ಡ ನದಿಗಳು, ಹಳ್ಳಗಳಲ್ಲಿ ಮಿನಿ ಹೈಡಲ್ ಯೋಜನೆ ನಿರ್ಮಿಸಲು ಪ್ರಸ್ತಾಪ ಬರುತ್ತದೆ. ಜಿಲ್ಲೆಯ ಜನ ಈಗ ಜಾಗೃತರಾಗಿದ್ದಾರೆ. ತಮ್ಮ ಜಮೀನು ಬಿಟ್ಟುಕೊಡಲು, ಅರಣ್ಯ ಮುಳುಗಡೆ­ಯಾಗಲು ಬಿಡುತ್ತಿಲ್ಲ’ ಎನ್ನುತ್ತಾರೆ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

ಕಾಡು ಪ್ರದೇಶವೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ (ಒತ್ತುವರಿ) ಸಮಸ್ಯೆಯೂ ಇದೆ. ೫೦ರಿಂದ -೬೦ ವರ್ಷಗಳ ಹಿಂದೆ ಅರಣ್ಯದ ಅಂಚಿನ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು, ಮನೆ ಕಟ್ಟಿಕೊಂಡವರು ಇವರು. ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ಕಾಯ್ದೆ ಜಾರಿಗೆ ತಂದಲ್ಲಿ ನೂರಾರು ಜನ ಮನೆ, ತೋಟ ಕಳೆದುಕೊಳ್ಳಬೇಕಾಗುತ್ತದೆ. ಜಿಲ್ಲೆಯ ಗ್ರಾಮೀಣ ಭಾಗದ ೭೦,೦೦೦ ಜನ, ನಗರ ಪ್ರದೇಶದ ೧೨,೦೦೦ ಜನ ಇಂತಹ ಅತಿಕ್ರಮಣದಾರರ ಪಟ್ಟಿಯಲ್ಲಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ೨೦೦೬ರ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ನಿವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ಇತ್ತೀಚೆಗೆ ಕೇವಲ ೨೮೨ ಜನ ಅತಿಕ್ರಮಣ­ದಾರರಿಗೆ ಹಕ್ಕುಪತ್ರ ನೀಡ­ಲಾಗಿದೆ.  ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಈ ನಿಟ್ಟಿನಲ್ಲಿ ಆಸಕ್ತಿ ತೋರಿದ್ದರು. ಚುನಾವಣಾ ತಂತ್ರದ ಭಾಗವಾಗಿ ಸಚಿವ ದೇಶಪಾಂಡೆ ಹೀಗೆ ಮಾಡಿದ್ದಾರೆ. ಆ ಹಕ್ಕುಪತ್ರಕ್ಕೆ ಬೆಲೆ ಇಲ್ಲ ಎಂಬ ಆರೋಪವನ್ನೂ ಸಂಸದ ಅನಂತಕುಮಾರ್ ಹೆಗಡೆ ಮಾಡಿದ್ದಾರೆ.

ಶಿರಸಿಯಲ್ಲಿ ಸಿಕ್ಕ ಅರಣ್ಯ ಭೂಮಿ ಒತ್ತುವರಿ ಹೋರಾಟ­ಗಾರರ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಎ. ರವೀಂದ್ರ ನಾಯ್ಕ, ಬೇರೆಯದೇ ಕಥೆ ಹೇಳಿದರು.

ಕೇಂದ್ರ ಸರ್ಕಾರ ೨೦೦೬ರಲ್ಲಿ ಈ ಕಾಯ್ದೆ ರೂಪಿಸಿದ ನಂತರ ಎಲ್ಲ ರಾಜ್ಯ ಸರ್ಕಾರಗಳಿಗೂ ಗ್ರಾಮ ಅರಣ್ಯ ಹಕ್ಕು ಸಮಿತಿ ಮೂಲಕ ಅರ್ಜಿ ಆಹ್ವಾನಿಸಿ ಹಕ್ಕುಪತ್ರ ನೀಡಲು ಸೂಚಿಸಿತ್ತು. ಒಡಿಶಾ ಒಂದರಲ್ಲೇ ೫ ಲಕ್ಷ ೨೦ ಸಾವಿರ ಜನರಿಗೆ ಇಂತಹ ಹಕ್ಕುಪತ್ರ ನೀಡಲಾಗಿದೆ. ಛತ್ತೀಸ­ಗಡ, ಮಧ್ಯಪ್ರದೇಶ, ತ್ರಿಪುರಾ­ಗಳಲ್ಲೂ ಲಕ್ಷಾಂತರ ಜನ ಹಕ್ಕು­ಪತ್ರ ಪಡೆದಿದ್ದಾರೆ. ನಮ್ಮ ಸರ್ಕಾರ ಮಾತ್ರ ಈ ಬಗ್ಗೆ ಉದಾಸೀನ ಧೋರಣೆ ತಾಳಿತ್ತು. ಕಾಯ್ದೆ ಅನುಷ್ಠಾನ ಸಮರ್ಪಕ­ವಾಗಿ ಆಗದಿದ್ದಲ್ಲಿ ಎಲ್ಲ ಅನುದಾನ­ಗಳನ್ನು ನಿಲ್ಲಿಸು­ವು­ದಾಗಿ ೨೦೧೦ರಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಟ್ಟುನಿಟ್ಟಾಗಿ ಹೇಳಿತು. ಆಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ­ಮಂತ್ರಿ­ಯಾಗಿದ್ದರು.

ತರಾತುರಿಯಲ್ಲಿ ಈ ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದ ೧.೫ ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸಮರ್ಪಕವಾಗಿಲ್ಲ ಎಂದು ವಜಾ ಮಾಡಲಾಯಿತು. ಈ ಸಮಸ್ಯೆ ಇರುವ ಎಲ್ಲ ಗ್ರಾಮಗಳಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸದೇ, ಪ್ರಕ್ರಿಯೆಗಳನ್ನು ಪೂರ್ಣ­ಗೊಳಿಸದೇ ಅರ್ಜಿಗಳನ್ನು ವಿಲೇವಾರಿ ಮಾಡ­ಲಾಯಿತು.

ವಿ. ಬಾಲಸುಬ್ರಮಣಿಯನ್ ನೇತೃ­ತ್ವದ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ವರದಿಯ ಶಿಫಾರಸು ಜಾರಿಗೆ ಹೋರಾಟಗಾರ ಎಸ್. ಆರ್. ಹಿರೇಮಠ ಅವರು ಹೈಕೋರ್ಟ್‌­ಗೆ ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಕೋರ್ಟ್ ಈಗ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕಾಲಮಿತಿಯಲ್ಲಿ ಒತ್ತುವರಿ ತೆರವು­ಗೊಳಿಸುವಂತೆ ಸೂಚಿಸಿದೆ. ತೆರವು ಮಾಡಿದ್ದರ ಕುರಿತು ಪ್ರಮಾಣ­ಪತ್ರ ಸಲ್ಲಿಸಬೇಕು ಎಂದೂ ಹೇಳಿದೆ. ಮಲೆನಾಡು ಭಾಗದ ಬಡ ಜನರೆಲ್ಲ ಈಗ ತಮ್ಮ ಮನೆ, ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

‘ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ೧೧೪ ಕ್ಷೇತ್ರಗಳಲ್ಲಿ ಅರಣ್ಯ ಒತ್ತುವರಿ ಸಮಸ್ಯೆ ಇದೆ. ವಿಧಾನಸಭೆ ಚುನಾವಣೆ­ಯಲ್ಲಿ ಸಾಗರದಿಂದ ಸ್ಪರ್ಧಿಸಿದ್ದ ಕಾಗೋಡು ತಿಮ್ಮಪ್ಪ ಈ ವಿಚಾರ ಮುಂದಿಟ್ಟುಕೊಂಡು ಚುನಾ­ವಣೆ ಎದುರಿಸಿದ್ದರು. ಸ್ಪೀಕರ್ ಆದ ಮೇಲೂ ಈ ಕುರಿತು ಆಸಕ್ತಿ ತೋರು­ತ್ತಿದ್ದಾರೆ. ಇನ್ನುಳಿದ ಶಾಸಕರು, ರಾಜಕಾರಣಿಗಳು ಈ ಬಗ್ಗೆ ದನಿ ಎತ್ತುತ್ತಿಲ್ಲ’ ಎಂಬ ನೋವು ರವೀಂದ್ರ ಅವರಲ್ಲಿತ್ತು. 

ಅಡಿಕೆ ಬೆಳೆಗಾರರು ಹಾಗೂ ತೋಟಗಾರಿಕೆ ಮಾಡುವ­ವರಿಗೆ ಗೊಬ್ಬರ, ಕೊಟ್ಟಿಗೆ ಉಪಯೋಗಕ್ಕಾಗಿ ಬ್ರಿಟಿಷ್ ಕಾಲ­ದಲ್ಲೇ ಕೆಲ ಪ್ರಮಾಣದ ಸೊಪ್ಪಿನ ಬೆಟ್ಟದ ಜಾಗವನ್ನು ಬಿಡ­ಲಾಗಿದೆ. ಈ ಕಿರು ಅರಣ್ಯದ ಮಾಲೀಕತ್ವ ಅರಣ್ಯ ಇಲಾಖೆ­ಯದ್ದೇ ಆದರೂ ಸಂರಕ್ಷಣೆ, ಉಸ್ತುವಾರಿ ಸ್ಥಳೀಯ ತೋಟಗಳವರದ್ದು. ಈ ಅರಣ್ಯ ಉತ್ಪನ್ನಗಳ ಮಾರಾಟದ ಹಕ್ಕನ್ನು ರೈತರಿಗೆ ನೀಡಬೇಕು ಎಂದು ಮೂರು ದಶಕಗಳಿಂದ ಹೋರಾಟ ನಡೆದಿದೆ.

ವಿಶ್ವಸಂಸ್ಥೆಯು ಈ ಸೊಪ್ಪಿನ ಬೆಟ್ಟಗಳನ್ನು ‘ಜಾಗತಿಕ ಪಾರಂಪರಿಕ ಕೃಷಿ ತಾಣ’ವಾಗಿ ಗುರುತಿಸಿದೆ. ರೈತರಿಗೆ ಅರಣ್ಯ ಉತ್ಪನ್ನಗಳ ಮೇಲೆ ಹೆಚ್ಚಿನ ಹಕ್ಕು ನೀಡಿದಾಗ ಅವರು ಈ ಸೊಪ್ಪಿನ ಬೆಟ್ಟದ ಜಾಗಗಳನ್ನು ಮತ್ತಷ್ಟು ಮುತುವರ್ಜಿ­ಯಿಂದ ಸಂರಕ್ಷಿಸುತ್ತಾರೆ’ ಎನ್ನುತ್ತಾರೆ ಪಶ್ಚಿಮಘಟ್ಟ ಕಾರ್ಯಪಡೆಯಲ್ಲಿ ಬೆಟ್ಟ ಉಪಸಮಿತಿ ಸದಸ್ಯರಾಗಿದ್ದ ನರೇಂದ್ರ ಹೊಂಡಗಾಶಿ.

ಕಾರವಾರದ ಕೋರ್ಟ್ ಆವರಣ­ದಲ್ಲಿ ಭೇಟಿಯಾದ ವಕೀಲ ನಾಗರಾಜ ನಾಯಕ, ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ, ಕಾರವಾರಕ್ಕೆ ವಿಮಾನ ನಿಲ್ದಾಣ ಆಗುವುದು ಯಾವಾಗ? ರಾಜಕಾರಣಿಗಳು ಮತ ಕೇಳಲಷ್ಟೇ ಬರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಷ್ಟೆಲ್ಲ ಪ್ರಾಮಾಣಿಕವಾದ ತೊಂದರೆ, ಸಮಸ್ಯೆಗಳೂ ಇದ್ದರೂ ಈ ಜಿಲ್ಲೆಯ ಜನರಿಗೆ, ರಾಜಕಾರಣಿಗಳಿಗೆ ಇವೆಲ್ಲ ಚುನಾವಣಾ ವಿಷಯವಾಗಿ ಕಾಣುತ್ತಿಲ್ಲ. ಕೈಗಾ ಅಣುಸ್ಥಾವರ ವಿರೋಧಿ ಹೋರಾಟದಲ್ಲಿ ತೊಡಗಿ­ಕೊಂಡಿದ್ದ ಸಾಹಿತಿ ಶಿವರಾಮ ಕಾರಂತ ಅವರು ೧೯೮೯ರಲ್ಲಿ ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಕೇವಲ ೫೮,೯೦೨ ಮತಗಳು ಬಿದ್ದಿದ್ದವು.

‘ತಮಗೆ ತೊಂದರೆಯಾಗುತ್ತದೆ ಅಂದಾಗ ಹೋರಾಟದಲ್ಲಿ ತೊಡಗಿ­ಕೊಳ್ಳುವ ಜನ ನಂತರ ಸುಮ್ಮನಾಗಿ­ಬಿಡುತ್ತಾರೆ. ಅದೊಂದು ರಾಜಕೀಯ ಚಳವಳಿಯಾಗುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ವಿಚಾರವೆಲ್ಲ ಚರ್ಚೆ­ಯಾಗುವುದಿಲ್ಲ. ಜಾತಿ ಧ್ರುವೀ­ಕರಣ, ರಾಜಕೀಯ ಪಕ್ಷಗಳಲ್ಲಿ­ರುವ ಗುಂಪುಗಾರಿಕೆಯೇ ಎದ್ದು ಕಾಣುತ್ತದೆ’ ಎನ್ನುತ್ತಾರೆ ಅಂಕೋಲಾದ ಗೋಖಲೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪ­ಕರಾಗಿರುವ ಡಾ. ಸಿದ್ದಲಿಂಗ ಸ್ವಾಮಿ ವಸ್ತ್ರದ.

ಅಸಹನೆಯ ಅಲೆ: ಉತ್ತರಕನ್ನಡ ಜಿಲ್ಲೆಯ ಸದ್ಯದ ರಾಜಕೀಯ ಸ್ಥಿತಿ ಈ ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯಷ್ಟೇ ಸಂಕೀರ್ಣ­ವಾಗಿದೆ. ಕರಾವಳಿಯಗುಂಟ ಭಟ್ಕಳ­ದಿಂದ ಕಾರವಾರದವರೆಗೆ ತಿರುಗಿದಾಗ, ಘಟ್ಟ ಹತ್ತಿ ಯಲ್ಲಾಪುರ, ಶಿರಸಿ, ಸಿದ್ದಾಪುರದ ಜನರ ಅಭಿಪ್ರಾ­ಯಗಳನ್ನು ಗಮನಿಸಿದಾಗ ಮೋದಿ ಅಲೆಯನ್ನು ಮೀರಿಸುವಂತೆ ಜನಸಾ­ಮಾನ್ಯರಲ್ಲಿ, ಬಿಜೆಪಿಯ ಕಾರ್ಯಕರ್ತ­ರಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆಯವರ ವಿರುದ್ಧ ಅಸಮಾಧಾನ, ಅಸಹನೆಯ ಅಲೆ ಎದ್ದಿರುವುದು ಮನದಟ್ಟಾಗುತ್ತದೆ.

ಜೆಡಿಎಸ್‌ ಗೊಂದಲ: ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವಾ­ನಂದ ನಾಯ್ಕ ನಾಮಪತ್ರ ವಾಪಸು ಪಡೆದಿರುವುದು ಜೆಡಿಎಸ್ ಕಾರ್ಯ­ಕರ್ತರಲ್ಲಿ ಗೊಂದಲಕ್ಕೆ ಕಾರಣ­ವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಹೊಸ ಹುರುಪಿನಿಂದ ಪ್ರಶಾಂತ್ ದೇಶಪಾಂಡೆ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹೋರಾಟದ ನೆಲದ ಈ ಜಿಲ್ಲೆಯ ಜನರನ್ನು ಮತ್ತೆ, ಮತ್ತೆ ಕೆದಕಿದರೂ ಅವರು ಜಾತಿ ಧ್ರುವೀಕರಣ ಮತ್ತು ಕಾಂಗ್ರೆಸ್, ಬಿಜೆಪಿಗಳಲ್ಲಿ ಇರುವ ಬಣ ರಾಜಕೀಯದ ಕುರಿತು ಮಾತನಾ­ಡುತ್ತಾರೆಯೇ ಹೊರತೂ ತಮ್ಮ ಸಮಸ್ಯೆಗಳನ್ನು ಚುನಾವಣಾ ವಿಷಯ­ವಾಗಿಸುವ ಕುರಿತು ಚರ್ಚೆ ಮಾಡು­ವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT