ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ರೂ 2.53 ಕೋಟಿ ಕಾಮಗಾರಿಗೆ ಆದೇಶ

ತಡವಾಗಿ ಎಚ್ಚೆತ್ತ ಶಿರಸಿ ನಗರಸಭೆ
Last Updated 6 ಡಿಸೆಂಬರ್ 2012, 8:29 IST
ಅಕ್ಷರ ಗಾತ್ರ

ಶಿರಸಿ: ಒಂದು ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ಕೆಲಸ ಆದೇಶ ನೀಡಬೇಕಾಗಿದ್ದ ರೂ 2.53ಕೋಟಿ ಮೊತ್ತದ ಕಾಮಗಾರಿಗೆ ತಡವಾಗಿಯಾದರೂ ಎಚ್ಚೆತ್ತುಕೊಂಡ ನಗರಸಭೆ ಸಾಮಾನ್ಯ ಸಭೆ ತಕ್ಷಣ ಕೆಲಸದ ಆದೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಎಸ್‌ಎಫ್‌ಸಿ ಕಾಮಗಾರಿಗಳ ಕೆಲಸದ ಆದೇಶ ನೀಡುವ ಕುರಿತು ಚರ್ಚೆ ನಡೆಯಿತು.

`ನಗರಸಭೆ ಸದಸ್ಯರ ಅವಧಿ ಮುಗಿಯುತ್ತ ಬಂದರೂ ಎಸ್‌ಎಫ್‌ಸಿ ಟೆಂಡರ್ ಕರೆದಿರುವ ಕಾಮಗಾರಿಗಳಿಗೆ ಕೆಲಸದ ಆದೇಶ ನೀಡದೇ ವಿಳಂಬ ಮಾಡಲಾಗುತ್ತಿದೆ. ಹಿಂದಿನ ಸಭೆಯಲ್ಲೇ ಗುತ್ತಿಗೆದಾರರಿಗೆ ನಿಗದಿತ ದರದಲ್ಲಿ ಕೆಲಸ ಆದೇಶ ನೀಡುವಂತೆ ನಿರ್ಧಾರವಾಗಿದ್ದರೂ ಇನ್ನೂ ತನಕ ಕೆಲಸದ ಆದೇಶ ನೀಡಿಲ್ಲ' ಎಂದು ಸದಸ್ಯ ಕೇಶವ ಶೆಟ್ಟಿ ಆರೋಪಿಸಿದರು.

`ಗುತ್ತಿಗೆದಾರರು ದರವಾರು ಪಟ್ಟಿಗಿಂತ ಶೇ 3ರಿಂದ 8ರ ವರೆಗೂ ಹೆಚ್ಚಿನ ದರ ನಮೂದಿಸಿದ್ದರಿಂದ ಸಾಮಾನ್ಯಸಭೆ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ' ಎಂದು ಪೌರಾಯುಕ್ತ ಕೆ.ಬಿ.ವೀರಾಪುರ ಸಮರ್ಥಿಸಿಕೊಂಡರು.

ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಟೆಂಡರ್ ಒಪ್ಪಿಗೆ ನೀಡಲು ಅಧ್ಯಕ್ಷ ರವಿ ಚಂದಾವರ ವಿರೋಧ ವ್ಯಕ್ತಪಡಿಸಿದರು. ಆಡಳಿತ ಪಕ್ಷ, ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಶೇ 2-3 ಹೆಚ್ಚುವರಿ ದರವಾರಿಗೆ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸಿ ತಕ್ಷಣ ಕೆಲಸದ ಆದೇಶ ನೀಡಿ ಕಾಮಗಾರಿ ಆರಂಭಿಸಲು ಸೂಚಿಸುವಂತೆ ಸಭೆ ನಿರ್ಣಯಿಸಿತು.

ನಗರಸಭೆ ನಿಧಿ ನಿರ್ಲಕ್ಷ್ಯ: `ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಅನುದಾನ ದೊರೆಯುತ್ತಿದ್ದು, ನಗರಸಭೆ ನಿಧಿ ನಿರ್ಲಕ್ಷ್ಯವಾಗುತ್ತಿದೆ. ಒಂದು ವರ್ಷದಿಂದ ನಗರಸಭೆ ನಿಧಿಯಲ್ಲಿ ಕಾಮಗಾರಿಗಳಿಗೆ ಟೆಂಡರ್ ಕರೆದಿಲ್ಲ' ಎಂದು ಸದಸ್ಯ ಶ್ರೀಕಾಂತ ತಾರೀಬಾಗಿಲ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು `ಹಿಂದಿನ ಅವಧಿಯಂತೆ ಅಲ್ಲ, ಪ್ರಸ್ತುತ ಆಡಳಿತ ಪಕ್ಷ ನಗರಸಭೆ ಆದಾಯ ಹೆಚ್ಚಿಸಿದ್ದು, ಹೆಚ್ಚು ಹಣ ಸಂಗ್ರಹಿಸುತ್ತಿದೆ' ಎಂದರು.

`ಶೇ 22.75ರ ನಿಧಿ ಅಡಿಯಲ್ಲಿ ಪರಿಶಿಷ್ಟರಿಗೆ ವಿತರಿಸಬೇಕಿರುವ ಪಾತ್ರೆ, ಬ್ಯಾಗ್ ವರ್ಷದಿಂದ ಗೋದಾಮಿನಲ್ಲಿಯೇ ಇದ್ದು ತಕ್ಷಣ ವಿತರಿಸುವ ಕಾರ್ಯ ಆಗಬೇಕು' ಎಂದು ಸದಸ್ಯರು ಆಗ್ರಹಿಸಿದರು. `ಇದಕ್ಕಾಗಿ ವಿಶೇಷ ಸಭೆ ಕರೆಯುವುದಾಗಿ ಹೇಳಿದ್ದ ಅಧ್ಯಕ್ಷರು ಸಭೆ ಕರೆಯದೇ ಪಠ್ಯ ವಿತರಿಸಿದ್ದಾರೆ' ಎಂದು ಸದಸ್ಯ ಮಹಾದೇವ ಚಲವಾದಿ ಆರೋಪಿಸಿದರು.

`ನಗರಸಭೆ ಚರಂಡಿ ಸ್ವಚ್ಛತೆ, ನಗರ ಸ್ವಚ್ಛತೆ ಕುರಿತು ಸಮಸ್ಯೆ ಇದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ' ಎಂದು ಪೌರಾಯಕ್ತರು ಹೇಳಿದರು. ನಗರಸಭೆಯಿಂದ ನೀರು ಪೂರೈಕೆಯಾಗುವ ಪೈಪ್ ನಿರ್ವಹಣೆಗೆ ವಾರ್ಷಿಕ ಟೆಂಡರ್ ಕರೆಯಲು ಸಭೆ ಒಪ್ಪಿಗೆ ನೀಡಿತು.

`ಈಗಲೇ ನಮ್ಮನ್ನು ಮಾತನಾಡಿಸುವವರಿಲ್ಲ...'
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಮೀಸಲಾತಿ ಪ್ರಕಟಗೊಂಡಿದೆ. ಪ್ರಸ್ತುತ ಅಧಿಕಾರದಲ್ಲಿರುವ ಅನೇಕ ಸದಸ್ಯರು ಹೊಸ ಮೀಸಲಾತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಹೊಸ ಮೀಸಲಾತಿ ಪ್ರಕಾರ ನಗರದ 31 ವಾರ್ಡ್‌ಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಹಿಳೆಯರಿಗೆ ಅವಕಾಶ ದೊರೆಯಲಿದೆ. ಹೀಗಾಗಿ ಹಾಲಿ ಅಧಿಕಾರದಲ್ಲಿರುವ ಸದಸ್ಯರ ನಡುವೆ ಮೀಸಲಾತಿ ವಿಷಯ ಪರಸ್ಪರ ಚರ್ಚೆಯಾಗುತ್ತಿರುವ ಸಂಗತಿ ಸಭೆಯಲ್ಲಿ ಕಂಡುಬಂತು.

ಕೆಲವರಂತೂ `ನಮ್ಮ ವಾರ್ಡ್‌ನಲ್ಲಿ ಈಗಲೇ ನಮ್ಮನ್ನು ಮಾತನಾಡಿಸುವವರಿಲ್ಲ, ಹೇಗೂ ನಿಮ್ಮ ಅಧಿಕಾರ ಮುಗಿತಲ್ಲ ಎನ್ನುತ್ತಿದ್ದಾರೆ' ಎಂದು ಮಾಧ್ಯಮದವರ ಬಳಿ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT