ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದರ ಪ್ರೋತ್ಸಾಹಕ್ಕೆ ಸದಾ ಸಿದ್ಧ’

Last Updated 10 ಡಿಸೆಂಬರ್ 2013, 4:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಯುವ ಚಿತ್ರಕಲಾ ಕಲಾವಿದರ ಪ್ರೋತ್ಸಾಹಕ್ಕೆ ಮೂರು ಸಾವಿರ ಮಠದ ವಿದ್ಯಾವರ್ಧಕ ಸಂಘ ಹಾಗೂ ವಿಜಯ ಮಹಾಂತೇಶ ಲಲಿತ ಕಲಾ ಕಾಲೇಜು ಸದಾ ಸಿದ್ಧವಾಗಿರು­ತ್ತದೆ. ಎಲ್ಲದಕ್ಕೂ ನಾವು ಸರ್ಕಾರವನ್ನು ನೆಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ. ಯುವ ಕಲಾವಿದರಿಗೆ ಆರ್ಥಿಕ ಸಹಾಯ ನೀಡಲು ನಾವು ಸಶಕ್ತರಾಗಿ­ದ್ದೇವೆ’ ಎಂದು ಮೂರು ಸಾವಿರ ಮಠದ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಅರವಿಂದ ಕುಬಸದ ಘೋಷಿಸಿದರು.

‘ಧಾರವಾಡ ಉತ್ಸವ–13’ ಅಂಗವಾಗಿ ನಗರದ ವಿಜಯ ಮಹಾಂ­ತೇಶ ಲಲಿತಕಲಾ ಕಾಲೇಜು ಎದುರಿನ ಕಾರ್ಪೋರೇಶನ್‌ ಗಾರ್ಡನ್‌ನಲ್ಲಿ ಮೂರು ದಿನ ನಡೆಯಲಿರುವ ಯುವ ಕಲಾವಿದರ ಚಿತ್ರಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಸೋಮವಾರ ಮಾತ­ನಾಡಿದ ಅವರು, ‘ಹಂಪಿ ಉತ್ಸವ, ಮೈಸೂರು ದಸರಾ ಉತ್ಸವಕ್ಕೆ ಸರ್ಕಾರ ಕೋಟಿಗಟ್ಟಲೇ ದುಡ್ಡು ನೀಡುತ್ತದೆ. ಧಾರವಾಡ ಜಿಲ್ಲಾ ಉತ್ಸವಕ್ಕೆ ದುಡ್ಡು ನೀಡುವುದಿಲ್ಲ. ಆದರೆ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರು ಹಾಕಲೇಬೇಕು. ಉತ್ತರ ಕರ್ನಾಟಕ ಎಂದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತದೆ’ ಎಂದು ಅವರು ಆರೋಪಿಸಿದರು.

ಮೂರುಸಾವಿರ ಮಠದ ವಿದ್ಯಾವ­ರ್ಧಕ ಸಂಘದ ಗೌರವ ಕಾರ್ಯದರ್ಶಿ ಹನುಮಂತ ಶಿಗ್ಗಾಂವ ಮಾತನಾಡಿ ‘ ಯುವ ಚಿತ್ರಕಲಾವಿದರು ಕಾಟಾ­ಚಾರಕ್ಕೆ, ಸನ್ಮಾನ ಪತ್ರಕ್ಕಾಗಿ ಮಾತ್ರ ಶಿಬಿರದಲ್ಲಿ ಭಾಗವಹಿಸದೆ ತಮ್ಮ ಕಲೆಯ ಪ್ರದರ್ಶನ ಮಾಡಿ, ಶಿಬಿರವನ್ನು ಸದುಪಯೋಗ­ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಂಪಿಯ ಕನ್ನಡ ವಿವಿ ಸಿಂಡಿಕೇಟ್‌ ಸದಸ್ಯರಾದ ಸುಭಾಷ್‌ ಸಿಂಗ್‌ ಜಮಾ­ದಾರ, ‘ದೇಶದ ಸಂಸ್ಕೃತಿ, ಇತಿಹಾಸವನ್ನು ಯುವ ಕಲಾವಿದರು ಮುಂದೆ ತೆಗೆದು­ಕೊಂಡು ಹೋಗಬೇಕು. ಇಂತಹ ಉತ್ಸವ­ಗಳು ಕಲಾವಿದರಿಗೆ ಉತ್ತಮ ವೇದಿಕೆ. ಹೊಸದನ್ನು ಕಲಿಯಿರಿ, ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದರು.

ಸ್ಥಳದಲ್ಲೇ ಚಿತ್ರ ಬಿಡಿಸುವ ಮೂಲಕ, ಹಿರಿಯ ಕಲಾವಿದ ಎಂ.ಸಿ. ಚಟ್ಟಿ ಶಿಬಿರ ಉದ್ಘಾಟಿಸಿದರು. ಮನೋಜ್‌ ಹಾನಗಲ್‌, ಬಿ.ವೈ. ನಾಗನಗೌಡ್ರ, ಡಾ. ಶಂಕರ ಕುಂದ­ಗೋಳ, ಆರ್‌.ಬಿ. ಗರಗ, ಎಂ.ಜಿ. ಬಂಗ್ಲಿವಾಲೆ ಮತ್ತಿತರರು ಉಪಸ್ಥಿತರಿ­ದ್ದರು. ಶಿಬಿರದಲ್ಲಿ ಹುಬ್ಬಳ್ಳಿ–ಧಾರವಾಡದ 35 ಯುವ ಕಲಾವಿದರು ಪಾಲ್ಗೊಂಡಿದ್ದಾರೆ. ಇದೇ 11ರವರೆಗೆ ಶಿಬಿರ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT