ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಮ್ಮೆದೊಡ್ಡಿ ಸಮಸ್ಯೆ ಪರಿಹರಿಸದಿದ್ದರೆ ಧರಣಿ’

ಪ್ರಜಾವಾಣಿ ವಾರ್ತೆ
Last Updated 17 ಸೆಪ್ಟೆಂಬರ್ 2013, 8:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಾರದೊಳಗೆ ಎಮ್ಮೆದೊಡ್ಡಿ ಜಮೀನು ಸಾಗುವಳಿ ರೈತರ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧದ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಎಚ್ಚರಿಸಿದರು.

ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ ಅರಣ್ಯ ಮತ್ತು ಪೊಲೀಸ್‌ ಇಲಾಖೆಯಿಂದ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜಾತ್ಯತೀತ ಜನತಾದಳದ ವತಿಯಿಂದ  ಜಿಲ್ಲಾಧಿ­ಕಾರಿ ಕಚೇರಿ ಬಳಿ ರೈತರು ನಡೆಸಿದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈಹಿಂದೆ ವಿಧಾನಸಭೆಯಲ್ಲಿ ಎಮ್ಮೆದೊಡ್ಡಿ ರೈತರ ಸಮಸ್ಯೆ ಕುರಿತು ಚರ್ಚೆ ನಡೆಸಲಾಗಿತ್ತು. ರೈತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಅವಕಾಶ ಮಾಡಿಕೊಟ್ಟವರು ಯಾರು ಎಂದು ಪ್ರಶ್ನಿಸಿ, ಪಕ್ಷ ಇರೋದೆ ರೈತರ ಪರವಾಗಿ ಎಂಬುದನ್ನು ಮೊದಲು ಅರ್ಥಮಾಡಿಕೊಂಡು ಚುನಾವಣೆಯಲ್ಲಿ ಪಕ್ಷವನ್ನು ಉಪೇಕ್ಷೆ ಮಾಡಬಾರದೆಂದು ಮನವಿ ಮಾಡಿದರು.

ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಬೇಕು. ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ಹೇಳಿದರು.

ರೈತರ ಸಮಸ್ಯೆ ಕುರಿತು ಮುಖ್ಯಮಂತ್ರಿಗಳು ಈ ಹಿಂದೆ ತಮ್ಮೊಂದಿಗೆ ಚಳವಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ನ್ಯಾಯ ಎತ್ತಿ­ಹಿಡಿಯ­ಬೇಕೆಂದು ಮನವಿ ಮಾಡಿದರು.

ಎಮ್ಮೆದೊಡ್ಡಿಯಲ್ಲಿ  ರೈತರು ಸಾಗುವಳಿ ಮಾಡಿರುವ ಜಮೀನು ಅರಣ್ಯ ಇಲಾಖೆಯದ್ದಲ್ಲ. ಇದು ಕಂದಾಯ ಭೂಮಿ ಎಂಬುದಕ್ಕೆ ಹಲವು ದಾಖಲೆಗಳು ಲಭ್ಯವಿದೆ. ಈ ಹೋರಾಟ ಹಕ್ಕಿನ ಪ್ರತಿಪಾದನೆ, ಬದುಕಿನ ಹೋರಾಟವೆಂದು ಶಾಸಕ ವೈ.ಎಸ್‌.ವಿ.ದತ್ತ ಹೇಳಿದರು.

ಸಮಸ್ಯೆ ಪರಿಹಾರವಾಗುವ ತನಕ ಜಿಲ್ಲಾಧಿ­ಕಾರಿ­ಗಳ ಕಚೇರಿ ಬಳಿ ಧರಣಿ ಮುಂದು­ವರಿಯಲಿದೆ ರೈತರು ಮತ್ತು ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.

ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಎ.­ಕೃಷ್ಣಪ್ಪ ಮಾತನಾಡಿ,ಈಗಾಗಲೇ ಕೆಲವು ರೈತರಿಗೆ ಪಹಣಿ ನೀಡಲಾಗಿದೆ. ಅವುಗಳು ಸುಳ್ಳು ಎನ್ನು­ವುದಾದರೆ ಆ ಪತ್ರಗಳನ್ನು ಸುಡಬೇಕಾ­ಗುತ್ತದೆ.­ದೌರ್ಜನ್ಯ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ­ದರು.

ಪಕ್ಷದ ಜಿಲ್ಲಾಧ್ಯಕ್ಷ ಮಂಜಪ್ಪ, ಶಾಸಕ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಸ್‌.ಎಲ್‌.­ಧರ್ಮೇಗೌಡ, ಮುಖಂಡರಾದ ಎಚ್‌.ಟಿ.­ರಾಜೇಂದ್ರ, ಬಾಲಕೃಷ್ಣೇಗೌಡ, ವಸಂತಕುಮಾರಿ, ಜಿ.ಎಸ್‌.ಚಂದ್ರಪ್ಪ, ಭರತ್‌, ಗಂಗಾಧರನಾಯ್ಕ, ಹೊಲದಗದ್ದೆಗಿರೀಶ್‌, ಕೆ.­ಭರತ್‌,­ಜ್ಯೋತಿ ಈಶ್ವರ್‌, ಈರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT