ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗ್ಲಿಷ್ ಬರುವುದಿಲ್ಲ ಎಂಬ ಕೀಳರಿಮೆ ಬಿಡಿ’

Last Updated 26 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಗ್ಲಿಷ್ ಬರುವುದಿಲ್ಲ ಎನ್ನುವ ಕಾರಣಕ್ಕೆ ಪ್ರತಿಭೆ ಇದ್ದರೂ ಮಹಿಳಾ ಕಲಾವಿದೆಯರಿಗೆ ಅವಕಾಶಗಳು ಸಿಗುತ್ತಿಲ್ಲ’ ಎಂದು ಬಂಗಾಳಿ ಕಲಾವಿದೆ ಮೌಶ್ಮಿ ಗಂಗೂಲಿ ಅಭಿಪ್ರಾಯಪಟ್ಟರು.

ಪೊಟೆನ್ಶಿಯಲ್‌ ಗ್ರೂಪ್ ವತಿಯಿಂದ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಮಹಾನಗರಗಳಲ್ಲಿ ಕಲಾವಿದನಾಗಿ ಬದುಕು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವ ಕಲಾವಿದರಿಗೆ ಇಂಗ್ಲಿಷ್ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರತಿಭೆ ಇದ್ದರೂ ತಮ್ಮ ಕಲಾಕೃತಿಳ ಬಗ್ಗೆ ಇಂಗ್ಲಿಷ್‌ನಲ್ಲಿ ಅದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಹಲವು ಕಲಾವಿದರು ತೆರೆಮರೆಯಲ್ಲಿ ಉಳಿಯುತ್ತಿದ್ದಾರೆ’ ಎಂದರು.

ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಎಚ್. ಕುಲಕರ್ಣಿ ಮಾತನಾಡಿ, ‘ರಾಜ್ಯದಲ್ಲಿ ಕಲೆ ಸಮೃದ್ಧವಾಗಿದ್ದರೂ ಕಲಾವಿಮರ್ಶೆಗೆ ಸಂಬಂಧಿಸಿದಂತೆ ಅಷ್ಟಾಗಿ ಕೆಲಸ ನಡೆದಿಲ್ಲ. ಹೀಗಾಗಿ ನಾನು ಕಲಾ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿದೆ. ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವದಿಂದ ಯಾವುದೇ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಎ. ಅನಿಲ್ ಕುಮಾರ್ ಮಾತನಾಡಿ, ‘ಕಲಾವಿದರು ತಾವು ಗ್ರಾಮೀಣ ಭಾಗದವರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯನ್ನು ಬಿಡಬೇಕು’ ಎಂದರು.

‘ನಗರದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲು ಗ್ಯಾಲರಿಗಳು ಸಿಗದ ಕಲಾವಿದರೂ ಸಹ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲೆಯನ್ನೇ ಬದುಕಾಗಿಸಿಕೊಂಡಾಗ ಮಾತ್ರ ಇದು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಪರಿಷತ್ತಿನ ಚಿತ್ರಕಲಾ ವಿಭಾಗದ ಉಪನ್ಯಾಸಕಿ ಪ್ರೊ.ಟಿ.ಎಸ್.ಪ್ರತಿಭಾ ಮಾತನಾಡಿ, ‘ಚಿತ್ರಕಲೆಯಲ್ಲಿ ಮಹಿಳೆ ಗುರುತಿಸಿಕೊಳ್ಳುವುದು ಸವಾಲಿನ ವಿಷಯವಾಗಿದೆ. ಹೀಗಾಗಿ ಕೇವಲ ಮಾರಾಟಕ್ಕಾಗಿ ಕಲಾಕೃತಿಗಳನ್ನು ರಚಿಸದೆ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಕಲಾಕೃತಿಗಳ ರಚನೆ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT