ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಬ್ಬಿಗೆ ₨ 2,500 ನೀಡಲು ಸಾಧ್ಯವಿಲ್ಲ: ಜೈಲಿಗೆ ಹೋಗಲು ಸಿದ್ಧ’

Last Updated 2 ಡಿಸೆಂಬರ್ 2013, 8:40 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರ ಕಬ್ಬಿಗೆ ನಿಗದಿಗೊಳಿಸಿದ ಬೆಲೆ ನೀಡಿದರೆ ಕಾರ್ಖಾನೆ ಮುಚ್ಚಬೇಕಾ­ಗುತ್ತದೆ.  ಹೀಗಾಗಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾ­ರವೇ ನಡೆಸಲಿ. ಕಾನೂನು ಕ್ರಮ ಜರುಗಿಸಿದರೆ ರೈತರಿಗೆ ಒಳ್ಳೆಯ ದರ ನೀಡಲಾಗುತ್ತದೆ ಎಂದಾದರೆ ನಾನು ಜೈಲಿಗೆ ಹೋಗಲು ಸಿದ್ಧ’ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿದರು.

‘ಮುಂಬರುವ ಲೋಕಸಭೆ ಚುನಾವಣೆ­ಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬಿಗೆ ₨ 2,500 ಬೆಲೆ ನೀಡದೇ ಇರುವ ಕಾರ್ಖಾನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ರೈತರ ಮತ್ತು ಕಾರ್ಖಾನೆಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ರೈತರಿಗೆ ಕನಿಷ್ಠ ₨ 3,000 ದರ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರಕ್ಕೆ ಪ್ರತಿ ಟನ್‌ ಕಬ್ಬಿನಿಂದ ಅಬಕಾರಿ ತೆರಿಗೆ ರೂಪದಲ್ಲಿ ₨ 4,500 ಆದಾಯ ಬರುತ್ತಿದೆ. ಹೀಗಾಗಿ ಸರ್ಕಾ­ರವು ₨ 1,000 ಬೆಂಬಲ ಬೆಲೆಯನ್ನು ರೈತರಿಗೆ ಪಾವತಿಸುವ ಮೂಲಕ ಸಮಸ್ಯೆ ಬಗೆ ಹರಿಸಲು ಮುಂದಾಗ­ಬೇಕು’ ಎಂದು  ಒತ್ತಾಯಿಸಿದರು.

‘ನಮ್ಮ ಆಡಳಿತದಲ್ಲಿರುವ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ವಿಶ್ವರಾಜ್‌ ಶುಗರ್‍ಸ್ (ಖಾಸಗಿ) ಅನ್ನು ಮುಖ್ಯಮಂತ್ರಿ-­ಗಳು ಸರ್ಕಾರದ ವಶಕ್ಕೆ ಪಡೆದು­ಕೊಂಡು ಆಡಳಿತ ನಡೆಸಲಿ. ರೈತರು ₨ 3,500 ಬೆಲೆ ನೀಡುವಂತೆ ಕೇಳುತ್ತಿದ್ದಾರೆ. ಸಿದ್ದರಾ­ಮಯ್ಯ ಎಷ್ಟು ಹಣ ಕೊಡುತ್ತಾರೆ ನೋಡೋಣ’ ಎಂದು ಸವಾಲು ಹಾಕಿದರು.

‘ರಂಗರಾಜನ್‌ ವರದಿಯಂತೆ ಸಕ್ಕರೆ ಮಾರುಕಟ್ಟೆಯನ್ನು ಮುಕ್ತಗೊಳಿಸಿದ್ದರಿಂದ ಸಕ್ಕರೆ ಬೆಲೆ ಕುಸಿದಿದೆ. ಕಳೆದ ವರ್ಷದ 80 ಲಕ್ಷ ಟನ್‌ ಸಕ್ಕರೆ ದಾಸ್ತಾನು ಇದೆ. ಇದರ ನಡುವೆಯೇ 20 ಲಕ್ಷ ಟನ್‌ ಆಮದು ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನ ಹಂಗಾ­ಮಿನ ಸಕ್ಕರೆಯೂ ಮಾರುಕಟ್ಟೆಗೆ ಬಂದರೆ ಸಕ್ಕರೆ ದರ ₨ 20ಕ್ಕೆ ಕುಸಿದರೂ ಆಶ್ಚರ್ಯವಿಲ್ಲ. ಇದು ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಕೃಷಿ ಸಚಿವ ಶರದ್‌ ಪವಾರ್‌ಗೆ ತಿಳಿಯುವುದಿಲ್ಲವೇ?’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರವು  ₨ 1,931 ನ್ಯಾಯ­ಬದ್ಧ ಲಾಭದಾಯಕ ಬೆಲೆ (ಎಫ್‌ಆರ್‌ಪಿ)  ನಿಗದಿಗೊಳಿಸಿದೆ. ಆದರೆ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ತಮ್ಮದೇ ಲೆಕ್ಕಪತ್ರ ಸಿದ್ಧಪಡಿಸಿ ₨ 2,500 ದರ ನಿಗದಿಗೊಳಿಸಿದ್ದಾರೆ.

ಸರ್ಕಾರವು ಕಬ್ಬು ಬೆಳೆಗಾರರ ಕಣ್ಣೊರೆಸು­ವಂತೆ ನಾಟಕ ಮಾಡುವುದನ್ನು ಬಿಡಬೇಕು. ಕೃಷಿ ಹಾಗೂ ಆರ್ಥಿಕ ತಜ್ಞರ ಸಲಹೆ ಪಡೆದು ಕಾರ್ಖಾನೆ ಎಷ್ಟು ದರ ನೀಡಲು ಸಾಧ್ಯ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT