ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಶ್ರಯ’ರಹಿತರಿಗೆ ‘ಜಿ–1’ ಮಾದರಿ ಮನೆ

ಒಂದೂವರೆ ವರ್ಷದ ಬಳಿಕ ಅಂತಿಮ ಹಂತಕ್ಕೆ ಯೋಜನೆ; 23ಕ್ಕೆ ಪೂರ್ವಭಾವಿ ಸಭೆ
Last Updated 19 ಜೂನ್ 2015, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿವೇಶನ, ಆಸರೆ ರಹಿತ ಕಡಿಮೆ ಆದಾಯದ ಕುಟುಂಬಗಳಿಗೆ ‘ಆಶ್ರಯ’ ಭಾಗ್ಯ ಒದಗಿಸುವ ಉದ್ದೇಶ­ದಿಂದ ಮಂಟೂರ ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ ಪುಟ್ಟ ಪುಟ್ಟ ಮನೆಗಳ ನಿರ್ಮಾಣ ಯೋಜನೆ ಸಾಕಾರಗೊಳ್ಳುವ ದಿನ ಸಮೀಪಿಸುತ್ತಿದೆ.

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ನಿರ್ದೇಶನದಂತೆ, ಕಡಿಮೆ ವೆಚ್ಚದಲ್ಲಿ ಸದೃಢ ಮನೆಗಳ ನಿರ್ಮಾಣಕ್ಕೆ ಮುಂದಾಗಿರುವ ಪಾಲಿಕೆ, ಕೊನೆಗೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಉದ್ದೇಶಿತ ಜಾಗದ ಲೇ ಔಟ್‌ (ವಸತಿ ವಿನ್ಯಾಸ) ಮತ್ತು ನಿರ್ಮಾಣಗೊಳ್ಳಲಿರುವ
ಕಟ್ಟಡ­ಗಳ ನಕ್ಷೆ ಸಿದ್ಧಗೊಂಡಿದೆ. ಪ್ರತಿ ಮನೆಗಳಿಗೆ ತಗಲಬಹುದಾದ ವೆಚ್ಚವನ್ನೂ ಅಂದಾಜು ಮಾಡಲಾಗಿದೆ. ಎರಡು ತಿಂಗಳ ಒಳಗೆ ಇಡೀ ಯೋಜನೆ ಅಂತಿಮ ಸ್ವರೂಪ ಪಡೆದು ಫಲಾನುಭವಿಗಳ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಆಶ್ರಯ ಮನೆ ನಿರ್ಮಾಣಕ್ಕೆ ಪ್ರಸ್ತಾವಿತ 35.27 ಎಕರೆ ಜಾಗದಲ್ಲಿ ಜಿ–1 (ನೆಲ ಮತ್ತು ಮೊದಲ ಮಹಡಿ) ಮಾದರಿಯಲ್ಲಿ 2,328 ಮನೆಗಳನ್ನು ನಿರ್ಮಿಸಲು ನಕ್ಷೆ ಸಿದ್ಧವಾಗಿದೆ. ಆಶ್ರಯ ಮನೆ ನಿರ್ಮಾಣಕ್ಕೆ ನಿಗದಿಯಾದ ಜಾಗದ ವಿನ್ಯಾಸಕ್ಕೆ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂ­ರಾತಿ, ವಸತಿ ಸಂಕೀರ್ಣದ ನಕ್ಷೆಯ ಮಂಜೂರಾತಿ ಮತ್ತು  ಅಂದಾ­ಜು ವೆಚ್ಚದ ನಿಗದಿ ಮತ್ತು ಫಲಾನುಭವಿಗಳಿಗೆ ಬ್ಯಾಂಕ್‌ ಸಾಲ ಒದಗಿಸುವ ಕುರಿತಂತೆ ಚರ್ಚಿಸಲುಇದೇ 23ರಂದು ಪಾಲಿಕೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಮೊದಲೇ ಅಚ್ಚು ಹಾಕುವಂತಹ (ಫ್ರೀ ಕಾಸ್ಟಿಂಗ್‌) ತಾಂತ್ರಿಕತೆಯನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಸದೃಢವಾದ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರ (ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಅಧೀನ ಸಂಸ್ಥೆ) ಕಟ್ಟಡ ನಕ್ಷೆ ಸಿದ್ಧಪಡಿಸಿದೆ. ಪ್ರಸ್ತಾವಿತ ನಕ್ಷೆಯ ಪ್ರಕಾರ ಪ್ರತಿ ಮನೆಗಳಿಗೆ ₨ 3.17 ಲಕ್ಷ ವೆಚ್ಚ ತಗಲಲಿದೆ. ಈ ಮೊತ್ತಕ್ಕೆ ಶೇ 10ರಷ್ಟು ಸೇವಾ ತೆರಿಗೆಯನ್ನು ಸೇರಿಸಿ ಫಲಾನುಭವಿ ಮೊತ್ತ ಭರಿಸಬೇಕಾಗುತ್ತದೆ. ಆಗ ಪ್ರತಿ ಮನೆಗೆ ತಗಲುವ ವೆಚ್ಚ ₨ 3.50 ಲಕ್ಷ ಆಗ­ಬಹುದು ಎಂದು ಅಂದಾಜಿ­ಸಲಾಗಿದೆ.

ಈ ಮೊತ್ತ ಫಲಾನುಭವಿಗಳಿಗೆ ‘ಭಾರ’ ಆಗಬಹುದು ಎಂಬ ಕಾರಣಕ್ಕೆ ಸ್ಥಳೀಯ ಶಾಸಕ (ಹುಬ್ಬಳ್ಳಿ– ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ) ಪ್ರಸಾದ್‌ ಅಬಯ್ಯ ಅವರು ಅಂದಾಜು ವೆಚ್ಚವನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಧಿಕಾರಿ­ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಈ ಮೊತ್ತವನ್ನು ₨ 3.20 ಲಕ್ಷಕ್ಕೆ ಕಡಿಮೆ­ಗೊಳಿಸಿ ನಿಗದಿಪಡಿಸಲು ಉದ್ದೇಶಿ­ಸಲಾ­ಗಿದೆ ಎಂದು ಪಾಲಿಕೆಯ ಆಶ್ರಯ­ಯೋಜನೆ ವಿಭಾಗದ ಸಿಬ್ಬಂದಿ ತಿಳಿಸಿದರು.

ಆಯ್ಕೆಯಾದ ಫಲಾನುಭವಿ­ಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ₨ 1.20 ಲಕ್ಷ ಆರ್ಥಿಕ ನೆರವು ನೀಡಲಿದೆ. ಫಲಾನುಭವಿ ಬ್ಯಾಂಕಿನಿಂದ ₨ 1.50 ಲಕ್ಷ ಸಾಲ ಪಡೆಯಬೇಕಾಗುತ್ತದೆ. ಅಂದಾಜು ₨ 80 ಸಾವಿರ ಹಣವನ್ನು ಸ್ವಂತವಾಗಿ ಭರಿಸ­ಬೇಕು. ಫಲಾನುಭವಿ, ಬ್ಯಾಂಕ್‌ ಮತ್ತು ಪಾಲಿಕೆ ಆಯುಕ್ತರ ಮಧ್ಯೆಷರತ್ತುಬದ್ಧ ಕರಾರು ಮಾಡಿಕೊಳ್ಳಲಾಗುವುದು.

ಪ್ರಸ್ತಾವಿತ ನಕ್ಷೆಯ ಪ್ರಕಾರ ನಾಲ್ಕು ಮನೆಗಳಂತೆ (ನೆಲ ಮತ್ತು ಮೊದಲ ಮಹಡಿ) ಎಂಟು ಮನೆಗಳಿರುವ 291 ಬ್ಲಾಕ್‌ಗಳು ನಿರ್ಮಾಣವಾಗಲಿದೆ. ಪ್ರತಿ ಮನೆ 295 ಚದರ ಅಡಿ ವಿಸ್ತೀರ್ಣ ಇರಲಿದೆ. ಆಶ್ರಯ ಮನೆಗಾಗಿ ಒಂದೂವರೆ ವರ್ಷದ ಹಿಂದೆ ಅರ್ಜಿ ಆಹ್ವಾನಿಸಲಾಗಿದ್ದು, 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಮನೆ ನಿರ್ಮಾಣ ಯೋಜನೆ ಅಂತಿಮ ಹಂತಕ್ಕೆ ಬಂದ ಬಳಿಕ ಎಲ್ಲ ಅರ್ಜಿದಾರರಿಗೆ ನೋಟಿಸ್‌ ಕಳುಹಿಸಲಾಗುವುದು. ಶಾಸಕರ ಅಧ್ಯಕ್ಷತೆಯಲ್ಲಿರುವ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆ ಮಾಡಲಿದೆ.

* ಮುಖ್ಯಾಂಶಗಳು
* ಮಂಟೂರು ರಸ್ತೆಯ ಯಲ್ಲಾಪುರದಲ್ಲಿ ನಿರ್ಮಾಣ

*ವಸತಿ ವಿನ್ಯಾಸ, ಕಟ್ಟಡ ನಕ್ಷೆ, ಅಂದಾಜು ವೆಚ್ಚ ಸಿದ್ಧ
*ಎರಡು ತಿಂಗಳೊಳಗೆ ಫಲಾನುಭವಿಗಳ ಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT