ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಡಳಿತ ಚುರುಕು; ಯೋಜನೆ ಜಾರಿಗೆ ಆದ್ಯತೆ’

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್‌ ಮೊದಲ ಮಾತು
Last Updated 9 ಜನವರಿ 2014, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಜೊತೆಗೆ, ಯೋಜನೆಗಳ ಅನುಷ್ಠಾನ, ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ, ತುರ್ತು ಅವಶ್ಯಕತೆಗಳಿಗೆ ತಕ್ಷಣದ ಆದ್ಯತೆ...’

ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಬುಧವಾರ ರಾತ್ರಿ ಬಂದ ಆಹಾರ ಸಚಿವ ದಿನೇಶ ಗುಂಡೂರಾವ್‌ ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನೀಡಿದ ಮೊದಲ ಪ್ರತಿಕ್ರಿಯೆ ಇದು.

ಸಚಿವ ಸಂತೋಷ್‌ ಲಾಡ್‌ ರಾಜೀನಾಮೆಯಿಂದಾಗಿ ಒಂದೂವರೆ ತಿಂಗಳ ಹಿಂದೆ ತೆರವಾದ ‘ಉಸ್ತುವಾರಿ’ ಹೊಣೆ ಇದೀಗ ದಿನೇಶ ಗುಂಡೂರಾವ್‌ ಹೆಗಲೇರಿದೆ. ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮೊದಲೇ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಕನಸು. ಆ ಕಾರಣಕ್ಕೆ ಅಗತ್ಯವೆನಿಸಿದರೆ ವಾರಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತೇನೆ’ ಎಂದು ಹೇಳುವ ಮೂಲಕ ಭರವಸೆ ಮೂಡಿಸಿದ್ದಾರೆ.

‘ಹುಬ್ಬಳ್ಳಿಯಲ್ಲಿ ಮತ್ತು ಧಾರವಾಡದಲ್ಲಿ ಸಾರ್ವಜನಿಕರಿಂದ ಗುರುವಾರ  ಅಹವಾಲು ಸ್ವೀಕರಿಸಿದ ಬಳಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಈಗಾಗಲೇ ನಡೆಯುತ್ತಿರುವ ಕಾಮಗಾರಿ, ಪೂರಕವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ, ತಕ್ಷಣಕ್ಕೆ ಏನೇನು ಆಗಬೇಕೆಂಬ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದುವರಿಯುತ್ತೇನೆ’ ಎಂದರು.

‘ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹುಬ್ಬಳ್ಳಿ– ಧಾರವಾಡ ಅತಿ ಮುಖ್ಯನಗರ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜೊತೆಗೆ ಅವುಗಳ ಅನುಷ್ಠಾನವೂ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿದ್ದು, ಗ್ರಾಮಾಂತರ ಪ್ರದೇಶದ ಪ್ರಗತಿಗೂ ಹೆಚ್ಚಿನ ಒತ್ತು ನೀಡುತ್ತೇನೆ’ ಎಂದರು.

‘ಅಭಿವೃದ್ಧಿಯ ಜೊತೆಗೇ ಸಮಸ್ಯೆಗಳ ನಿವಾರಣೆಗೂ ಆದ್ಯತೆ ನೀಡಬೇಕೆನ್ನುವುದು ನನ್ನ ಬಯಕೆ. ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಮತ್ತು ಆಹಾರ ಸಚಿವ ಸ್ಥಾನದ ಜೊತೆಗೆ ಈ ಜಿಲ್ಲೆ ಉಸ್ತುವಾರಿ ಹೊಣೆ ಕೆಲಸದ ಒತ್ತಡ ಉಂಟು ಮಾಡಬಹುದೆಂಬ ಅರಿವು ಇದೆ. ಹುಬ್ಬಳ್ಳಿ– ಧಾರವಾಡ ನನಗೆ ಚಿರಪರಿಚಿತ ಊರು. ಇಲ್ಲಿನ ಶಾಸಕರೂ ಗೊತ್ತಿರುವಂಥವರು. ಹೀಗಾಗಿ ಎಲ್ಲ ಸವಾಲುಗಳನ್ನು ಎದುರಿಸಿ ನಿಭಾಯಿಸುವ ಧೈರ್ಯ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸ್ಥಳೀಯ ಜನರ ನಿರೀಕ್ಷೆಗೆ ತಕ್ಕಂತೆ  ಕೆಲಸ ಮಾಡುತ್ತೇನೆ. ಹೊಸ ಯೋಜನೆಗಳನ್ನು ರೂಪಿಸುವ ಮೊದಲು ಸ್ಥಳೀಯ ಕೈಗಾರಿಕೋದ್ಯಮಿಗಳು, ಸಾಹಿತಿಗಳ ಜೊತೆ ಸಮಾಲೋಚನೆ ನಡೆಸುತ್ತೇನೆ. ಜಿಲ್ಲೆಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ವೈಜ್ಞಾನಿಕವಾಗಿ ಹಾಕಿಕೊಂಡು ಅವುಗಳ ಅನುಷ್ಠಾನಕ್ಕೆ ಒತ್ತು ನೀಡುತ್ತೇನೆ’ ಎಂದರು.

ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ಶಾಸಕರಾದ ಸಿ.ಎಸ್‌. ಶಿವಳ್ಳಿ, ಪ್ರಸಾದ್ ಅಬ್ಬಯ್ಯ, ವಿನಯ ಕುಲಕರ್ಣಿ, ವಿಧಾನಪರಿಷತ್‌ ಸದಸ್ಯ ನಾಗರಾಜ ಛಬ್ಬಿ,  ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಯುವ ಕಾಂಗ್ರೆಸ್‌ ಮುಖಂಡ ಸದಾನಂದ ಡಂಗನವರ, ಪಕ್ಷದ ಪ್ರಮುಖರಾದ, ಮಹೇಂದ್ರ ಸಿಂಘಿ, ರಾಜಾ ದೇಸಾಯಿ, ವೇದವ್ಯಾಸ ಕೌಲಗಿ ಮತ್ತಿತರು ಇದ್ದರು.

ಅದ್ದೂರಿ ಸ್ವಾಗತ; ನೂಕುನುಗ್ಗಲು

ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಬಂದಿಳಿದ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜಮಾಯಿಸಿದ್ದ ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಸಚಿವರನ್ನು ನೋಡಲು ಮುಗಿಬಿದ್ದ ಕಾರಣ ಭಾರಿ ನೂಕುನುಗ್ಗಲು ಉಂಟಾಯಿತು. ಗುಂಪು ಚದುರಿಸಿಕೊಂಡು ಸಚಿವರನ್ನು ಕಾರು ಹತ್ತಿಸುವಷ್ಟರಲ್ಲಿ ಪೊಲೀಸರೂ ಸುಸ್ತಾಗಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT