ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಪಷ್ಟ ವ್ಯಾಖ್ಯಾನ’

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಭಾರತೀಯ ದಂಡ ಸಂಹಿತೆ (ಐಪಿಸಿ) ಜಾರಿಗೊಂಡಿದ್ದು 1861ರಲ್ಲಿ. ಆಗಲೇ ಸಲಿಂಗಕಾಮದ ಬಗ್ಗೆ ವಿವರಣೆ ನೀಡುವ 377ನೇ ಸೆಕ್ಷನ್ ಕೂಡ ಸೇರ್ಪಡೆಗೊಂಡಿದ್ದು.

ನಿಸರ್ಗದ ವಿರುದ್ಧವಾಗಿ ನಡೆಯುವ ಯಾವುದೇ ಕ್ರಿಯೆಯೂ ಅಪರಾಧ ಎನ್ನು­ವುದು ಕ್ರೈಸ್ತ ಧರ್ಮದ ಸಾರ. ಅದನ್ನೇ ಬ್ರಿಟಿಷರು ಕಾನೂನನ್ನಾಗಿ ಮಾಡಿದರು. ಸಲಿಂಗ­ಕಾಮ ಕೂಡ ನಿಸರ್ಗದ ವಿರುದ್ಧವಾಗಿ ನಡೆಯುವ ಕ್ರಿಯೆ ಎನ್ನುವುದು ಅವರ ಅಭಿಮತ.

ಇಲ್ಲಿ ಒಂದು ಗಮನಿಸಬೇಕಾದ ಅಂಶವಿದೆ. ಅದೇನೆಂದರೆ ನಿಸರ್ಗದ ವಿರುದ್ಧವಾಗಿ ನಡೆಯುವ ಕ್ರಿಯೆ ಎಂದು ಕಾನೂನು ಜಾರಿಮಾಡಿದ ಬ್ರಿಟಿಷರು ‘ನಿಸರ್ಗದ ವಿರುದ್ಧ’ ಎಂದರೆ ಏನು ಎಂಬ ಬಗ್ಗೆ ಸ್ಪಷ್ಟ ವ್ಯಾಖ್ಯಾನವನ್ನೇ ನೀಡಲಿಲ್ಲ. ಆ ವ್ಯಾಖ್ಯಾನವಿನ್ನೂ ಅಪೂರ್ಣ. ಈ ಅಪೂರ್ಣ ವ್ಯಾಖ್ಯಾನವನ್ನೇ ಜಾರಿಗೊಳಿಸುವು­ದಾದಲ್ಲಿ, ದಂಪತಿ ನಡುವೆ ನಡೆಯುವ ಕೆಲವು ಲೈಂಗಿಕ ಕ್ರಿಯೆ­ಗಳನ್ನು ಕೂಡ ‘ನಿಸರ್ಗದ ವಿರುದ್ಧ’ದ ಕ್ರಿಯೆ ಎಂದು ಹೇಳಿ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಯುರೋಪ್‌ ರಾಷ್ಟ್ರ­ಗಳು ಹಾಗೂ ಅಮೆರಿಕ, ಸಲಿಂಗಕಾಮದ ಕುರಿತಾಗಿ ಇರುವ ಕಾನೂ­ನನ್ನು ರದ್ದು ಮಾಡಿದೆ. ಭಾರತದಲ್ಲಿ ಅದಿನ್ನೂ ಚಾಲ್ತಿಯಲ್ಲಿದೆ.

ಒಬ್ಬ ಮನುಷ್ಯ ಬೆಳ್ಳಗೆ, ಇನ್ನೊಬ್ಬ ಕಪ್ಪಗೆ ಹುಟ್ಟುವುದು ನಿಸರ್ಗದ ಲೀಲೆ. ಸಲಿಂಗಕಾಮಿಗಳು ಕೂಡ ಹಾಗೆ. ‘ನಾವು ನೈಸರ್ಗಿಕವಾಗಿ ಹುಟ್ಟಿದ್ದೇ ಹೀಗೆ. ನಮ್ಮ ಈ ಶರೀರ ನಿಸರ್ಗ­ದತ್ತವಾಗಿ ಬಂದದ್ದು.  ಸಾಮಾನ್ಯವಾಗಿ ಹುಟ್ಟಿದ ಜನರ ಹಾಗೆ ನಾವು ಈಗೇನು ಮಾಡುತ್ತಿದ್ದೇವೆ ಅದು ನಮ್ಮ ಜನ್ಮಸಿದ್ಧ ಹಕ್ಕು. ಅದನ್ನು ಕಸಿದು­ಕೊಳ್ಳಲು, ಅದಕ್ಕೆ ಶಿಕ್ಷೆ ನೀಡಲು ನೀವ್ಯಾರು’ ಎಂದು ಅವರು  ಪ್ರಶ್ನಿಸು­ತ್ತಿದ್ದಾರೆ ಅಷ್ಟೇ. ಸಂವಿ­ಧಾನ ಅವರಿಗೆ ನೀಡಿರುವ ಹಕ್ಕಿನ ಬಗ್ಗೆ ಅವರು ಮಾತನಾಡುತ್ತಿದ್ದಾರೆ.

2011ರಲ್ಲಿ ಸಮೀಕ್ಷೆ ನಡೆ­ದಾಗ ಭಾರತದಲ್ಲಿ ಶೇ 14ರಷ್ಟು ಜನರು ಸಲಿಂಗಕಾಮಿ­ಗಳೆಂದು ತಿಳಿದು­ಬಂದಿದೆ. ಇದರ ಅರ್ಥ ಸುಮಾರು 14ರಿಂದ 15 ಕೋಟಿ ಜನರು ಭಾರತದಲ್ಲಿ ಸಲಿಂಗಕಾಮಿಗಳಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನ ಅನ್ವಯ ಹೋದರೆ ಇವರನ್ನೆಲ್ಲ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ. ಹಾಗೆ ನೋಡ ಹೋದರೆ ಪರಸ್ಪರ ಸಮ್ಮತಿ ಮೇರೆಗೆ ಸಲಿಂಗಕಾಮದಲ್ಲಿ ತೊಡಗಿರುವ ಒಬ್ಬರೇ ಒಬ್ಬರಿಗೂ ಈ ಕಾನೂನು ಜಾರಿಗೊಂಡಾಗಿನಿಂದಲೂ ಶಿಕ್ಷೆ ಆಗಿಲ್ಲ. ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಮಾತ್ರ ಶಿಕ್ಷೆಯಾಗಿರುವ ಉದಾಹರಣೆಗಳಿವೆ.

ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕನ್ನು ನೀಡಿದೆ. ಅವರ ಖಾಸಗಿ ಬದುಕಿನಲ್ಲಿ ಪ್ರವೇಶ ಮಾಡುವ ಅಧಿಕಾರ ಬೇರೆಯವರಿಗೆ ಇಲ್ಲ. ಹಾಗೆ ಮಾಡಿದರೆ ಅದು ಹಕ್ಕಿನ ಚ್ಯುತಿ ಆದಂತೆ. ಇದನ್ನೇ ದೆಹಲಿ ಹೈಕೋರ್ಟ್ ಕೂಡ 2009ರಲ್ಲಿ ಹೇಳಿತ್ತು. ಪರಸ್ಪರ ಒಪ್ಪಿಗೆ ಇದ್ದಾಗ ಸಲಿಂಗಕಾಮದಲ್ಲಿ ತೊಡಗಿಸಿಕೊಳ್ಳಲು ಅದು ಅವಕಾಶ ನೀಡಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ತೀರ್ಪು ಅದನ್ನು ರದ್ದುಮಾಡಿದ್ದು, ಸಲಿಂಗಕಾಮಿಗಳ ಹಕ್ಕಿನ ಚ್ಯುತಿ ಆದಂತಿದೆ.

(ಲೇಖಕರು: ಹೈಕೋರ್ಟ್ ಹಿರಿಯ ವಕೀಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT