ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇತರರು’ ಇವರೂ ಮತದಾರರು!

Last Updated 10 ಏಪ್ರಿಲ್ 2014, 6:00 IST
ಅಕ್ಷರ ಗಾತ್ರ

ಗುಲ್ಬರ್ಗ: ಇವರೂ ಮತದಾರರು. ಆದರೆ ಮತದಾರರ ಪಟ್ಟಿಯ ಪುರುಷ ಹಾಗೂ ಮಹಿಳಾ ಕಾಲಂಗಳಲ್ಲಿ ಹೆಸರಿಲ್ಲ. ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ 50ಕ್ಕೂ ಹೆಚ್ಚು ವರ್ಷಗಳು ಮಾನ್ಯತೆ ಇರಲಿಲ್ಲ. ಈಗ ‘ಇತರರು’ ಕಾಲಂನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರೇ ‘ಲೈಂಗಿಕ ಅಲ್ಪಸಂಖ್ಯಾತರು’. 

ಗುಲ್ಬರ್ಗ ಲೋಕಸಭಾ ಕ್ಷೇತ್ರದ ಒಟ್ಟು 17,21,666 ಮತದಾರರಲ್ಲಿ 8,78,083 ಪುರುಷರು, 8,43,358 ಮಹಿಳೆಯರು ಮತ್ತು 225 ಇತರರು. ಮತದಾರರ ಪಟ್ಟಿಯಲ್ಲಿ ಪ್ರತ್ಯೇಕ ಮಾನ್ಯತೆ ನೀಡುವಂತೆ 2009ರ ಜೂನ್‌ 10ರಂದು ಗುಲ್ಬರ್ಗದಲ್ಲಿ ನಡೆದ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ಸೇರಿದಂತೆ ದೇಶದ ವಿವಿಧೆಡೆ ಒತ್ತಾಯಿ ಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಾನ್ಯತೆ ನೀಡಿತ್ತು. ಆದರೆ ‘ಇತರರು’ ಎಂದು ದಾಖಲಿಸಿದರೆ, ಅದರಲ್ಲಿನ ಏಳೆಂಟು ವಿಧಗಳನ್ನು ನಮೂದಿಸಬೇಕು. ಅದಕ್ಕೆ ‘ಲೈಂಗಿಕ ಅಲ್ಪಸಂಖ್ಯಾತರು’ ಎಂದು ಮಾನ್ಯತೆ ನೀಡುವುದು ಸೂಕ್ತ ಎಂಬ ಬೇಡಿಕೆ ಅವರದ್ದು. 

ದೇಶದಲ್ಲಿ 5 ಲಕ್ಷ, ರಾಜ್ಯದಲ್ಲಿ 24 ಸಾವಿರ ಹಾಗೂ ಜಿಲ್ಲೆಯಲ್ಲಿ 1,300 ನೋಂದಾಯಿತ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಇನ್ನು ಸಮಾಜಕ್ಕೆ ಅಂಜಿ ಬಹಿರಂಗಪಡಿಸದ ಮೂರ್‍ನಾಲ್ಕು ಸಾವಿರ ಮಂದಿ ಇರಬಹುದು. ಅವರು ಪುರುಷ ಎಂದು ನೋಂದಾಯಿಸಿಕೊಂಡಿರುತ್ತಾರೆ ಎನ್ನುತ್ತಾರೆ ಲೈಂಗಿಕ ಅಲ್ಪಸಂಖ್ಯಾತರ ಪರ ಕಾರ್ಯನಿರ್ವಹಿಸುತ್ತಿರುವ ಬೀರಲಿಂಗ ಬಿ. ಪೂಜಾರಿ ಮತ್ತು ಆನಂದ ಎಸ್‌.ಕೆ .  ಆಧಾರ್‌ ಕಾರ್ಡ್‌ನಲ್ಲಿ ಆದ್ಯತೆ ನೀಡಿದ್ದಾರೆ. ಆದರೆ ಉಳಿದ ಬಹುತೇಕ ದಾಖಲೆಗಳಲ್ಲಿ ‘ಲೈಂಗಿಕ ಅಲ್ಪಸಂಖ್ಯಾತರ’ ಕಾಲಂ ಇಲ್ಲ ಎಂದು ದೂರುತ್ತಾರೆ.

ಭರವಸೆ– ಬೇಡಿಕೆ: ಪಕ್ಷಗಳು ಜಾತಿ, ಧರ್ಮ, ಆರ್ಥಿಕ ಆಧರಿತ ಬಹು ಮತ್ತು ಅಲ್ಪಸಂಖ್ಯಾತ ರಾಜಕಾರಣ ಮಾಡುತ್ತವೆ. ಆದರೆ ಪ್ರಾಕೃತಿಕ ಮನೋಭಾವನೆಗೆ ಬೆಲೆ ನೀಡುತ್ತಿಲ್ಲ. ಪ್ರಣಾಳಿಕೆ, ಭರವಸೆಯಲ್ಲೂ ಆದ್ಯತೆ ಇಲ್ಲ ಎಂದು ಸಿಟ್ಟು ವ್ಯಕ್ತಪಡಿಸುತ್ತಾರೆ.
ಬಹತೇಕರನ್ನು ಮನೆಯಿಂದ ಹೊರ ಹಾಕುತ್ತಾರೆ. ಸಮಾಜವು ವಿಶಿಷ್ಟ ದೃಷ್ಟಿಯಿಂದ ನೋಡುತ್ತದೆ. ಹೀಗಾಗಿ ಸುಶಿಕ್ಷಿತರಾಗಿದ್ದರೂ ಬದುಕುವುದು ಕಷ್ಟ.

ಅದಕ್ಕಾಗಿ ರಾಜಕೀಯ ಮತ್ತು 371 (ಜೆ) ಕಲಂ ಜಾರಿಯಲ್ಲಿ ಮೀಸಲಾತಿ ನೀಡಬೇಕು. ಭಾರತೀಯ ದಂಡ ಸಂಹಿತೆ 377 ಸೆಕ್ಷನ್‌ ವಿರುದ್ಧ ಸುಪ್ರಿಂ ಕೋರ್ಟಿಗೆ ಮೇಲ್ಮನವಿ,  ಕರ್ನಾಟಕ ಪೊಲೀಸ್‌ ಕಾಯಿದೆ 36 (ಎ) ತಿದ್ದುಪಡಿ ಮಾಡಬೇಕು. ವಿವಿಧ ಯೋಜನೆಗಳ ಜಾರಿಯಲ್ಲಿ ಆದ್ಯತೆ, ವಸತಿ ಸೌಲಭ್ಯ, ಭತ್ಯೆ, ಪಡಿತರ, ಸಮುದಾಯ ಭವನ ನೀಡಬೇಕು. ಅವರಿಗೆ ನಮ್ಮ ಬೆಂಬಲ ಎನ್ನುತ್ತಾರೆ ಗುಲ್ಬರ್ಗದ ಸ್ನೇಹ ಸೊಸೈಟಿಯ ಯೋಜನಾ ನಿರ್ದೇಶಕ ಮೌನೇಶ್ವರ ವೈ.ಕೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷ ರೂಪಿಸುವ ಪ್ರಯತ್ನವೂ ನಡೆದಿದೆ.

ಗುಪ್ತಗಾಮಿನಿ: ‘ದಶಕಗಳ ಹಿಂದೆ ಜೋಗಪ್ಪ, ಮಂಗಳಮುಖಿ ಮತ್ತಿತರ ಹೆಸರಲ್ಲಿ ಗುರುತಿಸು ತ್ತಿದ್ದರು. ಆ ಚೌಕಟ್ಟು ಬೇಡ. ಸಂವಿಧಾನದತ್ತ ಹಕ್ಕು ನೀಡಲಿ. ‘ಲೈಂಗಿಕ ಅಲ್ಪ ಸಂಖ್ಯಾತ’ ಮಾನ್ಯತೆ ನೀಡಲಿ. ಕೇವಲ 225 ಮಂದಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದರೂ, ಹೇಳಿಕೊಳ್ಳಲಾಗದ, ಅನು ಕಂಪ ವ್ಯಕ್ತಪಡಿಸುವ ಸಹಸ್ರಾರು ಇತರರು ಇದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಂಡು ಪರಿಗಣಿಸಬೇಕು ಎಂಬುದು ಅವರ ಆಗ್ರಹ.

ಮತದಾನ ಮಾಡಿ...
ಲಿಂಗ ಆಧರಿತ ಇತರ ಕಾಲಂನಲ್ಲಿ ದಾಖಲಿಸಿಕೊಂಡು ಮತದಾನ ಮಾಡಬಹುದು. ಅದಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಈ ಬಗ್ಗೆ ಅಧಿಕಾರಿಗಳಿಗೂ ತರಬೇತಿ ವೇಳೆ ಸೂಚನೆ ನೀಡಲಾಗಿದೆ.
–ಡಾ.ಎನ್‌.ವಿ ಪ್ರಸಾದ್‌, ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ

ಧ್ವನಿ ಎತ್ತಿ...
ರಾಜಕೀಯ ಪಕ್ಷಗಳು ಮೊದಲು ಲೈಂಗಿಕ ಅಲ್ಪಸಂಖ್ಯಾತರ ಭಾವನೆಗೆ ಮಾನ್ಯತೆ ನೀಡಲಿ. ವಿವಿಧ ವಲಯಗಳಲ್ಲಿ ಮೀಸಲಾತಿ, ಯೋಜನೆ ಗಳನ್ನು ರೂಪಿಸುವಾಗ ಆದ್ಯತೆ ನೀಡಬೇಕು. ನಮ್ಮ ಹಲವು ಬೇಡಿಕೆ ಪರ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು.
–ಮೌನೇಶ್ವರ ವೈ.ಕೆ, ಯೋಜನಾ ನಿರ್ದೇಶಕರು,  ಸ್ನೇಹ ಸೊಸೈಟಿ, ಗುಲ್ಬರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT