ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕವಿಯ ಬರವಣಿಗೆ ಹಿಂದೆ ದುಃಖ’

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಕವಿಯ ಬರವಣಿಗೆ ಯ ಹಿಂದೆ ಅನಂತ ದುಃಖ ಇರುತ್ತದೆ. ದುಃಖವನ್ನು ಕವಿ ಯಾವಾಗಲೂ ಹಿಂಬಾಲಿಸುತ್ತಾನೆ, ಸಂತೋಷವನ್ನಲ್ಲ’ ಎಂದು ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.

ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಶಸ್ತಿ ಪುರಸ್ಕೃತರೊಂದಿಗೆ ಒಂದು ಸಂಜೆ’ದಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಗೆ ಗಾಯವಾಗದೆ ನೋವು ಸ್ವಂತವಾಗುವುದಿಲ್ಲ. ವ್ಯಕ್ತಿ ಗಾಯಗೊಳ್ಳ ಲೇಬೇಕು. ಗಾಯವಿಲ್ಲದೆ ಗಾಯನ ಸಾಧ್ಯವಾಗಲಾರದು. ಕವಿ ದುಃಖವನ್ನು ಸ್ವಾದ್ಯಗೊಳಿಸುತ್ತ,  ತಾಳಿಕೊಳ್ಳುವ ಶಕ್ತಿ ಬರುವಂತೆ ಮಾಡುತ್ತಾನೆ’ ಎಂದರು.

‘ಮಕ್ಕಳ ಸಾಹಿತ್ಯಕ್ಕೆ ವಿಮರ್ಶೆ ಅಗತ್ಯ ಇಲ್ಲ. ಪೂರ್ಣ ಒಪ್ಪಿಗೆ ಅಥವಾ ಸಂಪೂರ್ಣ ತಿರಸ್ಕಾರ ಮಕ್ಕಳ ಸಾಹಿತ್ಯದ ವೈಶಿಷ್ಟ್ಯ. ಕವಿತೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬುದನ್ನು ಮಗು ನೇರವಾಗಿ ಹೇಳುತ್ತದೆ. ಇಷ್ಟವಾದರೆ ಕಣ್ಣರಳಿ, ಬಾಯಿ ಬಿಟ್ಟು ಕೇಳುತ್ತದೆ. ಇಷ್ಟ ಆಗದಿದ್ದರೆ ಮಗುವಿನ ಬಾಯಿಯಿಂದ ದೊಡ್ಡ ಆಕಳಿಕೆ ಬರುತ್ತದೆ. ಮಕ್ಕಳ ಸಾಹಿತ್ಯ ರಚನೆ ದೊಡ್ಡ ಸವಾಲು’ ಎಂದು ಅವರು ಅಭಿಪ್ರಾಯಪಟ್ಟರು.

ಕವಿ ಲಕ್ಕೂರು ಆನಂದ, ‘ಬ್ರಾಹ್ಮಣರು ವೇದ, ಮಹಾಕಾವ್ಯ ಬರೆದುದನ್ನು ನೆನಪಿಸಿಕೊಂಡು ಸಂತಸಪಡುತ್ತಾರೆ. ಕ್ರೈಸ್ತರು ಕ್ರಿಸ್ತನ ಬಗ್ಗೆ ಮಾತನಾಡಿ ಖುಷಿ ಪಡುತ್ತಾರೆ. ಮುಸಲ್ಮಾನರು ಪೈಗಂಬ ರನ ನೆನಪಿಸಿಕೊಂಡು ಪುಳಕಿತರಾ ಗುತ್ತಾರೆ. ಆದರೆ, ದಲಿತ ತನ್ನ ಕಾಲದ ಬಗ್ಗೆ ಮಾತನಾಡಿ ಅವಮಾನಕ್ಕೆ ಈಡಾಗುತ್ತಾನೆ. ಗಾಯಗಳು ಮಾತ ನಾಡಲು ಶುರು ಮಾಡಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಈಗ ಸಂತೋಷ ಹಾಗೂ ದುಃಖ ಎರಡೂ ಆಗುತ್ತಿದೆ. ಯುವ ಪುರಸ್ಕಾರ ಸಂತೋಷ ತಂದಿದೆ. ಶೋಷಿತ, ಸಮುದಾಯಕ್ಕೆ ಸಿಕ್ಕ ಪುರಸ್ಕಾರ ಇದು. ನನ್ನ ಎದೆಗೆ ಕಾವ್ಯ ಪ್ರೀತಿ ಹಚ್ಚಿದ ಅಜ್ಜಿ ಸಾವು ಹಾಗೂ ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ’ ಎಂದರು.
ಕವಿ ಸುಬ್ಬು ಹೊಲೆಯಾರ್‌, ‘ದಲಿತರು ಹಾಗೂ ಮಹಿಳೆಯರು ಸಾಹಿತ್ಯ ರಚನೆ ಮಾಡುವ ವರೆಗೆ ಕನ್ನಡ ಸಾಹಿತ್ಯಕ್ಕೆ ಚಲನಶೀಲತೆ ಇರಲಿಲ್ಲ. ಅದಕ್ಕೂ ಮುನ್ನ ಸಾಹಿತ್ಯ ಜನರನ್ನು ತಲುಪಿರಲಿಲ್ಲ. ಚಳವಳಿಯ ಬಳಿಕ ಜನರನ್ನು ಕಾವ್ಯ ತಲುಪಿತು’ ಎಂದರು.

‘ಊರ ಹೊರಗಿನ ಹಾಗೂ ಊರೊಳಗಿನ ಬೇಲಿಯ ಹೂವು ಲಕ್ಕೂರು ಆನಂದ. ಆನಂದನ ಕಾವ್ಯ ಗಾಯಗೊಂಡವರ ಕಾವ್ಯ. ಗಾಯ ಗೊಂಡವರು ಹಾಗೂ ಗಾಯಗೊಳಿಸಿ ದವರು ಈಗಲೂ ಹಾಗೆಯೇ ಇದ್ದಾರೆ. ಗಾಯಗೊಳಿಸುವ ಪ್ರಕ್ರಿಯೆ ಇನ್ನಾದರೂ ಕಡಿಮೆ ಆಗಬೇಕು. ಗಾಯಗೊಂಡವರ ಮನಸ್ಸು ನವಿಲಿನ ಹಾಗೆ ಕುಣಿಯುವ ಸ್ಥಿತಿ ನಿರ್ಮಾಣ ಆಗಬೇಕು’ ಎಂದು ಅವರು ಹೇಳಿದರು.

ಕಥೆಗಾರ ಚಿಂತಾಮಣಿ ಕೋಡ್ಲೆಕೆರೆ, ‘ಮಕ್ಕಳನ್ನು ಪೋಷಕರು ಕನ್ನಡದ ಅಂಗಳದಿಂದ ಹೊರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ವೆಂಕಟೇಶಮೂರ್ತಿ ಅವರು ಮಕ್ಕಳ ಸಾಹಿತ್ಯ ರಚನೆ ಮಾಡಿ ದೃಶ್ಯ ಮಾಧ್ಯಮ ದ ಮೂಲಕ ಕನ್ನಡದ ಮಕ್ಕಳನ್ನು ಕನ್ನಡಿಗರಾಗಿ ಉಳಿಯುವಂತೆ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT