ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಕ್ಕೆ ಸಮರ್ಥ ಪ್ರಾತಿನಿಧೀಕರಣದ್ದೇ ಕೊರತೆ’

ವಿಶ್ವ -ಕನ್ನಡ ವಿಚಾರಗೋಷ್ಠಿ
Last Updated 21 ಡಿಸೆಂಬರ್ 2013, 4:41 IST
ಅಕ್ಷರ ಗಾತ್ರ

ಮೂಡುಬಿದಿರೆ: ಹೊರನಾಡಿನಲ್ಲಿ, ಗಡಿನಾಡಿನಲ್ಲಿ ಕನ್ನಡದ ಪ್ರಾತಿನಿಧೀಕರಣ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಸರ್ಕಾರ ಅಮೆರಿಕದ ಯಾವುದಾದರೂ ಒಂದು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು ಎಂಬ ಅಭಿಪ್ರಾಯಗಳು ವಿಶ್ವ-ಕನ್ನಡ ವಿಚಾರಗೋಷ್ಠಿಯಲ್ಲಿ ವ್ಯಕ್ತವಾಯಿತು.

ಶುಕ್ರವಾರ ಬೆಳಿಗ್ಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ - 2013ರ ಅಂಗವಾಗಿ ಇಲ್ಲಿನ ರತ್ನಾಕರ­ವರ್ಣಿ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ-ಕನ್ನಡ ವಿಚಾರಗೋಷ್ಠಿಯಲ್ಲಿ ಮೊದಲಿಗೆ ಅಮೆರಿಕದ ಡಾ.ನಾಗ ಐತಾಳ ಅವರು ಮಾತನಾಡಿದರು.
 

ಮಾತನಾಡದ ಸಂಸದರು...
ಭಾರತದ ವಿವಿಧ ಭಾಷೆಗಳ ಬಗ್ಗೆ ಬಹಳಷ್ಟು ಸಂಸ­ದರು ಸಂಸತ್ತಿನಲ್ಲಿ ಮಾತನಾಡಿದರು. ಆದರೆ, ದುರ­ದೃಷ್ಟವಶಾತ್ ತುಳು ಭಾಷೆ ಬಗ್ಗೆ ಕನ್ನಡ ನಾಡಿ­ನ ಯಾವೊಬ್ಬ ಸಂಸದರೂ ಮಾತ­ನಾಡಲಿಲ್ಲ. ಹೀಗಾಗಿ, ತುಳು ಭಾಷೆಯನ್ನು ಸಂವಿ­ಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ವಿಚಾರ ನನೆಗುದಿಗೆ ಬಿದ್ದಿದೆ ಎಂದು ಡಾ.­ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

‘ಅಮೆರಿಕದಲ್ಲಿ ಸದ್ಯ ಸಾಕಷ್ಟು ಕನ್ನಡಪರ ಸಂಘ­ಟನೆ­ಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಪಂಪ, ಕನ್ನಡ ಸಾಹಿತ್ಯ ರಂಗ ಮೊದಲಾದವು ಪ್ರಮುಖ­-ವಾಗಿವೆ. ಇವುಗಳು ವಾರ್ಷಿಕ ಸಂಚಿಕೆಗಳನ್ನು, ಪುಸ್ತಕಗಳನ್ನೂ ಕನ್ನಡ ಭಾಷೆಯಲ್ಲಿ ಪ್ರಕಟಿಸಿ ಹೊರದೇಶದಲ್ಲಿ ಕನ್ನಡ ಉಳಿಯಲು ಶ್ರಮಿಸುತ್ತಿವೆ’ ಎಂದು ಹೇಳಿದರು.

‘ಕೇವಲ ಸಂಘಟನೆಗಳು ಮಾಡುವ ಕೆಲಸ ಸಾಕಾ­ಗು­ವುದಿಲ್ಲ. ಸರ್ಕಾರ ಅಮೆರಿಕದ ಯಾವುದಾದರೂ ಒಂದು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವುದರತ್ತ ಕಾರ್ಯತತ್ಪರವಾ­ಗಬೇಕು’ ಎಂದು ಅವರು ಆಗ್ರಹಿಸಿದರು.

ಹೊರನಾಡಿನಲ್ಲಿ ಕನ್ನಡ ಕುರಿತು ಮಾತನ್ನು ಆರಂಭಿಸಿದ ನವದೆಹಲಿಯ ಡಾ.ಪುರುಷೋತ್ತಮ ಬಿಳಿಮಲೆ ಅವರು, ಹೊರ ನಾಡಿನಲ್ಲಿ ಕನ್ನಡಗರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

2011–-12 ಜನಗಣತಿಯಂತೆ ನವದೆಹಲಿಯಲ್ಲಿ ತಮಿಳರ ಸಂಖ್ಯೆ 1,55,000 ಇದ್ದರೆ, ತೆಲುಗು ಭಾಷಿಕರ ಸಂಖ್ಯೆ 1,20,000 ಇದೆ. ಕನ್ನಡಿಗರ ಸಂಖ್ಯೆ ಬರೇ 9 ಸಾವಿರ ಇದೆ. ಇದು ಕನ್ನಡ ನಾಡಿನ ಜನ ಇನ್ನೂ ತಮ್ಮ ಮಕ್ಕಳನ್ನು ಹೊರನಾಡಿಗೆ ಕಳುಹಿಸಲು ಆಸಕ್ತಿ ತೋರದಿರುವುದೇ ಕಾರಣ. ಇದು ಈ ಸಂಸ್ಕೃತಿಯ ಗುಣ’ ಎಂದು ವಿಶ್ಲೇಷಣೆ ಮಾಡಿದರು.

‘ಹೊರನಾಡಿನಿಂದ ಇಲ್ಲಿಗೆ ಬಂದವರೇ ಹೆಚ್ಚು. ಭದ್ರಭಾಹು ಮುನಿ ಉತ್ತರ ಭಾರತದಲ್ಲಿ ಭೀಕರ ಕ್ಷಾಮ ಬಂದಾಗ ಕ್ರಿಸ್ತಪೂರ್ವದಲ್ಲೇ ತಂಜಾವೂರಿ­ನಂತಹ ಫಲವತ್ತಾದ ನಾಡನ್ನು ಬಿಟ್ಟು ಶ್ರವಣ­ಬೆಳಗೊಳದಲ್ಲಿ ನೆಲೆಸಿದರು. ಬೌದ್ಧರು, ಮುಸ್ಲಿ­ಮರು, ಕ್ರೈಸ್ತ ಮಿಷನರಿಗಳು ಹೀಗೆ ಹೊರನಾಡಿನಿಂದ ಬಂದವರೇ ಹೆಚ್ಚು. ಇಲ್ಲಿಂದ ಹೊರಗೆ ಹೋದವರು ಕಡಿಮೆ’ ಎಂದು ತಿಳಿಸಿದರು.

“ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ­ಲ್ಲಿರುವ ಕನ್ನಡ ಪೀಠಕ್ಕೆ ಇನ್ನೂ ಒಬ್ಬ ಪ್ರಾಧ್ಯಾಪ­ಕರನ್ನು ನೇಮಿಸಲು ಆಗಿಲ್ಲ. ಇಲ್ಲಿ ಇಷ್ಟೊಂದು ವಿಶ್ವವಿದ್ಯಾನಿಲಯಗಳಿದ್ದರೂ, ಒಬ್ಬರೇ ಒಬ್ಬರನ್ನು ಅಲ್ಲಿಗೆ ನೇಮಿಸಲು ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ.

ಅದೇ ಉತ್ತರ ಭಾರತದ 6 ವಿಶ್ವವಿದ್ಯಾನಿಲಯದಲ್ಲಿ ತಮಿಳು ಅಧ್ಯಯನ ಪೀಠಗಳಿವೆ. ಮುಂಬೈನಲ್ಲಿ 47 ಕನ್ನಡ ಶಾಲೆಗಳಿದ್ದವು, ಆದರೆ, ಇಂದು ಬರೇ ಐದಾರು ಶಾಲೆಗಳು ಮಾತ್ರ ಇವೆ. ತಮಿಳುನಾಡಿನ 8 ಜನ ಸಾಹಿತಿಗಳ ಹೆಸರು ದೆಹಲಿಯ ವಿವಿಧ ರಸ್ತೆಗಳಿಗೆ ಇಡಲಾಗಿದೆ. ಆದರೆ, ಕನ್ನಡದ ಒಬ್ಬ ಸಾಹಿತಿಯ ಹೆಸರನ್ನೂ ಇಡಲಾಗಿಲ್ಲ. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರಿಂದ ತಮಿಳಿಗೆ 48 ಕೋಟಿ ಸಿಕ್ಕರೆ, ಕನ್ನಡಕ್ಕೆ ದಕ್ಕಿದ್ದು ಬರೇ 5 ಕೋಟಿ­ಯಷ್ಟೆ. ಇದಕ್ಕೆ ಕನ್ನಡದ ಸಮರ್ಥ ಪ್ರಾತಿನೀಧಿಕರಣದ ಕೊರತೆಯೇ ಕಾರಣ’ ಎಂದು ವಿಶ್ಲೇಷಿಸಿದರು.

ಗಡಿನಾಡಿನಲ್ಲಿ ಕನ್ನಡ ಕುರಿತು ಮಾತನಾಡಿದ ಬೆಳಗಾವಿಯಡಾ.ಬಸವರಾಜ ಜಗಜಂಪಿ, “ಬೆಳಗಾವಿಯಲ್ಲಿ ಮರಾಠಿಯ ಬೆಳವಣಿಗೆಗೆ ಮಹಾರಾಷ್ಟ್ರ ಸರ್ಕಾರ 5 ಕೋಟಿ ನೀಡಿ ಕೆಲಸ ಮಾಡುತ್ತಿದೆ. ಆದರೆ, ಕನ್ನಡ ಕಳೆಗುಂದುತ್ತಿದೆ.’ ಎಂದು ಬೇಸರ ವ್ಯಕ್ತಪಡಿಸಿದರು.
‘ಕರ್ನಾಟಕವು 5 ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಎಲ್ಲ ಗಡಿ ಪ್ರದೇಶಗಳಲ್ಲೂ ಕನ್ನಡಕ್ಕೆ ಕಷ್ಟದ ಸ್ಥಿತಿ ಇದೆ. ಇದಕ್ಕಾಗಿ ಗಡಿಯಲ್ಲಿ ಕನ್ನಡ ಅಭಿವೃದ್ಧಿ ಕೆಲಸ ಮಾಡಲು ಸಂಪುಟ ದರ್ಜೆ ಸಚಿವರನ್ನು ಸರ್ಕಾರ ನೇಮಿಸಬೇಕು. ಇದಕ್ಕೆ ಪ್ರಬಲ ಇಚ್ಛಾಶಕ್ತಿಯ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಕನ್ನಡ ಪುಸ್ತಕಗಳನ್ನು ಗಡಿನಾಡಿನಲ್ಲಿರುವ ಕನ್ನಡಿಗರು ಮನೆಯಲ್ಲಿಡಬೇಕು. ಕನ್ನಡದಲ್ಲೇ ಮಾತ­ನಾ­ಡಬೇಕು. ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು. ರಾಜ್ಯೋತ್ಸವಗಳು ಇಲ್ಲಿ ನಿತ್ಯೋತ್ಸವಗಳಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಒಟ್ಟಾರೆ, ಗಡಿನಾಡ ಕನ್ನಡಿಗರ ಬದುಕನ್ನು ಕನ್ನಡದಿಂದಲೇ ಕಟ್ಟುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT