ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕಾಡೆಮಿಗಳಲ್ಲಿ ಹೈ.ಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ’

Last Updated 23 ಸೆಪ್ಟೆಂಬರ್ 2013, 9:32 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದ 18 ಸಾಂಸ್ಕೃತಿಕ ಅಕಾಡೆಮಿಗಳ ನೇಮಕಾತಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯವಾಗದಂತೆ ನೋಡಿ­ಕೊಳ್ಳ­ಬೇಕು ಎಂದು ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಹೇಳಿದರು.

ಇಲ್ಲಿನ ಚಂದ್ರಶೇಖರ ವಿದ್ಯಾ ಸಂಸ್ಥೆಯ ನ್ಯೂಕನ್ನಡ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಸಾಹಿತ್ಯ ಸೌರಭ ವೇದಿಕೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐದು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಂವಿಧಾನದ 371ನೇ ಕಲಂ ತಿದ್ದುಪಡಿ ಮಸೂದೆ ಜಾರಿಗೆ ತರ­ಲಾಗಿದ್ದು, ಎಲ್ಲ ಕ್ಷೇತ್ರದಲ್ಲೂ ಈ ಭಾಗಕ್ಕೆ ಪ್ರಾತಿನಿಧ್ಯ ನೀಡುತ್ತೇವೆ ಎಂದು ಹೇಳುವ ಸರ್ಕಾರದ ಪ್ರತಿನಿಧಿಗಳು, ಸಾಂಸ್ಕೃತಿಕ ಅಕಾಡೆಮಿಗಳ ನೇಮಕಾತಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ಎಲ್ಲ ಭಾಗಕ್ಕೂ ಅನ್ವಯವಾಗುವಂತೆ ಪ್ರತಿ­ಯೊಂದು ವಿಭಾಗಕ್ಕೂ 4 ಅಕಾ­ಡೆಮಿಗಳ ಅಧ್ಯಕ್ಷರನ್ನು ನೇಮಕ­ಗೊಳಿಸಬೇಕು ಎಂದು ಹೇಳಿದರು.

ಹೈದರಾಬಾದ್‌ ಕರ್ನಾಟಕದಲ್ಲಿ ಪ್ರಕಾಶಕರ ಕೊರತೆಯಿಂದ ಹಲವಾರು ಲೇಖಕರ ಮಹತ್ವದ ಕೃತಿಗಳು ಹೊರಬರಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು. ಸಾಹಿತ್ಯ ವಲಯ ವಿಧಾನಸೌಧದ ಸುತ್ತ ಗಿರಿಕಿ ಹೊಡೆಯುವುದು ಬಿಟ್ಟು, ಆ ಪ್ರದೇಶದಿಂದ ಹೊರಬರಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಾಹಿತ್ಯ ಬೆಳವಣಿಗೆಗೆ ಇಂದು ಸಕಾಲವಾಗಿದೆ. ಹಿಂದೆ ರಾಜಾಶ್ರಯವಿದ್ದಂತೆ ಇಂದು ಹಲವಾರು ಸಾಹಿತಿಗಳ ಕೃತಿಗಳು ಹೊರಬರಲು ಹಲವಾರು ದಾನಿಗಳು ಮುಂದೆ ಬರುತ್ತಿರುವುದು ಆಶಾ­ದಾಯಕ ಬೆಳವಣಿಗೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಸಗರನಾಡಿನಲ್ಲಿ ಸಾಹಿತ್ಯ ಕೃತಿಗಳು ಹೆಚ್ಚಾಗಿ ಹೊರಬರುತ್ತಿರುವುದು ಸಂತೋಷಕರ ಸಂಗತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸೌರಭ ವೇದಿಕೆ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ ಮಾತನಾಡಿ, ಸಾಹಿತ್ಯ ಕೃತಿಗಳು ಹೆಚ್ಚಾಗಿ ಹೊರಬರಲು ದಾನಚಿಂತಾಮಣಿ ಅತ್ತಿಮಬ್ಬೆಯಂತೆ ನಮ್ಮ ಯಾದಗಿರಿಯಲ್ಲಿ ಹಲವಾರು ಸಾಹಿತ್ಯಾಸಕ್ತರು ಸಾಹಿತ್ಯ ವಲಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಲು ಪುಸ್ತಕ ಪ್ರಕಟಣೆಗೆ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಹಿರಿಯ ಸಾಹಿತಿ ಜಿ.ಎಸ್.­ಬಸವರಾಜ ಶಾಸ್ತ್ರಿಯವರ ’ಪ್ರತಿಸ್ಪಂದನ’ ಎಂಬ ವೈಚಾರಿಕ ಲೇಖನಗಳ ಕೃತಿಯ ಕುರಿತು ಡಾ.ಭೀಮರಾಯ ಲಿಂಗೇರಿ. ’ಕತ್ತಲು ನಗರ ತಿಕ್ಕಲು ರಾಜ’ ಎಂಬ ನಾಟಕ ಕೃತಿಯನ್ನು ರಂಗ ಕಲಾವಿದ ಡಿ.ಎಸ್.ಕುಮಾರ ಪರಿಚಯಿಸಿದರು.

ಜ್ಞಾನೇಶ್ವರ ಸಂದೇನಕರ್‌ ಅವರ ’ನಿಸರ್ಗ ಸಿರಿ’ ಕೃತಿಯನ್ನು ಡಾ.ಸುಭಾಷಚಂದ್ರ ಕೌಲಗಿ. ’ಪಾಪಿದುಡ್ಡು ಪರರ ಸೊತ್ತು’ ಕೃತಿಯನ್ನು ಸಿ.ಎಂ ಪಟ್ಟೇದಾರ ಪರಿಚಯಿಸಿದರು. ಸಂಗಣ್ಣ ಹೊತಪೇಠ ಅವರ ಹಿಂದಿ ಕೃತಿ ’ಚಮತ್ಕಾರ’ ಅನ್ನು ಅಶೋಕ ಆವಂಟಿ ಪರಿಚಯಿಸಿದರು.

ಪುಸ್ತಕ ದಾನಿಗಳಾದ ವಿಶ್ವನಾಥ ಕರ್ಲಿ ಹಾಗೂ ಸಿದ್ದಣ್ಣ ಸಾಹುಕಾರ ದಂಪತಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಕರ್ಲಿ, ಪ್ರಾಂಶುಪಾಲರಾದ ರಘುನಾಥ ರಡ್ಡಿ, ಹಿರಿಯ ವಕೀಲ ಬಿ.ಜಯಾಚಾರ್ಯ, ಎಂ.ಕೆ.ಬಿರನೂರ, ಆರ್.ಎಂ.­ಕೊನಿಮನಿ, ವಿಶ್ವನಾಥ ಸಿರವಾರ, ಗುರುಪ್ರಸಾದ ವೈದ್ಯ, ಭಾಗ್ಯವತಿ ಕೆಂಭಾವಿ, ತಿಪ್ಪಣ್ಣ ಹೂಗಾರ ಮತ್ತಿತರರು ಇದ್ದರು.

ಜಗದೇವಿ ಸಿನ್ನೂರ ಪ್ರಾರ್ಥಿಸಿದರು. ಜಿ.ಎಸ್.ಬಸವರಾಜ ಶಾಸ್ತ್ರಿ ಸ್ವಾಗತಿಸಿದರು. ಜ್ಞಾನೇಶ್ವರ ಸಂದೇನಕರ್‌ ನಿರೂಪಿಸಿದರು. ಸಂಗಣ್ಣ ಹೊತಪೇಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT