ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘3,168 ಹೆಕ್ಟೇರ್‌ ಬೆಳೆ ಹಾನಿ’

ಜಿಲ್ಲೆಯಲ್ಲಿ ಅತಿವೃಷ್ಟಿ: ರೂ.22 ಕೋಟಿ ಹಾನಿ
Last Updated 25 ಸೆಪ್ಟೆಂಬರ್ 2013, 6:54 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಪಾರ ಪ್ರಮಾಣ ಮಳೆ­ಯಿಂದಾಗಿ ಸುಮಾರು 3,168 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿ­ಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ ಅವರು, ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ರೂ. 22 ಕೋಟಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 3,371 ಮನೆ­ಗಳಿಗೆ ಹಾನಿಯಾಗಿದೆ. 159 ಮನೆಗಳು ಸಂಪೂರ್ಣವಾಗಿ ಬಿದ್ದಿವೆ. 3,168 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ­ಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 67.70 ಕಿ.ಮೀ, ರಸ್ತೆ, ಪಂಚಾಯತ್‌ ರಾಜ್ ಎಂಜಿನಿ­ಯರಿಂಗ್‌ನ 464.05 ಕಿ.ಮೀ. ರಸ್ತೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 37, ಜಿಲ್ಲಾ ಪಂಚಾಯಿತಿ ವ್ಯಾಪ್ತಿ 59 ಸೇತುವೆ ಹಾಗೂ 3 ಇತರ ಸೇತುವೆ ಹಾನಿಯಾಗಿವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 5 ಕೆರೆ, ಸಣ್ಣ ನೀರಾವರಿ ಇಲಾಖೆಯ 6 ಕೆರೆ ಹಾಗೂ 1 ಏತ ನೀರಾವರಿ ಯೋ­ಜನೆಗೆ ಹಾನಿಯಾಗಿದೆ. 12 ಜಾನು­ವಾ­ರುಗಳು ಮೃತಪಟ್ಟಿವೆ ಎಂದು ಹೇಳಿದರು.

ಯಾದಗಿರಿ ತಾಲ್ಲೂಕಿನಲ್ಲಿ ರೂ. 7.50 ಕೋಟಿ, ಶಹಾಪುರ ತಾಲ್ಲೂಕಿನಲ್ಲಿ ರೂ. 4.11 ಕೋಟಿ, ಹಾಗೂ ಸುರಪುರ ತಾಲ್ಲೂಕಿನಲ್ಲಿ ರೂ. 10.60 ಕೋಟಿ ಸೇರಿದಂತೆ ಜಿಲ್ಲೆಯಲ್ಲಿ ರೂ.22 ಕೋಟಿ­ಯಷ್ಟು ಹಾನಿಯನ್ನು ಅಂದಾಜಿಸ­ಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ­ಯನ್ನು ನಡೆಸಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಅಪಾರ ಪ್ರಮಾ­ಣದ ಹಾನಿಯಾಗಿದ್ದು, ಸಂತ್ರಸ್ತರಿಗೆ ನೆರವು ನೀಡಲು ಈಗಾಗಲೇ ರೂ. 5 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡ­ಲಾ­ಗುವುದು ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೆ ಒಳಗಾ­ದವರ ನೆರವಿಗೆ ಧಾಮಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾ­ಗುವುದು. ಅರ್ಹರಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮಳೆಯಿಂದ ಹಾನಿಗೆ ಒಳಗಾದವರ ನೆರವಿಗೆ ಸರ್ಕಾರ ಬದ್ಧವಾಗಿದ್ದು, ರೈತರು, ಸಾರ್ವಜನಿಕರು ಆತಂಕಕ್ಕೆ ಒಳ­ಗಾಗಬಾರದು. ಅಗತ್ಯ ಸೌಲಭ್ಯಗಳನ್ನು ಸಂತ್ರಸ್ತರ ಮನೆ ಬಾಗಿಲಿಗೆ ಒದಗಿಸಲಾ­ಗುವುದು ಎಂದು ತಿಳಿಸಿದರು.

ಇಬ್ಬರ ವಿರುದ್ಧವೂ ತನಿಖೆ: ಅಬಕಾರಿ ಸನ್ನದು ನವೀಕರಣ ಪ್ರಕರಣದಲ್ಲಿ ಉದ್ಭವಿಸಿರುವ ಗೊಂದಲಗಳ ನಿವಾ­ರಣೆ­ಗಾಗಿ ಇಬ್ಬರೂ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ಬಾರ್ ಮತ್ತು ಮದ್ಯದಂಗಡಿಗಳ ಲೈಸನ್ಸ್‌ ನವೀಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆಯಲು ಅಬ­ಕಾರಿ ಉಪ ಆಯುಕ್ತ ಎಸ್.ಕೆ. ಕುಮಾರ ಮತ್ತು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ವಿರುದ್ಧ ತನಿಖೆ ನಡೆಸ­ಲಾಗುವುದು ಎಂದು ಹೇಳಿದರು.

ಅಬಕಾರಿ ಉಪ ಆಯುಕ್ತರು, ಜಿಲ್ಲಾಧಿಕಾರಿಗಳ ಸಹಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ರೂ. 10 ಲಕ್ಷ ಲಂಚ ಕೇಳಿದ್ದಾರೆ ಎಂದು  ಉಪ ಆಯುಕ್ತರು ಮಾಧ್ಯಮಗಳ ಮೂಲಕ ಆರೋಪ ಮಾಡಿದ್ದು ತಿಳಿದು ಬಂದಿದೆ. ಈ ಬಗ್ಗೆಯೂ ಕೂಡ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾ­ಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT