ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದರ್ಶ ನೀತಿಗಳನ್ನು ಮೈಗೂಡಿಸಿಕೊಳ್ಳಿ

Last Updated 18 ಡಿಸೆಂಬರ್ 2013, 5:36 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ನಮ್ಮ ಇತಿಹಾಸ, ಪರಂಪರೆ ಹಾಗೂ ಹಿಂದೆ ನಡೆದಿದ್ದನ್ನು ಮರೆತರೆ ನಮ್ಮ ಭವಿಷ್ಯ ಮರೆಯಾಗುತ್ತದೆ. ಅದಕ್ಕೆ ಆಸ್ಪದ ಕೊಡದೆ ಹಿಂದೆ ನಡೆದಿರುವ ಬಗ್ಗೆ ನೋಟ ಹರಿಸಿ ಸಿಂಹಾವಲೋಕನ ಮಾಡಿಕೊಂಡಾಗ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಹೇಳಿದರು.

ಅವರು ಸಮೀಪದ ಚಿಲಕನಹಟ್ಟಿ ಬಳಿಯ ತೆಲಗುಬಾಳು ಕ್ಷೇತ್ರದ ತೆಲಗುಬಾಳು ಸಿದ್ಧ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೆಲಗುಬಾಳು ಸಿದ್ದೇಶ್ವರ ಜಯಂತಿ ಹಾಗೂ ಮಾದಾರ ಚನ್ನಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇಂದು ಎಲ್ಲರ ಭಾಷೆ ಹಣವಾಗಿರುವುದು ದುರಂತ, ಅದರಿಂದ ನಮ್ಮ ಆದರ್ಶ, ನೀತಿಗಳಿಗೆ ದಕ್ಕೆ ಬರುತ್ತಿದೆ. ಇದಕ್ಕೆ ಮೋಹಿತರಾಗದೆ ನೀತಿ, ಆದರ್ಶಗಳನ್ನು ಮೈಗೂಡಿಸಿಕೊಂಡು ಎತ್ತರಕ್ಕೆ ಬೆಳೆಯಬೇಕಿದೆ. ಇದಕ್ಕೆ ತೆಲಗುಬಾಳು ಸಿದ್ದೇಶ್ವರರು, ಮಾದಾರ ಚನ್ನಯ್ಯರ ಬದುಕಿದ ರೀತಿ ಉತ್ತಮ ಉದಾಹರಣೆ. ಸಮಾಜದ ಶುದ್ಧೀಕರಣಕ್ಕೆ ತಮ್ಮನ್ನು ಬಳಸಿಕೊಂಡು ಶ್ರಮಿಸಿದ ಅವರ ಬದುಕನ್ನು ನೆನಪಿಸಿಕೊಂಡು ಸಾಗಬೇಕಿದೆ. ಈ ನಿಟ್ಟಿನಲ್ಲಿ ಅಂತಃಕರಣ ಶುದ್ಧಿಯಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕ್ಕೇರಬೇಕೆಂದರು.

ನಿವೃತ್ತ ಮುಖ್ಯ ಶಿಕ್ಷಕ ಮೌನೇಶ್‌ ಆಚಾರ್ ಮಾತನಾಡಿ, ಬದುಕನ್ನು ಪಾರದರ್ಶಕವಾಗಿಟ್ಟುಕೊಂಡು, ಸಮಾಜದ ಅಭಿವೃದ್ಧಿಗೆ ಶ್ರಮಿಸುವದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಇದಕ್ಕೆ ಮಠಮಾನ್ಯರ ಬದುಕು ಹಾಗೂ ರಂಗಕಲೆ ಉತ್ತಮವಾದ ಸಹಕಾರಿ ಎಂದರು.

ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ, ನಿವೃತ್ತ ಮುಖ್ಯಶಿಕ್ಷಕ ಜಿ.ಟಿ.ರುದ್ರಪ್ಪ ಮಾತನಾಡಿದರು. ದಾವಣಗೆರೆಯ ಶಾಂತಗಂಗಾಧರ್‌ ಉಪನ್ಯಾಸ ನೀಡಿದರು. ಜಿ.ಪಂ. ಸದಸ್ಯೆ ತಿಪ್ಪಿಬಾಯಿ ಠಾಕ್ರಾನಾಯ್ಕ, ತಾ.ಪಂ. ಸದಸ್ಯೆ ಕೆ.ಆನಂದಮ್ಮ ಮಾರ್ಗದಪ್ಪ, ಕೊಟ್ಗಿ ಪರಮೇಶ್ವರಪ್ಪ ಉಪಸ್ಥಿತರಿದ್ದರು.

ರಾಜೇಶ್ವರಿ ಮತ್ತು ನಳಿನಿ ಪ್ರಾರ್ಥನೆ ಗೀತೆ ಹಾಡಿದರು. ಮುಖ್ಯ ಶಿಕ್ಷಕ ಎಸ್‌.ಎಸ್‌.ಎಂ.ಚಿದಾನಂದಮೂರ್ತಿ ಸ್ವಾಗತಿಸಿದರು. ಶಿಕ್ಷಕರಾದ ಎಂ.ಕೆ.ರಾಜಪ್ಪ ಮತ್ತು ಎ.ಎಸ್‌.ವೀರೇಶ್‌ ಕಾರ್ಯಕ್ರಮ ನಿರೂಪಿಸಿದರು. ವಿ.ಎಸ್‌.ಸಾತೇನಳ್ಳಿ ವಂದಿಸಿದರು.
ಬೆಳಿಗ್ಗೆ ಮಕ್ಕಳಿಂದ ಪ್ರಭಾತ್‌ಫೇರಿ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು.

‘ಸಹಬಾಳ್ವೆಯಿಂದ ಬಾಳಿ’
ಮರಿಯಮ್ಮನಹಳ್ಳಿ: ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವದೇ ನಿಜವಾದ ಕಾರ್ತಿಕೋತ್ಸವದ ಉದ್ದೇಶ ಎಂದು ಹೊಸಪೇಟೆ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಜಿ. ನಾಗಲಾಪುರದ ಒಪ್ಪತ್ತೇಶ್ವರ ಮಠದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಗುರುಹಿರಿಯರು, ಮಠಮಾನ್ಯ, ಮಠಾಧೀಶರ ಬಗ್ಗೆ ಗೌರವಾಧರಗಳನ್ನು ಹೊಂದಬೇಕಿದೆ. ನಮ್ಮ  ಸಂಪ್ರದಾಯಗಳನ್ನು ಮೊದಲು ಪಾಲಿಸಿಕೊಂಡು ಹೋಗಬೇಕಿದೆ. ಅಲ್ಲದೆ ಗ್ರಾಮಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಬೇಕಾದ ಅವಶ್ಯಕತೆ ಇದೆ. ಇದರಿಂದ ಜನರಲ್ಲಿ ಭಕ್ತಿಗೌರವ, ಶಾಂತಿ, ಸಾಮಾರಸ್ಯ, ಒಗ್ಗಟ್ಟು ಮೂಡುತ್ತದೆ. ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾರಸ್ಯ, ಸಹಬಾಳ್ವೆಯಿಂದ ಬಾಳಬೇಕಿದೆ. ಅಲ್ಲದೆ ಇಂತಹ ಆಚರಣೆಯ ಸಂದರ್ಭಲ್ಲಾದರೂ ಭಜನೆ, ಪ್ರವಚನ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ ಸಾನಿದ್ಯವಹಿಸಿ, ಇಂತಹ ಆಚರಣೆ, ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಹತೆಗೆ ಪ್ರತಿಯೊಬ್ಬರಲ್ಲಿಯೂ ಭಕ್ತಿಭಾವನೆ ಮೂಡಿಸಬೇಕಿದೆ. ಗುರುಹಿರಿಯರ ಬಗ್ಗೆ ಗೌರವ ಹೊಂದಬೇಕಿದೆ. ಸಮಾಜದಲ್ಲಿ ಮೊದಲು ಯುವಕರು ದುಚ್ಛಟಗಳಿಗೆ ದಾಸರಾಗದೆ ಅವುಗಳನ್ನು ತ್ಯಜಿಸಿ ಸೇವಾ ಮನೋಭಾವನೆ ಬೆಳಸಿಕೊಳ್ಳಬೇಕು ಎಂದರು.

ಅನ್ನದಾನೀಶ್ವರ ಮಠದ ಮಹಾದೇವ ದೇವರು, ಗ್ರಾಮದ ಮುಖಂಡರಾದ ಆರ್‌.ಬಸವರಾಜಪ್ಪ, ಹುಲಿಮನಿ ಕೊಟ್ರೇಶ್‌, ಚಿಲಕನಹಟ್ಟಿ ವಿಎಸ್‌ಎಸ್‌ಎನ್‌ನ ಅಧ್ಯಕ್ಷ ವಿರೂಪಜ್ಜ, ಗುರಿಕಾರ ಭರಮಪ್ಪ, ಸಿದ್ಧಬಸಪ್ಪ, ಎಚ್‌.ಎಂ. ಸಿದ್ದಲಿಂಗಯ್ಯ, ವಿರೂಪಾಕ್ಷಯ್ಯ, ಜಿ.ಎಂ. ವೀರಭದ್ರಯ್ಯ, ಬಸವರಾಜ, ಇತರರಿದ್ದರು.

ಪದಾಧಿಕಾರಿಗಳ ಆಯ್ಕೆ: ಸ್ಥಳೀಯ ಆರನೇ ವಾರ್ಡ್‌ನ ಎ.ಕೆ.ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸೋಮವಾರ ಎಲ್‌.ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಎಲ್‌.ಕೃಷ್ಣ(ಅಧ್ಯಕ್ಷ), ಎಂ.ಸರಿತಾ ಸ್ವಾಮಿ(ಉಪಾಧ್ಯಕ್ಷೆ), ವಿ. ಆನಂದ, ಎಲ್‌. ಚಿಮ್ನಳ್ಳಿ, ಎಲ್. ಚಂದ್ರಶೇಖರ್, ಕೆ. ಪರಶುರಾಮ, ಎಂ.ಸಾರೆಪ್ಪ, ಕೆ. ರೇಣುಕಮ್ಮ, ಎಲ್. ಶಿವಮ್ಮ, ಎಲ್. ಮಂಜುಳಾ, ಎಲ್,ಶಾರದ, ಬಿ.ಸಾವಿತ್ರಮ್ಮ, ವಿ. ಪರಶುರಾಮ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಮುಖಂಡರಾದ ಎಲ್.ಸಣ್ಣದುರುಗಪ್ಪ, ಎಚ್.ಹನುಮಂತ, ಮುಖ್ಯ ಶಿಕ್ಷಕ ಎ.ಸಣ್ಣ ವೀರಣ್ಣ, ಶಿಕ್ಷಕರಾದ ವಿಜಯಕುಮಾರ್, ಎಲ್.ಸುರೇಶ್‌, ಉಮೇಶ್‌ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT