ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲ ಮಕ್ಕಳಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಿ’

Last Updated 5 ಡಿಸೆಂಬರ್ 2013, 8:11 IST
ಅಕ್ಷರ ಗಾತ್ರ

ಕೊಪ್ಪ : ಅಂಗವಿಕಲ ಮಕ್ಕಳಿಗೆ ಒಂಟಿತನ ಕಾಡಬಾರದು. ಒಂಟಿಯಾಗಿದ್ದಾಗ ಅಂಗವೈಕಲ್ಯದ ಅರಿವಾಗಿ ಮಾನಸಿಕ ಖಿನ್ನತೆ ಆವರಿಸುವ ಅಪಾಯವಿದೆ. ಕಥೆ ಹೇಳುವ, ಸುಲಭವಾದ ಆಟಗಳನ್ನು ಆಡಿಸುವ ಮೂಲಕ ಅವರಿಗೆ ವಿಕಲತೆ ಮರೆಯಲು ಪ್ರೋತ್ಸಾಹಿಸುವಂತೆ ಜಿ.ಪಂ. ಸದಸ್ಯೆ ಅನ್ನಪೂರ್ಣ ಚನ್ನಕೇಶವ್ ಪೋಷಕರಿಗೆ ಸಲಹೆ ನೀಡಿದರು.

ಇಲ್ಲಿನ ಪುರಭವನದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲರು ಇತರ ಎಲ್ಲರಂತೆ ಬದುಕು ನಡೆಸಲು ನಾಗರೀಕ ಸಮಾಜ ಅವಕಾಶ ಕಲ್ಪಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ 188 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದೆ, 119 ಮಂದಿ ಪ್ರಾಥಮಿಕ ಹಾಗೂ 31 ಮಂದಿ ಮಾಧ್ಯಮಿಕ ಶಿಕ್ಷಣ ಹೊಂದುತ್ತಿದ್ದು, ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಶಾಲೆಗೆ ಬರಲಾಗದ 18 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಅಂಗವಿಕಲರಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ತಹಶೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್ ಮಾತನಾಡಿ, ಅಂಗವಿಕಲರು ಭಗವಂತನ ಪ್ರೀತಿಗೆ ಪಾತ್ರರಾಗಿರುವದರಿಂದ ಅವರ ಒಂದು ಅಂಗದ ದೌರ್ಬಲ್ಯ ಮರೆಸುವಷ್ಟು ಇನ್ನೊಂದು ಅಂಗಕ್ಕೆ ಶಕ್ತಿ ಕೊಟ್ಟಿದ್ದಾನೆ. ಅವರ ಬಗ್ಗೆ ಸಹಾನುಭೂತಿಗಿಂತ ಸಹಾಯ, ಪ್ರೋತ್ಸಾಹ ಅಗತ್ಯ. ಅಂಗವಿಕಲರ ಏಳಿಗೆ ಬಗ್ಗೆ ಜಾಗತಿಕ ಚಿಂತನೆ ನಡೆಸಲು ಈ ದಿನಾಚರಣೆ ನಡೆಯುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್‌ ಮಾತನಾಡಿ, ತಾಲ್ಲೂಕು ಪಂಚಾಯಿತಿ ತನ್ನ ಆದಾಯದ ಶೇ. 3ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸುತ್ತಿದೆ. ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲೂ ಶೇ. 3ರ ಅನುದಾನದಡಿ ಅಂಗವಿಕಲರಿಗೆ ಅಗತ್ಯ ಸಲಕರಣೆ, ಔಷಧೋಪಚಾರಕ್ಕೆ ನೆರವು ಸಿಗಲಿದ್ದು, ಅರ್ಹ ಫಲಾನುಭವಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಕಮ್ಮರಡಿಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ಅಂಗವಿಕಲ ಯುವತಿ ಶಶಿಕಲಾ ಪುನರ್ವಸತಿಗೆ ತಾ.ಪಂ. ಮುಂದಾಗಿದ್ದು, ಈ ಪ್ರಕರಣ ಬೆಳಕಿಗೆ ತಂದ ‘ಪ್ರಜಾವಾಣಿ’ ಪ್ರಯತ್ನ ಶ್ಲಾಘನೀಯವೆಂದರು.

ತಾ.ಪಂ. ಉಪಾಧ್ಯಕ್ಷ ಪೂರ್ಣಚಂದ್ರ, ಸದಸ್ಯರಾದ ಬಿ.ಆರ್. ನಾರಾಯಣ್, ಪ್ರೇಮಾ ಧಾಮೋದರ್, ಮುಖ್ಯಾಧಿಕಾರಿ ಜಿ.ಸಿ. ತಿಪ್ಪೇಶ್, ಕೊಪ್ಪ ಗ್ರಾಮಾಂತರ ಗ್ರಾ.ಪಂ. ಅಧ್ಯಕ್ಷೆ ಶಾರದಾ ವಿಠಲ್, ಪ.ಪಂ. ಸದಸ್ಯೆ ವಾಣಿ ಸತೀಶ್, ಪ್ರಬಾರಿ ಶಿಶು ಕಲ್ಯಾಣಾಧಿಕಾರಿ ಮೋಹಿನಿ ಮುಂತಾದವರಿದ್ದರು. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ನುಗ್ಗಿಯ ಬಸವರಾಜ್‌ಗೆ ತಾ.ಪಂ. ವತಿಯಿಂದ ರೂ. 2.65 ಲಕ್ಷ ವೆಚ್ಚದ ಕೃತಕ ಕಾಲು ವಿತರಿಸಲಾಯಿತು.

ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಅಂಗವಿಕಲ ಕಲಾವಿದೆ ಶ್ಯಾಮಲ ಪ್ರಾರ್ಥಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎ.ಈ. ಅಶೋಕ್ ಸ್ವಾಗತಿಸಿದರು. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಓಂಕಾರಪ್ಪ ವಂದಿಸಿದರು.

ಬಳಿಕ ಅಂಗವಿಕಲ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT