ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡ್‌ಬಾಲ್‌ ಟೂರ್ನಿ: ಅವ್ಯವಸ್ಥೆ ಆಗರ

Last Updated 4 ಡಿಸೆಂಬರ್ 2013, 8:05 IST
ಅಕ್ಷರ ಗಾತ್ರ

ಗದಗ: ಸ್ಥಳೀಯ ಗಾಂಧಿನಗರ (ಸೆಟ್ಲಮೆಂಟ್)­ನಲ್ಲಿ ಮಂಗಳವಾರದಿಂದ ಆರಂಭಗೊಂಡ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯ ಮೊದಲನೆಯ ದಿನವೇ ಅವ್ಯವಸ್ಥೆಯ ಆಗರವಾಗಿತ್ತು.

ಸಂಘಟಕರ ಅವ್ಯವಸ್ಥೆಯಿಂದ ಆಕ್ರೋಶ­ಗೊಂಡ ವಿವಿಧ ಜಿಲ್ಲೆಗಳ  ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿ  ಡಾ.ಎಸ್‌.ಡಿ.ಶರಣಪ್ಪ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎಸ್‌.­ಗೌಡರ ಎದುರೇ ಅಸಮಾಧಾನ ಹೊರ ಹಾಕಿದರು.

ಧ್ವಜಾರೋಹಣ ನೆರವೇರಿಸಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರತ್ತ ಧಾವಿಸಿದ ಕ್ರೀಡಾಪಟಗಳು ಮತ್ತು ದೈಹಿಕ ಶಿಕ್ಷಕರು, ಕುಡಿಯುವ ನೀರು, ಉಪಹಾರ ಮತ್ತು ಮೂಲ ಸೌಲಭ್ಯ ನೀಡುವಂತೆ ಮನವಿ ಮಾಡಿದರು.

‘ನೋಂದಣಿ ಕಾರ್ಯ  ಹೊರತು ಪಡಿಸಿ ಯಾವುದೇ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿಲ್ಲ.ಉಪಹಾರ ನೀಡದೆ ಇಲ್ಲಿಗೆ ನೇರವಾಗಿ ಕ್ರೀಡಾಂಗಣಕ್ಕೆ ಕರೆದುಕೊಂಡು ಬರಲಾಗಿದೆ. ಇಲ್ಲಿಯು ಉಪಹಾರದ ವ್ಯವಸ್ಥೆ ಮಾಡಿಲ್ಲ. ಹಸಿದ ಹೊಟ್ಟೆಯಲ್ಲಿ ಆಡುವುದಾದರೂ ಹೇಗೆ. ನಗರದಿಂದ 3–4 ಕಿ.ಮೀ. ದೂರದಲ್ಲಿ ವಸತಿ ಸೌಕರ್ಯ ನೀಡಲಾಗಿದೆ. ಕುಡಿಯಲು ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ’ ಎಂದು ಅಳಲು ತೊಡಿಕೊಂಡರು.

‘ಕ್ರೀಡಾಪಟುಗಳಿಗೆ ಯಾವುದೇ ತೊಂದರೆ­ಯಾಗ­ದಂತೆ ಕುಡಿಯುವ ನೀರು, ಊಟ, ಉಪಹಾರ ವ್ಯವಸ್ಥೆಯನ್ನು ಕಲ್ಪಿಸುವುದಾಗಿ’ ಜಿಲ್ಲಾಧಿಕಾರಿ ಎನ್‌.ಎಸ್‌.ಪ್ರಸನ್ನಕುಮಾರ ಭರವಸೆ ನೀಡಿದರು.

ರಾಜ್ಯದ  25 ಜಿಲ್ಲೆಗಳಿಂದ  43 ತಂಡಗಳು (24- ಬಾಲಕರು, 19-ಬಾಲಕಿಯರು),  700 ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.
‘ಮಹಿಳಾ ಕ್ರೀಡಾಪಟುಗಳಿಗೆ ಜೆ.ಟಿ.ಕಾಲೇಜು, ನಗರೇಶ್ವರ ದೇವಸ್ಥಾನದ ವಾಸವಿ ಶಿಕ್ಷಣ ಸಂಸ್ಥೆ,ರಡ್ಡಿ ಕಾಲೇಜು, ಲೋಯಿಲಾ ಪ್ರೌಢಶಾಲೆಯಲ್ಲಿ ಹಾಗೂ ಪುರುಷ ಕ್ರೀಡಾಪಟುಗಳಿಗೆ ಕನಕ ಭವನ, ಮೈಲಾರಪ್ಪ ಮೆಣಸಗಿ ಮಹಾವಿದ್ಯಾಲಯ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಸತಿ ಕಲ್ಪಿಸಲಾಗಿದೆ. ಈ ಪಂದ್ಯಾವಳಿಗೆ ಜಿಲ್ಲೆಯಲ್ಲಿ  ನಿರ್ಣಾಯಕರು ಇಲ್ಲದಿರುವುದರಿಂದ ಬೆಳಗಾವಿ ಜಿಲ್ಲೆಯಿಂದ 15 ನಿರ್ಣಾಯಕರು ಬಂದಿದ್ದಾರೆ. ಎಲ್ಲರಿಗೂ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯ’ ಎಂದು ಪದವಿ ಪೂರ್ವ ಶಿಕ್ಷಣ
ಇಲಾಖೆಯ ಉಪನಿರ್ದೆೇಶಕ ಬಿ.ಎಸ್.ಗೌಡರ ಹೇಳಿದರು.

‘ಉಪಹಾರ ವ್ಯವಸ್ಥೆ ಇಲ್ಲದಿರುವುದರಿಂದ ಹೊರಗಿನಿಂದ ಉಪಹಾರ ತಯಾರಿಸಿಕೊಂಡು ಕ್ರೀಡಾಪಟುಗಳಿಗೆ ನೀಡುತ್ತಿದ್ದೇವೆ. ಜೊತೆಗೆ ಎಸ್‌ಜೆಎಫ್ಐ (ಸ್ಟುಡೆಂಟ್ ಗೇಮ್ ಫೆಡರೇಷನ್ ಆಫ್ ಇಂಡಿಯಾ)ದ ಮಾಹಿತಿಯಂತೆ ಈಗಾಗಲೇ ಬಾಲಕಿಯರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ಚಂಡಿಗಡದಲ್ಲಿ ಮುಗಿದಿರುವುದರಿಂದ ಇಲ್ಲಿ ನಡೆಯುವ ಬಾಲಕಿಯರ ಪಂದ್ಯಾವಳಿಗೆ ಅರ್ಥವಿಲ್ಲ. ಬಾಲಕರ ರಾಷ್ಟ್ರಮಟ್ಟದ  ಪಂದ್ಯಾವಳಿ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ’ ಎಂದು ಬೆಂಗಳೂರ ಗ್ರಾಮಾಂತರ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀನಿವಾಸ ಹೇಳಿದರು.


ಫಲಿತಾಂಶ ವಿವರ
ಗದಗ:
ಪ್ರಥಮ ಹಾಗೂ ದ್ವಿತೀಯ ಸುತ್ತಿನ ಬಾಲಕ, ಬಾಲಕಿಯರ ಹ್ಯಾಂಡ್‌ಬಾಲ್‌ ಪಂದ್ಯಾವಳಿಯ ಫಲಿತಾಂಶ ಹೀಗಿದೆ.

ಬಾಲಕರ ವಿಭಾಗ: ಗದಗ ವಿರುದ್ಧ ಮಂಡ್ಯ, ಉಡುಪಿ ವಿರುದ್ಧ ಧಾರವಾಡ, ದಕ್ಷಿಣ ಕನ್ನಡ ವಿರುದ್ಧ ಚಿತ್ರದುರ್ಗ, ಕೋಲಾರ ವಿರುದ್ಧ ಬೆಳಗಾವಿ, ಬಳ್ಳಾರಿ ವಿರುದ್ಧ ಮೈಸೂರು, ಕೊಪ್ಪಳ ವಿರುದ್ಧ ಕೊಡಗು ತಂಡಗಳು ವಿಜಯಶಾಲಿಯಾದವು.

ಬಾಲಕಿಯರ ವಿಭಾಗ:  ಶಿವಮೊಗ್ಗ ವಿರುದ್ಧ ಬಿಜಾಪುರ, ರಾಮನಗರ ವಿರುದ್ಧ ಉಡುಪಿ, ಚಿತ್ರದುರ್ಗ ವಿರುದ್ಧ ಹಾವೇರಿ, ಬೆಂಗಳೂರು ಗ್ರಾಮಾಂತರ ವಿರುದ್ಧ ಕೊಡಗು, ಕೊಪ್ಪಳ ವಿರುದ್ಧ ಧಾರವಾಡ, ಬೆಳಗಾಂವ ವಿರುದ್ಧ ಬಿಜಾಪುರ, ದಾವಣಗೆರೆ ವಿರುದ್ಧ ಹಾಸನ ತಂಡಗಳು ವಿಜಯಶಾಲಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT