ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಬೆಟ್‌’ನ ಆನೆಗಳು...

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಜಿಮ್ ಕಾರ್ಬೆಟ್ ಎಂದೊಡನೆ ಮನಸ್ಸಿನಲ್ಲಿ ಹುಲಿಯ ಚಿತ್ರ ಮೂಡುತ್ತದೆ. 19ನೇ ಶತಮಾನದ ಆರಂಭದಲ್ಲಿ ಉತ್ತರ ಭಾರತದಲ್ಲಿ ಸುಮಾರು 1,200 ಜನರ ಸಾವಿಗೆ ಕಾರಣವಾಗಿದ್ದ 19 ನರಭಕ್ಷಕ ಹುಲಿಗಳು ಮತ್ತು 14 ಚಿರತೆಗಳನ್ನು ಕಾರ್ಬೆಟ್‌ ಬೇಟೆಯಾಡಿದ್ದರು. ಚಂಪವಾಟ್ ಹುಲಿ, ಪನಾರ್ ಚಿರತೆ, ಕೇದಾರನಾಥ್ ಮತ್ತು ಬದರಿನಾಥ್‌ಗಳಿಗೆ ಬರುವ ಯಾತ್ರಾರ್ಥಿಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದವರೆಗೆ ಭಯಹುಟ್ಟಿಸಿದ್ದ ರುದ್ರಪ್ರಯಾಗದ ನರಭಕ್ಷಕ ಚಿರತೆ, ತಲ್ಲಾ-ದೆಸ್ ನರಭಕ್ಷಕ, ಮೋಹನ್ ನರಭಕ್ಷಕ, ಥಕ್ ನರಭಕ್ಷಕ, ಚೌಗಢ್ ಹೆಣ್ಣು ಹುಲಿ ಬೇಟೆ– ಕಾರ್ಬೆಟ್‌ನ ಈ ಶಿಕಾರಿ ಕಥನಗಳನ್ನು ಓದಿಯೇ ಸವಿಯಬೇಕು.

ಪರಿಸರ ಮತ್ತು ಪ್ರಾಣಿಗಳ ಸ್ವಭಾವದ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದ ಜಿಮ್‌ ಕಾರ್ಬೆಟ್‌ ಹುಲಿಗಳ ಸಾವಿನ ಬಗ್ಗೆ ಮತ್ತು ಅವುಗಳ ವಾಸಸ್ಥಾನಗಳ ವಿನಾಶದಿಂದ ಉಂಟಾದ ಅಸ್ಥಿರತೆಯ ಬಗ್ಗೆ ತೀವ್ರ ಕಳವಳಗೊಂಡಿದ್ದರು. ಕುಮಾಂವ್ ಹಿಲ್ಸ್‌ನಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅದನ್ನು ‘ಹೆಯಲಿ ನ್ಯಾಶನಲ್ ಪಾರ್ಕ್’ ಎಂದು ಆಗ ಕರೆಯಲಾಗಿತ್ತು. ಕಾರ್ಬೆಟ್‌ ಅವರ ಗೌರವಾರ್ಥ ಅದಕ್ಕೆ ‘ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ’ ಎಂದು 1957ರಲ್ಲಿ ಮರುನಾಮಕರಣ ಮಾಡಲಾಯಿತು.

ಭಾರತದ ಪ್ರಥಮ ರಾಷ್ಟ್ರೀಯ ಉದ್ಯಾನವೆಂದೇ ಖ್ಯಾತವಾದ ‘ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ’  ಇರುವುದು ಉತ್ತರಾಖಂಡ ರಾಜ್ಯದಲ್ಲಿ. ಹಿಮಾಲಯದ ತಳದಲ್ಲಿ, ರಾಮಗಂಗಾ ನದಿಯ ಸುತ್ತ ಹರಡಿರುವ ಈ ಉದ್ಯಾನದ ಸೌಂದರ್ಯ ವರ್ಣನಾತೀತ. ಹುಲಿ ಸಂರಕ್ಷಣಾ ತಾಣವಾದರೂ ಅಲ್ಲಿ ನೋಡಬೇಕಾದುದು ಆನೆಗಳನ್ನು. ಹಚ್ಚಹಸಿರು ಹುಲ್ಲುಗಾವಲಿನಲ್ಲಿ ಸ್ವಾತಂತ್ರ್ಯದ ಪ್ರತೀಕಗಳಂತೆ ಹಿಂಡುಹಿಂಡಾಗಿ ಸಾಗುವ ಆನೆಗಳು, ಮುಗಿಲೆತ್ತರದ ಸಾಲ್‌ ಮರಗಳ ನಡುವೆ ತೂರಿಬರುವ ಬೆಳಕಿನ ಕಿರಣಗಳನ್ನು ಆಸ್ವಾದಿಸುತ್ತಾ ಸಾಗುವ ಗಜಪಡೆ, ಜಗಳಗಂಟಿ ಮರಿ ಆನೆಗಳು, ದೂಳನ್ನು ಎರಚಿಕೊಳ್ಳುವ ಆನೆ, ಅಮ್ಮನ ಮಡಿಲಲ್ಲಿ ನಲಿಯುವ ಪುಟಾಣಿ ಆನೆ, ಆನೆಗಳ ಜಲಕ್ರೀಡೆ– ಇವೆಲ್ಲವನ್ನೂ ಎಷ್ಟು ನೋಡಿದರೂ ಸಾಲದು. ಛಾಯಾಗ್ರಾಹಕರಿಗಂತೂ ಈ ಉದ್ಯಾನ ಸ್ವರ್ಗ ಸೀಮೆ.

1,318 ಚದರ ಕಿಮೀ ವಿಸ್ತೀರ್ಣ ಇರುವ ಈ ರಾಷ್ಟ್ರೀಯ ಉದ್ಯಾನವು ಸೊನ್ನಾವಾಡಿ, ಕಾಲಾಗರ್‌ ಮತ್ತು ಕಾರ್ಬೆಟ್‌ ಎಂಬ ಮೂರು ಪ್ರದೇಶಗಳನ್ನು ಒಳಗೊಂಡಿದೆ. ನೂರಾರು ಪ್ರಭೇದದ ಪಕ್ಷಿಗಳು, ವಿವಿಧ ಬಗೆಯ ಪ್ರಾಣಿಗಳು ಹಾಗೂ ಸರೀಸೃಪಗಳನ್ನು ಒಳಗೊಂಡಿರುವ ವೈವಿಧ್ಯಮಯ ಪರಿಸರ ಇದಾಗಿದೆ. ಕಾರ್ಬೆಟ್‌ ಉದ್ಯಾನವನ್ನು ಪ್ರವಾಸಿಗರ ವೀಕ್ಷಣೆಗಾಗಿ ಬಿಜ್ರಾನಿ, ಸುಲ್ತಾನ್‌, ಗೈರಾಲ್‌, ಸರ್ಫ್‌ಡುಲಿ ಮತ್ತು ಡಿಕಾಲ ಎಂದು ವಿಂಗಡಿಸಿಡಲಾಗಿದೆ. ಇವುಗಳಲ್ಲಿ ಡಿಕಾಲ ಪ್ರದೇಶ ಹೆಚ್ಚು ಹುಲ್ಲುಗಾವಲು ಪ್ರದೇಶದಿಂದ ಕೂಡಿದ್ದು, ರಾಮಗಂಗಾ ನದಿಯ ಮಡಿಲಲ್ಲಿರುವುದರಿಂದ ಪ್ರಾಣಿ–ಪಕ್ಷಿಗಳ ವೀಕ್ಷಣೆಗೆ ಪ್ರಶಸ್ತವಾಗಿದೆ.

‘ಜ್ಯುವೆಲ್‌ ಇನ್‌ ದ ಕ್ರೌನ್‌’ ಎಂದು ಹೆಸರುವಾಸಿಯಾದ ಜಿಮ್‌ ಕಾರ್ಬೆಟ್‌ಗೆ ಹೋಗುವುದು ವನ್ಯಜೀವಿ ಛಾಯಾಗ್ರಾಹಕರೆಲ್ಲರ ಕನಸು. ಪ್ರತಿ ಭೇಟಿಯ ಬೆನ್ನಿಗೇ ಮತ್ತೊಮ್ಮೆ ಅಲ್ಲಿಗೆ ಹೋಗುವ ಆಸೆ ಚಿಗುರೊಡೆಯುತ್ತದೆ. ಕಾರಣ, ಅಲ್ಲಿನ ಒಂದೊಂದು ಭೇಟಿಯೂ ವಿಶಿಷ್ಟ ಹಾಗೂ ಪ್ರತ್ಯೇಕ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT