ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಣ್ಯ ಹಕ್ಕು ಪಡೆಯಲು ಎರಡು ದಾಖಲೆ ಸಾಕು’

Last Updated 24 ಡಿಸೆಂಬರ್ 2013, 9:56 IST
ಅಕ್ಷರ ಗಾತ್ರ

ಶಿರಸಿ: ‘ಪರಿಶಿಷ್ಟ ಪಂಗಡ ಮತ್ತು ಇತರೇ ಸಾಂಪ್ರದಾಯಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಪಡೆಯಲು ಊರಿನ ಹಿರಿಯರ ಹೇಳಿಕೆ ಸೇರಿದಂತೆ ಒಂದಕ್ಕಿಂತ ಹೆಚ್ಚು ದಾಖಲೆ ನೀಡಿದರೆ ಸಾಕು’ ಎಂದು ವಿಧಾನಸಭೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಹೇಳಿದರು.

ಹೊರ ಜಿಲ್ಲೆಗೆ ಸಾಗುತ್ತಿರುವ ಮಾರ್ಗ ಮಧ್ಯೆ ಇಲ್ಲಿನ ನಗರಸಭೆಗೆ ಭೇಟಿ ನೀಡಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿರುವ ಅರ್ಜಿಗಳ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಊರಿನ ಹಿರಿಯರೊಬ್ಬರ ಹೇಳಿಕೆ, ಸ್ಥಳದ ಮಹಜರು ಅಥವಾ ಇನ್ನಾವುದಾದರೂ ಅತಿಕ್ರಮಣದಾರರ ಬಳಿ ಇರುವ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಅರ್ಜಿ ಜೊತೆ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ನೀಡಬಹುದು. ಹೊಸದಾಗಿ ರಚನೆ ಮಾಡಿರುವ ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಅಧಿಕೃತ ಸಮಿತಿಗಳಾಗಿವೆ. ಸಮಿತಿಯ ಸದಸ್ಯರಿಗೆ ವಿಶೇಷ ತರಬೇತಿ ಅಗತ್ಯವಾಗಿದೆ’ ಎಂದರು.

‘ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲು ಸರ್ಕಾರ ಸಹ ಪ್ರಯತ್ನಿಸುತ್ತಿದೆ. ಈ ಹಿಂದಿನಂತೆ ಅತಿಕ್ರಮಣದಾರರಿಗೆ ತೊಂದರೆಯಾಗಬಾರದು. ಕಾಯ್ದೆಯ ಮೂಲ ಉದ್ದೇಶ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ನೀಡುವುದಾಗಿದ್ದು, ಸರ್ಕಾರದ ಎಲ್ಲ ಸಚಿವರಿಗೆ ಕೂಡ ಸಂಗತಿ ತಿಳಿಸಲಾಗಿದೆ. ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ನೀಡುವ ದಿಸೆಯಲ್ಲಿ ಅಧಿಕಾರಿಗಳಿಗೆ ಬದ್ಧತೆ ಇಲ್ಲವಾಗಿದ್ದು, ಅವರಿಗೆ ಇಂಜೆಕ್ಷನ್‌ ಮಾಡಬೇಕಾಗಿದೆ. ಕೇವಲ ಅಧಿಕಾರಿಗಳ ಮೇಲೆ ಬಿಟ್ಟರೆ ಕೆಲಸ ಸಾಧ್ಯವಾಗದು. ನೀವು ನಿಗಾವಹಿಸಬೇಕು’ ಎಂದು ಸ್ಥಳದಲ್ಲಿ ಹಾಜರಿದ್ದ ಕಾಂಗ್ರೆಸ್‌ ಪಕ್ಷದ ಪ್ರಮುಖರಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರು ‘ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಪಡೆಯಲು ಕನಿಷ್ಠ ಮೂರು ದಾಖಲೆ ಒದಗಿಸಬೇಕು’ ಎಂದರು.

‘ಯಾರ್ರೀ ನಿಮಗೆ ಹೇಳಿದ್ದು, ಕಾಯ್ದೆಯಲ್ಲೇ ತಿಳಿಸಿರುವಂತೆ ಒಂದಕ್ಕಿಂತ ಹೆಚ್ಚು ದಾಖಲೆ ನೀಡಿದರೆ ಸಾಕು. ಯಾವುದೇ ಅರ್ಜಿಗಳನ್ನು ತಿರಸ್ಕರಿಸಬೇಡಿ. ಸಾರ್ವಜನಿಕರಿಗೆ ಸಾಮಾಜಿಕ ನ್ಯಾಯ ದೊರೆಯಲಿ’ ಎಂದು ಕಾಗೋಡು ತಿಮ್ಮಪ್ಪ ಆದೇಶಿಸಿದರು.

ಆಶ್ರಯಮನೆ ನಿರ್ಮಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ ಹೇಳಿದಾಗ, ‘ಬಡವರಿಗೆ ನಿವೇಶನ ಮಾಡಲು ಬೇಕಾದ ಜಾಗದ ಸರ್ವೆ ಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ನಡೆಸಿ, ಅರಣ್ಯ ಸಮಿತಿಗೆ ವಹಿಸಿದರೆ ಕೆಲಸ ಸುಲಭವಾಗುತ್ತದೆ’ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ನಗರಸಭೆ ಅಧ್ಯಕ್ಷ ಶ್ರೀಕಾಂತ ತಾರೀಬಾಗಿಲು, ಉಪಾಧ್ಯಕ್ಷ ಫ್ರಾನ್ಸಿಸ್‌ ನರೋನ್ಹಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ನಗರಸಭೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT