ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಾಲ ತಾಣದಲ್ಲಿ ವಕ್ಫ್‌ ಆಸ್ತಿ ವಿವರ’

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ‘ಡಿಸೆಂಬರ್‌ ಅಂತ್ಯದಲ್ಲಿ ವಕ್ಫ್‌ ಆಸ್ತಿ ಸಮೀಕ್ಷೆಯ ಮೊದಲ ಪಟ್ಟಿ ಗೆಜೆಟ್‌ನಲ್ಲಿ ಪ್ರಕಟಗೊಳ್ಳಲಿದೆ. ಶೇ 60ರಷ್ಟು ಸಮೀಕ್ಷೆ ಈಗಾಗಲೇ ಮುಗಿದಿದ್ದು, ವಕ್ಫ್‌ ಆಸ್ತಿಯ ಸ್ಪಷ್ಟ ಚಿತ್ರಣಗಳನ್ನು ಅಂತರ್ಜಾಲ ತಾಣಕ್ಕೆ ಹಾಕಲಾ­ಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಸಚಿವ ಖಮರುಲ್‌ ಇಸ್ಲಾಂ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿವಾದದ­ಲ್ಲಿರುವ ವಕ್ಫ್‌ ಆಸ್ತಿಗಳು ಕೂಡಾ ಕಂಡು ಬಂದಿದ್ದು, ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದರು.

‘ವಕ್ಫ್‌ ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಅನೇಕ ವರ್ಷಗಳಿಂದ ಇತ್ತು. ಇದೀಗ 300 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 371 (ಜೆ) ಅಡಿಯಲ್ಲಿ ನೇಮಕ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಯಾವುದೇ ನಿವೇಶನ ಅಥವಾ ಮನೆ ಖರೀದಿಸಿದರೆ ₨ 1 ಲಕ್ಷ  ಬಡ್ಡಿ ಮೇಲೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ನೀಡುತ್ತಿದ್ದ ಸಣ್ಣ ಪ್ರಮಾಣದ ಸಾಲದ ಮೇಲಿನ ಸಹಾಯಧವನ್ನು ಶೇ 25ರಿಂದ ಶೇ  50ಕ್ಕೆ ಹೆಚ್ಚಿಸಲಾಗಿದೆ. ವಿದೇಶಕ್ಕೆ ಓದಲು ಹೋಗುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿದ್ದ ಸಾಲದ ಪ್ರಮಾಣವನ್ನು ₨ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ವರ್ಷ ಒಟ್ಟು 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ವರ್ಷ ₨ 5 ಲಕ್ಷ ಮಂಜೂರಿ ಮಾಡಲಾಗಿದೆ. ಎರಡನೇ ವರ್ಷ ₨5 ಲಕ್ಷ ನೀಡಲಾಗುವುದು ಎಂದರು.

ಐಎಎಸ್‌, ಐಪಿಎಸ್‌ ತರಬೇತಿಗಾಗಿ ಒಟ್ಟು 600 ಅಲ್ಪಸಂಖ್ಯಾತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 106 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದೆಹಲಿ ಹಾಗೂ ಹೈದರಾಬಾದ್‌ಗೆ ಕಳುಹಿಸಲಾಗುತ್ತಿದೆ. ದೆಹಲಿಯಲ್ಲಿ ಪ್ರತಿ ತಿಂಗಳು ₨10 ಸಾವಿರ ಹಾಗೂ ಹೈದರಾಬಾದ್‌ನಲ್ಲಿ ಪ್ರತಿ ತಿಂಗಳು ₨ 8 ಸಾವಿರ, ಒಟ್ಟು 10 ತಿಂಗಳು ತರಬೇತಿ ಭತ್ಯೆಯನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT