ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ಥಾಟ್ಸ್‌’ ಬಿಡುಗಡೆ

Last Updated 19 ಸೆಪ್ಟೆಂಬರ್ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೇ ಇರುವ ಅಂಬೇಡ್ಕರ್ ಅವರ ತತ್ವಗಳು ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಶ್ರೇಷ್ಠ ಚಿಂತನೆಗಳು’ ಎಂದು ಲೋಕೋ­ಪ­ಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಆರ್. ಶಿವರಾಂ ಅವರ ‘ಅಂಬೇಡ್ಕರ್ ಥಾಟ್ಸ್’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಶಿಕ್ಷಣ, ಕಾರ್ಮಿಕ, ಮಹಿಳೆ, ಪ್ರಜಾಪ್ರಭುತ್ವ, ಅರ್ಥ­ಶಾಸ್ತ್ರ, ಮಾನವಶಾಸ್ತ್ರ ಸೇರಿದಂತೆ ಎಲ್ಲ ಅಂಶಗಳನ್ನು ಅವರ ಚಿಂತನೆಗಳು ಒಳಗೊಂಡಿವೆ. ಅಧ್ಯಯನಶೀಲತೆಯಿಂದಲೇ ವಿಶ್ವ ಚಿಂತಕರಾಗಿ ಹೊರಹೊಮ್ಮಿರುವ ಅವರು ದಲಿತರಿಗೆ ಮಾತ್ರ ಮೀಸಲು ಅಲ್ಲ’ ಎಂದು ಅಭಿಪ್ರಾಯಪಟ್ಟರು.
‘ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಸಮರ ಸಾರುತ್ತಲೇ ರಾಷ್ಟ್ರವನ್ನು ಕಟ್ಟುವ ಕಾರ್ಯ ಮಾಡಿದ್ದರು. ಅವರ ರಾಷ್ಟ್ರೀಯತೆ ಹಾಗೂ ರಾಷ್ಟ್ರಪ್ರೇಮಕ್ಕೆ ಹೋಲಿ­ಕೆಯಿಲ್ಲ’ ಎಂದು ಬಣ್ಣಿಸಿದರು.

‘ಬುದ್ದ, ಗಾಂಧಿ  ಮತ್ತು ಅಂಬೇಡ್ಕರ್ ಚರಿತ್ರೆಯಲ್ಲಿ ಅಜರಾಮರರಾಗಿ ಉಳಿಯುವ ಮಹಾನ್ ವ್ಯಕ್ತಿಗಳು’ ಎಂದ ಅವರು, ‘ದಲಿತರು, ಹಿಂದುಳಿದ ವರ್ಗಗಳನ್ನು ವೋಟ್ ಬ್ಯಾಂಕ್  ದಾಳವಾಗಿ ಪರಿವರ್ತಿಸಿಕೊಂಡಿರುವುದರ ಬಗ್ಗೆ ಸದಾ ಎಚ್ಚರ ಹೊಂದಿರಬೇಕು. ಅಂಬೇಡ್ಕರ್ ಎಂಬುದು ಸ್ವಾಭಿಮಾನ ಮತ್ತು ಅಧ್ಯಯನಶೀಲತೆಯ ಸಂಕೇತ. ಅದನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ’ ಎಂದರು.

‘ಜಾತಿ ವ್ಯವಸ್ಥೆ ಹಾಗೂ ಧರ್ಮಾಧಾರಿತ ಸಮಾಜದಿಂದ ಹಲವು ಕಷ್ಟಗಳನ್ನು ಎದುರಿಸಿದ್ದರೂ  ನಗ್ನ ಸತ್ಯಗಳನ್ನು ತಿಳಿಸಿದ್ದ ಬುದ್ಧನೆಡೆಗೆ ಹೊರಟ ಮಹಾನ್ ಚೇತನ ಅವರು’ ಎಂದರು.

ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್, ‘ಇಂಗ್ಲೆಡ್ ಮತ್ತು ಅಮೆರಿಕದಲ್ಲಿ ಕ್ರೈಸ್ತ್ರ ಧರ್ಮೀಯರು ಬುದ್ಧನೆಡೆಗೆ ಆಕರ್ಷಿ­ತರಾಗುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಓದದೇ ಭಾರತದ ವ್ಯವಸ್ಥೆ ಅರ್ಥವಾಗುವುದಿಲ್ಲ’ ಎಂದರು.

‘ಶಾಲಾ ಕಾಲೇಜುಗಳ ಇತಿಹಾಸ ಪುಸ್ತಕಗಳು ಬರೀ ಸುಳ್ಳು ಹಾಗೂ ಅಜ್ಞಾನದಿಂದ ಕೂಡಿದೆ. ಹಿಂದುತ್ವವನ್ನು ಪ್ರತಿಪಾದಿಸುತ್ತಿರುವವರೇ ವಿದೇಶಿ ಆಕ್ರಮಣಕಾರರನ್ನು ಆಹ್ವಾನಿಸಿದ್ದರು’ ಎಂದು ದೂರಿದರು.

‘ಅನೈತಿಕತೆಯಿಂದ ಕೂಡಿರುವ ಆರ್ಯರ ಮನಸ್ಸುಗಳನ್ನು ಇಂದಿಗೂ  ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ­ವೆಂಬುದು ಪ್ರಸ್ತುತ  ಕಾಲದ ದುರಂತ’ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಕವಿ ಡಾ.ಸಿದ್ದಲಿಂಗಯ್ಯ  ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT