ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈದ್‌, ಸಂಕ್ರಾಂತಿ ಭಾವೈಕ್ಯದ ಬೆಸುಗೆಯಾಗಲಿ’

ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಕಠಿಣ ಕ್ರಮ: ಎಸ್‌ಪಿ ಎಚ್ಚರಿಕೆ
Last Updated 10 ಜನವರಿ 2014, 8:46 IST
ಅಕ್ಷರ ಗಾತ್ರ

ದಾವಣಗೆರೆ: ಈದ್ ಮಿಲಾದ್ ಹಾಗೂ ಸಂಕ್ರಾಂತಿ ವೇಳೆ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್‌ ಎಚ್ಚರಿಕೆ ನೀಡಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಈದ್‌ ಮಿಲಾದ್‌ ಹಾಗೂ ಸಂಕ್ರಾಂತಿ ಹಬ್ಬಗಳು ಒಂದರ ಬೆನ್ನಹಿಂದೆ ಒಂದು ಬಂದಿರುವುದು ಸಂತಸದ ವಿಚಾರ. ಆದರೆ ಹಬ್ಬದ ಸಂಭ್ರಮಕ್ಕೆ ಕಿಡಿಗೇಡಿಗಳು ಧಕ್ಕೆ ತರುವ ಕೆಲಸ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
79 ಸಿಸಿ ಕ್ಯಾಮೆರಾ ಅಳವಡಿಕೆ: ಈದ್‌ ಹಬ್ಬದ ಸಂದರ್ಭ ನಗರದ ಪ್ರಮುಖ ಬೀದಿಗಳಲ್ಲಿ ಮಧ್ಯಾಹ್ನ 2.30ರಿಂದ 6ರವರೆಗೆ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ನಗರದ 79 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಮೆರವಣಿಗೆ ಯಲ್ಲಿ ಯಾರೂ ಸಹ ಪ್ರಚೋದನಾಕಾರಿ ಶಬ್ದಗಳನ್ನು ಬಳಸಬಾರದು ಎಂದರು.

ಬಿಗಿ ಪೊಲೀಸ್‌ ಕಣ್ಗಾವಲು: ಮೆರವಣಿಗೆ ಸಾಗುವ ಹಾದಿಯಲ್ಲಿ ಬಿಗಿ ಭದ್ರತೆಗೆ 7 ಡಿಸಿಪಿ, 16 ಸಿಪಿಐ, 57 ಪಿಎಸ್‌ಐ, 63 ಎಎಸ್‌ಐ, 218 ಹೆಡ್‌ ಕಾನ್‌ಸ್ಟೆಬಲ್‌ ಹಾಗೂ 604 ಮಂದಿ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗುತ್ತದೆ. ಜತೆಗೆ ಹೆಚ್ಚುವರಿಯಾಗಿ ಹೊರ ಜಿಲ್ಲೆಗಳಿಂದ 4 ಡಿಸಿಪಿ, 8 ಸಿಪಿಐ, 20 ಪಿಎಸ್‌ಐ, 4 ಎಎಸ್‌ಐ ಹಾಗೂ 150 ಮಂದಿ ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ಭದ್ರತೆಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೌಡಿ ಶೀಟರ್‌ ಮೇಲೆ ಕಣ್ಣು: ಅಗತ್ಯಬಿದ್ದರೆ ಹಬ್ಬಕ್ಕೂ ಮುನ್ನ ನಗರದಲ್ಲಿರುವ ರೌಡಿಶೀಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಂಚಾರ ಕಿರಿಕಿರಿಗೆ ಬ್ರೇಕ್‌?: ಪ್ರತಿ ವರ್ಷ ಈದ್‌ ಮೆರವಣಿಗೆ ಸಂದರ್ಭ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತದೆ. ಈ ಬಾರಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ ಸ್ಥಳಗಳ ಪರಿಶೀಲನೆ ನಡೆಸಿ, ಬದಲಿ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ ಕುಮಾರ್‌, ಈದ್ ಮಿಲಾದ್‌ ಹಾಗೂ ಸಂಕ್ರಾಂತಿ ಹಬ್ಬ ಎರಡು ಸಮುದಾಯಗಳ ಬಾಂಧವ್ಯ ಬೆಸೆಯಬೇಕು. ಸಮುದಾಯದ ಮುಖಂಡರು ಹೃದಯ ವೈಶಾಲ್ಯ  ಮೆರೆಯಬೇಕು ಎಂದರು.

ದಾವಣಗೆರೆಯನ್ನು ಸ್ವಚ್ಛ, ಸುಂದರ ನಗರವನ್ನಾಗಿಸಲು ಜಿಲ್ಲಾಡಳಿತ ಪಣತೊಟ್ಟಿದೆ. ಈಗಾಗಲೇ ₨ 9 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, 15 ದಿನಗಳಲ್ಲಿ ₨ 50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಡಿಎಸ್‌ಪಿ ರವಿನಾರಾಯಣ್‌, ಸಿಪಿಐ ಚಂದ್ರಹಾಸ ಲಕ್ಷ್ಮಣ ನಾಯ್ಕ ಹಾಗೂ ಉಭಯ ಸಮುದಾಯದ ಮುಖಂಡರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT