ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ’

ಜಿಲ್ಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ
Last Updated 4 ಡಿಸೆಂಬರ್ 2013, 8:41 IST
ಅಕ್ಷರ ಗಾತ್ರ

ಕಾರವಾರ: ‘ಅಂಗವಿಕಲರಲ್ಲಿಯೂ ಸಾಕಷ್ಟು ಪ್ರತಿಭಾವಂತರಿ ದ್ದಾರೆ. ಅಂತವರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೆಲಸಗಳು ನಡೆಯಬೇಕಿದೆ’ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಡಿ.ಆರ್. ರೇಣಕೆ ಅಭಿಪ್ರಾಯಪಟ್ಟರು.

ವಿಶ್ವ ಅಂಗವಿಕಲರ ದಿನಾಚರಣೆಯ ನಿಮಿತ್ತ ನಗರದ ಗುರುಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಧೀಶರಾದ ಶ್ರೀನಿವಾಸ ಬೂದಾರಪುರ್, ಮಹಮ್ಮದ್ ಅಶ್ರಫ್‌ ಆರಿಸ್, ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಗುನಗಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ವಿಠ್ಠಲ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಗೌಡ, ಡಿ.ಎಸ್. ನಾಯ್ಕ, ಬಸವರಾಜು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಒಂಕಾರ ಪಾವಸ್ಕರ್ ಪ್ರಾರ್ಥನೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಕಾಮತ್ ನಿರೂಪಿಸಿದರು.

ಮಕ್ಕಳ ಪ್ರತಿಭಾ ಪ್ರದರ್ಶನ
ಶಿರಸಿ:
ದೈಹಿಕ ಹಾಗೂ ಮಾನಸಿಕ ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಸಮನ್ವಯ ಶಿಕ್ಷಣದ ಅಡಿಯಲ್ಲಿ ದೊರೆಯುವ ಯೋಜನೆ ಮಾಹಿತಿಯನ್ನು ಪಾಲಕರಿಗೆ ನೀಡುವ ಹಾಗೂ ಅಂಗವಿಕಲ ಮಕ್ಕಳಿಗೆ ಸಲಕರಣೆ, ಪಠ್ಯ ವಿತರಿಸುವ ಕಾರ್ಯಕ್ರಮ ಮಂಗಳವಾರ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳು ಛದ್ಮವೇಷ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ 3360 ವಿಶೇಷ ಅಗತ್ಯವುಳ್ಳ ಮಕ್ಕಳಿದ್ದು, 189 ಮಕ್ಕಳು ಗೃಹಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ. 135 ಸ್ವಯಂ ಸೇವಕರು ಈ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 53 ಶಾಲಾ ಸಿದ್ಧತಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಎಸ್‌.ಪ್ರಸನ್ನಕುಮಾರ್‌ ತಿಳಿಸಿದರು.

ತಾಲ್ಲೂಕಿನಲ್ಲಿ 923 ವಿಶೇಷ ಮಕ್ಕಳಿದ್ದು, 113 ಮಕ್ಕಳಿಗೆ ಸಾಧನ ಸಲಕರಣೆ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 41 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಮನೆಯಲ್ಲಿ ಶಿಕ್ಷಣ ಪಡೆದು ಸುಧಾರಣೆ ಕಂಡ 12 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಂಗವೈಕಲ್ಯ ಶಾಪವಲ್ಲ. ಅಂಗವಿಕಲ ಮಕ್ಕಳನ್ನು ಎಲ್ಲರಂತೆ ಕಂಡು ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪಾಲಕರು, ಶಿಕ್ಷಣರ ಪಾತ್ರ ಮಹತ್ವದ್ದಾಗಿದೆ. ಮಾರಿಗುಡಿ ಶಾಲೆಯ ಆವರಣದಲ್ಲಿ ವಿಶೇಷ ಮಕ್ಕಳಿಗೆ ಅಗತ್ಯವುಳ್ಳ ಫಿಸಿಯೋಥೆರಪಿ ಲಭ್ಯವಿದ್ದು ಪಾಲಕರು ಮಕ್ಕಳನ್ನು ಕರೆತಂದು ಸೌಲಭ್ಯ ಬಳಕೆ ಮಾಡಿಕೊಳ್ಳಬಹುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎನ್.ಆರ್.ಹೆಗಡೆ, ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ಹೆಗಡೆ, ಪಿ.ಕೆ.ದೊಡ್ಮನಿ ಮೊದಲಾದವರು ಉಪಸ್ಥಿತರಿದ್ದರು.

ಪರಮೇಶ್ವರ ಭಟ್ಟ ಸ್ವಾಗತಿಸಿದರು. ಸಂಧ್ಯಾ ಶೇಟ್‌ ಕಾರ್ಯಕ್ರಮ ನಿರೂಪಿಸಿದರು.

‘ದಯಾ ನಿಲಯ’ದಲ್ಲಿ ಆಚರಣೆ
ಕುಮಟಾ:
ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ‘ ದಯಾ ನಿಲಯ’ ದಲ್ಲಿ ಏರ್ಪಡಿ ಸಿದ್ದ ಕಾರ್ಯಕ್ರಮವನ್ನು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪ್ರಭಾವತಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಿರೀಲ್‌ ಡಯಾಸ್‌ ಅವರು ಸಾಮಾಜಿಕ ಕಳಕಳಿಯಿಂದ ಒಬ್ಬರೇ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತಿರುವುದು ಸೇವಾ ಕಾರ್ಯಕ್ಕೆ ಮಾದರಿ’ ಎಂದರು.

ಇದೇ ಸಂದರ್ಭದಲ್ಲಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದವರು ಬುದ್ದಿಮಾಂದ್ಯ ಮಕ್ಕಳಿಗೆ ಹಣ್ಣು, ಹಾಲು ವಿತರಿಸಿದರು. ಸಂಘದ ಮಂಜುನಾಥ ನಾಯ್ಕ, ಪ್ರಮೋದ ಹೆಗಡೆ, ಪ್ರವೀಣ ಶೇಟ್‌, ಸುಧಾ ಭಟ್ಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ತ್ರಿವೇಣಿ ಯಾಜಿ ಮೊದಲಾದವರಿದ್ದರು.

‘ಸಾಮರ್ಥ್ಯ ವಿಕಾಸಗೊಳಿಸಿ’
ಸಿದ್ದಾಪುರ: ‘
ಅಂಗವಿಕಲರಲ್ಲಿ ಅಡಗಿರುವ ಸಾಮರ್ಥ್ಯವನ್ನು ವಿಕಾಸಗೊಳಿಸಬೇಕು’ ಎಂದು ಕುಮಟಾದ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕ ವಿ.ಆರ್.ನಾಯ್ಕ ಹೇಳಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡು,  ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಜಿ.ಹೆಗಡೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಿ.ಐ.ನಾಯ್ಕ, ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಡ್‌ಹಾಕ್ ಸಮಿತಿ ಅಧ್ಯಕ್ಷ ಎಂ.ಕೆ.ನಾಯ್ಕ,ಶಿಕ್ಷಣ ಸಂಯೋಜಕ ವಿನಾಯಕ ಪಟಗಾರ ಉಪಸ್ಥಿತರಿದ್ದರು. ಬಿಇಒ ಬಿ.ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಗಣಪತಿ ಗೌಡ ಸ್ವಾಗತಿಸಿದರು. ಬಿ.ಜಿ.ಹೆಗಡೆ ಸಣ್ಮನೆ ವಂದಿಸಿದರು. ಆರ್.ಎಸ್.ನಾಯ್ಕ ನಿರೂಪಿಸಿದರು.

‘ವಿಶೇಷ ಕಾಳಜಿ ಅಗತ್ಯ’
ಯಲ್ಲಾಪುರ:
ಪಟ್ಟಣದ ಬಿಆರ್‌ಸಿ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಒ ಕಾರ್ಯಾಲಯ, ಬಿಆರ್‌ಸಿ ಕಚೇರಿ ಆಶ್ರಯದಲ್ಲಿ ಬುಧವಾರ ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ಭಟ್ಟ ಮಾತನಾಡಿ, ‘ಪಾಲಕರು ಅಂಗವಿಕಲ ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಸರ್ಕಾರ ನೀಡುವ ಸಹಾಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಾಯಕ ಮಾತನಾಡಿ, ‘ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ಥೈರ್ಯ ತುಂಬುವ ಕೆಲಸವಾಗಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಠ್ಠಲ್ ನಾಟೇಕರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯಾಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ್, ಬಿಇಒ ಎನ್.ಜಿ.ನಾಯಕ, ಬಿಆರ್‌ಸಿ ಸಂಯೋಜನಾಧಿಕಾರಿ ಕೆ.ಎಂ.ಕಾಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಆರ್.ಭಟ್ಟ, ಸಿಡಿಪಿಒ ಡಿ.ಪಿ.ಕರ್ಜಗಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಬ್ರಾಯ ಬಿದ್ರೆಮನೆ, ಸಹಕಾರ್ಯದರ್ಶಿ ಶ್ರೀಧರ ಅಣಲಗಾರ, ಶಿಕ್ಷಕರಾದ ದಿಲೀಪ ದೊಡ್ಮನಿ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT