ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಿಶ್ಚಿತ ಬೆಲೆ ಪದ್ಧತಿ ನಿವಾರಣೆ ಆಗಲಿ’

ರಾಜ್ಯಮಟ್ಟದ ಕೃಷಿ ಮೇಳ ಉದ್ಘಾಟನೆ
Last Updated 21 ಡಿಸೆಂಬರ್ 2013, 4:30 IST
ಅಕ್ಷರ ಗಾತ್ರ

ಮಂಗಳೂರು:‘ಯುವಕರನ್ನು ಕೃಷಿಯತ್ತ ಆಕರ್ಷಿಸುವ ಕೆಲಸ ಆಗಬೇಕು. ಕೃಷಿ ಪರಂಪರೆ ಬೆಳೆಸಿ, ಬೆಳೆಗೆ ಇರುವ ಅನಿಶ್ಚಿತ ಬೆಲೆ ಪದ್ಧತಿ ನಿವಾರಣೆ ಆಗಬೇಕು. ರೈತರಿಗೆ ಗೌರವ ನೀಡಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು’ ಎನ್ನುವ ಸಂದೇಶಗಳಿಗೆ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 34ನೇ ಕೃಷಿ ಮೇಳ ವೇದಿಕೆಯಾಯಿತು.

ಆಳ್ವಾಸ್‌ ವಿಶ್ವನುಡಿಸಿರಿ–ವಿರಾಸತ್‌ ಸಮಾರಂಭದಲ್ಲಿ ಶುಕ್ರವಾರ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ರಾಜ್ಯಮಟ್ಟದ 34ನೇ ಕೃಷಿಮೇಳದ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಅಡಿಕೆ ಬೆಳೆ ನಿಷೇಧ ಕುರಿತ ವಿಚಾರಗಳ ಬಗ್ಗೆಯೂ ಗಂಭೀರ ಪರಾಮರ್ಶೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆರ್ಥಿಕವಾಗಿ ಲಾಭದಾಯಕವಾದ ಕೃಷಿಯ ಬಗ್ಗೆ ಚಿಂತನೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಅವುಗಳ ಮಧ್ಯೆ ಸಂತೋಷವೂ ಇದೆ. ಹಳೆಯ ಕೃಷಿ ಸಂಪ್ರದಾಯವನ್ನು ಮರೆಯದೆ ಕೃಷಿ ಸಂಸ್ಕೃತಿಯನ್ನು ಮುರಿಯಬಾರದು ಎಂದು ಅವರು ಸಲಹೆ ನೀಡಿದರು.

ಸಮಗ್ರ ಕೃಷಿ ಇರಲಿ:
ರೈತರು ಸಮಗ್ರವಾದ ಮತ್ತು ಸಮರ್ಥನೀಯವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿಯನ್ನು ಯುವಕರು ಮುಂದುವರಿಸುವಂತೆ ಅವರನ್ನು ಸೆಳೆಯಬೇಕು. ಆಧುನಿಕ ಯಂತ್ರಗಳ ಮೂಲಕ ಬೇಸಾಯ ಕೈಗೊಂಡು ಆಧುನಿಕ ತಂತ್ರಜ್ಞಾನ ಅಳವಡಿಸಿದಾಗ ಸಣ್ಣ ಹಿಡುವಳಿದಾರರೂ ಉತ್ತಮ ಆದಾಯ ಗಳಿಸಬಹುದು ಎಂದು ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ. ಕೆ.ನಾರಾಯಣ ಗೌಡ ಹೇಳಿದರು.

ಉತ್ಪಾದನೆಯನ್ನು ವೃದ್ಧಿಸುವ ಅಗತ್ಯ ಇಂದು ಹೆಚ್ಚಾಗಿದೆ. ಕಡಿಮೆ ಪ್ರದೇಶದಲ್ಲೇ ಅತಿ ಹೆಚ್ಚು ಇಳುವರಿ ನೀಡುವ ಅನೇಕ ತಳಿಗಳಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವ ಎಂ4 ಭತ್ತದ ತಳಿ ಉತ್ತಮ ಇಳುವರಿ ನೀಡುತ್ತಿದೆ. ರೈತರು ರೈತರಿಗೆ ಪ್ರೇರಣೆ ಆಗಬೇಕು. ಉತ್ಪಾದನಾ ಘಟಕವನ್ನು ವಿಸ್ತರಿಸಬೇಕು. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬೇಕು. ಇದರಿಂದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಬಹುದು ಎಂದು ಹೇಳಿದರು.

ಜಿಲ್ಲೆಯ ನೀರಾವರಿಗೂ ಆದ್ಯತೆ ಅಗತ್ಯ:
ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಚಿವ ಅಭಯಚಂದ್ರ ಜೈನ್‌, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರ ನೀರಾವರಿ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗೆ ನೂರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಪಶ್ಚಿಮ ವಾಹಿನಿ ಯೋಜನೆಗೆ ಬಜೆಟ್‌ನಲ್ಲಿ ₨400 ಕೋಟಿ ಕಾದಿರಿಸಬೇಕು ಎಂದು ಒತ್ತಾಯಿಸಿದರು.

ವಾರಾಹಿ ಯೋಜನೆಗೆಗೆ ತೊಡಕಾಗಿದ್ದ ಡೀಮ್ಡ್‌ ಅರಣ್ಯದ ಸಮಸ್ಯೆ ನಿವಾರಣೆ ಆಗಿದೆ. ಈ ಯೋಜನೆ 8 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ ಎಂದು ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ರೈತರಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಅಡಿಕೆ ನಿಷೇಧ ಕುರಿತು ಮೂಡಿರುವ ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರವೂ ಸುಪ್ರೀಂಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿ ಅಡಿಕೆಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಮನವರಿಕೆ ಮಾಡಲು ನಿರ್ಧರಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ರೈತರು ಸಹನೆಯಿಂದ ಸಾಧನೆ ಮಾಡಬೇಕು. ಮಾರುಕಟ್ಟೆ ವ್ಯವಸ್ಥೆ, ಕಾರ್ಮಿಕರ ಕೊರತೆಯಿಂದಾಗಿ ಯುವ ಜನತೆ ಆಸಕ್ತಿ ತೋರುತ್ತಿಲ್ಲ ಎಂದರು.

ಪಾಳುಬಿದ್ದ ಭೂಮಿಯಲ್ಲಿ ಕೃಷಿ ಮಾಡುವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ ಎಂದರು.
ಕೃಷಿ ಸಾಧಕರಾದ ಜೀವಂಧರ ಕುಮಾರ್‌, ಅರುಣ್‌ ಕುಮಾರ್‌ ಎಸ್‌.ಆರ್‌. ಶೆಟ್ಟಿಕೆರೆ, ಪಿ.ಟಿ.ಜೋಸ್‌ ಮುದೂರು, ಓಡಿಲ್ನಾಳದ ಶ್ಯಾಮಣ್ಣ ನಾಯಕ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಚಿವ ಯು.ಟಿ.ಖಾದರ್‌, ಡಾ.ಮನಮೋಹನ್‌ ಅತ್ತಾವರ, ಆನಂದ ಆಳ್ವ, ಡಾ.ಎಲ್‌.ಸಿ.ಸೋನ್ಸ್‌, ಸಂಸದ ನಳಿನ್‌ ಕುಮಾರ್ ಕಟೀಲ್‌, ಡಾ.ಎಲ್‌.ಎಚ್‌.ಮಂಜುನಾಥ್‌, ರವಿರಾಜ್‌ ಹೆಗ್ಡೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT