ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಕಲವ್ಯ’ರಿಗೆ ಗುರುಬಲದ ಹಂಬಲ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಿಯುಸಿ ವಿದ್ಯಾರ್ಥಿಗಳ ಮತ್ತೊಂದು ಕ್ರೀಡಾ ಕೂಟ ಮುಗಿಯಿತು. ಪಿಯು ಅಥ್ಲೆಟಿಕ್‌ ಕೂಟದ ಬೆನ್ನಿಗೆ ಜೋತು ಬಿದ್ದಿರುವ ತರಾತುರಿ, ಅವ್ಯವಸ್ಥೆ, ಅವಗಣನೆ ಮುಂತಾದ ಎಲ್ಲ ನಕಾರಾತ್ಮಕ ಅಂಶಗಳು ಈ ಬಾರಿ ಕೂಡ ಮೈದಾನ ದಲ್ಲಿ ಯಥಾಪ್ರಕಾರ ಮುಂದುವರಿಯಿತು. ಇದೆಲ್ಲದರ ನಡುವೆಯೂ ಕ್ರೀಡಾಪಟುಗಳು ಸಾಮರ್ಥ್ಯ ಪ್ರದರ್ಶನದಲ್ಲಿ ಹಿಂದೆ ಬೀಳಲಿಲ್ಲ. ಟ್ರ್ಯಾಕ್‌ನಲ್ಲಿ ಮಿಂಚಿನ ಓಟ, ಫೀಲ್ಡ್‌ನಲ್ಲಿ ಮೋಹಕ ಜಿಗಿತ, ಎಸೆತಗಳಿಗೆ ಸಾಕ್ಷಿಯಾದ ಧಾರವಾಡ ವಿಶ್ವ ವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣ ಡಿ. 9,10 ಮತ್ತು 11ರಂದು ಪುಳಕಗೊಂಡಿತ್ತು.

ಪಿಯುಸಿ ಅಥ್ಲೆಟಿಕ್ ಕೂಟದಲ್ಲಿ ಖಾಸಗಿ ಮತ್ತು ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳದ್ದೇ ಪ್ರಾಬಲ್ಯ. ಈ ಬಾರಿಯೂ ಇಂಥ ಆಧಿಪತ್ಯ ಮುಂದುವರಿಯಿತು. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದರೆ ಅದರ ಹಿಂದೆ ವೈಯಕ್ತಿಕವಾದ ಅಪಾರ ಶ್ರಮ ಇರುತ್ತದೆ. ಯಾಕೆಂದರೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಎಂಬ ಕನಸು ನನಸಾಗುವವರೆಗೂ ಇವರು ಏಕಲವ್ಯರು. ಇತರ ವಿಭಾಗಗಳ ಉಪನ್ಯಾಸಕರ ಬೆಂಬಲವೇ ಇವರಿಗೆ ತರಬೇತಿ. ಸಾಧನೆ ಮಾಡಬೇಕೆಂದರೆ ಸ್ವಂತ ಪರಿಶ್ರಮ ಅನಿವಾರ್ಯ.

ಪಿಯುಸಿ ಹಂತವೆಂದರೆ ಕ್ರೀಡಾಪಟುಗಳಿಗೆ ಅತಿ ಮಹತ್ವದ್ದು. ಚಿಗುರು ಮೀಸೆ ಕುಡಿಯೊಡೆಯುವ ಕಾಲವಿದು. ಜಗವನ್ನೇ ಗೆಲ್ಲುವ ಹುಮ್ಮಸ್ಸು ಅವ ರಲ್ಲಿರುತ್ತದೆ. ಕನಸುಗಳು ಸಾಲುಸಾಲಾಗಿ ಕಾಡು ತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಸರಿಯಾದ ತರಬೇತಿ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡ ಬೇಕೆಂಬುದು ಅನೇಕ ವರ್ಷಗಳ ಬೇಡಿಕೆ. ಪ್ರತಿ ವರ್ಷ ಅಥ್ಲೆಟಿಕ್‌ ಕೂಟ ನಡೆಯುವಾಗ ಈ ವಿಷಯ ಚರ್ಚೆಗೆ ಬರುತ್ತದೆ. ನಂತರ ಮರೆತು ಹೋಗುತ್ತದೆ.

ದೈಹಿಕ ಶಿಕ್ಷಕರು ಇಲ್ಲದ ಕಾರಣದಿಂದಲೇ ಪಿಯುಸಿ ಅಥ್ಲೆಟಿಕ್‌ ಕೂಟಗಳು ಸಮರ್ಪಕವಾಗಿ ನಡೆಯುವುದಿಲ್ಲ. ಎಲ್ಲೇ ಕೂಟ ನಡೆದರೂ ಸ್ಥಳೀಯ ಕ್ರೀಡಾ ಪ್ರೋತ್ಸಾಹಕರು, ಪದವಿ ಕಾಲೇಜುಗಳ ದೈಹಿಕ ಶಿಕ್ಷಣ ವಿಭಾಗಗಳ ನಿರ್ದೇಶಕರು ಮತ್ತು ಖಾಸಗಿ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಇದರ ಉಸ್ತುವಾರಿ ವಹಿಸಿ ಕೊಳ್ಳಬೇಕಾಗುತ್ತದೆ. ಕ್ರೀಡಾಕೂಟಗಳದ್ದೂ ಇದೇ ಸ್ಥಿತಿ. ಖಾಸಗಿ ಕಾಲೇಜುಗಳ ಆತಿಥ್ಯದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಎಷ್ಟೋ ಬಾರಿ ಪ್ರತಿಭೆ ಒರೆಗೆ ಹಚ್ಚುವುದಕ್ಕಿಂತ ಗೆದ್ದ ತಂಡಗಳ ಪಟ್ಟಿಯೊಂದನ್ನು ಸಿದ್ಧಗೊಳಿಸಿ ಕೊಡುವುದಕ್ಕಷ್ಟೇ ಸಂಘಟಕರ ಕಾಳಜಿ ಸೀಮಿತವಾಗಿರುತ್ತದೆ. ಹೀಗಾಗಿ ಕನಿಷ್ಠ ಮೂರು ಸೆಟ್‌ಗಳ ಗೇಮ್‌ಗಳೆಲ್ಲವೂ ಒಂದೇ ಸೆಟ್‌ಗೆ ನಿಗದಿಯಾಗಿರುತ್ತವೆ!

ಒಂದು ದಶಕದ ಹಿಂದೆ ಧಾರವಾಡದಲ್ಲಿ ನಡೆದ ಪಿಯುಸಿ ಕ್ರೀಡಾಕೂಟದಲ್ಲಿ ಸ್ಥಳೀಯರು ಸರ್ವ ರೀತಿಯ ನೆರವು ನೀಡಿದ್ದರು. ಈ ಬಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘದವರು ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಕೂಟ ವನ್ನು ನಡೆಸಿಕೊಟ್ಟಿದ್ದರು. ಆದರೆ ಕಳೆದ ಬಾರಿಯಂತೆ ಈ ಬಾರಿ ದಾನಿಗಳನ್ನು ಹುಡುಕಲು ಸಮಯ ಸಾಲದ್ದರಿಂದ ಸಮಗ್ರ ಪ್ರಶಸ್ತಿ, ವೈಯಕ್ತಿಕ ಪ್ರಶಸ್ತಿ ಇತ್ಯಾದಿ ಯಾವುದೂ ನೀಡಲು ಸಾಧ್ಯವಾಗ ಲಿಲ್ಲ.

ಗೆದ್ದ ಪದಕಗಳ ಲೆಕ್ಕ ಹಾಕಿ ಚಾಂಪಿಯನ್ ಆದವರು ಕೇಕೆ ಹಾಕುತ್ತ ತಮ್ಮ ಊರಿನ ದಾರಿ ಹಿಡಿದರೆ ವೈಯಕ್ತಿಕವಾಗಿ ಮಿಂಚು ಹರಿಸಿದವ ರೆಲ್ಲರೂ ಪರಸ್ಪರ ಬೆನ್ನು ತಟ್ಟುತ್ತ ತೃಪ್ತಿಪಟ್ಟು ಕೊಂಡರು. ಅಪ್ರತಿಮ ಸಾಧನೆ ತೋರಿದವರಂತೂ ಅದನ್ನು ಅಳೆಯುವ ಮಾನದಂಡವಿಲ್ಲದ ಕಾರಣ ಕೇವಲ ಚಿನ್ನದ ಪದಕ ಕೊರಳಿಗೆ ಹಾಕಿಕೊಂಡು ಹೋಗಬೇಕಾಯಿತು. ಯಾಕೆಂದರೆ ಪಿಯುಸಿ ಇಲಾಖೆಯಲ್ಲಿ ಇನ್ನೂ ‘ದಾಖಲೆ’ಯ ಪತ್ರಗಳನ್ನು ತೆಗೆದಿಡುವಂಥ ಸಂಪ್ರದಾಯ ಬೆಳೆದು ಬಂದಿಲ್ಲ.

‘ಪಿಯುಸಿಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕೆಂಬ ಬೇಡಿಕೆಯನ್ನು ಅನೇಕ ವರ್ಷ ಗಳಿಂದ ಸಂಬಂಧಪಟ್ಟವರ ಮುಂದೆ ಇರಿಸುತ್ತಿದ್ದೇವೆ. ಆದರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುವವರೆಗೂ ಸರ್ಕಾರಿ ಕಾಲೇಜು ಗಳಲ್ಲಿನ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಿಲ್ಲ. ಎಲ್ಲ ಕಡೆಗಳಲ್ಲಿ ಒಂದೇ ಬಾರಿ ಮಾಡಲು ಸಾಧ್ಯವಿಲ್ಲದಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವ ಕಾಲೇಜುಗಳಲ್ಲಾದರೂ ದೈಹಿಕ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಮುಂದಾಗಬೇಕು’ ಎನ್ನುತ್ತಾರೆ ಕಾಲೇಜು ದೈಹಿಕ ಶಿಕ್ಷಕರ ಸಂಘದ ಧಾರವಾಡ ಘಟಕದ ಅಧ್ಯಕ್ಷ ಹಾಗೂ ಅಥ್ಲೆಟಿಕ್ ಕೋಚ್‌ ಬಿ.ಡಿ.ಕುರಕುರಿ.

ವೈಯಕ್ತಿಕ ಆಸಕ್ತಿಯ ಆಸರೆ:
ಪಿಯುಸಿ ಹಂತದ ಕ್ರೀಡಾಪಟುಗಳಿಗೆ ಸದ್ಯ ಆಸರೆಯಾಗಿರುವುದು ವೈಯಕ್ತಿಕವಾಗಿ ಕ್ರೀಡೆಯಲ್ಲಿ ಆಸಕ್ತಿ ಇರುವ  ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿ ಕಾರದ ಕ್ರೀಡಾನಿಲಯಗಳು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮೋಹನ ಅಳ್ವಾ ಅವರಂಥವರು ಇಡೀ ಜಿಲ್ಲೆ ಯನ್ನು ‘ಚಾಂಪಿಯನ್‌’ ಆಗಿ ಬೆಳಗಿಸುವ ತಾಕತ್ತು ಹೊಂದಿದ್ದಾರೆ. ಧಾರವಾಡದಲ್ಲಿ ನಡೆದ ಕೂಟದ ಮೂರೂ ದಿನವೂ ಪಾರಮ್ಯ ಮೆರೆದು 23 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ತಂಡದ ಬಹುತೇಕ ಆಟಗಾರರು ಆಳ್ವಾಸ್‌ ಕಾಲೇಜಿನ ಪ್ರತಿನಿಧಿಗಳಾಗಿದ್ದರು.

ಸರ್ಕಾರಿ ಕಾಲೇಜಿನಲ್ಲಿದ್ದು ಸಾಯ್‌ ಮತ್ತು ಡಿವೈಎಸ್‌ಎಸ್‌ ಕ್ರೀಡಾನಿಲಯಗಳಲ್ಲಿ ತರಬೇತಿ ಪಡೆಯುತ್ತಿರುವವರು ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತಾರೆ. ಗ್ರಾಮೀಣ ಪ್ರತಿಭೆಗಳಿಗೆ ಸದ್ಯ ಉಳಿದಿರುವುದು ಇದೊಂದೇ ದಾರಿ. ಧಾರವಾಡದ ಕೂಟದಲ್ಲಿ 100 ಮತ್ತು 200 ಮೀಟರ್ಸ್‌ ಓಟದಲ್ಲಿ ‘ರಾಜ’ನಾಗಿ ಮೆರೆದ ವಿಜಾಪುರ ಮೂಲದ ಹಳ್ಳಿ ಹುಡುಗ ಪವನ್‌ ಕುಮಾರ್‌ ಎಸ್‌.ಕೆ (ಧಾರವಾಡ) ಇದಕ್ಕೊಂದು ಉತ್ತಮ ಉದಾಹರಣೆ.

ಲಾಬಿಗಳ ಕಾಟ?
ಪಿಯುಸಿ ವಿಭಾಗದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ತಡೆಯುವುದಕ್ಕೆ ದೊಡ್ಡ ಲಾಬಿ ಕೆಲಸ ಮಾಡುತ್ತಿದೆ ಎಂಬುದು ಕಾಲೇಜು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿರು ವವರ ಅಭಿಪ್ರಾಯ. ಮೂಲಗಳ ಪ್ರಕಾರ ಸರ್ಕಾರಿ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆಂದು ಪಡೆಯುವ ಶುಲ್ಕದ ಒಂದಂಶವನ್ನು ನುಂಗುವ ವರು ಮತ್ತು ದೈಹಿಕ ಶಿಕ್ಷಕರು ಬಂದರೆ ತಮ್ಮ ‘ಇಮೇಜು’ ಹಾಳಾಗುತ್ತದೆ ಎಂಬ ಅಲ್ಪತನದವರು ಈ ಲಾಬಿಯ ಪ್ರಮುಖ ಕೊಂಡಿಗಳು.

ಇವರನ್ನು ಮಟ್ಟ ಹಾಕಿ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಂಡರೆ ಪಿಯುಸಿ ಕ್ರೀಡಾಕೂಟಗಳ ಛಾಯೆ ಬದಲಾಗಲಿದೆ, ಯುವ ಕ್ರೀಡಾಪಟುಗಳ ದೊಡ್ಡ ಪಡೆ ಬೆಳೆದು ನಿಲ್ಲಲಿದೆ, ದೇಶದ ಕ್ರೀಡೆಗೆ ಕರ್ನಾಟಕದಿಂದ ಉತ್ತಮ ಕೊಡುಗೆಗಳನ್ನು ನೀಡಲು ಸಾಧ್ಯವಾಗಲಿದೆ ಎಂಬುದು ಬಲ್ಲವರ ಅನಿಸಿಕೆ.
–ವಿಕ್ರಂ ಕಾಂತಿಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT