ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಕಂಪ ಬೇಡ, ಅವಕಾಶ ಕಲ್ಪಿಸಿ’

Last Updated 3 ಡಿಸೆಂಬರ್ 2013, 8:49 IST
ಅಕ್ಷರ ಗಾತ್ರ

‘ಬದುಕು ಒಂದು ಹೋರಾಟ. ನನ್ನ ಬದುಕು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು. ನಾನು ಅಂಗವಿಕಲನಾದರೇನು. ನನ್ನ ಮನಸ್ಸು ವಿಕಲವಾಗಿಲ್ಲ’ ಎನ್ನುವುದು ಮಂಜುನಾಥ ರಾಮಪ್ಪ ಹುಬ್ಬಳ್ಳಿ ಅವರ ದೃಢ ನುಡಿ. ಎರಡು ವರ್ಷದ ಮಗುವಾಗಿದ್ದಾಗಲೇ ಪೊಲೀಯೋಗೆ ಬಲಗಾಲ ಸ್ವಾಧೀನ ಕಳೆದುಕೊಂಡರೂ ವಿಚಲಿತನಾಗದೇ ಅಕ್ಷರ ಎಂಬ ಅಸ್ತ್ರ ಹಿಡಿದು ಮುನ್ನಡೆದ ಅಂಗವಿಕಲ ಮಂಜುನಾಥ ಅವರ ಬದುಕು ಹಲವರಿಗೆ ಸ್ಫೂರ್ತಿಯಾಗಬಲ್ಲದು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದ ಮಂಜುನಾಥ ಕಿತ್ತು ತಿನ್ನುವ ಬಡತನದ ನಡುವೆಯೂ, ಸಮಾಜ ಸೇವೆಗೆ ಬದ್ಧರಾದವರು. ‘ಅಂಗವಿಕಲರಿಗೆ ಅನುಕಂಪ ತೋರಿಸುವ ಅಗತ್ಯವಿಲ್ಲ. ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದರೆ ಸಾಕು. ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ’ ಎನ್ನುತ್ತಾರೆ 28ರ ಹರೆಯದ ಮಂಜುನಾಥ.

ಪಿರಕಿ ಮೈಲಿ ಹಾಕಿಸಿದ ನಂತರ ಎರಡು ದಿನಗಳಲ್ಲಿ ಜ್ವರ ಬಂದಿದ್ದೇ ನೆಪವಾಯಿತು. ಬಲಗಾಲ ಸ್ವಾಧೀನ ಕಳೆದುಕೊಂಡಾಗ ಪಡಬಾರದ ಕಷ್ಟ ಅನುಭವಿಸಿದರೂ ಇದ್ಯಾವುದೂ ಅವರಿಗೆ ತೊಂದರೆ ಮಾಡಲಿಲ್ಲ.

ಒಂದರಿಂದ ಏಳನೆ ವರ್ಗದ ಅಭ್ಯಾಸ ಕುಂದಗೋಳ ತಾಲ್ಲೂಕಿನ ದ್ಯಾವನೂರು ಗ್ರಾಮದಲ್ಲಿ. ಎಂಟರಿಂದ ಹತ್ತನೆ ತರಗತಿ ಕುಂದಗೋಳ ಪಟ್ಟಣದ ಹರಭಟ್‌ ಮಾಧ್ಯಮಿಕ ಶಾಲೆಯಲ್ಲಿ. ಪಿ.ಯು.ಸಿ. ಹರಭಟ್‌ ಕಾಲೇಜಿನಲ್ಲಿ, ಪದವಿ ಜಿ.ಎಸ್‌. ಪಾಟೀಲ ಕಾಲೇಜಿನಲ್ಲಿ ಮುಗಿಸಿದ ಅವರು ಶಿವಾನಂದ ಮಠದ ಬಸವರಾಜ  ಸ್ವಾಮೀಜಿ ಅವರ ನೆರವನ್ನು ನೆನಪಿಸಿಕೊಳ್ಳುತ್ತಾರೆ.

ತನಗೆ ಆದ ತೊಂದರೆ ಅಂಗವಿಕಲತೆಗೆ ತುತ್ತಾದ ಇತರ ಮಕ್ಕಳಿಗೆ ಆಗಬಾರದು ಎಂದು ನಿರ್ಧರಿಸಿದ ಅವರು 1998ರಿಂದಲೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಧಾರವಾಡದ ಗಾಂಧಿ ನಗರದಲ್ಲಿರುವ ರೂಡ್‌ ಸೆಡ್‌ ಸಂಸ್ಥೆಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗವಿಕಲ ಮಕ್ಕಳನ್ನು ಕಳುಹಿಸಿ ಅವರು ಸ್ವಾವಲಂಬಿಗಳಾಗಲು ಶ್ರಮಿಸುತ್ತಿದ್ದಾರೆ.

ಎಂಟನೆ ವರ್ಗ ಓದುವಾಗಲೇ ತಂದೆ ಕಳೆದುಕೊಂಡ ಅವರು, ಸಾಕಷ್ಟು ಒತ್ತಡಕ್ಕೆ ಸಿಲುಕಿದರು. ತಾಯಿ ಕೂಲಿ ಮಾಡಿ ಮಗನ ವಿದ್ಯಾಭ್ಯಾಸಕ್ಕೆ ನೆರವಾದರು. ತಾಯಿಯ ನೆರವಿನಿಂದ ಮಂಜುನಾಥ ಪದವಿ ಪಡೆದರು.

2011ರಿಂದ 2013 ಜನಮುಖಿ ಸಂಸ್ಥೆಗೆ ಅಂಗವಿಕಲ ಮಕ್ಕಳನ್ನು ದಾಖಲಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದ ಕೀರ್ತಿ ಮಂಜುನಾಥಗೆ ಸಲ್ಲುತ್ತದೆ. ತಾಲ್ಲೂಕಿನ ಹೊಸ ಹಂಚಿನಾಳ, ಹಳೆ ಹಂಚಿನಾಳ, ಇಂಗಳಗಿ, ಕುಬಿಹಾಳ, ತರ್ಲಘಟ್ಟ, ದೇವನೂರು ಮತ್ತು ಹಿರೆಹರಕುಣಿ, ಚಿಕ್ಕಹರಕುಣಿ ಗ್ರಾಮಗಳಲ್ಲಿ ಅಂಗವಿಕಲ ಸಂಘಗಳನ್ನು ಕಟ್ಟಿ ನಿರ್ಲಕ್ಷ್ಯಕ್ಕೊಳಗಾದವರ ಪರ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಅವರು ಪ್ರತಿಫಲಾಪೇಕ್ಷೆ ಬಯಸದೇ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT