ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಿ ಬರ್ತಿದೆ

Last Updated 7 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಖಳನಾಯಕನಾಗಿ, ನಾಯಕನಾಗಿ ಹೆಸರು ಮಾಡಿ ಮರೆಯಾದ ಪ್ರಭಾಕರ್ ಅವರನ್ನು ಹೆಚ್ಚು ಬೆಳೆಸಿದ್ದು ಉತ್ತರ ಕರ್ನಾಟಕದ ಸಿನಿರಸಿಕರು. ತಂದೆಯನ್ನು ಬೆಂಬಲಿಸಿ ಬೆಳೆಸಿದಂತೆ ಅವರ ಮಗ ವಿನೋದ್ ಪ್ರಭಾಕರ್ ಅವರನ್ನು ಅಪ್ಪಿಕೊಳ್ಳಲಿ ಎನ್ನುವ ಉದ್ದೇಶದಿಂದಲೋ ಅಥವಾ ತಮ್ಮ ಪ್ರಾದೇಶಿಕ ಪ್ರೇಮದಿಂದಲೋ ಏನೋ, ನಿರ್ದೇಶಕ ನಾಗೇಂದ್ರ ಮಾಗಡಿ ತಮ್ಮ ನಿರ್ದೇಶನದ ‘ಹೋರಿ’ ಚಿತ್ರದ ಸುದ್ದಿಗೋಷ್ಠಿಯನ್ನು ಹಾವೇರಿಯಲ್ಲಿ ನಡೆಸಿದರು.

‘ಗುರುವಿನ ಋಣ ತೀರಿಸಲು ಇದೊಂದು ಅವಕಾಶ’ ಎಂಬ ಋಣಭಾದೆಯಿಂದಲೇ ಮಾತು ಆರಂಭಿಸಿದ ನಾಗೇಂದ್ರ- ‘ಹತ್ತು ವರ್ಷಗಳ ಕಾಲ ಪ್ರಭಾಕರ್ ಗರಡಿಯಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಆ ಗುರುವಿನ ಋಣ ತೀರಿಸಲು ಅವರ ಮಗನನ್ನು ಹಾಕಿಕೊಂಡು ಒಂದು ಉತ್ತಮ ಸಿನಿಮಾ ಮಾಡಬೇಕೆಂಬ ಕನಸು ಕಂಡಿದ್ದೆ. ಅದು ‘ಹೋರಿ’ ಚಿತ್ರದ ಮೂಲಕ ನನಸಾಗಿದೆ’ ಎಂದರು.

ನಾಗೇಂದ್ರ ಅವರ ಹಂಬಲಕ್ಕೆ ಸಾಥ್ ನೀಡಿದವರು ಪ್ರಭಾಕರ್ ಅವರ ಅಭಿಮಾನಿ ಹಾಗೂ ಗರಡಿ ಮನೆ ಪೈಲ್ವಾನ್ ಲಿಂಗೇಗೌಡ್ರು. ಪ್ರಭಾಕರ್ ನಾಯಕತ್ವದಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ಅವರಲ್ಲಿತ್ತಂತೆ. ಆದರೆ, ಹಣದ ಮುಗ್ಗಟ್ಟಿನಿಂದಾಗಿ ಆ ಆಸೆ ಈಡೇರಲಿಲ್ಲ. ಈಗ ಅವರ ಮಗ ವಿನೋದ್ ಮೂಲಕ ತಮ್ಮ ಹಳೆಯ ಆಸೆಯನ್ನು ಮತ್ತೊಂದು ರೀತಿಯಲ್ಲಿ ಲಿಂಗೇಗೌಡ್ರು ನನಸು ಮಾಡಿಕೊಂಡಿದ್ದಾರೆ.

‘ಗೆಲ್ಲಿಸಲು ಯಾರೂ ಬರುವುದಿಲ್ಲ. ಗೆದ್ದಮೇಲೆ ಎಲ್ಲರೂ ಬರುತ್ತಾರೆ. ಆದರೆ, ನಿರ್ದೇಶಕ ನಾಗೇಂದ್ರ ಮಾಗಡಿ ಹಾಗೂ ನಿಮಾಪಕ ಲಿಂಗೇಗೌಡ್ರು ತಮ್ಮ ತಂದೆಯ ಮೇಲಿನ ಪ್ರೀತಿ, ಅಭಿಮಾನದಿಂದ ತಮ್ಮನ್ನು ಗೆಲ್ಲಿಸಲು ಬಂದಿದ್ದಾರೆ. ನಾಗೇಂದ್ರ ಅವರಿಗೆ ನಮ್ಮ ತಂದೆ ಗುರುವಾದರೆ, ನನಗೆ ನಾಗೇಂದ್ರ ಅವರೇ ಗುರುಗಳು. ಅವರು ಚಿತ್ರೀಕರಣದ ಪ್ರತಿ ಹಂತದಲ್ಲಿಯೂ ನನಗೆ ಮಾರ್ಗದರ್ಶನ ಮಾಡಿ ಒಂದು ಉತ್ತಮ ಚಿತ್ರ ನಿರ್ಮಿಸಿದ್ದಾರೆ. ಚಿತ್ರ ಯಶಸ್ಸು ಗಳಿಸುವುದು ಖಚಿತ’ ಎಂದು ವಿನೋದ್ ಪ್ರಭಾಕರ್ ಹೇಳಿದರು.

‘ಹೋರಿ ಎಂದಾಕ್ಷಣ ಇದು ಕೇವಲ ಆಕ್ಷನ್ ಸಿನಿಮಾ ಅಂದುಕೊಳ್ಳಬಾರದು. ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡಬಹುದಾದ ಶುದ್ಧ ಮನರಂಜನೆಯ ಚಿತ್ರವಿದು. ಗ್ರಾಮೀಣ ಕುಟುಂಬಗಳಲ್ಲಿ ದಿನನಿತ್ಯ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು. ಸುಮಧುರ ಹಾಡುಗಳಿವೆ’ ಎನ್ನುವುದು ನಿರ್ದೇಶಕರ ಅನಿಸಿಕೆ.

‘ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಬಜೆಟ್ ನಾಲ್ಕು ಕೋಟಿ ದಾಟಿದೆ. ಅದಕ್ಕೆ ನಿರ್ಮಾಪಕ ಲಿಂಗೇಗೌಡ್ರ ಉದಾರತನವೇ ಕಾರಣ. ವಿನೋದ್ ಪ್ರಭಾಕರ್‌ಗೆ ನಾಯಕಿಯರಾಗಿ ಗೌರಿ ಮುಂಜಾಲ್ ಹಾಗೂ ರಮಣೀತು ಚೌಧರಿ ಇದ್ದಾರೆ. ಆರು ಹಾಡುಗಳಿದ್ದು, ಅವುಗಳಲ್ಲಿ ಮೂರನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಲಾಗಿದೆ. ರೇಣುಕುಮಾರ ಸಂಗೀತ ನಿರ್ದೇಶನ, ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿದೆ’ ಎಂದು ‘ಹೋರಿ’ ಬಳಗದ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿದರು. ಜೊತೆಗೆ ಚಿತ್ರವು ನಿರೀಕ್ಷೆಗೂ ಮೀರಿ ಉತ್ತಮವಾಗಿ ಮೂಡಿ ಬಂದಿದ್ದು, ಚಿತ್ರರಂಗದಲ್ಲಿ ವಿನೋದ್ ಅವರಿಗೆ ಹೊಸ ತಿರುವು ನೀಡುವ ಭರವಸೆ ತಮಗಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ‘ಹೋರಿ’ಯನ್ನು ಇದೇ ತಿಂಗಳಲ್ಲಿ ತೆರೆಕಾಣಿಸಲು ಸಿದ್ಧತೆ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT