ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌ಇಜೆಡ್‌’ ಪ್ರಗತಿ ಚಿತ್ರಣ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್‌ ಉಪಕರಣ, ಆಹಾರ ಸಂಸ್ಕರಣೆ, ಜವಳಿ, ಐಟಿ ಹೀಗೆ ಬಗೆ ಬಗೆಯ ಉತ್ಪಾದನಾ ಘಟಕಗಳು ಒಂದರ ಪಕ್ಕದಲ್ಲಿ ಮತ್ತೊಂದು. ಭೇಟಿಗೆ ಬಂದವರನ್ನು ಮುಖ ಎತ್ತಿಯೂ ನೋಡಲು ಪುರಸೊತ್ತಿಲ್ಲ ದಂತೆ ಇಲ್ಲಿ ಕಾರ್ಮಿಕರ ಮೌನ ಕ್ರಾಂತಿ.  ಹಾಗಾಗಿ  ಎಲ್ಲೆಡೆ ಬರಿ ಯಂತ್ರಗಳದ್ದೇ ಸದ್ದು. ಹೆಜ್ಜೆ ಹೆಜ್ಜೆಗೂ ಸೂಚನೆ, ನಿರ್ದೇಶನಗಳ ಫಲಕಗಳು. ಹೊರಕ್ಕೆ ಕಾಲಿಟ್ಟರೆ ಉತ್ಪಾದಿತ ವಸ್ತುಗಳನ್ನು ಬಂದರಿಗೆ ಸಾಗಿಸಲು ಸಾಲುಗಟ್ಟಿ ನಿಂತ ಲಾರಿಗಳು.

ಇದು ಸಂಪೂರ್ಣ ಕೇಂದ್ರ ಸರ್ಕಾರವೇ ನಿರ್ವಹಿಸುವ ಕೇರಳದ ಮೊದಲ ಕೈಗಾರಿಕಾ ಪಾರ್ಕ್ ಎನಿಸಿದ ಕೊಚ್ಚಿನ್‌ ವಿಶೇಷ ಆರ್ಥಿಕ ವಲಯ (ಸಿಎಸ್‌ಇಝೆಡ್‌) ದಲ್ಲಿ ಕಂಡ ಚಿತ್ರಣ.

103 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ 160 ಘಟಕಗಳನ್ನು ಹೊಂದಿರುವ ‘ಸಿಎಸ್‌ಇಜೆಡ್‌’ ಕೊಚ್ಚಿನ್‌ ಹೊರವಲಯದ ಕಕ್ಕನಾಡ್‌ ಭಾಗದ ಆರ್ಥಿಕ ಚಿತ್ರಣವನ್ನೇ ಬದಲು ಮಾಡಿದೆ.

ಇದೇ ಆಶಯದೊಂದಿಗೆ ದೇಶದ ವಿವಿಧೆಡೆ ‘ವಿಶೇಷ ಆರ್ಥಿಕ ವಲಯ‘ಗಳನ್ನು(ಎಸ್‌ಇಜೆಡ್‌)  ಆರಂಭಿಸಿದ ಕೇಂದ್ರ ಸರ್ಕಾರ ಇವುಗಳಿಗೆ ಹೇರಳ ರಿಯಾಯ್ತಿಯನ್ನೂ ಘೋಷಿಸಿದೆ.

ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ  ಅವಕಾಶಗಳನ್ನು ಸೃಷ್ಟಿಸುವುದರ ಜತೆಗೇ  ರಫ್ತು ವಹಿವಾಟು ಹೆಚ್ಚಳಕ್ಕೂ ಗಮನಾರ್ಹ ಕೊಡುಗೆ ನೀಡುತ್ತಿರುವ ‘ವಿಶೇಷ  ಆರ್ಥಿಕ ವಲಯ’ಗಳು (ಎಸ್‌ಇಜೆಡ್‌) ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ಮುಖ್ಯ ಆಧಾರಸ್ಥಂಭ ಎನಿಸಿವೆ.

‘ಎಸ್‌ಇಜೆಡ್‌’ಗಳ ವಿಸ್ತರಣೆಗೆ ಉದಾರ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಇವುಗಳ ಅನುಷ್ಠಾನಕ್ಕೆ ಮುಂದಾಗಿರುವ ಕಂಪೆನಿ, ಇಲ್ಲವೇ ಉದ್ಯಮ ಸಮೂಹ ಸಂಸ್ಥೆಗಳಿಗೆ ಇದೀಗ ಮತ್ತಷ್ಟು ಕಾಲಾವಕಾಶ ನೀಡುವ ಮೂಲಕ ‘ತೆರಿಗೆ ಮುಕ್ತ’ ಈ ವಲಯಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದೆ.

ವಿದೇಶಿ ಬಂಡವಾಳ ಆಕರ್ಷಿಸಿ ರಫ್ತು ಹೆಚ್ಚಿಸಲು ವಿಶೇಷ ಪ್ರಯತ್ನವಾಗಿ ಗುಜರಾತ್‌ನ ಕಾಂಡ್ಲಾದಲ್ಲಿ 1965ರಲ್ಲೇ ರಫ್ತು ಸಂಸ್ಕರಣ ವಲಯ (ಇಪಿಜೆಡ್‌) ಆರಂಭಿಸಲಾಗಿದ್ದು ಇದು ಇಡೀ ಏಷ್ಯಾದಲ್ಲೇ ಪ್ರಥಮ ಎನಿಸಿದೆ.

ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ಅಭಿವೃದ್ಧಿಗೆ ‘ಎಸ್‌ಇಜೆಡ್‌ಗಳಲ್ಲಿ ಪ್ರಥಮ ಆದ್ಯತೆ ಇದ್ದು, ಇಲ್ಲಿಯ ಉತ್ಪನ್ನಗಳು ಸುಂಕರಹಿತವಾಗಿರುತ್ತವೆ ಎನ್ನುವುದು ವಿಶೇಷ.

ಏನಿದು ಎಸ್‌ಇಜೆಡ್‌?
ರಫ್ತು ಹೆಚ್ಚಳದ ಮುಖ್ಯ ಉದ್ದೇಶ ವಿಟ್ಟುಕೊಂಡು ಕೇಂದ್ರ, ರಾಜ್ಯಗಳ ಸಹಭಾಗಿತ್ವದಲ್ಲಿ ಆರಂಭಿಸಲಾಗುವ ಕೈಗಾರಿಕಾ ಪ್ರದೇಶವೇ ‘ವಿಶೇಷ ಆರ್ಥಿಕ ವಲಯ’. ಇಲ್ಲಿನ ಉತ್ಪನ್ನಗಳ ರಫ್ತಿಗೆ ಕೇಂದ್ರ ಮತ್ತು ರಾಜ್ಯ ಮಾರಾಟ ತೆರಿಗೆ ಇಲ್ಲವೆ ಸೇವಾ ತೆರಿಗೆ ವಿಧಿಸಲಾಗುವುದಿಲ್ಲ. ಎಸ್‌ಇಜೆಡ್‌ ಆರಂಭಕ್ಕೆ 2005ರ ಮೇನಲ್ಲಿ ಸಂಸತ್‌ ಅಂಗೀಕರಿಸಿದ ಕಾಯ್ದೆಯು 2006ರ ಫೆಬ್ರುವರಿಯಿಂದಲೇ ಅನುಷ್ಠಾನಕ್ಕೆ ಬಂದಿದೆ.

ಸಾರ್ವಜನಿಕ, ಇಲ್ಲವೇ ಖಾಸಗಿ ಕಂಪೆನಿಗಳು ಇಂತಹ ವಲಯದಲ್ಲಿ ತಮ್ಮ ಘಟಕಗಳನ್ನು ತೆರೆಯಬಹುದಾಗಿದ್ದು, ರಫ್ತಿಗೆ ಅನುಕೂಲವಾಗಲು ವಿಮಾನ ನಿಲ್ದಾಣ ಇಲ್ಲವೇ ಬಂದರು ಇರುವ ಸ್ಥಳಗಳ ಬಳಿಯೇ ಇವುಗಳು ಕಾರ್ಯಾರಂಭ ಮಾಡಿರುತ್ತವೆ.

ಇತರೆ ಕೈಗಾರಿಕಾ ಘಟಕಗಳಿಗೆ ಹೋಲಿಸಿದಲ್ಲಿ ತೆರಿಗೆ, ಕಾರ್ಮಿಕ ಕಾನೂನು ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಇಲ್ಲಿನ ಘಟಕಗಳಿಗೆ ಸಾಕಷ್ಟು ವಿನಾಯ್ತಿ ನೀಡಲಾಗಿರುತ್ತದೆ.

ಕೆಲ ಎಸ್‌ಇಜೆಡ್‌ಗಳನ್ನು ಮಾಹಿತಿ ತಂತ್ರಜ್ಞಾನ­ದಂತಹ (ಐಟಿ) ನಿರ್ದಿಷ್ಟ ವಲಯದ ಸೇವೆ ಅಥವಾ ಉತ್ಪನ್ನಗಳಿಗೆ ಮೀಸಲಿಡಲಾಗಿದ್ದರೆ, ಕೆಲವನ್ನು ಬಹು ಬಗೆಯ ಉತ್ಪನ್ನಗಳಿಗಾಗಿಯೇ  (ಮಲ್ಟಿ ಪ್ರಾಡಕ್‌್ಟ ಜೋನ್‌) ಎಸ್‌ಇಜೆಡ್‌ ಅರಂಭಿಸಲಾಗುತ್ತದೆ.

ಎಲ್ಲಿ, ಎಷ್ಟು ಎಸ್‌ಇಜೆಡ್‌

ಕೇಂದ್ರ ವಾಣಿಜ್ಯ, ಕೈಗಾರಿಕಾ ರಾಜ್ಯ ಸಚಿವ ಇ.ಎಂ.ಸುದರ್ಶನ ನಾಚಿಯಪ್ಪನ್‌ ಅವರು ಇತ್ತೀಚೆಗೆ ಲೋಕಸಭೆಗೆ ನೀಡಿದ ಮಾಹಿತಿ ಅನ್ವಯ, ದೇಶದಲ್ಲಿ ಸದ್ಯ ಕಾರ್ಯಾಚರಣೆಯಲ್ಲಿ ಇರುವ ಒಟ್ಟು ಎಸ್‌ಇಜೆಡ್‌ಗಳ ಸಂಖ್ಯೆ 175. ಈ ಪೈಕಿ ಅತಿ ಹೆಚ್ಚು, ಅಂದರೆ 40 ಎಸ್‌ಇಜೆಡ್‌ಗಳು ಆಂಧ್ರ ಪ್ರದೇಶದಲ್ಲೇ ಇವೆ. ತಮಿಳುನಾಡಿನಲ್ಲಿ 34, ಕರ್ನಾಟಕದಲ್ಲಿ 22 ಹಾಗೂ ಮಹಾರಾಷ್ಟ್ರ ದಲ್ಲಿ 20 ಎಸ್‌ಇಜೆಡ್‌ಗಳು ಈಗ ಕಾರ್ಯಾಚರಣೆ ನಡೆಸುತ್ತಿವೆ.

ಹತ್ತಾರು ಅಡ್ಡಿ
2012ರ ಏಪ್ರಿಲ್‌ನಿಂದ 2013ರ  ನವೆಂಬರ್‌­ವರೆಗಿನ ಅವಧಿಯಲ್ಲಿ ಸು­ಮಾರು 115 ಎಸ್‌ಇಜೆಡ್‌ಗಳು ಕಾರ್ಯಾರಂಭ­ ಮಾ­ಡ­ಬೇಕಿತ್ತು. ಆದರೆ, ಜಾಗತಿಕ ಆರ್ಥಿಕ ಹಿಂಜರಿತ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುಮತಿ ಸಿಗುವಲ್ಲಿ ವಿಳಂಬವಾಗಿದ್ದು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳು ಮೊದಲಾದ ಕಾರಣ­ಗಳಿಂ­ದಾಗಿ ಇವು ನಿಗದಿತ ಅವಧಿಯೊಳಗೆ ಆರಂಭವಾಗಿಲ್ಲ. ಹಾಗಾಗಿ ಇಂತಹ ಎಸ್‌ಇಜೆಡ್‌ಗಳ ಆರಂಭಕ್ಕೆ ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡಿದೆ.

ಕೆಲವು ಎಸ್‌ಇಜೆಡ್‌ಗಳನ್ನು ಕೇಂದ್ರ ಸರ್ಕಾರ ನೇರವಾಗಿ ನಿಯಂತ್ರಿಸುತ್ತಿದ್ದರೆ, ಇನ್ನುಳಿದವುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಖಾಸಗೀಕರಣಗೊಳಿಸಲಾಗಿದೆ.

ಸೌಲಭ್ಯಗಳ ಮಹಾಪೂರ
ಹೂಡಿಕೆ ಆಕರ್ಷಿಸಲು ಎಸ್‌ಇಜೆಡ್‌ ಗಳಿಗೆ ಸರ್ಕಾರ ಹತ್ತಾರು ಸೌಲಭ್ಯಗಳನ್ನೂ ಒದಗಿಸುವ ಮೂಲಕ ಉತ್ತೇಜನ ನೀಡುತ್ತಿದೆ. ಇಂತಹ ಕ್ರಮಗಳೇ ಈ ವಲಯದ ಅಭೂತಪೂರ್ವ ಪ್ರಗತಿಗೆ ಮುಖ್ಯ ಕಾರಣ ಎನ್ನಲಾಗಿದೆ.

ಎಸ್‌ಇಜೆಡ್‌ ವಲಯದಲ್ಲಿ ಘಟಕ ಆರಂಭಕ್ಕೆ ಅಗತ್ಯವಾದ ಕಚ್ಛಾವಸ್ತು, ಪ್ಯಾಕಿಂಗ್‌ ಸಾಮಗ್ರಿಗಳು, ಕಚೇರಿ ಉಪಕರಣಗಳ ಖರೀದಿಗೆ (ದೇಶಿಯವಾಗಿ) ಯಾವುದೇ ಲೈಸೆನ್ಸ್‌ ಅಗತ್ಯವಾಗಿರುವುದಿಲ್ಲ.

ಅಲ್ಲದೇ, ಇಂತಹ ಘಟಕಗಳ ಉತ್ಪನ್ನಗಳಿಗೆ ಕೇಂದ್ರ, ರಾಜ್ಯಗಳ ಮಾರಾಟ ತೆರಿಗೆ, ಸೇವಾ ತೆರಿಗೆ, ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅನ್ವಯ ವಿನಾಯ್ತಿ ನೀಡಲಾಗಿದೆ. ಬಳಸಿದ ಯಂತ್ರೋಪಕರಣ ಸೇರಿದಂತೆ ವಿವಿಧ ವಸ್ತುಗಳ ಆಮದಿಗೆ ಇಂತಹ ಘಟಕಗಳು ಯಾವುದೇ ಲೈಸೆನ್‌್ಸ ಪಡೆಯಬೇಕಿಲ್ಲ.

ರಫ್ತಿಗೆ ಎಸ್‌ಇಜೆಡ್‌ ಗಣನೀಯ ಕೊಡುಗೆ
ಹಲವು ತೆರಿಗೆ ವಿನಾಯ್ತಿಗಳನ್ನು ಪಡೆದಿರುವ ಎಸ್‌ಇಜೆಡ್‌ನಲ್ಲಿನ ಕಂಪೆನಿಗಳ ವೈವಿಧ್ಯಮಯ ಉತ್ಪನ್ನಗಳು ರಫ್ತು ವ್ಯವಹಾರಕ್ಕೆ ನೀಡುತ್ತಿರುವ ಪಾಲು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇರುವುದು ಗಮ ನಾರ್ಹ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿ ಅನ್ವಯ 2011–12ರ ಸಾಲಿಗೆ ಹೋಲಿಸಿದಲ್ಲಿ 2012–13ರ ಸಾಲಿನಲ್ಲಿ ಎಸ್‌ಇಜೆಡ್‌ಗಳ ಪಾಲು ಶೇ 31ರಷ್ಟು ಹೆಚ್ಚಿದೆ. 2006–07ರ ಹಣಕಾಸು ವರ್ಷದಲ್ಲಿ ಕೇವಲ ₨34615 ಕೋಟಿ ಇದ್ದ ಎಸ್‌ಇಜೆಡ್‌ ಪಾಲು 2012–13ರಲ್ಲಿ ₨4.76 ಲಕ್ಷ ಕೋಟಿಗೆ ತಲುಪಿದೆ. ಈ ಅಂಶವೇ ಎಸ್‌ಇಜೆಡ್‌ ವಲಯಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.

2013–14ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಎಸ್‌ಇಜೆಡ್‌ ಕೊಡುಗೆ ₨1.13 ಲಕ್ಷ ಕೋಟಿ. 2012–13ನೇ ಸಾಲಿನಲ್ಲಿ ದೇಶದ ವಿವಿಧ ಎಸ್‌ಇಜೆಡ್‌ಗಳಲ್ಲಿ ಸುಮಾರು ₨2.36 ಲಕ್ಷ ಕೋಟಿ ಬಂಡವಾಳ ಹೂಡಿದ್ದು, 11 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಈ ಕ್ಷೇತ್ರಕ್ಕೆ ಸಾಕಷ್ಟು ವಿನಾಯ್ತಿ ನೀಡಲಾಗಿರುವುದೇ ಈ ಪ್ರಗತಿಗೆ ಕಾರಣ. ಇಲ್ಲದಿದ್ದಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಕನಸಾಗೇ ಉಳಿಯುತ್ತಿತ್ತು ಎಂಬುದು ರಫ್ತು ಉತ್ತೇಜನ ಮಂಡಳಿಯ ಹೇಳಿಕೆ.

ಸತತ ಹೆಚ್ಚುತ್ತಿರುವ ರಫ್ತು ವಹಿವಾಟು
‘ಎಸ್‌ಇಜೆಡ್‌’ನಿಂದ ಬರುತ್ತಿರುವ ರಫ್ತು ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2006–07ರಲ್ಲಿ ₨34,615 ಕೋಟಿ ಮೌಲ್ಯದ ಸರಕುಗಳು ‘ಎಸ್‌ಇಜೆಡ್‌’ ವಲಯದಿಂದಲೇ ರಫ್ತು ಆಗಿವೆ. 2007–08ರಲ್ಲಿ ₨66,638 ಕೋಟಿ ಸರಕು, 2008–09ರಲ್ಲಿ ₨99,689 ಕೋಟಿ ಬೆಲೆಯ ವಸ್ತುಗಳು ಎಸ್‌ಇಜೆಡ್‌ ವ್ಯಾಪ್ತಿಯ ಉದ್ಯಮಗಳಿಂದಲೇ ವಿವಿಧ ದೇಶಗಳಿಗೆ ರವಾನೆಯಾಗಿವೆ. 2009–10ರಲ್ಲಿ ವಿಶೇಷ ಆರ್ಥಿಕ ವಲಯದ ಕೈಗಾರಿಕೋದ್ಯಮಗಳಿಂದ  ₨2,20,711 ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. 2010–11ರಲ್ಲಿ  ಈ ರಫ್ತು ಚಟುವಟಿಕೆ ಪ್ರಮಾಣ ₨3,15,868 ಕೋಟಿಗಳಿಗೆ ಏರಿಕೆಯಾಯಿತು.

ನಂತರದ ವರ್ಷಗಳಲ್ಲಿಯೂ ಎಸ್‌ಇಜೆಡ್‌ ವ್ಯಾಫ್ತಿಯ ಉದ್ಯಮ ಸಂಸ್ಥೆಗಳು ರಫ್ತು ಚಟುವಟಿಕೆ ಹೆಚ್ಚುತ್ತಲೇ ಹೋಯಿತು. 2011–12ರಲ್ಲಿ ₨3,64,478 ಕೋಟಿ ಬೆಲೆಯ ಸರಕುಗಳು ವಿದೇಶಗಳಿಗೆ ಸಾಗಣೆಯಾದರೆ, 2012–13 ರಲ್ಲಿ ₨4,76,159 ಕೋಟಿ ಮೌಲ್ಯದ ಉತ್ಪನ್ನಗಳು ರಫ್ತಾಗಿವೆ. 2013–14ರಲ್ಲಿ (ಏಪ್ರಿಲ್‌-ನಿಂದ ಜೂನ್‌ವರೆಗೆ) ₨1,13,299 ಕೋಟಿ ಬೆಲೆಯ ಸರಕುಗಳು ಸಾಗಣೆಯಾಗಿವೆ.

ಕರ್ನಾಟಕ ‘ಎಸ್‌ಇಜೆಡ್‌’
ಕರ್ನಾಟಕದಲ್ಲಿ ಕಾರ್ಯಾಚರಣೆ ಯಲ್ಲಿರುವ 22 ಎಸ್‌ಇಜೆಡ್‌ಗಳಲ್ಲಿ ನೂರಕ್ಕೂ ಹೆಚ್ಚು ಘಟಕಗಳು ಉತ್ಪಾದನಾ ಕಾರ್ಯದಲ್ಲಿ  ತೊಡಗಿವೆ. ಕೈಗಾರಿಕಾ ವಾಣಿಜ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಈ ಘಟಕಗಳಲ್ಲಿ 1.50 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಲಭ್ಯವಾಗಿದೆ.

ರಾಜ್ಯದಲ್ಲಿನ ಎಸ್‌ಇಜೆಡ್‌ಗಳ ಪೈಕಿ ಗರಿಷ್ಠ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಯಾಗಿರುವುದು ಬೆಂಗಳೂರಿನ ನಾಗವಾರದಲ್ಲಿನ ಮಾನ್ಯತಾ ಪ್ರೊಮೋಟರ್‌್ಸನಲ್ಲಿ. ಇಲ್ಲಿರುವ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಉದ್ಯಮಗಳಲ್ಲಿ 2011ರ ಕೊನೆಯಲ್ಲಿ ಇದ್ದಂತೆ ಒಟ್ಟು 33,892 ಜನರಿಗೆ ಉದ್ಯೋಗ ಸಿಕ್ಕಿದೆ. ಬೆಂಗಳೂರಿನ ಕುಂದನಹಳ್ಳಿಯಲ್ಲಿಯ ಐ.ಟಿ ಘಟಕಗಳಲ್ಲಿ 21,815 ಜನರು ನೌಕರಿ ಗಿಟ್ಟಿಸಿಕೊಂಡಿದ್ದಾರೆ.

ಎಸ್‌ಇಜೆಡ್‌ ವ್ಯಾಪ್ತಿಗೆ ಸೇರಿರುವ ಇನ್ಫೊಸಿಸ್‌ನ  ಮಂಗಳೂರು ಘಟಕದಲ್ಲಿ 3736 ಮತ್ತು ಮೈಸೂರಿನ ಘಟಕದಲ್ಲಿ 1466, ಹಾಸನದ ‘ಕೆಐಎಡಿಬಿ’ಯ ಜವಳಿ ಹಾಗೂ ಆಹಾರ ಸಂಸ್ಕರಣ ಘಟಕಗಳಲ್ಲಿ 3377, ಬೆಂಗಳೂರಿನ ‘ಐಟಿಪಿಎಲ್‌’ ಘಟಕಗಳಲ್ಲಿ 6427, ಹೈಟೆಕ್‌ ಎಂಜಿನಿಯರಿಂಗ್‌ ಉಪಕರಣಗಳ ಉತ್ಪಾದನಾ ಘಟಕಗಳಿರುವ ಉಡುಪಿಯ ಸಿನ್‌ಫ್ರಾ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ ಲಿ.ನಲ್ಲಿ 2051 ಮಂದಿಗೆ ನೌಕರಿ ಲಭ್ಯವಾಗಿದೆ.

ಹಾಸನದಲ್ಲಿನ ಎಸ್‌ಇಜೆಡ್ ವ್ಯಾಪ್ತಿಯಲ್ಲಿನ ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ, ಜವಳಿ ಉದ್ಯಮ ಕಂಪೆನಿಗಳನ್ನು ಹಾಗೂ ಮಂಗಳೂರಿನಲ್ಲಿರುವ ‘ಐ.ಟಿ’ ಘಟಕಗಳನ್ನು ರಾಜ್ಯ ಸರ್ಕಾರವೇ ನಿರ್ವಹಿಸುತ್ತಿದ್ದರೆ, ಬೆಂಗಳೂರು, ಮೈಸೂರು ಮತ್ತಿತರೆಡೆಯ ಎಸ್‌ಇಜೆಡ್‌ ವ್ಯಾಪ್ತಿಯಲ್ಲಿನ ವಿವಿಧ ವಲಯಗಳಲ್ಲಿ ಖಾಸಗಿ ಸಂಸ್ಥೆಗಳು ಕಾರ್ಯನಿರತವಾಗಿವೆ.

ರಫ್ತು ಉತ್ತೇಜನ ಉದ್ದೇಶಕ್ಕಾಗಿಯೇ ರಾಜ್ಯ ಸರ್ಕಾರ ಆರಂಭಿಸಿರುವ ವಿಶ್ವೇಶ್ವರಯ್ಯ ಕೈಗಾರಿಕಾ ವಾಣಿಜ್ಯ ಕೇಂದ್ರದ (ವಿಐಟಿಸಿ) ಮಾಹಿತಿಯಂತೆ ಸರ್ಕಾರ ಔಪಚಾರಿಕವಾಗಿ ಅನುಮತಿ ನೀಡಲಾದ ಎಸ್‌ಇಜೆಡ್‌ಗಳ ಸಂಖ್ಯೆ (ಜಿಲ್ಲಾವಾರು) ಇಲ್ಲಿದೆ.

ಯಾರು ಆರಂಭಿಸಬಹುದು ?
ಸಹಕಾರಿ ಸಂಸ್ಥೆಗಳು, ವ್ಯಕ್ತಿಗಳು, ಖಾಸಗಿ ಇಲ್ಲವೇ ಸರ್ಕಾರಿ ಸಂಸ್ಥೆಗಳು, ವಿದೇಶಿ ಸಂಸ್ಥೆಗಳು ಸಹ ‘ಎಸ್‌ಇಜೆಡ್‌’ನಲ್ಲಿ ಘಟಕ ಆರಂಭಿಸಬಹುದು. ಉದ್ದೇಶಿತ ಉದ್ಯಮ ಘಟಕ, ಅದಕ್ಕೆ ಅಗತ್ಯವಾದ ಬಂಡವಾಳ, ಬಂಡವಾಳದ ಮೂಲ, ಉತ್ಪಾದನೆ ಮಾಡುವ ವಸ್ತು, ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಇರುವ ದೂರ, ಮತ್ತಿತರ ಮಾಹಿ­ತಿಯನ್ನು ಒಳಗೊಂಡ ಯೋಜನಾ ವರದಿಯನ್ನು 15 ಪ್ರತಿಗಳಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಕೈಗಾರಿಕೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ‘ಫಾರ್ಮ್–ಎ’ ಮಾದರಿಯಲ್ಲಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಶಿಫಾರಸಿನನ್ವಯ ಕೇಂದ್ರ ಸರ್ಕಾರ ಅನುಮತಿ ಪತ್ರ ನೀಡುತ್ತದೆ.

ಇದಕ್ಕೂ ಮೊದಲು ಆಯಾ ರಾಜ್ಯಗಳ ಎಸ್‌ಇಜೆಡ್‌ ಆಯುಕ್ತರು ಸ್ಥಳ ಪರಿಶೀಲನೆ ಕೈಗೊಂಡು ವರದಿ ನೀಡುತ್ತಾರೆ. ಸದ್ಯ ಕರ್ನಾಟಕ ಹಾಗೂ ಕೇರಳ ಎರಡೂ ರಾಜ್ಯಗಳಿಗೆ ಒಬ್ಬರೇ ಆಯುಕ್ತರಿದ್ದು, ಕೇರಳದ ಕೊಚ್ಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನಿಷ್ಠ ಬಂಡವಾಳದ ಪ್ರಮಾಣ ನಿಗದಿಯಾಗಿರುವುದಿಲ್ಲ. ಸಲ್ಲಿಸಲಾದ ಅರ್ಜಿಯನ್ನು ಕೇಂದ್ರದ ವಾಣಿಜ್ಯ ಕೈಗಾರಿಕಾ ಇಲಾಖೆಯ ಎಸ್‌ಇಜೆಡ್ ಮಂಡಳಿ ಪರಿಶೀಲಿಸಿ ಸೂಕ್ತ ಎನಿಸಿದಲ್ಲಿ ಅನುಮತಿ ಪತ್ರ ವಿತರಿಸುತ್ತದೆ.

ಎಸ್‌ಇಜೆಡ್‌ ಆರಂಭಕ್ಕೆ (ಬಹು ಉದ್ದೇಶಿತ ಉದ್ಯಮಗಳ ವಲಯ) ಕನಿಷ್ಠ 1000 ಹೆಕ್ಟೇರ್‌ ಜಾಗ ಅತ್ಯಗತ್ಯ. ನಿರ್ದಿಷ್ಟ ವಲಯವಾದಲ್ಲಿ ಕನಿಷ್ಠ 100 ಹೆಕ್ಟೇರ್‌ ಭೂಮಿಯಾದರೂ ಇರಬೇಕಾದ್ದು ಕಡ್ಡಾಯ.

ಘಟಕಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯೂ ಇರುತ್ತಾರೆ. ಎಸ್‌ಇಜೆಡ್‌ ನೀತಿ ನಿಯಮಗಳನ್ನು ಪಾಲಿಸುವ ಪ್ರಮಾಣಪತ್ರವನ್ನು ಅನುಮತಿ ಪಡೆದ ಘಟಕಗಳು ಆಯುಕ್ತರಿಗೆ ನೀಡಬೇಕಿದ್ದು ಕಾಲಕಾಲಕ್ಕೆ ಪ್ರಗತಿ ವರದಿಯನ್ನೂ ನೀಡಬೇಕಾಗುತ್ತದೆ.

‘ರಾಜಕೀಯ ಇಚ್ಛಾಶಕ್ತಿ ಇಲ್ಲ’

ರಾಜ್ಯದಲ್ಲಿ ಎಸ್‌ಇಜೆಡ್‌ಗಳಿಗೆ ಉಜ್ವಲ ಭವಿಷ್ಯ ಇದ್ದು, ರಫ್ತಿನಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿವೆಯಾದರೂ ಇವುಗಳ ಸಮರ್ಪಕ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇನ್ನೂ ಹಲವು ದೊಡ್ಡ ಜಿಲ್ಲೆಗಳಲ್ಲಿ ಎಸ್‌ಇಜೆಡ್‌ ವಲಯ ಮತ್ತು ಉದ್ಯಮ ಘಟಕಗಳು ಆರಂಭವಾಗಬೇಕಿದ್ದು, ಈ ಕುರಿತು ಸಂಸ್ಥೆ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹೂಡಿಕೆದಾರರು ರಾಜ್ಯದತ್ತ ಗಮನ ಹರಿಸುವಂತೆ ಮಾಡಲು ರಾಜಕೀಯ ಇಚ್ಛಾಶಕ್ತಿ ತೋರುವುದು ಅಗತ್ಯವಾಗಿದೆ.
–ಆರ್‌.ಶಿವಕುಮಾರ್‌ ,ಅಧ್ಯಕ್ಷರು, ಎಫ್‌ಕೆಸಿಸಿಐ


‘ಭೂಸ್ವಾಧೀನ ದೊಡ್ಡ ಸಮಸ್ಯೆ’
‘ರಾಜ್ಯದಲ್ಲಿ ಎಸ್‌ಇಜೆಡ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ವಾಣಿಜ್ಯ, ಕೈಗಾರಿಕೆ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ, ಅನೇಕ ಕಡೆ ಭೂಸ್ವಾಧೀನ ಪ್ರಕ್ರಿಯೆಗೆ ಸಾಕಷ್ಟು ಅಡ್ಡಿಯಾಗುತ್ತಿದೆ. ಮೇಲಾಗಿ ರಾಜ್ಯದ ಎಸ್‌ಇಜೆಡ್‌ಗಳಿಗೆ ಸಂಬಂಧಿಸಿದ ಅಭಿವೃದ್ಧಿ ಆಯುಕ್ತರು ಕೇರಳದ ಕೊಚ್ಚಿಯ ಕಚೇರಿಯಲ್ಲಿ ಇರುವುದರಿಂದ ಸುಗಮ ಆಡಳಿತಕ್ಕೂ ಇದರಿಂದ ತೊಂದರೆಯಾಗಿದೆ. ಎಸ್‌ಇಜೆಡ್‌ಗಳಿಗೆ ಅನುಮತಿ ಪತ್ರ ಪಡೆಯುವುದರಲ್ಲಿ ಸದ್ಯ ರಾಜ್ಯವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ’.
–ಶಿವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಕೇಂದ್ರ(ವಿಟಿಪಿಸಿ)


‘ಇನ್ನಷ್ಟು ಜಾಗ ಅಗತ್ಯ’
‘ಎಸ್‌ಇಜೆಡ್‌ಗಳ ವಿಷಯದಲ್ಲಿ ಸರ್ಕಾರಗಳ ನೀತಿ ಉತ್ತೇಜನಕಾರಿಯಾಗಿದ್ದು, ಸದ್ಯಕ್ಕಂತೂ ಯಾವುದೇ ಸಮಸ್ಯೆ ಇಲ್ಲ. ಆದರೆ ಸಾಕಷ್ಟು ಘಟಕಗಳಿಗೆ ಜಾಗದ ಸಮಸ್ಯೆ ಎದುರಾಗಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಹಲವು ಎಸ್‌ಇಜೆಡ್‌ಗಳಲ್ಲಿ ಸಮರ್ಪಕ ಜಾಗ ಸಿಗದ ಪರಿಣಾಮ ಉದ್ಯಮ ಸಂಸ್ಥೆಗಳಿಗೆ ದಾಸ್ತಾನು ಸಮಸ್ಯೆ ಉಂಟಾಗಿದೆ. ನಮ್ಮ ಉತ್ಪನ್ನಗಳಿಗಂತೂ ಜಾಗತಿಕವಾಗಿ ಉತ್ತಮ ಬೇಡಿಕೆ ಇದೆ’.
–ರಾಜಾರಾಂ, ಐಟಿ ಉದ್ಯಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT