ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಂಸ್ಕೃತಿ ಕಟ್ಟಿಕೊಟ್ಟ ಕಾರಂತರ ಬರಹ’

Last Updated 16 ಡಿಸೆಂಬರ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಂಸ್ಕೃತಿ ಒಂದು ಅಮೂರ್ತ ಪರಿಕಲ್ಪನೆ. ಚರಿತ್ರೆ, ಸಮಾಜ­­ಶಾಸ್ತ್ರಗಳೆರಡನ್ನೂ ಒಳ­ಗೊಂಡ  ಶಿವರಾಮ ಕಾರಂತರ ಸಾಹಿತ್ಯ ಕನ್ನಡ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ’ ಎಂದು ವಿಮರ್ಶಕ ಸಿ.ಎನ್‌.ರಾಮ­ಚಂದ್ರನ್‌ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ  ಆಯೋ­­ಜಿಸಿ-ದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃ­ತರ ಕುರಿತ ವಿಚಾರ ಸಂಕಿ­ರಣ’ದಲ್ಲಿ ‘ಶಿವರಾಮ ಕಾರಂತರ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ’ ಕುರಿತು ಅವರು ಮಾತನಾಡಿದರು.

‘ನುಡಿದಂತೆ ನಡೆಯಬೇಕು, ನಡೆ­ದಂತೆ ನುಡಿಯಬೇಕು. ನಡೆ ನುಡಿಯಲ್ಲಿ ಸಾಮ್ಯತೆ ಕಂಡುಬರದಿದ್ದರೆ ಅದು ಕನ್ನ­ಡವೂ ಅಲ್ಲ, ಸಂಸ್ಕೃತಿಯೂ ಅಲ್ಲ.  ಕಾರಂ­ತರು  ಕನ್ನಡ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದರು’ ಎಂದು  ಅವರು ಹೇಳಿದರು.

‘ಕಾರಂತರ ಸೃಜನ ಲೋಕದ ವೈವಿಧ್ಯ’ ಕುರಿತು ಮಾತನಾಡಿದ ವಿಮ­ರ್ಶಕ ಟಿ.ಪಿ.ಅಶೋಕ, ‘ಕಾರಂತರು ಒಂದೇ ಪ್ರಕಾರದ ಬರಹಕ್ಕೆ ಕಟ್ಟುಬಿದ್ದ­ವ­ರಲ್ಲ. ಕಾದಂಬರಿ, ಕಥೆ, ನಾಟಕ, ಗೀತ ಸಾಹಿತ್ಯ, ಚಿತ್ರಕಲೆ ಎಲ್ಲದರಲ್ಲೂ ತಮ್ಮ ಸೃಜನಶೀಲತೆ ಹರಿಸಿದ್ದಾರೆ’ ಎಂದರು.

‘ಕಾರಂತರ ಬದುಕೇ ಮಹಾಕಾವ್ಯ. ಅಧ್ಯಯನ ತುಡಿತ ಹಾಗೂ ವೈಜ್ಞಾನಿಕ ಜ್ಞಾನ ಹೊಂದಿದ್ದರು. ಹಲವು ಲೇಖಕ­ರಿಗೆ ಪ್ರೇರಕ ಶಕ್ತಿಯಾದರು. ಗಾಂಧೀ­ಜಿ­ಯ ಸರಳತೆ ಮತ್ತು ರವೀಂದ್ರನಾಥ ಟ್ಯಾಗೋ­ರರ ಸೌಂದರ್ಯಪ್ರಜ್ಞೆ ಎರಡೂ ಅವರಲ್ಲಿತ್ತು’ ಎಂದರು.

‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಕಥನ ಲೋಕದ ವಿವಿಧ ನೆಲೆ­ಗಳು’ ವಿಚಾರದ ಕುರಿತು ಮಾತನಾ­ಡಿದ ಸಾಹಿತಿ ಎಸ್‌. ದಿವಾಕರ, ‘ಮಾಸ್ತಿ, ತನ್ನ ಬದುಕು ಬೇರೆಯಲ್ಲ, ಕಥೆ ಬೇರೆಯಲ್ಲ ಎಂದು ತಿಳಿದವರು. ಪುರಾಣ, ಇತಿಹಾಸಗಳಿಂದ ತಮ್ಮ ಕಥಾ ದ್ರವ್ಯಗಳನ್ನು ಆಯ್ದುಕೊಂಡರು. ಅವರ ಕಥೆಯಲ್ಲಿನ ಮಾನವೀಯ ಅನುಭವದ ವಿಶಾಲತೆ ಅಗಾಧವಾದುದು’ ಎಂದರು.

‘ಮಾಸ್ತಿಯವರ ಕಥಾ ಸಾಹಿತ್ಯದಲ್ಲಿ ಸ್ತ್ರೀಲೋಕ’ದ ಕುರಿತು ಮಾತನಾಡಿದ ಲೇಖಕಿ ಮೀನಾಕ್ಷಿ ಬಾಳಿ, ‘ಮಾಸ್ತಿ­ಯವರ ಕಥೆಗಳಲ್ಲಿ ಬರುವ ಸ್ತ್ರೀಯರೆಲ್ಲ ಸನಾತನವಾದವನ್ನು ಒಪ್ಪಿ, ಅಪ್ಪಿಕೊಂಡ­ವರು. ಅವರು ಪ್ರತಿಭಟಿಸುವುದೇ ಇಲ್ಲ’ ಎಂದು ಹೇಳಿದರು.

‘ಅವರ ಸಾಹಿತ್ಯದಲ್ಲಿ ಕಾಣುವ ಮಧ್ಯಮ ಮತ್ತು ಮೇಲ್ವರ್ಗದ ಸ್ತ್ರೀ­ಯರು ಸಂಘರ್ಷಾತೀತರು. ಕೆಳ­ವರ್ಗದ ಸ್ತ್ರೀಯರ ಸಂಕಟ, ತಲ್ಲಣಗಳನ್ನು ಕಟ್ಟಿ­ಕೊಡಲಾಗಲಿಲ್ಲ. ಅವರು ಮಡಿವಂತ ಮುಖವಾಣಿಯನ್ನೇ ಪ್ರದರ್ಶಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT