ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಡಿ ಅಮರವಾದ ಜೀವಗಳು...

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸ್ವಾರ್ಥ ಸಾಧನೆಯೇ ತುಂಬಿರುವ ಈ ಲೋಕದಲ್ಲಿ ತಮ್ಮ ಜೀವನವನ್ನು ಪರಿಗಣಿಸದೆ, ಇನ್ನೊಬ್ಬರ ಬದುಕಿನ ಹಕ್ಕಿಗಾಗಿ ಹೋರಾಡಿದವರು ಇವರು. ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಮಾನವ ಹಕ್ಕುಗಳಿಗಾಗಿ ಹೋರಾಡಿ ದುರಂತ ಅಂತ್ಯ ಕಂಡವರ ನೆನಪಿಗಾಗಿ ಈ ಕಿರುಪರಿಚಯ..

ರಚೆಲ್ ಕೊರ್ರಿ
ಇಸ್ರೇಲ್ ಮತ್ತು ಪ್ಯಾಲಿಸ್ಟೇನ್  ಮಧ್ಯೆ ನಡೆಯುತ್ತಿರುವ ನಿರಂತರ ಯುದ್ಧದಲ್ಲಿ ಸಾವಿರಾರು ಜನರು ಹತರಾಗುತ್ತಿದ್ದಾರೆ. ಹಾಗೇ ಪ್ಯಾಲಿಸ್ಟೇನ್‌ನ ಗಾಜಾಪಟ್ಟಿಯ ಸುತ್ತ  ಮುತ್ತ ನಡೆಯುತ್ತಿರುವ ಹತ್ಯಾಕಾಂಡಗಳು, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ.  ಇದನ್ನು ಪ್ರಶ್ನಿಸುವ ಮಾನವ ಹಕ್ಕು ಹೋರಾಟಗಾರರ ಉಸಿರನ್ನು ನಿಲ್ಲಿಸುತ್ತಿರುವುದು ದುರಂತ. ಇಸ್ರೇಲಿನ ಪಾಶವೀಕೃತ್ಯಕ್ಕೆ ಬಲಿಯಾದ ಮಾನವಹಕ್ಕು ಹೋರಾಟಗಾರ್ತಿ ರಚೆಲ್ ಕೊರ್ರಿ ಅವರ ಮನಮಿಡಿಯುವ ಕಥೆ ಇಲ್ಲಿದೆ.

ರಚೆಲ್ ಮೂಲತಃ ಅಮೆರಿಕದವರು. ಒಲಂಪಿಯಾ ವಿಶ್ವವಿದ್ಯಾಲಯದಲ್ಲಿ ಮಾನವ ಹಕ್ಕುಗಳ ವಿಷಯದಲ್ಲಿ ಪದವಿ ಪಡೆದು, ಗಾಜಾಪಟ್ಟಿಯಲ್ಲಿರುವ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು.

ಇಸ್ರೇಲ್‌ಸೈನಿಕರ ಪ್ರಾಣ ಬೆದರಿಕೆ ನಡುವೆ ಸ್ಥಳೀಯರ ಪರವಾಗಿ ಎರಡು ವರ್ಷ ದಿಟ್ಟವಾಗಿ ಹೋರಾಟ ನಡೆಸಿದ್ದರು. ಇಲ್ಲಿ ಇಸ್ರೇಲ್ ಸೈನಿಕರು ನಡೆಸುತ್ತಿದ್ದ  ಮಾನವ ಕಳ್ಳಸಾಗಣಿಕೆ,  ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲಿನ  ಅತ್ಯಾಚಾರ ಪ್ರಕರಣಗಳ ವರದಿಯನ್ನು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಕಳುಹಿಸುತ್ತಿದ್ದರು. ಈ ವಿಷಯ ಇಸ್ರೇಲಿ ಸೈನಿಕರಿಗೆ ತಿಳಿದಿತ್ತು.

2003 ಮಾರ್ಚ್ 16ರಂದು ಗಾಜಾಪಟ್ಟಿ ಹೊರವಲಯದಲ್ಲಿರುವ  ಮನೆಯೊಂದರ ಮೇಲೆ ಇಸ್ರೇಲ್ ಸೈನಿಕರು ಅಕ್ರಮ ದಾಳಿ ನಡೆಸಲಿದ್ದಾರೆ ಎಂಬ ವಿಷಯ ರಚೆಲ್ ತಂಡಕ್ಕೆ ತಿಳಿಯಿತು. ಕೂಡಲೇ ಅವರು ತಮ್ಮ ತಂಡದೊಂದಿಗೆ ಆ ಮನೆ ಎದುರು ಪ್ರತಿಭಟನೆಗೆ ಕುಳಿತರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಇಸ್ರೇಲ್ ಸೈನ್ಯ ಬುಲ್ಡೋಜರ್‌ಸಮೇತ ಆಗಮಿಸಿತು. ಇಲ್ಲಿಂದ ತೆರಳುವಂತೆ ರಚೆಲ್ ತಂಡಕ್ಕೆ ಸೈನಿಕರು ಮನವಿ ಮಾಡಿದರು.

ಆದರೆ ರಚೆಲ್ ಅಲ್ಲಿಂದ ಕದಲಲಿಲ್ಲ. ಕೂಡಲೇ ಮನೆಯನ್ನು ಧ್ವಂಸ ಮಾಡುವಂತೆ ಬುಲ್ಡೋಜರ್ ಚಾಲಕನಿಗೆ ಸೈನಿಕರು ಆದೇಶ ನೀಡಿದರು. ಚಾಲಕ ರಚೆಲ್ ಮೇಲೆ ಬುಲ್ಡೋಜರ್ ಚಾಲನೆ ಮಾಡಿಯೇ ಬಿಟ್ಟ. ತೀವ್ರವಾಗಿ ಗಾಯಗೊಂಡಿದ್ದ ರಚೆಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕೇವಲ 23 ವರ್ಷಕ್ಕೆ ರಚೆಲ್ ಇಸ್ರೇಲ್ ಕ್ರೌರ್ಯಕ್ಕೆ ಬಲಿಯಾದರು. ಮಾನವ ಹಕ್ಕುಗಳಿಗಾಗಿ ಹೋರಾಡಿ ದುರಂತ ಸಾವು ಕಂಡರು.

ಇರ್ಫಾನ್ ಆಲಿ
ಪಾಕ್‌ನ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಲ್ಲಿ 2013ರ ಜನವರಿ 11ರಂದು ಭೀಕರ ಬಾಂಬ್ ಸ್ಫೋಟ ಸಂಭವಿಸಿತು. ಸುದ್ದಿ ತಿಳಿದ ಕೂಡಲೇ ಮಾಧ್ಯಮಗಳು, ಫ್ರಿಡಂ ಹೌಸ್ ಸಂಸ್ಥೆ ಸೇರಿದಂತೆ ಹಲವಾರು ಸ್ವಯಂ ಸೇವಾ ಸಂಸ್ಥೆಗಳು, ಆಸ್ಪತ್ರೆ ಸಿಬ್ಬಂದಿಗಳು  ಸ್ಥಳಕ್ಕೆ ಧಾವಿಸಿದರು. ದಾಳಿಗೆ ತುತ್ತಾಗಿ ನರಳುತ್ತಿದ್ದ ರಕ್ತಸಿಕ್ತ ಜನರನ್ನು ಆಂಬುಲೆನ್ಸ್‌ಗೆ ಸಾಗಿಸುತ್ತಿರುತ್ತಾರೆ. ಇವರಲ್ಲಿ ಯುವಕನೊಬ್ಬ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆ ನೀಡುತ್ತ ಮೊಬೈಲ್ ನಲ್ಲಿ ಟ್ವೀಟ್ ಮಾಡುತ್ತಿರುತ್ತಾನೆ.

ಪ್ರಬಲ ಬಾಂಬ್ ಸ್ಫೋಟ, ನೂರಾರು  ಜನ ಸಾವಿಗೀಡಾಗಿರಬಹುದು,  ಸಂತ್ರಸ್ಥರ ಸೇವೆಯಲ್ಲಿ ನಿರತನಾಗಿದ್ದೇನೆ, ಸ್ವಯಂ ಸೇವಾ

ಸಂಸ್ಥೆಗಳು, ರಕ್ತ ಬ್ಯಾಂಕ್‌ಗಳು  ಕೂಡಲೇ ಸ್ಥಳಕ್ಕೆ ಧಾವಿಸಬೇಕು ಎಂದು ಟ್ವೀಟ್ ಮಾಡಿ,  ಗಾಯಗೊಂಡಿದ್ದ ಮಗುವನ್ನು ಎತ್ತಿಕೊಂಡು ಕಾರೊಂದರ ಬಳಿ ಬರುವಷ್ಟರಲ್ಲಿ ಅದು ಸ್ಫೋಟಗೊಳ್ಳುತ್ತದೆ. ಮಗು ಮತ್ತು ಯುವಕ ಸ್ಥಳದಲ್ಲೇ ಛಿದ್ರಗೊಳ್ಳುತ್ತಾರೆ.
ಇದು 33ರ ಹರೆಯದ  ಮಾನವ ಹಕ್ಕುಗಳ ಯುವ ಹೋರಾಟಗಾರ ಇರ್ಫಾನ್ ಆಲಿಯಾ ದಾರುಣ ಕಥೆ.

ಪಾಕಿಸ್ತಾನವನ್ನು ಬದಲಿಸಬೇಕು ಎಂಬ ಕನಸು ಹೊತ್ತ ಯುವಕ ಭಯೋತ್ಪಾದಕರ ಪಾಶವೀ ಕೃತ್ಯಕ್ಕೆ ಬಲಿಯಾದ ದುರ್ದೈವಿ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು, ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಮತ್ತು ಜನತೆ ಉದಾರತೆಯನ್ನು ಅನುಭವಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ತಮ್ಮ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಫ್ರೀಡಂ ಹೌಸ್ ಎಂಬ ಸಂಸ್ಥೆಯನ್ನು ಕಟ್ಟಿದ್ದರು.

ತಾಲಿಬಾನ್‌ಗಳ ಜೀವ ಬೆದರಿಕೆ ನಡುವೆಯೂ ದೇಶದ ಮೂಲೆ ಮೂಲೆಗೆ ತೆರಳಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಇರ್ಫಾನ್ ಸೇವೆಯನ್ನು ಗುರುತಿಸಿದ್ದ ವಿಶ್ವ ಸಂಸ್ಥೆಯ ಶಾಂತಿಪಾಲನಾ ಸಮಿತಿ  2012ರಲ್ಲಿ ಭವಿಷ್ಯದ ಯುವ ನಾಯಕ ಎಂಬ ಬಿರುದು ನೀಡಿ ಸನ್ಮಾನಿಸಿತ್ತು.

ಎರಿಕ್ ಓ ಲೆಂಬೆಂಬೆ

ಮಧ್ಯ ಆಫ್ರಿಕಾದ ಕ್ಯಾಮರೂನ್ ದೇಶದ ಎರಿಕ್ ಓ ಲೆಂಬೆಂಬೆ ಅವರು ದೇಶದ ಸಂಪ್ರದಾಯವಾದಿಗಳು ಮತ್ತು ಸರ್ಕಾರದ ವಿರೋಧ ಕಟ್ಟಿಕೊಂಡು ಅತಿ ಕಿರಿಯ ವಯಸ್ಸಿಗೆ ಬೀದಿ ಹೆಣವಾದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ.

ಎರಿಕ್‌ಲೈಂಗಿಕ ಅಲ್ಪಸಂಖ್ಯಾತರು, ಸಲಿಂಗ ಕಾಮಿಗಳು ಮತ್ತು ಹಿಜಡಾಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು. 2005ರಲ್ಲಿ ಸರ್ಕಾರವನ್ನು ನಿಯಂತ್ರಿಸುತ್ತಿರುವ ಸಂಪ್ರದಾಯವಾದಿಗಳು 120ಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರ ಹತ್ಯೆ ಯನ್ನು ದಾಖಲೆ ಸಮೇತ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು. ಎರಿಕ್ ಅವರ ಬ್ಲಾಗ್ ಬರಹ ಸಂಪ್ರದಾಯವಾದಿಗಳನ್ನು ಕೆರಳಿಸಿತ್ತು.

ಕೆಲ ಆಫ್ರಿಕಾ ದೇಶಗಳಲ್ಲಿ ಸಲಿಂಗ ಕಾಮಿಗಳನ್ನು ಕೊಲ್ಲುವ ಪರಿಪಾಠ ಜೀವಂತವಾಗಿದೆ. ಹಿಜಡಾಗಳನ್ನು ಕೀಳು ಭಾವನೆಯಿಂದ ನೋಡಲಾಗುತ್ತದೆ. ಅವರಿಗೆ ಮತದಾನ ಸೇರಿದಂತೆ ಕೆಲ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ. ಈ ಬಗ್ಗೆ ಎರಿಕ್ ದನಿ ಎತ್ತಿದ್ದರು. ಲೈಂಗಿಕ ಅಲ್ಪಸಂಖ್ಯಾತರಿಗೆ ಮತ್ತು ಹಿಜಡಾಗಳಿಗೆ ಸಮಾನ ಹಕ್ಕುಗಳನ್ನು ನೀಡುವಂತೆ ಹೋರಾಟ ನಡೆಸುತ್ತಿದ್ದರು. ಇವರ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ವಿಶ್ವ ಮಾನವ ಹಕ್ಕುಗಳ ಸಂಘಟನೆಗೆ ದಾಖಲೆ ಸಹಿತ ವರದಿ ನೀಡಿದ್ದರು.

ಎರಿಕ್ ಅಂತರರಾಷ್ಟ್ರೀಯವಾಗಿ ಗಮನ ಸೆಳೆದಿದ್ದ ಮಾನವ ಹಕ್ಕುಗಳ ಯುವ ಹೋರಾಟಗಾರ. ಹಾಗಾಗಿ 2005ರ ಡಿಸೆಂಬರ್‌ನಲ್ಲಿ ನಡೆಯಲಿದ್ದ  ವಿಶ್ವ ಮಾನವ ಹಕ್ಕುಗಳ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ಬಂದಿತ್ತು.

ಕಾರ್ಯಕ್ರಮಕ್ಕೆ ತೆರಳುವ ಮುನ್ನವೇ ಎರಿಕ್‌ಹೆಣವಾಗಿದ್ದರು. ಒಂಟಿಯಾಗಿ ಬದುಕುತ್ತಿದ್ದ ಅವರ  ಮನೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಲೈಂಗಿಕ ಅಲ್ಪಸಂಖ್ಯಾತರ ಬದುಕಿಗೆ ಬೆಳಕು ನೀಡಲು ಹೋಗಿ ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡರು.

ಸ್ಟೈನ್ಸ್ ಸ್ಲಾವ್ ಮಾರ್ಕೆಲೊವ್
ಸ್ಟೈನ್ಸ್‌ಸ್ಲಾವ್ ಮಾರ್ಕೆಲೊವ್ ರಷ್ಯಾದ ಖ್ಯಾತ ಮಾನವಹಕ್ಕು ಹೋರಾಟಗಾರ. 2009ರ ಜನವರಿ 9ರಂದು ಮಾಸ್ಕೋದಲ್ಲಿ ಮಾರ್ಕೆ­

ಲೊವ್ ಅವರನ್ನು ಅಪರಿಚಿತ ದುಷ್ಕರ್ಮಿ­ಗಳು ಮನಬಂದಂತೆ ಗುಂಡಿನದಾಳಿ ನಡೆಸಿ ಹತ್ಯೆ ಮಾಡಿದ್ದರು. 34ನೇ ವರ್ಷಕ್ಕೆ  ಪ್ರಾಣ ಕಳೆದುಕೊಂಡ ಮಾರ್ಕೆಲೊವ್ ಅವರ ದುರಂತ ಕಥೆ ಇದು. 

ಮಾಸ್ಕೋದಲ್ಲಿ ಜನಿಸಿದ್ದ ಮಾರ್ಕೆಲೊವ್ ವೃತ್ತಿಯಲ್ಲಿ ವಕೀಲರು. ರಷ್ಯಾ ಮತ್ತು ಚೆಚನ್ಯಾ ನಡುವಿನ ವಿವಾದದಲ್ಲಿ ಅಮಾಯಕರು ಬಲಿಯಾಗುತ್ತಿರುವುದನ್ನು ಕಣ್ಣಾರೆ ಕಂಡು ಮರುಗಿದವರು.

ರಷ್ಯಾ ಸೈನಿಕರು ಚೆಚನ್ಯಾ ನಾಗರಿಕರ ಮೇಲೆ ನಡೆಸುತ್ತಿದ್ದ ಕ್ರೂರ ಕೃತ್ಯಗಳನ್ನು ಬಯಲಿಗೆಳೆಯುವ ಮೂಲಕ ರಷ್ಯಾ ಸೇನೆಯ ವೈರತ್ವ ಕಟ್ಟಿಕೊಂಡಿದ್ದರು.  ಸೇನೆಯ ಹಿರಿಯ ಅಧಿಕಾರಿಗಳು ಚೆಚನ್ಯಾ ಜನರ ಮೇಲೆ ನಡೆಸಿದ್ದ 150 ಕ್ಕೂ ಹೆಚ್ಚು ಹತ್ಯೆ ಪ್ರಕರಣಗಳನ್ನು ನಿಖರ ಪುರಾವೆಗಳೊಂದಿಗೆ ಮಾಸ್ಕೋ ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಸೇನೆಯ ಹಿರಿಯ ಅಧಿಕಾರಿ ಯೂರಿ ಬುದಾನೊವಾ ಚೆಚನ್ಯಾ ಜನರ ಮೇಲೆ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದರು. ಚೆಚನ್ಯಾದ ಮೇಲೆ ದಾಳಿ ನಡೆಸಿದಾಗ ಬುದಾನೊವಾ ನೂರಾರು ಜನರನ್ನು ಕೊಲೆಗೈದು ಅಲ್ಲಿನ ಹೆಣ್ಣು ಮಕ್ಕಳನ್ನು ಅಪಹರಿಸಿ ಗೌಪ್ಯವಾಗಿ ಸೇನಾ ಶಿಬಿರಗಳಲ್ಲಿಡುತ್ತಿದ್ದರು. ಸೈನಿಕರೊಂದಿಗೆ ಸೇರಿ ಅವರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದರು. ರಷ್ಯಾದ ನಿಷ್ಠಾವಂತ ಅಧಿಕಾರಿ ಎಂದೇ ಬುದಾನೊವಾ ಜನಪ್ರಿಯರಾಗಿದ್ದರು.  ಇವರ ವಿರುದ್ಧ ಸಹ ಮಾರ್ಕೆಲೊವ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಮಾರ್ಕೆಲೊವ್‌ಗೆ ಗೆಲುವು ಸಿಗಲಿದೆ ಎಂಬುದನ್ನು ಅರಿತಿದ್ದ ಬುದಾನೊವಾ  ಸುಫಾರಿ ನೀಡಿ ಮಾರ್ಕೆಲೊವ್ ಅವರನ್ನು ಕೊಲ್ಲಿಸಿದರು.  ಅಂತರರಾಷ್ಟ್ರೀಯ ಶ್ರೇಷ್ಠ ಮಾನವಹಕ್ಕು ಹೋರಾಟಗಾರ ಎಂಬ ಪ್ರಶಸ್ತಿಯನ್ನು ಮಾರ್ಕೆಲೊವ್ ಪಡೆದಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT