ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುವಾದ ನನ್ನ ಜೀವನದ ದೃಷ್ಟಿಕೋನವನ್ನು ತಿದ್ದುತ್ತ ಬಂದಿದೆ’

Last Updated 30 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮರಾಠಿ ಅನುವಾದ ಕ್ಷೇತ್ರದಲ್ಲ್ಲಿ ಡಾ. ಉಮಾ ಕುಲಕರ್ಣಿ ಬಲು ದೊಡ್ಡ ಹೆಸರು. ಇವತ್ತು ಶಿವರಾಮ ಕಾರಂತ ಮತ್ತು ಎಸ್‌.ಎಲ್‌. ಭೈರಪ್ಪ ಮಹಾರಾಷ್ಟ್ರದಲ್ಲಿ ಮನೆಮಾತಾಗಿದ್ದರೆ. ಅದರ ಹಿಂದೆ ಇರುವವರು
ಡಾ. ಉಮಾ ಕುಲಕರ್ಣಿ. ಪತಿ ವಿರೂಪಾಕ್ಷ ಕುಲಕರ್ಣಿಯವರ ಸಾರ್ಥಕ ನೆರವಿನೊಂದಿಗೆ ಇವರು ಅನಂತಮೂರ್ತಿ, ತೇಜಸ್ವಿ, ವೈದೇಹಿ, ಫಕೀರ್ ಮಹಮ್ಮದ್ ಕಟ್ಪಾಡಿ, ಅಲ್ಲದೆ ಸುಧಾ ಮೂರ್ತಿ ಮತ್ತು ನಾ. ಮೊಗಸಾಲೆಯವರ ಕೃತಿಗಳನ್ನು ಮರಾಠಿಗೆ ಅನುವಾದಿಸಿ ಮಹಾರಾಷ್ಟದಾದ್ಯಂತ ಕನ್ನಡಸಾಹಿತ್ಯದ ಘಮ ಹರಡಿಸಿದವರು.

ಮಹಾರಾಷ್ಟ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳೊಂದಿಗೆ ಅಸಂಖ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಡಾ. ಉಮಾ ಕುಲಕರ್ಣಿಯವರ ಜೊತೆ ನಮ್ಮ ನಡುವಿನ ಹಿರಿಯ ಲೇಖಕಿ ವೈದೇಹಿ ಅವರು ‘ಸಾಹಿತ್ಯ ಪುರವಣಿ’ಗಾಗಿ ನಡೆಸಿದ ಮಾತುಕತೆ.

ನಿಮ್ಮ ಅಭಿಪ್ರಾಯದಲ್ಲಿ ಒಳ್ಳೆಯ ಅನುವಾದ ಅಂದರೆ ಏನು? ಅದರ ಒರೆಗಲ್ಲು ಏನು?
ಒಂದು ಒಳ್ಳೆಯ ಅನುವಾದ ಕೃತಿಯು ಮೂಲಕೃತಿಯ ಆಶಯಕ್ಕೆ ಧಕ್ಕೆ  ತರದಂತಿರಬೇಕು. ಅದು ಮೂಲಕೃತಿಯ ಸಂಸ್ಕೃತಿ, ನುಡಿಗಟ್ಟು, ನಾಣ್ಣುಡಿ, ಜಾಣ್ಣುಡಿ, ಹಾಸ್ಯ ಮೊದಲಾದವುಗಳನ್ನು ಆದಷ್ಟೂ ಮಟ್ಟಿಗೆ ಸಂವಹಿಸಬೇಕು. ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಅನುವಾದದ ಭಾಷೆ ಅದರ ಓದುಗನಿಂದ ಸರಾಗವಾಗಿ ಓದಿಸಿಕೊಳ್ಳಬೇಕು. ಹೀಗಾಗಿ ಅದು ಮೂಲಕೃತಿಯ ಭಾಷೆಯ ಪ್ರಭಾವದಿಂದ ಬಿಡಿಸಿಕೊಳ್ಳಲೇ ಬೇಕು. ಇನ್ನೊಂದು ಸಂಸ್ಕೃತಿಯ ಸಂಗತಿಗಳ ಕುರಿತು ಅಡಿಟಿಪ್ಪಣಿಗಳನ್ನು ಕೊಡುವುದರಿಂದ ಓದಿನ ಓಟಕ್ಕೆ ತಡೆ ಉಂಟಾಗುತ್ತದೆ. ಹೀಗಾಗಿ ಕೃತಿಗಳ ಸಂದರ್ಭದಲ್ಲಿ ವಿವರಣೆಯನ್ನು ಪಠ್ಯದಲ್ಲೇ ಅಲ್ಲಲ್ಲಿ ಸೇರ್ಪಡಿಸುವುದು ನನ್ನ ವಿಧಾನ.

ಮೂಲಕೃತಿ ಹಾಗೂ ಅನುವಾದದ ಕೃತಿ ಕುರಿತಾದ ವಿಮರ್ಶೆ ಒಂದೇ ಬಗೆಯದಾಗಿರುವುದು  ಒಳ್ಳೆಯ ಅನುವಾದದ ಒಂದು ಅತ್ಯುತ್ತಮ ಒರೆಗಲ್ಲು.

ನಿಮ್ಮ ಡಾಕ್ಟರೇಟ್ ಸಂಪ್ರಬಂಧಕ್ಕೂ ನೀವೀಗ ಮಾಡುತ್ತಿರುವ ಅನುವಾದ ಕಾರ್ಯಕ್ಕೂ ಸಂಬಂಧವೇ ಇಲ್ಲ ಅಂತ ಹೊರಗಣ್ಣಿಗೆ ಕಾಣುತ್ತದೆ. ಅದು ನಿಜವೇ? ಅನುವಾದವನ್ನು ಯಾಕೆ  ಮತ್ತು  ಯಾವಾಗ ಆಯ್ದುಕೊಂಡಿರಿ?
೧೯೭೦ನೇ ಇಸವಿಯಲ್ಲಿ ನನ್ನ ಮದುವೆಯಾಯಿತು. ೧೯೮೧ರ ಸುಮಾರಿಗೆ ಕಾರಂತರ ಕಾದಂಬರಿಯಿಂದ ಅನುವಾದದ ಕೆಲಸ ಶುರು ಮಾಡಿದೆ. ಅದು ಭೈರಪ್ಪನವರ ‘ವಂಶವೃಕ್ಷ’ದಿಂದ ಮುಂದುವರೆದು ಇಂದಿಗೂ ನಡೆದಿದೆ.

ಈ ನಡುವೆ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಶಿಕ್ಷಣ ಹಾಗೂ ೧೯೯೨ರಲ್ಲಿ ದ್ರಾವಿಡ ದೇವಾಲಯಗಳ ವಾಸ್ತು ಕುರಿತು ಡಾಕ್ಟರೇಟ್ ಪದವಿಯನ್ನು ಪಡೆದೆ. ಕಾರಂತರ ಮತ್ತು ಭೈರಪ್ಪನವರ ಕಾದಂಬರಿಗಳಿಂದ ಮೊತ್ತಮೊದಲಿಗೆ ನಾನು ಒಬ್ಬ ಅನುವಾದಕಿ ಎಂದು ಗುರುತಿಸಲ್ಪಟ್ಟೆ. ಕನ್ನಡದ ಮುಖ್ಯ ಸಾಹಿತ್ಯಕೃತಿಗಳನ್ನು ಮರಾಠಿಗೆ ಅನುವಾದಿಸುತ್ತ ಹೋದಂತೆ ಓದುಗರ ಮೆಚ್ಚುಗೆ, ಪ್ರಶಸ್ತಿಗಳು, ನನ್ನ ಅನುವಾದಗಳ ಕುರಿತು ಮಾತಾಡಲು ಓದುಗರಿಂದ ಕರೆ - ಇದೆಲ್ಲದರಿಂದ ನಿಧಾನವಾಗಿ ಅನುವಾದವೇ ನನ್ನ ಕೆರಿಯರ್ ಆಗಿಬಿಟ್ಟಿತು. ಆದರೂ ತೀವ್ರ ಅನಿಸಿದಾಗೆಲ್ಲ  ಈಗಲೂ ಅಮೂರ್ತ ಚಿತ್ರಕಲೆಯ ಪೇಂಟಿಂಗ್ ಮಾಡುತ್ತಿರುತ್ತೇನೆ. ದೇವಾಲಯಗಳ ವಾಸ್ತು ಕುರಿತ ಚಿಂತನೆ  ಮಾತ್ರ ಅಲ್ಲಿಗೇ ನಿಂತಿದೆ.  

ಅನುವಾದದಲ್ಲಿ ನಿಮಗೆದುರಾಗಿರುವ ಸವಾಲುಗಳು? ಅವುಗಳನ್ನು ನೀವು ದಾಟುವ ಬಗೆ?
ಈ ಪ್ರಶ್ನೆಗೆ ಸ್ವಲ್ಪದರಲ್ಲಿ ಉತ್ತರ ನೀಡಲು ಸಾಧ್ಯವಾಗದು. ಆದರೂ - ಲಲಿತಕೃತಿಯ ಅನುವಾದದಲ್ಲಿ ಮುಖ್ಯವಾಗಿ ಎದುರಾಗುವುದು ಮೂಲಕೃತಿಯ ಸಂಸ್ಕೃತಿವಿವರಗಳ ಪ್ರಶ್ನೆ. ಅವು ಅನುವಾದಗೊಳ್ಳುವ ಭಾಷೆಗೆ ಅಪರಿಚಿತವಿದ್ದರೆ ಮೊದಲು ನಾನದನ್ನು ತಿಳಿದುಕೊಳ್ಳಬೇಕು. ತಿಳಿದುಕೊಂಡು ಅನುವಾದದ ಓದುಗರಿಗಾಗಿ ವಿವರಿಸಬೇಕು.

ಇಲ್ಲಿ ಮೂಲಲೇಖಕರಿಂದ ನೆರವು ಪಡೆಯುತ್ತೇನೆ. ಉದಾ: ಕುಡಿಯರ ಕೂಸುವನ್ನು ಅನುವಾದಿಸುವಾಗ ಕಾರಂತರಿಂದ ಅಲ್ಲಿಯ ಗಿಡ-ಮರ, ಕಾಡುಪ್ರಾಣಿಗಳ ಇಂಗ್ಲಿಷ್ ಹೆಸರುಗಳನ್ನು ಪಡೆದೆ. ಮರಾಠಿ ಲೇಖಕರೂ, ಅರಣ್ಯಇಲಾಖೆಯ ಅಧಿಕಾರಿಯೂ ಆದ ಮಾರುತಿ ಚಿತ್ತಮಪಲ್ಲಿಯವರಿಂದ ಅವಕ್ಕೆ  ಸಮನಾದ ಮರಾಠಿ ಆಡುಪದಗಳನ್ನು ಕೇಳಿತಿಳಿದು ಅನುವಾದ ಪೂರೈಸಿದೆ. ಪೂಚಂತೇಯವರಿಂದ, ನಿಮ್ಮಿಂದ, ಕಟಪಾಡಿಯವರಿಂದ ಆಯಾ ಕಥೆಗಳ ಸಂದರ್ಭದಲ್ಲಿ ನೆರವು ಪಡೆದೇ ಇರುವೆ.  ಇಷ್ಟಾಗಿಯೂ ಕೆಲವನ್ನು  ಅನುವಾದಿಸಲು ಸಾಧ್ಯವಾಗದೆ ಹೋಗುವುದಿದೆ. ಉದಾಹರಣೆಗೆ: ಮಾತು, ಶಬ್ದಗಳನ್ನಾಧರಿಸಿದ ಹಾಸ್ಯ. ಧಾಟಿ. (ನೆನಪಿರುವಂತೆ) ಇಂಗ್ಲಿಷ್‌ನವರಾದರೆ ನಿಜವಾದ ಜಜ್ಜುಗಳು. ನಮ್ಮವರೆಲ್ಲ ಅಡಿಕೆ ಜಜ್ಜುಗಳೇ! - (ಕಾರಂತ, ಬೆಟ್ಟದ ಜೀವ)

ಅನುವಾದದಿಂದ ನಿಮಗಾದ ವೈಯಕ್ತಿಕ ಲಾಭ? 
ಅನುವಾದದ ಕಾರ್ಯ ನನ್ನ ಜೀವನವನ್ನು ಸಮೃದ್ಧಗೊಳಿಸುತ್ತ ಹೋಗಿದ್ದು ದೊಡ್ಡ ಲಾಭ ಎನ್ನಬೇಕು.. ವ್ಯಕ್ತಿಗತವಾಗಿ ಅದು ನನ್ನನ್ನು ಶ್ರೀಮಂತಗೊಳಿಸಿದೆ. ದಿ. ಕಾರಂತರು ಮತ್ತು ಭೈರಪ್ಪರಂಥವರು ಪುಣೆಗೆ ಬಂದರೆ ನಮ್ಮಲ್ಲೇ ಉಳಿಯುವಷ್ಟು ಆತ್ಮೀಯತೆ ಉಂಟಾದ್ದು ಇನ್ನೊಂದು ಲಾಭ. ಅವರೊಡನೆ ನಡೆಸಿದ ಕರ್ನಾಟಕದ ಜೀವನ, ಸಾಹಿತ್ಯ ಮೊದಲಾದ ಅದೆಷ್ಟೋ ವಿಷಯಗಳ ಚರ್ಚೆ ನನ್ನನ್ನೂ ನನ್ನ ಪತಿಯನ್ನೂ ಬೆಳೆಸಿದೆ. ಅನುವಾದದ ಕಾರ್ಯ, ಜೊತೆಗೆ ಅದರಿಂದಾಗಿ ನಮ್ಮ ಸಂಪರ್ಕಕ್ಕೆ ಬರುವ ಎರಡೂ ಭಾಷೆಯ ಸಾಹಿತಿಗಳ ಒಡನಾಟ, ನಮ್ಮ ಸಹಜೀವನದ ಮುಖ್ಯ ಅಂಗಗಳೆನ್ನಿಸಿವೆ.

ಇನ್ನು- ಅನುವಾದ ನನ್ನ ಜೀವನದ ದೃಷ್ಟಿಕೋನವನ್ನು ತಿದ್ದುತ್ತ ಬಂದಿದೆ. ‘ಮೂಕಜ್ಜಿಯ ಕನಸುಗಳು’ ಅನುವಾದದ ಮುಂಚೆ ದೇವರ ಕುರಿತ ನನ್ನ ಕಲ್ಪನೆ ಗೊಂದಲಮಯವಿತ್ತು. ಈ ಅನುವಾದದ ನಂತರ ಅದು ಸ್ಪಷ್ಟವಾಯ್ತು ಅಷ್ಟೇ ಅಲ್ಲ ನನ್ನ ‘ದೇವರು ಹಾಗೂ ದೇವಾಲಯ’ಗಳನ್ನು ಕುರಿತಾದ ಪಿಎಚ್‌.ಡಿ ಕಲ್ಪನೆಗೊಂದು ದಿಕ್ಕು ಲಭ್ಯವಾಯ್ತು.

‘ಮೈಮನಗಳ ಸುಳಿಯಲ್ಲಿ’ ಅನುವಾದಿಸುವಾಗ ನನಗಿನ್ನೂ ಮೂವತ್ತೆರಡು ವರ್ಷ. ಹೆಣ್ಣುಗಂಡಿನ ಸಂಬಂಧಗಳ ಬಗ್ಗೆ ನನ್ನಲ್ಲಿ ನೂರಾರು ಪ್ರಶ್ನೆಗಳಿದ್ದುವು. ಆ ಕಾದಂಬರಿಯ ಅನುವಾದ ಮಾಡುತ್ತ ಹೋದಂತೆ ಉತ್ತರಗಳು ಸಿಕ್ಕಿದಂತಾಯ್ತು.

ಅನುವಾದ ಮಾಡುವಲ್ಲಿ ನಿಮ್ಮ ಆಶಯವೇನು? ಅದರ ಪರಿಣಾಮವೇನು?
ಮರಾಠಿಗೆ ಕನ್ನಡದ ವೈಶಿಷ್ಟ್ಯಪೂರ್ಣ ಸಾಹಿತ್ಯವನ್ನು ಪರಿಚಯಿಸಬೇಕು. ಆಳ, ಅರ್ಥಪೂರ್ಣ, ಜೀವನಾನುಭವದಿಂದ ರೂಪುಗೊಂಡ ಸಾಹಿತ್ಯವನ್ನು ಓದುಗರಿಗೆ ಕೊಡಬೇಕೆನ್ನುವ ಆಶಯ ನನ್ನದು. ಫಲವಾಗಿ ನನ್ನ ಅನುವಾದದ ಮಟ್ಟಿಗೆ ಓದುಗರಿಗೂ ಪ್ರಕಾಶಕರಿಗೂ ಮೆಚ್ಚುಗೆ ಮಾತ್ರವಲ್ಲ ವಿಶ್ವಾಸವಿದೆ. ಅನೇಕ ಕೃತಿಗಳು ಮರುಮುದ್ರಣಗಳಾಗಿವೆ.

ಈವರೆಗೆ ಸುಮಾರು ಐವತ್ತು ಕನ್ನಡ ಸಾಹಿತ್ಯಕೃತಿಗಳನ್ನು ಮರಾಠಿಗೆ ಅನುವಾದಿಸಿರುವೆ.  ನನ್ನ ಅನುವಾದಗಳನ್ನು ಕುರಿತು ಪತ್ರಿಕೆಗಳಲ್ಲಿ ವಿಚಾರಪೂರ್ಣ ವಿಮರ್ಶೆ ಪ್ರಕಟವಾಗುತ್ತ ಬಂದಿದೆ. ಅವನ್ನು ಕುರಿತು ಮರಾಠಿಯಲ್ಲಿ ವಿಚಾರಗೋಷ್ಠಿಗಳು ನಡೆಯುತ್ತವೆ. ಕೆಲವು ಕೃತಿಗಳಂತೂ ಸ್ನಾತಕೋತ್ತರ ಪಠ್ಯಗಳಾಗಿವೆ. ಮೊದಲೇ ಹೇಳಿದಂತೆ ವ್ಯಾಖ್ಯಾನ, ಚರ್ಚೆ, ಪ್ರಪಂಚದಾದ್ಯಂತ ಹರಡಿರುವ ಮರಾಠಿ ಓದುಗರಿಂದ ಅದ್ಭುತ ಸ್ಪಂದನೆ, ಕರೆ ಇತ್ಯಾದಿ ಇದ್ದೇ ಇದೆ. ಒಮ್ಮೆ ಭೈರಪ್ಪನವರು ಆಸ್ತ್ರೇಲಿಯಾಕ್ಕೆ ಹೋದಾಗ ಅಲ್ಲಿನ ಮರಾಠಿ ಓದುಗರು ಒಟ್ಟು ಸೇರಿ ಅವರೊಡನೆ ಸಂವಾದ ನಡೆಸಿದ್ದು ಇಲ್ಲಿ ನೆನಪಾಗುತ್ತಿದೆ.

ಪುಣೆಯಲ್ಲಿ ‘ಮರಾಠಿ - ಕನ್ನಡ ಸ್ನೇಹವರ್ಧನ ಕೇಂದ್ರ’ ಇದೆಯಲ್ಲವೆ?  ನಿಮ್ಮಲ್ಲಿ ಕನ್ನಡದ ವಾತಾವರಣ ಹೇಗಿದೆ? ೧೯೮೯ರಲ್ಲಿ ಪುಣೆಯ ‘ಮರಾಠಿ -ಕನ್ನಡ ಸ್ನೇಹವರ್ಧನ ಕೇಂದ್ರ’ದ ಸ್ಥಾಪನೆಯಾಯಿತು. ಪು.ಲ. ದೇಶಪಾಂಡೆ - ವ್ಯಕ್ತಿ ಮತ್ತು ವಾಂಙ್ಮಯ ಎಂಬ ಕನ್ನಡಪುಸ್ತಕದ ಬಿಡುಗಡೆಯ ನಿಮಿತ್ತವಾಗಿ ನಡೆದ ಅದ್ದೂರಿಯ ಸಮಾರಂಭದ ಮೂಲಕ ಈ ಸಂಸ್ಥೆ ಅಸ್ತಿತ್ವಕ್ಕೆ ಬಂತು ಡಾ. ಶ್ರೀನಿವಾಸ ಹಾವನೂರ, ಡಾ. ಅನಂತ ತೋರೊ, ಶ್ರೀ ಕೃ. ಶಿ. ಹೆಗಡೆ, ಡಾ. ಪುಂಡೆ, ವಿರೂಪಾಕ್ಷ ಕುಲಕರ್ಣಿ ಮತ್ತು ನಾನು ಎಲ್ಲ  ಸೇರಿ ಈ ಸಂಸ್ಥೆಯನ್ನು ಸ್ಥಾಪಿಸಿದೆವು. ಅದು ಮರಾಠಿಗರಿಗೆ ಕನ್ನಡಭಾಷಾ ತರಗತಿಗಳನ್ನು ನಡೆಸುವುದರ ಜೊತೆಗೆ ಎರಡೂ ಭಾಷೆಯ ಸಾಹಿತ್ಯ ಹಾಗೂ ಸಾಹಿತಿಗಳ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ ಪುಣೆಯ ಕರ್ನಾಟಕ ಸಂಘವಂತೂ ಇಷ್ಟರಲ್ಲೇ ಶತಮಾನೋತ್ಸವವನ್ನು ಆಚರಿಸಲಿದೆ. ಡಾ. ಶಾಮರಾವ ಕಲ್ಮಾಡಿ, ದಿ. ಗುಂಡೂಶೆಟ್ಟಿ ಮೊದಲಾದವರು ಸ್ಥಾಪಿಸಿದ ಒಂದು ಕನ್ನಡಸಂಘವಿದೆ, ಸಾಕಷ್ಟು ಹಳೆಯದು. ಇದೇ ಹಿರಿಯರು ಆರಂಭಿಸಿದ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಕರ್ನಾಟಕ ಹೈಸ್ಕೂಲು ಮತ್ತದರ ಶಾಖೆಗಳಿಗೆ ಪುಣೆಯ ಮರಾಠಿ ಪೋಷಕರೂ ಮಕ್ಕಳನ್ನು ಸೇರಿಸಲು ಬಯಸುತ್ತಾರೆ.  ಇವಲ್ಲದೆ ಉಪನಗರಗಳಲ್ಲಿ ಇನ್ನೂ ಹಲವಾರು ಕನ್ನಡಸಂಸ್ಥೆಗಳಿವೆ. ಇವೆಲ್ಲವೂ ಸಾಹಿತ್ಯದೊಡನೆಯೇ ಕನ್ನಡಸಂಸ್ಕೃತಿಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡುವಂಥವು. ಮರಾಠಿ ಮತ್ತು ಕನ್ನಡದ ಅಂತರ್ ಸಂಬಂಧ, ಅನುವಾದದ ನೆಲೆಯಲ್ಲಿ, ವಿವರಿಸುವಿರ ಇವೆರಡೂ ಭಾರತೀಯ ಭಾಷೆಗಳೇ ಆಗಿರುವುದರಿಂದಲೂ, ನೆರೆಯ ಭಾಷೆಗಳೇ ಆಗಿರುವುದರಿಂದಲೂ ಅವುಗಳ ಸಂಸ್ಕೃತಿಯಲ್ಲಿ ಸಮಾನ ಅಂಶಗಳು ಸಾಕಷ್ಟಿವೆ. ಕುಟುಂಬಗಳ ರೂಪದಲ್ಲಿಯೂ ಸಾಮ್ಯವಿದೆ.. ಸ್ಥಾನೀಯ ವಿವರಗಳಲ್ಲಿ ವ್ಯತ್ಯಾಸಗಳಿರಬಹುದು, ಅಷ್ಟೆ. ಗಡಿಭಾಗದಲ್ಲಂತೂ ಎರಡೂ ಭಾಷೆಗಳನ್ನಾಡುವ ನೆಂಟರಿಷ್ಟರಿದ್ದಾರೆ.

ಮದುವೆಗಳಾಗಿ ಸಂಬಂಧ ಬೆಳೆಯುತ್ತದೆ. ಉದಾಹರಣೆ, ನಮ್ಮ ಕುಟುಂಬವೇ. ಹೀಗಾಗಿ ಅನುವಾದ ಮಾಡುವಾಗ ಬಹಳ ದೊಡ್ಡ ಸವಾಲುಗಳೇನು ಏಳುವುದಿಲ್ಲ. ಆದರೆ, ಎರಡೂ ಭಾಷೆಗಳ ವ್ಯಾಕರಣಗಳಲ್ಲಿ ಸಾಕಷ್ಟು ಭಿನ್ನತೆಯಿದೆ. ಹೀಗಾಗಿ ಭಾಷಾ ಕಲಿಕೆ ಮಾತ್ರ ಅಷ್ಟು ಸುಲಭವಲ್ಲ. ನಿಮ್ಮ ಅನುವಾದ ಕಾರ್ಯದಲ್ಲಿ ನಿಮ್ಮ ಪತಿಯವರ ಪಾತ್ರ ವಿಶಿಷ್ಟವಿದೆ ಅಂತ ಕೇಳಿದೆ. ವಿವರಿಸುವಿರ?
ಹೌದು, ಅದು ಮಾತ್ರ, ಖಂಡಿತವಾಗಿ ವಿಶಿಷ್ಟವೇ. ಎಲ್ಲೂ ಇಲ್ಲದ್ದು, ಯಾರೂ ಮಾಡದ್ದು! ನನ್ನ ಮಾತೃಭಾಷೆ ಮರಾಠಿ. ಪದವಿಯವರೆಗೆ ಓದಿದ್ದು ಇದೇ ಭಾಷೆಯಲ್ಲಿ. ಬೆಳಗಾವಿಯವಳಾದ್ದರಿಂದ ಕನ್ನಡ ಅರ್ಥವಾಗುತ್ತಿತ್ತು. ಆದರೆ ಮಾತು ಬರುತ್ತಿರಲಿಲ್ಲ. ನನ್ನ ಗಂಡ ಕನ್ನಡದವರು. ಪುಣೆಗೆ ಬಂದ ಬಳಿಕ ನಾವು ಕನ್ನಡವನ್ನು ಮನೆಮಾತಾಗಿ ಇರಿಸಿಕೊಂಡೆವು. ಹೊರಗೆಲ್ಲ ಮರಾಠಿಯಲ್ಲಿ ವ್ಯವಹರಿಸುತ್ತೇವೆ.

ಮೊದಲನೆಯದಾಗಿ- ಕನ್ನಡ ಬಾರದ ನನಗೆ ವಿರೂಪಾಕ್ಷರು ಕನ್ನಡದ ಕೃತಿಗಳನ್ನು ಓದಿಹೇಳುತ್ತಾರೆ. ನಾವು ಅನುವಾದಕ್ಕಾಗಿ ತೆಗೆದುಕೊಳ್ಳುವ ಕೃತಿಯನ್ನು ಚರ್ಚಿಸುತ್ತೇವೆ. ಒಂದು ಕನ್ನಡದ ಕೃತಿ ಮರಾಠಿಗೆ ವಿಶಿಷ್ಟವಾದುದೇ, ಅಂಥಹದು ಮರಾಠಿಯಲ್ಲಿ ಇದೆಯೆ ಇಲ್ಲವೇ ಎಂದೆಲ್ಲ ಪರಿಗಣಿಸಿ ಅದನ್ನು ಅನುವಾದಕ್ಕೆ ಎತ್ತಿಕೊಳ್ಳುತ್ತೇವೆ.

ಎರಡನೆಯದಾಗಿ- ನಾನು ಅನುವಾದದ ಕೆಲಸವನ್ನು ಶುರುಮಾಡುವಲ್ಲಿ ನನಗೆ ಕನ್ನಡ ಓದಲು, ಬರೆಯಲು ಬಾರದಿರುವುದೇ ಒಂದು ದೊಡ್ಡ ತೊಡಕಾಗಿತ್ತು. ನನ್ನ ಮೊದಲ ಅನುವಾದದಿಂದ ಹಿಡಿದು ಇಂದಿನವರೆಗೂ ವಿರೂಪಾಕ್ಷ ಅವರು ಮಾಡುತ್ತಿರುವುದು ಬಲು ದೊಡ್ಡ ಕೆಲಸ, ಕನ್ನಡದ ಸಾಹಿತ್ಯಕೃತಿಯನ್ನು ಗಟ್ಟಿಯಾಗಿ ಓದಿ ರೆಕಾರ್ಡ್ ಮಾಡಿಡುವ ಪ್ರಯಾಸದ ಕಾರ್ಯ. ಅವರು ಹೀಗೆ ಮಾಡುವುದರಿಂದಾಗಿ ಕನ್ನಡದ ಓದುಬರಹಗಳಲ್ಲಿ ನನ್ನ ಶಕ್ತಿಯನ್ನು ವ್ಯಯಿಸದೆ ಅವನ್ನು ಆಲಿಸುತ್ತ ಅನುವಾದಿಸಲು ಸಾಧ್ಯವಾಯಿತು. ಮೊದಲು ಕೈಯಿಂದ ಬರೆಯುತ್ತಿದ್ದೆ. ಇತ್ತೀಚೆಗೆ ಕಂಪ್ಯೂಟರ್‌ನಲ್ಲಿ ಬೆರಳಚ್ಚು ಮಾಡುತ್ತೇನೆ. ಇದರಿಂದ ಹೆಚ್ಚು ಆರಾಮವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT