ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮ್‌ ಆದ್ಮಿ’ ಕಚೇರಿ ಮೇಲೆ ದಾಳಿ

ಕಾಶ್ಮೀರ ಕುರಿತ ಪ್ರಶಾಂತ್‌ ಭೂಷಣ್‌ ವಿವಾದಾಸ್ಪದ ಹೇಳಿಕೆ
Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಗಾಜಿಯಾಬಾದ್‌/ನವದೆಹಲಿ (ಪಿಟಿಐ­­ಐಎಎನ್‌ಎಸ್‌): ಕಾಶ್ಮೀರದ ಕುರಿತಾಗಿ ‘ಆಮ್‌ ಆದ್ಮಿ’ ಪಕ್ಷದ (ಆಪ್‌) ಮುಖಂಡ ಪ್ರಶಾಂತ್‌ ಭೂಷಣ್‌ ಅವರು ಈಚೆಗೆ ನೀಡಿದ್ದ ವಿವಾದಾಸ್ಪದ ಹೇಳಿಕೆ­ಯನ್ನು ವಿರೋಧಿಸಿ ಹಿಂದೂ ರಕ್ಷಾ ದಳ ಸಂಘಟನೆಯ ಕಾರ್ಯ­ಕರ್ತರು ಇಲ್ಲಿನ ಆಪ್‌ ಮುಖ್ಯ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿ ದಾಂದಲೆ ನಡೆಸಿದ್ದಾರೆ.

ಉಗ್ರರ ಉಪಟಳ ಇರುವ ಕಾಶ್ಮೀರದಲ್ಲಿ ಸೇನೆ ನಿಯೋಜಿಸಬೇಕೆ ಅಥವಾ ಇಲ್ಲವೇ ಎನ್ನುವುದನ್ನು ಜನಾಭಿ­ಪ್ರಾಯದ ಮೂಲಕ ನಿರ್ಧರಿಸಬೇಕು ಎಂದು ಭೂಷಣ್‌ ಈಚೆಗೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯಿಂದ ಆಪ್‌ ಅಂತರ ಕಾಯ್ದುಕೊಂಡಿತ್ತು.

‘ಹಿಂದೂ ರಕ್ಷಾ ದಳದ ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರು,  ಇಲ್ಲಿನ ಕೌಶಾಂಬಿಯಲ್ಲಿರುವ ಆಪ್‌ ಕಾರ್ಯಾಲಯಕ್ಕೆ ಬಲವಂತವಾಗಿ ನುಗ್ಗಿ ಪೀಠೋಪಕರಣಗಳು, ಕಿಟಕಿಯ ಗಾಜು ಮತ್ತು ಹೂವಿನ ಕುಂಡಗಳನ್ನು ಒಡೆದು ದಾಂದಲೆ ನಡೆಸಿದ್ದಾರೆ. ಬಳಿಕ ಆಪ್‌ ಮುಖಂಡರ ವಿರುದ್ಧ ಅವಾಚ್ಯವಾಗಿ ಬೈಯ್ದು ಬೆದರಿಕೆ ಹಾಕಿ ಹೋಗಿದ್ದಾರೆ’ ಎಂದು ಆಪ್‌ ವಕ್ತಾರ ದಿಲೀಪ್‌ ಪಾಂಡೆ ಹೇಳಿದ್ದಾರೆ.
‘ಕಾಶ್ಮೀರದ ಕುರಿತಾಗಿ ಆಪ್‌ ತಾಳಿರುವ ನಿಲುವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ. ಪ್ರಶಾಂತ್‌ ಭೂಷಣ್‌ ಅವರು ನೀಡಿರುವ ಹೇಳಿಕೆಯಿಂದ ಹಿಂದೂಗಳಿಗೆ ತೀವ್ರ ನಿರಾಸೆಯಾಗಿದೆ. ಆದಕಾರಣ ನಾವು ಅವರ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇವೆ’ ಎಂದು ಹಿಂದೂ ರಕ್ಷಾ ದಳದ ರಾಷ್ಟ್ರೀಯ ಸಂಚಾಲಕಿ ಪಿಂಕಿ ಚೌಧರಿ ಹೇಳಿದ್ದಾರೆ.

‘ದಾಳಿ ನಡೆಸಿದವರಲ್ಲಿ ಕೆಲವರನ್ನು ಗುರುತಿಸಿದ್ದು, ಅವರೆಲ್ಲ ಗಾಜಿಯಾ­ಬಾದ್‌ ನಿವಾಸಿಗಳಾಗಿದ್ದಾರೆ. ಕಾರಿನ ಸಂಖ್ಯೆಯನ್ನೂ ಗುರುತಿ­ಸ­ಲಾಗಿದೆ. ಶೀಘ್ರವೇ ಕ್ರಮ ಜರುಗಿಸಲಾ­ಗುವುದು’ ಎಂದು ವಿಶೇಷ ಪೊಲೀಸ್‌ ವರಿಷ್ಠಾಧಿ­ಕಾರಿ ಧರ್ಮೇಂದ್ರ ಸಿಂಗ್‌ ತಿಳಿಸಿದ್ದಾರೆ.

‘ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದಿಂದ ಸ್ವಲ್ಪವೇ ಅಂತರದಲ್ಲಿರುವ ಆಪ್‌ ಕಚೇರಿಗೆ ಯಾವುದೇ ಪೊಲೀಸ್‌ ಭದ್ರತೆ ಇರಲಿಲ್ಲ. ಭದ್ರತೆಗೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಅವರನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು’ ಎಂದಿದ್ದಾರೆ.

‘ಘಟನೆ ಸಂಬಂಧ ಪ್ರಕರಣ ದಾಖಲಿಸಿ­ಕೊಳ್ಳಲಾಗಿದ್ದು, ತಪ್ಪಿತಸ್ಥರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಪ್‌ ಕಾರ್ಯಾ­ಲ­ಯಕ್ಕೆ ಭದ್ರತೆ ಒದಗಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮುನಿರಾಜ್‌ ತಿಳಿಸಿದ್ದಾರೆ.

ಬಿಜೆಪಿ ಖಂಡನೆ: ‘ಈ ಘಟನೆಯನ್ನು ನಾವು ಖಂಡಿಸುತ್ತೇವೆ.  ಆದರೆ, ಪ್ರಶಾಂತ್‌ ಭೂಷಣ್‌ ಅವರು ನೀಡಿರುವ ಹೇಳಿಕೆಯನ್ನು ಮರೆಯಬಾರದು. ನಾವು ಅದನ್ನು ಕೂಡ ಖಂಡಿಸುತ್ತೇವೆ’ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆಪ್‌ಗೆ ಮಲ್ಲಿಕಾ
ಅಹಮದಾಬಾದ್‌ (ಪಿಟಿಐ):
ನೃತ್ಯ­ಗಾರ್ತಿ ಮಲ್ಲಿಕಾ ಸಾರಾ­ಭಾಯ್‌ ಎಎಪಿ ಪಕ್ಷ ಸೇರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ರಾಜಕಾರಣಿಯಾಗಿ ನಾನು ಆಮ್‌ ಆದ್ಮಿ ಪಕ್ಷ (ಎಎಪಿ) ಕ್ಕೆ ಸೇರುತ್ತಿಲ್ಲ. ದೇಶದ ನಾಗರಿಕಳಾಗಿ  ಸೇರುತ್ತಿದ್ದೇನೆ’ ಎಂದು ಮಲ್ಲಿಕಾ ಹೇಳಿದ್ದಾರೆ.

2009 ರಲ್ಲಿ ಬಿಜೆಪಿ ಅನುಭವಿ ನಾಯಕ ಎಲ್‌.  ಕೆ ಅಡ್ವಾಣಿ ಅವರ ವಿರುದ್ಧ ಗಾಂಧಿನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಲ್ಲಿಕಾ ಸಾರಾಭಾಯ್‌ ನಿಂತು ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT