ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿಕೆ ಹಿಂಸಾತ್ಮಕ ಪ್ರಕ್ರಿಯೆ ಆಗದಿರಲಿ’

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲಿಕೆಯೆಂಬುದು ಹಿಂಸಾತ್ಮಕ  ಪ್ರಕ್ರಿಯೆಯಾಗದೇ ಶೈಕ್ಷಣಿಕ ಅನುಭವ­ವನ್ನು ನೀಡುವ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು’ ಎಂದು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕ ಎಚ್.ಎಸ್ ರಾಮರಾವ್‌  ಅಭಿಪ್ರಾಯಪಟ್ಟರು.

ಶ್ರುತ್  ಮತ್ತು ಸ್ಮಿತ್  ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಧ್ಯಾಪನ 2013’ ವಿಚಾರ ಸಂಕಿರಣ­ದಲ್ಲಿ ‘ಶೈಕ್ಷಣಿಕ  ಉತ್ಕೃಷ್ಟತೆಯ ತಾಣ­ವಾಗಿ ಶಾಲೆಗಳು’ ಕುರಿತು ಉಪನ್ಯಾಸ ನೀಡಿದರು.

‘ಮಗುವಿನ ಒಟ್ಟು ಕಲಿಕಾ ಅವಧಿ­ಯಲ್ಲಿ  ಕೇವಲ ಭಾಷೆಗಳನ್ನೇ ಕಲಿಸ­ಲಾಗು­­ತ್ತಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಸೇರಿದಂತೆ    ಕಲಿಸುತ್ತಿರುವ ಭಾಷೆ­­ಗಳ ಸಂಖ್ಯೆ ನಾಲ್ಕಕ್ಕೂ ಮೀರಿದೆ. ಇದರಿಂದ ವಿಜ್ಞಾನ ಹಾಗೂ ಇತರೆ ವಿಷಯಗಳ  ಬಗ್ಗೆ ಮಗುವಿಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಭಾಷೆಯಂತೆ, ಗಣಿತಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರದಂತಹ ವಿಷಯ­­ಗಳು ಕೂಡ  ಮುಖ್ಯ ಎಂಬ ಅಂಶವನ್ನು  ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇದರಿಂದ ಮಗು ತನ್ನ  ವಿದ್ಯಾರ್ಥಿ ಜೀವನದ ತುಂಬಾ ಬರೀ    ಭಾಷೆಗಳನ್ನೇ ಕಲಿಯುತ್ತದೆ’ ಎಂದು ಹೇಳಿದರು.

ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಿಕ್ಷಕರೊಬ್ಬರು, ‘ಭಾಷೆಯೆಂಬುದು ಒಂದು ಸಂವಹನ ಮಾಧ್ಯಮ. ಭಾಷೆ­ಯಿ­ಲ್ಲದೇ ಇತರೆ ವಿಷಯಗಳನ್ನು ಕಲಿ­ಸಲು ಸಾಧ್ಯವೇ ಇಲ್ಲ. ಭಾಷೆಯೇ ಬೇಡ­ವೆಂಬುದು ಉದ್ಧಟತನ­ವಾಗುತ್ತದೆ’ ಎಂದು ಹೇಳಿದರು.

‘ಅಮೆರಿಕ, ಬ್ರಿಟನ್ ಇತರೆ ದೇಶ­ಗಳಲ್ಲಿ ವೈವಿಧ್ಯ ಭಾಷೆಗಳಿಲ್ಲ. ದೇಶವೂ ವೈವಿಧ್ಯ  ಭಾಷೆ  ಹಾಗೂ ಸಂಸ್ಕೃತಿ­ಯಿಂದ ಕೂಡಿದೆ. ಮಾತೃ ಭಾಷೆ, ಜಾಗತಿಕ ಭಾಷೆ ಹಾಗೂ ರಾಷ್ಟ್ರ ಭಾಷೆ­ಗಳು ಮಗುವಿಗೆ ಅಗತ್ಯವಾಗಿ ಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮರಾವ್, ‘ಭಾಷೆ ಬೇಡವೆಂದು ಎಲ್ಲಿಯೂ ಹೇಳಿಲ್ಲ. ಆದರೆ ಕಲಿಸುವ ಭಾಷೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಈ ಅವಧಿಯಲ್ಲಿ ಇತರೆ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂರು ತಿಂಗಳಿನಲ್ಲಿ ಜರ್ಮನ್ ಭಾಷೆ ಕಲಿ­ಯಲು ಸಾಧ್ಯವಾಗುವುದಾದರೆ ವಿದ್ಯಾರ್ಥಿ ಜೀವನವೆಲ್ಲ ಬರೀ ಭಾಷಾ ಕಲಿಕೆಗೆ ಮೀಸಲಿಡಬೇಕೆ?’ ಎಂದು ಪ್ರಶ್ನಿಸಿದರು.

‘ಮಗುವಿನ ಚಿಂತನಾಶಕ್ತಿಯನ್ನು ಉದ್ಧೀಪನಗೊಳಿಸಲು ಶಿಕ್ಷಣ ಪೂರಕ­ವಾಗಿರಬೇಕು. ಒಂದೇ ವಿಷಯ, ಒಂದೇ ಶಿಕ್ಷಕ  ಎಂಬ ಪಾಶ್ಚಿಮಾತ್ಯ ತತ್ವವನ್ನು ತೊರೆದು ಶಿಕ್ಷಕರಿಗೂ ಬಹುಮುಖಿ ಕೌಶಲವನ್ನು ಕಲಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಪಠ್ಯ ಪುಸ್ತಕ ತಲುಪಿಲ್ಲ: ಪಠ್ಯದ ಜತೆಗೆ ಪಠ್ಯೇತರ ವಿಚಾರಗಳೆಡೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಮಗು­­ವಿನ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ರಾಮರಾವ್‌ ಹೇಳುತ್ತಿ­ದ್ದಂತೆ ಶಿಕ್ಷಕರೊಬ್ಬರು ಎದ್ದು  ನಿಂತು ಐದನೇ ತರಗತಿಯ ಪ್ರಥಮ ಭಾಷೆ, 8ನೇ ತರಗತಿಯ ತೃತೀಯ ಭಾಷೆಯ ಪುಸ್ತಕಗಳು ತಲುಪದೇ ಶಿಕ್ಷಕರು ಪರ­ದಾಡುವಂತಾಗಿದೆ. ಶಿಕ್ಷಣ ವ್ಯವಸ್ಥೆ­ಯನ್ನು ಉನ್ನತ ಮಟ್ಟಕ್ಕೆ ಏರಿಸುವ ಬಗ್ಗೆ ಭಾಷಣ ಬೇಡ, ಪ್ರಾಯೋಗಿಕವಾಗಿ ಏನನ್ನಾದರೂ ಮಾಡಬೇಕು. ಸೂಕ್ತ ಕಾಲದಲ್ಲಿ ಪಠ್ಯ ದೊರೆಯದೇ ಇದ್ದರೆ ಪಾಠ ಮಾಡುವುದಾದರೂ ಹೇಗೆ? ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ತಿಳಿದಿರುವಂತೆ ಎಲ್ಲ ವಿಷಯ­ಗಳ ಕುರಿತ ಪಠ್ಯ ಪುಸ್ತಕಗಳು ಶಾಲೆ­ಯನ್ನು ತಲುಪಿದೆ. ಇಂತಹ ಲೋಪ­ಗಳಾ­ಗಿದ್ದರೆ ಕ್ರಮ ಕೈಗೊಳ್ಳಲಾಗು­ವುದು’ ಎಂದು ಹೇಳಿದರು.

ಬೆಂಗಳೂರು, ವಿಜಾಪುರ ಸೇರಿ ಹಲವೆಡೆ ಪಠ್ಯಪುಸ್ತಕಗಳ ಕೊರತೆ ಎದುರಾ­ಗಿದ್ದು, ಪೋಷಕರ ಎದುರು ತೀವ್ರ ಮುಜುಗರ ಎದುರಿಸುವಂತಾಗಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಶಿಕ್ಷಕರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT