ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ಜಾತಿಗೆ ಸೀಮಿತ ಅಲ್ಲ; ಬಡವರ ಸೇವಕ’

Last Updated 12 ಏಪ್ರಿಲ್ 2014, 6:43 IST
ಅಕ್ಷರ ಗಾತ್ರ

ವಿಜಾಪುರ: ‘ನಾನು ಒಂದು ಜಾತಿಗೆ ಸೀಮಿತ ಅಲ್ಲ; ಬಡವರ ಸೇವೆಗಾಗಿ ಬಂದಿದ್ದೇನೆ. ನನ್ನನ್ನು ಗೆಲ್ಲಿಸಿದರೆ ಒಬ್ಬ ಸಂಸದ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ’ ಎಂಬುದು ಜೆಡಿಎಸ್‌ ಅಭ್ಯರ್ಥಿ ಕೆ.ಶಿವರಾಂ ಅವರ ಹೇಳಿಕೆ.

ಬೆಂಗಳೂರಿನ ಬಿಡದಿ ಹತ್ತಿರದ ಹುರುಗಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿರುವ ಶಿವರಾಂ, ಬೆಂಗಳೂರಿನಲ್ಲಿ ಕೂಲಿ ಮಾಡುತ್ತ ಎಸ್‌ಎಸ್‌ಎಲ್‌ಸಿ ಪೂರೈಸಿದರು. ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ. ಕೇಂದ್ರ ಕಾರಾಗೃಹದಲ್ಲಿ ಸ್ಟೆನೋ ಗ್ರಾಫರ್‌ ಕೆಲಸ. ಆ ನಂತರ 1986ರಲ್ಲಿ ಕನ್ನಡ ವಿಷಯದಲ್ಲಿ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾದರು. ವಿಜಾಪುರದಲ್ಲಿ ಉಪ ವಿಭಾಗಾಧಿಕಾರಿ, ನಗರಸಭೆಯ ಪ್ರಭಾರಿ ಆಯುಕ್ತ, ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅವರು ಸೇವೆ ಸಲ್ಲಿಸಿದ್ದರು.

ಈಗ ಅವರು ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಾರ.

ಪ್ರಶ್ನೆ: ಕ್ಷೇತ್ರದ ಸಮಸ್ಯೆಗಳೇನು? ನಿಮ್ಮ ಆದ್ಯತೆ ಏನು?
ಸಮಸ್ಯೆ ಬಹಳಷ್ಟಿವೆ. ಏನಾದರೂ ಮಾಡಿ ಬೃಹತ್‌ ಕೈಗಾರಿಕೆ ಸ್ಥಾಪಿಸಿದರೆ ಸಾವಿರಾರು ಜನರಿಗೆ ಉದ್ಯೋಗ ದೊರಕುತ್ತದೆ. ಹೆದ್ದಾರಿ–ರೈಲು ಸಂಪರ್ಕ, ಮಾನವ ಸಂಪನ್ಮೂಲ ಇರುವುದರಿಂದ ಕೈಗಾರಿಕಾ ಅಭಿವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ಆಯ್ಕೆಯಾದರೆ ಈ ಕೆಲಸ ಮಾಡಿಯೇ ಮಾಡುತ್ತೇನೆ. ಐತಿಹಾಸಿಕ ಸ್ಮಾರಕಗಳ ಪ್ರಮುಖ ಪ್ರವಾಸಿ ತಾಣವಾಗಿರುವ ವಿಜಾಪುರವನ್ನು ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಹೆಚ್ಚು ಪ್ರವಾಸಿಗರು ಆಗಮಿಸಿದರೆ ವ್ಯಾಪಾರ–ವಹಿವಾಟು ವೃದ್ಧಿಸುತ್ತದೆ. ಆಗ ನಗರ ಸೌಂದರ್ಯೀಕರಣ ಮಾಡಲೇಬೇಕಾಗುತ್ತದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರನ್ನು ರಕ್ಷಿಸಬೇಕಾದರೆ ಸಮಗ್ರ ನೀರಾವರಿ ಮಾಡಬೇಕು. ನಾನೊಬ್ಬನೇ ಮಾಡುತ್ತೇನೆ ಎಂದಲ್ಲ. ನನಗೆ ಗೆಲ್ಲಲು ಪಕ್ಷಬೇಕು; ಗೆದ್ದ ನಂತರ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು ಎಂಬುದು ನನ್ನ ಸಿದ್ಧಾಂತ.

* ನೀವು ಹೊರಗಿನವರು, ರಾಜಕಾರಣಕ್ಕೆ ಹೊಸಬರು ಎಂಬ ಆರೋಪ ಇದೆಯಲ್ಲ?
 ನಾನು ಹೊರಗಿನವ ಅಲ್ಲ. ರಾಜಕಾರಣ ನನಗೆ ಹೊಸದಿರ ಬಹುದು. ಆದರೆ, ಜನರ ಸೇವೆ ಹೊದಲ್ಲ.

* ನೀವು ವಿಜಾಪುರ ಕ್ಷೇತ್ರವನ್ನೇ ಆಯ್ದುಕೊಂಡಿದ್ದು ಏಕೆ?
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಕ್ಷೇತ್ರಗಳು ಕೇವಲ ಐದು. ಅವುಗಳಲ್ಲಿಯೇ ನಾವು ಸ್ಪರ್ಧಿಸಬೇಕು. ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದು ನಿಜ. ಅವರು ಕೊಡಲಿಲ್ಲ. ವಿಜಾಪುರದಲ್ಲಿ ನಾನು ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಇದು ನನ್ನ ತವರು ಮನೆ ಇದ್ದಂತೆ. ನಾನು ಇಲ್ಲಿಯ ಉಪ ವಿಭಾಗಾಧಿಕಾರಿಯಾಗಿದ್ದಾಗ ನಗರಸಭೆಯ ಪ್ರಭಾರಿ ಆಯುಕ್ತನೂ ಆಗಿದ್ದೆ. ಪೊರಕೆ, ಸಣಿಕೆ–ಗುದ್ದಲಿಗಳನ್ನು ಕಾರಿನಲ್ಲಿಟ್ಟಿಕೊಂಡು ಓಡಾಡುತ್ತಿದ್ದೆ. ಬೆಳಿಗ್ಗೆ ನಾನೇ ಪೊರಕೆ ಹಿಡಿದು ಬೀದಿಯ ಕಸ ಗುಡಿಸುತ್ತಿದ್ದೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸೋಡಿಯಂ ಬೀದಿ ದೀಪಗಳನ್ನು ನಾನು ವಿಜಾಪುರದಲ್ಲಿ ಅಳವಡಿಸಿದ್ದೆ. ಇಲ್ಲಿ ಡಬಲ್‌ ರಸ್ತೆ ಮಾಡಿಸಿದ್ದೆ. ಹರಣಶಿಕಾರಿ ಜನಾಂಗದವರಿಗೆ ಕಳ್ಳಭಟ್ಟಿ ದಂಧೆ ಬಿಡಿಸಿ ಸ್ವಯಂ ಉದ್ಯೋಗ ದೊರಕಿಸಿಕೊಟ್ಟಿದ್ದೆ. ಇಲ್ಲಿ ನಮ್ಮ ಛಲವಾದಿ ಸಮಾಜದ 2.5 ಲಕ್ಷ ಮತದಾರರು ಇದ್ದಾರೆ. ಬಡವರು–ಮೇಲ್ವರ್ಗದವರು, ಲಿಂಗಾಯತರು ನೆರವು ನೀಡಿದರೆ ಗೆಲ್ಲುವುದು ಸರಳ ಎಂಬ ಕಾರಣಕ್ಕೆ ಈ ಕ್ಷೇತ್ರ ಆಯ್ದುಕೊಂಡಿದ್ದೇನೆ.

* ಈಗ ಅಧಿಕಾರದಲ್ಲಿರುವವರ ಕಾರ್ಯವೈಖರಿ ಹೇಗಿದೆ?
ಅದನ್ನು ಜನರೇ ಹೇಳಬೇಕು. ವಿಜಾಪುರ ನಗರದ ಒಳಭಾಗದಲ್ಲಿ ನೀವು ಸಂಚರಿಸಿದ್ದೀರಾ? ಒಂದಾದರು ಟಾರ್‌ ರಸ್ತೆಗಳು, ರಸ್ತೆಯ ಪಕ್ಕ ಚರಂಡಿಗಳು ಇವೆಯಾ? ಈ ನಗರದ ಬೀದಿಯ ಕಸ ಗುಡಿಸಿದವ ನಾನು. ನಗರದ ದುಸ್ಥಿತಿ ಕಂಡು ಬೇಸರವಾಗುತ್ತಿದೆ.

* ಜನಸೇವೆಗೆ ರಾಜಕೀಯ ಅಧಿಕಾರವೇ ಬೇಕೆ? ಐಎಎಸ್‌ ಅಧಿಕಾರಿಯಾಗಿ ಮಾಡದ ಕೆಲಸ ಎಂ.ಪಿ.ಯಾಗಿ ಮಾಡಲು ಸಾಧ್ಯವೇ?
ಹೌದು. ಅಧಿಕಾರ ಬೇಕೇಬೇಕು. ಅಧಿಕಾರ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಐಎಎಸ್‌ ಅಧಿಕಾರಿ ಯಾಗಿದ್ದಾಗ ಜನ ಪರ ಆಡಳಿತ ನೀಡಿದ್ದೇನೆ. ದಾವಣಗೆರೆ ಯಲ್ಲಿ ಜಿಲ್ಲಾಧಿಕಾರಿ ಆಗಿದ್ದಾಗ ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ದಿದ್ದೇನೆ.
ಜನಪ್ರತಿನಿಧಿಯಲ್ಲಿ ಇಚ್ಛಾಶಕ್ತಿ ಇದ್ದರೆ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಇನ್ನು ನಾನು ಐಎಎಸ್‌ ಅಧಿಕಾರಿಯಾಗಿ ಕಾರ್ಯ ಮಾಡಿರುವು ದರಿಂದ ಈಗ ಸೇವೆಯಲ್ಲಿರುವ ಐಎಎಸ್‌ ಅಧಿಕಾರಿಗಳೆಲ್ಲ ನನ್ನ ಕುಟುಂಬದ ಸದಸ್ಯರಂತೆ ನನಗೆ ಸಹಾಯ ಮಾಡಲಿ ದ್ದಾರೆ. ಇದು ಕ್ಷೇತ್ರದ ಕೆಲಸ ಕಾರ್ಯಗಳಿಗೆ ನೆರವಾಗಲಿದೆ. ಕೇಂದ್ರ ಸರ್ಕಾರದಲ್ಲಿ ವಾಂಬೆ ಎಂಬ ಯೋಜನೆ ಇದೆ. ನಾನು ಗೆದ್ದರೆ ಇಡೀ ಜಿಲ್ಲೆಯಲ್ಲಿ ವಸತಿ ಹೀನರಿಗೆ ಮನೆ ನಿರ್ಮಿಸಿಕೊಟ್ಟು ಕೊಳೆಗೇರಿ ಮುಕ್ತ ಜಿಲ್ಲೆ ಮಾಡುತ್ತೇನೆ.

* ನೀವು ಅಧಿಕಾರಿಯಾಗಿದ್ದಾಗ ಹಗರಣಗಳಲ್ಲಿ ಭಾಗಿಯಾಗಿದ್ದೀರಿ ಎಂದು ನಿಮ್ಮವರೇ ಆರೋಪಿಸಿದ್ದಾರಲ್ಲ?
ನನ್ನ ಬೆಳವಣಿಗೆ ಸಹಿಸದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಛಲವಾದಿ ಮಹಾಸಭಾ ಸ್ಥಾಪಿಸಿ, ಸಮಾಜ ಸಂಘಟಿಸಿದ್ದೇನೆ. ಕಾಂಗ್ರೆಸ್‌ ಪಕ್ಷಕ್ಕೆ ಛಲವಾದಿ ಸಮುದಾಯ ಮತ್ತು ಅಲ್ಪಸಂಖ್ಯಾತರೇ ಮೂಲ ಆಧಾರ. ನಾನು ಜೆಡಿಎಸ್‌ ಸೇರಿರುವುದರಿಂದ ಇಡೀ ರಾಜ್ಯದಲ್ಲಿ ನಮ್ಮ ಸಮುದಾಯ ಜೆಡಿಎಸ್‌ ಬೆಂಬಲಿಸುತ್ತಿದೆ. ಹೀಗಾಗಿ ಕಾಂಗ್ರೆಸ್ಸಿಗರಲ್ಲಿ ನಡುಕು ಹುಟ್ಟಿದೆ. ಅದಕ್ಕಾಗಿಯೇ ಛಲವಾದಿ ನಾರಾಯಣಸ್ವಾಮಿಯನ್ನು ಬಿಟ್ಟು  ಹೀಗೆ ಆರೋಪ ಮಾಡಿಸುತ್ತಿದ್ದಾರೆ. ನಾನು ಛಲವಾದಿ ಸಮಾವೇಶ ನಡೆಸಿದಾಗ 3 ಲಕ್ಷ ಜನ ಸೇರಿದ್ದರು. ಛಲವಾದಿ ಮಹಾ ಸಭಾದ ಸಂಸ್ಥಾಪಕ ತಾನೇ ಎಂದು ಹೇಳಿಕೊಳ್ಳುವ ನಾರಾಯಣಸ್ವಾಮಿಗೆ ತಾಕತ್ತಿದ್ದರೆ 10,000 ಜನರನ್ನು ಸೇರಿಸಿ ತೋರಿಲಿ.

* ಶಿವರಾಂ ಒಂದು ಜಾತಿಗಷ್ಟೇ ಸೀಮಿತವಾಗಿದ್ದಾರೆ ಎಂಬ ಆರೋಪ...
ಹಾಗೇನಿಲ್ಲ. ನಾನು ಮೊದಲು ನಮ್ಮ ಛಲವಾದಿ ಸಮುದಾಯ ಸಂಘಟಿಸಿದ್ದೇನೆ. ಬಡತನದ ಅನುಭವ ಇರುವುದರಿಂದ ಬಡವರ ಸೇವೆಯೇ ನನ್ನ ಗುರಿ. ನಾನು ಅಧಿಕಾರಿಯಾಗಿದ್ದಾಗ ಎಲ್ಲ ವರ್ಗದ ಬಡವರ ಪರ ಕೆಲಸ ಮಾಡಿ ತೋರಿಸಿದ್ದೇನೆ. ನನ್ನನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಎಲ್ಲ ವರ್ಗದವರೂ ನನಗೆ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT