ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿ ಮುಂದುವರಿಕೆಗೆ ಮತನೀಡಿ’

ಬಿಜೆಪಿ ಅಭ್ಯರ್ಥಿ: ಜನಾರ್ದನ ಸ್ವಾಮಿ
Last Updated 12 ಏಪ್ರಿಲ್ 2014, 5:46 IST
ಅಕ್ಷರ ಗಾತ್ರ

* ಹೇಗಿದೆ ಮತದಾರರ ಪ್ರತಿಕ್ರಿಯೆ ?
ಚೆನ್ನಾಗಿದೆ. ಮತದಾರರು, ‘ನಾನು ಊರಿಗೆ ಬಂದಿಲ್ಲ’ ಎಂದು ದೂರುತ್ತಾರೆ. ‘ಎಲ್ಲ ಊರಿಗೂ ಬರುವುದು ಅಸಾಧ್ಯ ಮತ್ತು ಎಲ್ಲರನ್ನೂ ಭೇಟಿಯಾಗುವುದು ಕಷ್ಟ’ ಎಂಬುದಕ್ಕೆ ಸಮರ್ಪಕವಾದ ಉತ್ತರ ನೀಡಿದ ಮೇಲೆ, ನನ್ನ ಒಪ್ಪಿಕೊಂಡು ಮತ ನೀಡುವ ಭರಸೆಯಿತ್ತಿದ್ದಾರೆ.

* ಯಾಕೆ ನೀವು ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು 5 ವರ್ಷಗಳಲ್ಲಿ ಒಮ್ಮೆಯೂ ಭೇಟಿಯಾಗಿಲ್ಲ?
ಒಬ್ಬ ಸಂಸದರ ಅವಧಿ ಅಂದಾಜು 1600 ದಿನಗಳು. ಅದರಲ್ಲಿ 700 ರಿಂದ 800 ದಿನಗಳು ಅಧಿವೇಶನ, ಉಪಸಮಿತಿ ಸಭೆ, ಪಕ್ಷದ ಸಭೆಗಳಿಗೆ ವ್ಯಯವಾಗುತ್ತದೆ. ಉಳಿದ ದಿನಗಳಲ್ಲಿ, ಜಿಲ್ಲೆಯ ಅಂದಾಜು 2400 ಹಳ್ಳಿಗಳು, 16 ಲಕ್ಷ ಮತದಾರರನ್ನು ಹೇಗೆ ಭೇಟಿಯಾಗಲು ಸಾಧ್ಯ ? ನಾನಷ್ಟೇ ಅಲ್ಲ, ಯಾವ ಸಂಸದರಿಂದಲೂ ಸಾಧ್ಯವಿಲ್ಲ. ಬೇಕಾದರೆ ದಾಖಲೆಗಳನ್ನು ತೆಗೆಸಿ ನೋಡಿ. ಅವರೆಲ್ಲರಿಗಿಂತ ನಾನೇ ಹೆಚ್ಚು ಹಳ್ಳಿಗಳನ್ನು ಭೇಟಿಯಾಗಿದ್ದೇನೆ. 50 ರಿಂದ 60 ಸಾವಿರ ಜನರ ಅರ್ಜಿ ವಿಲೇವಾರಿ ಮಾಡಿದ್ದೇನೆ. ಕ್ಷೇತ್ರಕ್ಕೆ ಶೇ 100 ರಷ್ಟು ಅನುದಾನ ನೀಡಿದ್ದೇನೆ.

* ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಗೊಂದಲವಿದೆಯೆಯಲ್ಲ ?
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದು, ದಾವಣಗೆರೆ–ಬೆಂಗಳೂರು ರೈಲ್ವೆ ಯೋಜನೆಗೆ ಭೂಮಿ ಕೊಡುವ ಭರವಸೆ, ನೀಡಿ ಹಣ ತೆಗೆದಿರಿಸಿದ್ದು ಬಿಜೆಪಿ ಸರ್ಕಾರ. ಶಾಶ್ವತ ಉದ್ಯೋಗ ಸೃಷ್ಟಿಸುವ ’ವಿಜ್ಞಾನ ನಗರ’ ಯೋಜನೆ ವೇಗ ನೀಡುವ ಪ್ರಯತ್ನದ ಹಿಂದೆ ನನ್ನ ಶ್ರಮವಿದೆ.

ನಿಜ, ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಸಂಸದರಾಗಿದ್ದಾಗ ವಿಜ್ಞಾನ ನಗರ ಯೋಜನೆಗೆ ಭೂಮಿ ಲಭ್ಯವಾಯಿತು. ಅವರ ಅವಧಿ ಮುಗಿಯಿತು. ನನ್ನ ಅವಧಿ ಆರಂಭವಾಯಿತು. ಈ ಅವಧಿಯಲ್ಲಿ ಡಿಆರ್ ಡಿಒ, ಬಿಎಆರ್ ಸಿ, ಐಐಎಸ್ ಸಿಯಂತಹ ಸಂಸ್ಥೆಗಳ ಪ್ರಗತಿ ವೇಗ ಕಂಡಿತು. ಸಂಸ್ಥೆಗಳಿಗೆ ಬೇಕಾದ ಹೆಚ್ಚುವರಿ ಹಣಕಾಸಿನ ವ್ಯವಸ್ಥೆ, ಮೂಲ ಸೌಲಭ್ಯ ದೊರೆಯಲು ನಾನು ಸಹಕಾರ ನೀಡಿದ್ದೇನೆ. ಒಂದು ಅಭಿವೃದ್ಧಿ ಕಾರ್ಯದ ಹಿಂದೆ ಅನೇಕರ ಶ್ರಮವಿರುತ್ತದೆ. ಆದರೆ, ಒಂದೊಂದು ಅವಧಿಯಲ್ಲಿ ಒಬ್ಬೊಬ್ಬರು ಕೊಡುಗೆ ನೀಡಿರುತ್ತಾರೆ ಅಷ್ಟೇ.
* ನೀವು ಸಂಸದರಾದ ಮೇಲೆ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಬಹುದೆಂಬ ನಿರೀಕ್ಷೆ ಇತ್ತು. ಅದು ಈಡೇರಿಲ್ಲ ?
ಉದ್ಯೋಗ ಸೃಷ್ಟಿ ಎಂದರೆ ಕೇವಲ 150 ಮಂದಿಗೆ ಉದ್ಯೋಗ ನೀಡುವ ಗಾರ್ಮೆಂಟ್ ಕಾರ್ಖಾನೆಯಾದರೆ ಸಾಲದು. ಲಕ್ಷಾಂತರ ಜನರಿಗೆ ಶಾಶ್ವತ ಉದ್ಯೋಗ ನೀಡುವಂತಹ ‘ವಿಜ್ಞಾನ ನಗರ’ದಂತಹ ಯೋಜನೆಗಳು ಬೇಕು. ಅದಕ್ಕೆ ಆ ಯೋಜನೆಗೆ ಒತ್ತು ನೀಡಿದ್ದೇನೆ. ಆಗ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಈ ಯೋಜನೆಯನ್ನು ಮುಂದುವರಿಸಬೇಕು. ಯಾವುದೇ ಅಭಿವೃದ್ಧಿ ಸಾಗಲು ನೀರಿನ ಅವಶ್ಯಕತೆ ಇದೆ. ಅನಿವಾರ್ಯವಾಗಿ ಭದ್ರಾಮೇಲ್ದಂಡೆ ಯೋಜನೆ ವೇಗ ಪಡೆಯುತ್ತದೆ. ಒಮ್ಮೆ ಜಿಲ್ಲೆಗೆ ನೀರು ಬಂದರೆ, ಪ್ರಸ್ತಾಪಿದ ಉದ್ಯಮಗಳು ತಾನಾಗಿಯೇ ಬರುತ್ತವೆ. ಉದ್ಯೋಗ ಸೃಷ್ಟಿಯಾಗುತ್ತದೆ.

* ಮತದಾರರು ಏಕೆ ನಿಮಗೆ ಮತ ಹಾಕಬೇಕು ? ಭವಿಷ್ಯದ ಯೋಜನೆಗಳೇನು ?
ಐದು ವರ್ಷಗಳಿಂದ ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಇವು ‘ಫಲ’ಕೊಡಲು ಇನ್ನೂ ಐದಾರು ವರ್ಷ ಬೇಕು. ಹಾಗಾಗಿ ಅಭಿವೃದ್ಧಿ ಕಾರ್ಯಗಳು ಮುಂದುವರಿಸಲು ಮತದಾರರು ನನ್ನನ್ನು ಗೆಲ್ಲಿಸಬೇಕು. ಭವಿಷ್ಯದಲ್ಲಿ ಈ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮಕ್ಕೂ ಒತ್ತು ನೀಡಬೇಕೆಂದುಕೊಂಡಿದ್ದೇನೆ. ‘ಪ್ರವಾಸೋದ್ಯಮ ಅಭಿವೃದ್ಧಿ’ ಎಂದರೆ  ಶೌಚಾಲಯ ತೆರೆದು, ನೀರಿನ ಟ್ಯಾಂಕ್ ಕಟ್ಟಿಸುವುದಲ್ಲ. ಪ್ರವಾಸಿಗರಿಗೆ ಸಂಚಾರ, ವಸತಿ ಹಾಗೂ ಊಟ ವ್ಯವಸ್ಥೆಗೆ ಸುಸಜ್ಜಿತ ಹೋಟೆಲ್ ಗಳ ನಿರ್ಮಾಣ ಭವಿಷ್ಯದ ಯೋಜನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT