ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ ಗೆಲುವು ನೀಡಿದ ಕ್ಷೇತ್ರ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೇರೆ ಬೇರೆ ಪಕ್ಷದ ಮೂವರು ಅಭ್ಯರ್ಥಿಗಳಿಗೆ ಹ್ಯಾಟ್ರಿಕ್ ಗೆಲುವಿನ ಸವಿ ಉಣಿಸಿದ ಹಾಗೂ ಇಬ್ಬರು ಮುಖ್ಯಮಂತ್ರಿಗಳನ್ನು ನಾಡಿಗೆ ಕೊಟ್ಟ ಶ್ರೇಯ ಇಲ್ಲಿನ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ.

ಕ್ಷೇತ್ರ ಪುನರ್ವಿಂಗಡಣೆಗೆ ಮುನ್ನ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರವನ್ನು, ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಈ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ಆರ್. ಬೊಮ್ಮಾಯಿ  1988ರ ಆಗಸ್ಟ್ 13ರಿಂದ 1989ರ ಏಪ್ರಿಲ್ 21ರ ವರೆಗೆ  ಮುಖ್ಯಮಂತ್ರಿಯಾಗಿದ್ದರು. ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದೇ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸಿದ್ದಾರೆ.

1957ರಿಂದ 2008ರ ವರೆಗೆ ನಡೆದ 12 ಚುನಾವಣೆಯಲ್ಲಿ ನಾಲ್ವರು ಅಭ್ಯರ್ಥಿಗಳು ಮಾತ್ರ ಇಲ್ಲಿ ಜಯಗಳಿಸಿದ್ದು, ಅವರಲ್ಲಿ ಮೂವರು ಹ್ಯಾಟ್ರಿಕ್ ಗೆಲುವಿನ ಸವಿ ಉಂಡಿದ್ದರೆ, ಒಬ್ಬರಿಗೆ ಮಾತ್ರ ಎರಡು ಬಾರಿ ವಿಜಯಲಕ್ಷ್ಮಿ ಒಲಿದಿದ್ದಾಳೆ. ಮತದಾರರು ಹ್ಯಾಟ್ರಿಕ್ ಗೆಲುವಿನ ಸವಿಯನ್ನು ಕಾಂಗ್ರೆಸ್, ಜನತಾ ಪಕ್ಷ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೂ ನೀಡಿದ್ದಾರೆ.

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎಂ.ಆರ್.ಪಾಟೀಲ, ತಮ್ಮ ಗೆಲುವಿನ ಅಭಿಯಾನವನ್ನು 1962 ಹಾಗೂ 1967ರ ಚುನಾವಣೆಯಲ್ಲೂ ಮುಂದುವರೆಸಿ ಮೊದಲ ಬಾರಿಗೆ ಹ್ಯಾಟ್ರಿಕ್ ಸವಿ ಉಂಡಿದ್ದರು. ಮೊದಲ ಎರಡು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಸೋಲಿಸಿದ್ದ ಪಾಟೀಲರು, ಮೂರನೇ ಬಾರಿ ಭಾರತೀಯ ಜನಸಂಘದ ಸಿ.ಎಸ್.ಕೆಂಪಣ್ಣವರ ವಿರುದ್ಧ ಜಯಗಳಿಸಿದ್ದರು.

ಎಂ.ಆರ್.ಪಾಟೀಲ ಬದಲಿಗೆ 1972ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದ ಗೋಪಿನಾಥ ಆರ್.ಸಾಂಡ್ರಾ, ಆಗ ನಿಜಲಿಂಗಪ್ಪ ಬಣದ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ಜಿ. ವಾಲಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಹಿಂದಿನ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗ್ರಾಮೀಣ ಕ್ಷೇತ್ರದಲ್ಲಿ 1978ರ ಚುನಾವಣೆಯಲ್ಲಿ ಜನತಾ ಪಕ್ಷದ ನೇಗಿಲುಹೊತ್ತ ರೈತ ಚಿಹ್ನೆಯಡಿ ಸ್ಪರ್ಧಿಸಿದ್ದ ಎಸ್.ಆರ್.ಬೊಮ್ಮಾಯಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ನಂತರ 1983 ಹಾಗೂ 1985ರ ಚುನಾವಣೆಯಲ್ಲಿ ಎಸ್.ಆರ್.ಬೊಮ್ಮಾಯಿ ಇದೇ ಚಿಹ್ನೆಯಡಿ ಆಯ್ಕೆಯಾದರು. ಎಂ.ಆರ್.ಪಾಟೀಲರ ನಂತರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ ದಾಖಲೆ ಬೊಮ್ಮಾಯಿ ತಮ್ಮದಾಗಿಸಿಕೊಂಡರು.

1989ರ ಚುನಾವಣೆಯಲ್ಲಿ ಎಸ್.ಆರ್.ಬೊಮ್ಮಾಯಿ ಅವರನ್ನು ಸೋಲಿಸಿದ ಗೋಪಿನಾಥ ಸಾಂಡ್ರಾ ಎರಡನೇ ಬಾರಿ ಆಯ್ಕೆಯಾಗಿ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಅವಕಾಶ ಪಡೆದರಾದರೂ ಕ್ಷೇತ್ರದಲ್ಲಿ ಮತ್ತೆ ಗೆಲುವಿನ ರುಚಿ ಕಾಣಲಿಲ್ಲ.

1994ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಯ ಖಾತೆ ತೆರೆದ ಜಗದೀಶ ಶೆಟ್ಟರ್, 2008ರವರೆಗೆ ಸತತವಾಗಿ ನಾಲ್ಕು ಬಾರಿ ಇಲ್ಲಿಂದಲೇ ಆಯ್ಕೆಯಾಗಿದ್ದಾರೆ. ಒಮ್ಮೆ ಜೆಡಿಎಸ್ ಹಾಗೂ ಮೂರು ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿವೆ.

ಈ ಬಾರಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿರುವುದರಿಂದ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ತಾರಾ ವರ್ಚಸ್ಸು ಬಂದಿದೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಶೆಟ್ಟರ್ ಎಂಬ ಯಾಗದ ಕುದುರೆ ಕಟ್ಟಿ ಹಾಕಲು ವಿರೋಧಿಗಳು ತಂತ್ರ ಹೆಣೆಯುತ್ತಿದ್ದು, ಇಲ್ಲಿಯವರೆಗೂ ಪ್ರಮುಖ ಪಕ್ಷಗಳು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಇದು ಚುನಾವಣೆ ತಂತ್ರಗಾರಿಕೆಯ ಒಂದು ಭಾಗ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT