ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ದಲಿತರ ಬಾಳಿನ ದಾರಿದೀಪ’

ದಸಂಸ ವತಿಯಿಂದ 58ನೇ ಪರಿನಿರ್ವಾಣ ಕಾರ್ಯಕ್ರಮ
Last Updated 7 ಡಿಸೆಂಬರ್ 2013, 6:40 IST
ಅಕ್ಷರ ಗಾತ್ರ

ದಾವಣಗೆರೆ:  ದಲಿತರ ಬಾಳಿನ ದೀಪವಾಗಿರುವ ಅಂಬೇಡ್ಕರ್‌ ಅವರು ಇಂದಿಗೂ, ಎಂದಿಗೂ ಜೀವಂತ ಎಂದು ಪ್ರಾಂಶುಪಾಲ ಪ್ರೊ.ಎಚ್‌.ವಿಶ್ವನಾಥ್ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎಂ.ಕೃಷ್ಣಪ್ಪ ಬಣ) ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ 58ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತರ ಬಗೆಗಿನ ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ಚಿಂತನೆಗಳು ಭಿನ್ನವಾಗಿದ್ದವು. ದೇಶಕ್ಕೆ ಸ್ವತಂತ್ರ ಬೇಕೆಂದು ಗಾಂಧೀಜಿ ಅವರು ಆಶಿಸಿದ್ದರು. ಆದರೆ ಅದನ್ನು ಅಂಬೇಡ್ಕರ್‌ ಅವರು ವಿರೋಧಿಸುತ್ತಿದ್ದರು. ಏಕೆಂದರೆ, ಈಗ ಎಲ್ಲರೂ ಗುಲಾಮರಾಗಿದ್ದಾರೆ. ಸ್ವಾತಂತ್ರ್ಯ ಸಿಕ್ಕರೆ ದಲಿತರು ಗುಲಾಮರಾಗುತ್ತಾರೆ. ನಮ್ಮನ್ನು ಮನುಷ್ಯರನ್ನಾಗಿ ನೋಡಿ ಎಂದು ಅವರು ತಿಳಿಸಿದ್ದರು.

ಕರ್ನಾಟಕದಲ್ಲಿ ದಲಿತ ಹೋರಾಟ ಪ್ರಾರಂಭವಾಗಿದ್ದು ದಲಿತ ಇತಿಹಾಸಕಾರ ಎಂ,ಕೃಷ್ಣಪ್ಪ ಅವರಿಂದ. ಅವರು ಹಚ್ಚಿದ ಬೆಳಕನ್ನು ಹಾರದಂತೆ ಕಾಪಾಡುವುದು ಜವಾಬ್ದಾರಿ ಎಲ್ಲರ ಮೇಲಿದೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ದಲಿತರ ಉದ್ಧಾರಕ್ಕೆ ಎಲ್ಲರೂ ಹೋರಾಡಬೇಕು ಎಂದು ಕರೆ ನೀಡಿದರು.

‘ನನ್ನ ಪ್ರಕಾರ ಹೊಲೆ ಮಾದಿಗರು ನಿಜವಾದ ಅಸ್ಪೃಶ್ಯರು. ದಲಿತರನ್ನು ದೇವಸ್ಥಾನಗಳಿಗೆ ನಿಷೇಧಿಸುವ ಪ್ರವೃತ್ತಿ ಇದೆ. ಅವರನ್ನು ನಾವೇ ನಿಷೇಧಿಸುವಂತಾಗಬೇಕು. ದಲಿತರು ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಮಟ್ಟದಲ್ಲಿ ಅಧಿಕಾರ ಪಡೆಯಬೇಕು. ಎಲ್ಲರೂ ಸುಶಿಕ್ಷಿತರಾಗಬೇಕು. ಅದು ನಮ್ಮ ಹಕ್ಕು ಎಂದು’ ಕಿವಿ ಮಾತು ಹೇಳಿದರು.

ಎಲ್ಲರೂ ಸ್ವಾಭಿಮಾನಿಗಳಾಗಬೇಕು. ಪ್ರತಿಯೊಬ್ಬರು ಅಂಬೇಡ್ಕರ್‌ ರೀತಿ ಹೋರಾಡಬೇಕು. ಬಸವಣ್ಣನವರ ಅನುಭವ ಮಂಟಪದಂತೆ. ಎಲ್ಲಾ ಜಾತಿ ಜನಾಂಗದವರು ಒಂದೇ ಸೂರಿನಡಿ ಸೇರಬೇಕೆಂದು ಅಂಬೇಡ್ಕರ್ ಅವರು ಕನಸು ಕಂಡಿದ್ದರು. ಅದಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಸ್ಮರಿಸಿದರು.

ಪ್ರತಿಯೊಂದು ದಲಿತರ ಮನೆಯಲ್ಲಿ ಪೊಲೀಸರು, ವಕೀಲರು, ತಹಶೀಲ್ದಾರ್‌ಗಳು ಸೃಷ್ಟಿಯಾಗಬೇಕು. ಶತಮಾನಗಳಿಂದ ಶೋಷಣೆಗೆ ಒಳಪಟ್ಟಿರುವ ದಲಿತರು ಶೈಕ್ಷಣಿಕ, ಸಾಮಾಜಿಕವಾಗಿ ಏಳಿಗೆ ಸಾಧಿಸಬೇಕೆಂದು ತಿಳಿಸಿದರು.

ಮಮತಾ ಶ್ರೀಕಾಂತ್‌ ಮಾತನಾಡಿ, ಅಂಬೇಡ್ಕರ್‌ ಅವರನ್ನು ವರ್ಷದಲ್ಲಿ ಎರಡು ಬಾರಿ ಮಾತ್ರ ಸ್ಮರಿಸುತ್ತಿದ್ದೇವೆ. ಇಂದು ಅವರ ಆದರ್ಶಗಳನ್ನು ಎಷ್ಟು ಜನ ಪಾಲಿಸುತ್ತಿದ್ದೇವೆ ಎಂಬುದರ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಶಿಕ್ಷಣ, ಸಂಘಟನೆ,ಹೋರಾಟ ಈ ಮೂರು ಅಂಬೇಡ್ಕರ್ ಅವರು ಮೂರು ಆದರ್ಶಗಳು. ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಏಳಿಗೆ ಸಾಧ್ಯ ಎಂದು ತಿಳಿಸಿದರು.

ಅಂಬೇಡ್ಕರ್‌ ತತ್ವ, ಸಿದ್ಧಾಂತಗಳು ಒಂದೇ. ಆದರೆ, ಎರಡು ಬಣ ಏಕೆ ಬೇಕು. ಅಂಬೇಡ್ಕರ್‌ ಅವರ ಪರಿನಿರ್ವಾಣದ ದಿನವೇ ಬಾಬ್ರಿ ಮಸೀದಿ ಧ್ವಂಸದ ಸಂಭ್ರಮಾಚರಣೆ ಮತ್ತು ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನದಂತಹ ಮೂಢ ಆಚರಣೆಗಳು ನಡೆಯುತ್ತಿವೆ. ಇದು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. 21ನೇ ಶತಮಾನದಲ್ಲಿ ಇಂಥ ಆಚರಣೆ ಎಷ್ಟು ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆಲೂರು ನಿಂಗರಾಜ್‌, ಅಣ್ಣಪ್ಪರ, ಪಿ.ವೈ.ಬಾಬು ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT