ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಊಟದಲ್ಲಿ ಏಕತೆ ಇದೆ’

ಬೆಂಗಳೂರಿನ ಅತಿಥಿ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಿಳಿ ಶರ್ಟ್, ಸೊಂಟದ ಸುತ್ತ ಶೆಫ್‌ಗಳು ತೊಡುವ ದಪ್ಪನೆಯ ವಸ್ತ್ರ, ತೆಳ್ಳನೆ ಉದ್ದನೆಯ ಕೂದಲನ್ನು ಜುಟ್ಟು ಕಟ್ಟಿಕೊಂಡು ತಮ್ಮ ವ್ಯಕ್ತಿತ್ವಕ್ಕೊಂದು ರೂಪ ಕೊಟ್ಟಿದ್ದರು ಶೆಫ್ ಶೈಲೇಂದ್ರ ಕೇಕಡೆ. ಲಭ್ಯವಿರುವ ಪದಾರ್ಥಗಳಲ್ಲೇ ರುಚಿಕಟ್ಟಾದ ಅಡುಗೆ ಸಿದ್ಧಪಡಿಸುವುದರಲ್ಲಿ ಸಿದ್ಧಹಸ್ತರೆನಿಸಿಕೊಂಡಿರುವ ಶೈಲೇಂದ್ರ ಮೂಲತಃ ಪುಣೆಯವರು. ಅಡುಗೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅದರಲ್ಲೇ ಪದವಿ ಪಡೆದ ನಂತರ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಶೆಫ್ ಆಗಿ ಕೆಲಸ ಮಾಡಿದ ವೃತ್ತಿ ಅನುಭವ ಇವರದ್ದು. ಟೀವಿ ಕಾರ್ಯಕ್ರಮಗಳಲ್ಲಿ ಅಡುಗೆ ಕಲಿಸುವ ಮೂಲಕ ಇವರು ಪಾಕಪ್ರಿಯರ ಅಚ್ಚುಮೆಚ್ಚೆನಿಸಿದ್ದಾರೆ. ‘ಫುಡ್ಫುಡ್’ ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಪಾಕ ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಶೈಲೇಂದ್ರ ಅವರು ‘ಮೆಟ್ರೊ’ದೊಂದಿಗೆ ಒಂದಿಷ್ಟು ಮಾತನಾಡಿದರು.

‘ಅಡುಗೆ ಎನ್ನುವುದು ಒಂದು ಕಲೆಯೇ ಆದರೂ ಅದು ನಮ್ಮ ದೈನಂದಿನ ಚಟುವಟಿಕೆಯೇ ಆಗಿದೆ. ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಏಕೈಕ ವಸ್ತುವೆಂದರೆ ಅದು ಊಟ ಮಾತ್ರ. ಹೀಗಾಗಿ ಊಟಕ್ಕೆ ತಕ್ಕಂತೆ ಅಡುಗೆಯೂ ನಿರಂತರವಾಗಿ ನಡೆಯುತ್ತಲೇ ಇರಬೇಕು. ಕ್ರಿಯಾಶೀಲರಾದವರು ಹೆಚ್ಚು ಪ್ರಯೋಗಶೀಲರಾಗಿ ಸದಾ ಹೊಸತರ ಹುಡುಕಾಟದಲ್ಲಿರುತ್ತಾರೆ. ಈ ರೀತಿಯ ಹೊಸ ಪ್ರಯೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅದನ್ನು ಇಂಥ ಸ್ಪರ್ಧೆಗಳಲ್ಲಿ ಹೆಚ್ಚು ಕಾಣಬಹುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಉತ್ಸಾಹ, ಆಹಾರ ಸಿದ್ಧಪಡಿಸುವ ರೀತಿ, ಪ್ರಯೋಗಶೀಲತೆ ನಿಜಕ್ಕೂ ಇಷ್ಟವಾಗುತ್ತದೆ’ ಎನ್ನುವುದು ಅವರ ಅನಿಸಿಕೆ.

ಅಡುಗೆ ಸ್ಪರ್ಧೆಗಳಿಂದ ಆಗುವ ಲಾಭವೇನು ಎಂದು ಕೇಳಿದ್ದಕ್ಕೆ ‘ಭಾರತದಂಥ ವೈವಿಧ್ಯಮಯ ರಾಷ್ಟ್ರದಲ್ಲಿ ಪ್ರತಿ ನೂರು ಕಿಲೋಮೀಟರ್ಗೆ ಅಡುಗೆಯ ರುಚಿ, ಮಾಡುವ ವಿಧಾನ ಎಲ್ಲವೂ ಬದಲಾಗುತ್ತಿರುತ್ತದೆ. ಇಲ್ಲಿನ ಪ್ರತಿಯೊಬ್ಬರ ಮನೆಗೂ ಒಂದು ಅಡುಗೆ ಪರಂಪರೆ ಇದೆ. ಅವುಗಳಲ್ಲಿ ಕೆಲವು ಇಂದಿಗೂ ಜೀವಂತವಾಗಿವೆ. ಆ ಅಡುಗೆಗಳ ಹಿಂದೆ ಬಹಳಷ್ಟು ವೈಜ್ಞಾನಿಕ ಕಾರಣಗಳಿವೆ. ರುಚಿಗೆ ಬಳಸುವ ವಸ್ತುಗಳೂ ಭಿನ್ನ. ಇವುಗಳನ್ನು ಉಳಿಸುವ ಅವಶ್ಯಕತೆ ಇದೆ. ಅದೂ ಅಲ್ಲದೆ ಪಾಕವೆನ್ನುವುದು ಇಂದು ಅಡುಗೆ ಕೋಣೆಯಲ್ಲಿ ಮಾತ್ರ ಉಳಿದಿಲ್ಲ. ಅದೀಗ ಮಹಿಳೆಯರ ಕಲೆಯಷ್ಟೇ ಅಲ್ಲ. ಹೀಗಾಗಿ ಇಂಥ ಸ್ಪರ್ಧೆಗಳು ಪ್ರತಿಯೊಬ್ಬರಲ್ಲೂ ಅಡುಗೆ ಮಾಡುವ ಆಸಕ್ತಿ ಬೆಳೆಸಲು ಸಹಕಾರಿಯಾಗಲಿದೆ’ ಎಂದು ಶೈಲೇಂದ್ರ ಅಭಿಪ್ರಾಯಪಟ್ಟರು.

ವಿದೇಶಿ ಆಹಾರಗಳು ಭಾರತದಲ್ಲಿ ವ್ಯಾಪಕವಾಗಿರುವಾಗ ಭಾರತೀಯ ಆಹಾರಗಳ ಭವಿಷ್ಯವೇನು ಎಂಬ ಪ್ರಶ್ನೆಗೆ,  ‘ಭಾರತೀಯರು ಪಿಟ್ಜಾ ಬರ್ಗರ್ ಎಷ್ಟೇ ಇಷ್ಟಪಟ್ಟು ಚಪ್ಪರಿಸಿದರೂ ಅವರ ನಾಲಗೆಗೆ ರುಚಿಸುವುದು ಭಾರತೀಯ ಖಾದ್ಯಗಳೇ. ನಮ್ಮಲ್ಲಿರುವಷ್ಟು ವೈವಿಧ್ಯಮಯ ಆಹಾರಗಳ ಪಟ್ಟಿ ಬಹುಶಃ ಬೇರೆಲ್ಲೂ ಇರಲಾರದು. ಆದ್ದರಿಂದ ಇಂಥ ಸ್ಪರ್ಧೆಗಳು ಭಾರತೀಯರಿಗೆ ಹೆಚ್ಚು ಸೂಕ್ತ’ ಎನ್ನುತ್ತಾರೆ ಕೇಕಡೆ.

‘ಪುಣೆಯವನಾದ ನನಗೆ ಬೆಂಗಳೂರು ಹೊಸತಲ್ಲ. ಆದರೂ ನಾನು ದಕ್ಷಿಣ ಭಾರತದ ಉದ್ದಗಲವನ್ನು ಸುತ್ತಿದ್ದೇನೆ. ನನಗೆ ಇಲ್ಲಿನ ಅಡುಗೆಯಲ್ಲಿ ಕಂಡುಬಂದ ಗಮನಾರ್ಹ ಸಂಗತಿ ಎಂದರೆ ಒಂದೇ ರೀತಿಯ ಅಡುಗೆಯನ್ನು ಒಂದೇ ಬಗೆಯ ಪದಾರ್ಥಗಳನ್ನು ಬಳಸಿ ಅಷ್ಟೇ ಸಮಯದಲ್ಲಿ ಬೇಯಿಸಿದರೂ ಒಬ್ಬರಿಗಿಂತ ಮತ್ತೊಬ್ಬರ ರುಚಿ ಭಿನ್ನವಾಗಿರುವುದು. ಅದು ಹೇಗೆ ಎಂದು ಇಂದಿಗೂ ನನಗೆ ಅರ್ಥವಾಗಿಲ್ಲ. ಆದರೂ ಇಲ್ಲಿಗೆ ಬಂದಾಗ ದಕ್ಷಿಣ ಕನ್ನಡದ ಮೀನಿನ ಖಾದ್ಯಗಳನ್ನು ಮನಸಾರೆ ಸವಿಯುತ್ತೇನೆ’ ಎಂದು ತಮ್ಮ ಬೆಂಗಳೂರಿನ ಹಾಗೂ ದಕ್ಷಿಣ ಭಾರತದ ಅನುಭವವನ್ನು ಹಂಚಿಕೊಂಡರು.

ಮನೆಯಲ್ಲೂ ನಿಮ್ಮದೇ ಅಡುಗೆಯೇ ಎಂದು ಕೇಳಿದ್ದಕ್ಕೆ, ‘ನಾನು ಎಷ್ಟು ಮಂದಿಗೆ ಅಡುಗೆ ಮಾಡಿ ಬಡಿಸಿದರೂ ಅಥವಾ ಅಡುಗೆ ಕಲಿಸಿದರೂ ನಮ್ಮ ಮನೆಯಲ್ಲಿ ನಮ್ಮ ಅಮ್ಮನೇ ಮುಖ್ಯ ಶೆಫ್. ನನಗೆ ನಮ್ಮಮ್ಮನ ರುಚಿಯೇ ಇಷ್ಟ. ಹೀಗಾಗಿ ಮನೆ ತಲುಪಿದ ನಂತರ ನನ್ನ ಪಾಕ ಪಾಂಡಿತ್ಯವನ್ನು ಕಟ್ಟಿ ಮೂಲೆಗಿಟ್ಟುಬಿಡುತ್ತೇನೆ’ ಎಂದು ನಕ್ಕರು.

ಶೈಲೇಂದ್ರ ಕೇಕಡೆ ಪ್ರಕಾರ ಜಗತ್ತಿನಲ್ಲಿ ಬೇರೆಲ್ಲಾ ವಿಷಯಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಏಕತೆ ಇರುವುದು ಊಟದಲ್ಲಿ ಮಾತ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT