ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವಾ’ ಖಾನಾ ಸವಿದವನೇ ಜಾಣ

ರಸಸ್ವಾದ
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಣ್ಣುಕುಕ್ಕುವ ಒಳಾಂಗಣ ವಿನ್ಯಾಸ, ಮುಖ್ಯ ಬಾಣಸಿಗ ಮಹೇಶ್‌ ಅವರ ಕೈಯಲ್ಲಿ ಸಿದ್ಧಗೊಂಡ ಕಾವಾ ದಾಲ್‌ ಹಾಗೂ ಟರ್ಕಿ ರೋಸ್ಟ್‌ ಖಾದ್ಯ ರಾಜಾಜಿನಗರದ ಕಾವಾ ರೆಸ್ಟೋರೆಂಟ್‌ನ ವಿಶೇಷ ಆಕರ್ಷಣೆಗಳು. ಈಗಷ್ಟೇ ಪ್ರಾರಂಭಗೊಂಡಿರುವ ಕಾವಾ ತನ್ನ ವಿಶೇಷ ರುಚಿಯಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಅಂದಹಾಗೆ, ಇಂದು ಕ್ರಿಸ್ಮಸ್‌. ಈ ಹಬ್ಬವನ್ನು ಆನಂದದಾಯಕ ಆಚರಣೆಯನ್ನಾಗಿಸಲು ಕಾವಾ ರೆಸ್ಟೋರೆಂಟ್ ವಿಶೇಷ ‘ಕ್ರಿಸ್ಮಸ್ ಔತಣ’ವನ್ನು ಉಣಬಡಿಸಲಿದೆ.

ಕ್ರಿಸ್ಮಸ್‌ ಅಂದರೆ ಸಂಭ್ರಮಾಚರಣೆ. ಹಬ್ಬಕ್ಕಾಗಿ ರೆಸ್ಟೋರೆಂಟ್‌ ಮನಮೋಹಕವಾಗಿ ಶೃಂಗಾರಗೊಂಡಿದೆ. ಕ್ರಿಸ್ಮಸ್‌ನಂದು ರೆಸ್ಟೋರಾಕ್ಕೆ ಬರುವ ಗ್ರಾಹಕರು ಮತ್ತು ಪುಟಾಣಿಗಳನ್ನು ಖುಷಿಯಾಗಿಡಲು ಕಾವಾ ಸಜ್ಜುಗೊಂಡಿದ್ದು, ವಿವಿಧ ಮನರಂಜನಾ ಆಟಗಳು, ಲೈವ್‌ ಬ್ಯಾಂಡ್‌, ಮ್ಯಾಜಿಕ್‌ ಷೋ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಒಟ್ಟಾರೆಯಾಗಿ, ಕಾವಾಕ್ಕೆ ಬಂದವರು ಭರ್ಜರಿ ಕ್ರಿಸ್ಮಸ್‌ ಬ್ರಂಚ್‌ ಸವಿಯುವುದರ ಜತೆಗೆ ಭರ್ತಿ ಮನರಂಜನೆಯನ್ನು ಅನುಭವಿಸಬೇಕು ಎಂಬುದು ರೆಸ್ಟೋರೆಂಟ್‌ನ ಉದ್ದೇಶ.

‘ಕಾವಾ’ದ ಮುಖ್ಯ ಬಾಣಸಿಗ ಮಹೇಶ್‌ ಅವರು ಕ್ರಿಸ್ಮಸ್‌ ಆಚರಣೆ ಹಾಗೂ ಕ್ರಿಸ್ಮಸ್‌ ಬ್ರಂಚ್‌ ಬಗ್ಗೆ ಮಾತನಾಡಿದರು. ‘ಕ್ರಿಸ್ಮಸ್‌ ಅಂದರೆ ಸಂಭ್ರಮಾಚರಣೆ. ವಿದೇಶಿಗರು ಒಂದು ದಿನ ಮುಂಚಿತವಾಗಿಯೇ  ಕ್ರಿಸ್ಮಸ್‌ ಈವ್ ಪಾರ್ಟಿ ಮಾಡುತ್ತಾ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಿ, ಡಿ.25ರ ರಾತ್ರಿಯವರೆಗೂ ಅದನ್ನು ಮುಂದುವರಿಸುತ್ತಾರೆ.

ಈ 36 ಗಂಟೆಗಳೂ ಅಲ್ಲಿ ಮನರಂಜನೆ, ಬಾಯಲ್ಲಿ ನೀರೂರಿಸುವ ಖಾದ್ಯಗಳ ಘಮಲು ಅಡರಿರುತ್ತದೆ. ಕ್ರಿಸ್ಮಸ್‌ನ ವಿಶೇಷ ಖಾದ್ಯ ಟರ್ಕಿ ರೋಸ್ಟ್‌ನೊಂದಿಗೆ ವೈನ್‌, ಬಿಯರ್‌ ಹೀರುತ್ತಾ ಮನೆ ಮಂದಿಯೆಲ್ಲಾ ಕುಳಿತು ಖುಷಿಯಿಂದ ಆಚರಣೆ ಮಾಡುತ್ತಾರೆ. ಆದರೆ, ನಮ್ಮಲ್ಲಿನ್ನೂ ಈವ್‌ ಪಾರ್ಟಿ ಮಾಡುವ ಸಂಪ್ರದಾಯ ಬೆಳೆದಿಲ್ಲ. ಇಲ್ಲಿನ ಅನೇಕ ಕ್ರಿಶ್ಚಿಯನ್‌ ಬಾಂಧವರ ಸಂಭ್ರಮಾಚರಣೆ ಶುರುವಾಗುವುದು ಕ್ರಿಸ್ಮಸ್‌ ಹಬ್ಬದ ದಿನ’ ಎಂದು ಆಚರಣೆ ಬಗ್ಗೆ ಮಾಹಿತಿ ನೀಡುತ್ತಾರೆ ಅವರು.

‘ರುಚಿಕರ ಕ್ರಿಸ್ಮಸ್ ಅಡುಗೆಗಳಾದ ರೋಸ್ಟ್ ಟರ್ಕಿ, ಕ್ರಾನ್‌ಬರಿ ಸಾಸ್, ರೋಸ್ಟ್ ಗ್ರೇವಿ, ಹಾಟ್ ಕ್ರಾಸ್ ಬನ್‌, ಪ್ಲಮ್ ಕೇಕ್ ಮತ್ತು ಪಂಪ್‌ಕಿನ್ ಪೈ ಜತೆಗೆ ವೈನ್‌ನೊಂದಿಗೆ ವೈವಿಧ್ಯಮಯ ಪಾನೀಯಗಳನ್ನು ನಮ್ಮ ಕ್ರಿಸ್ಮಸ್‌ ಔತಣ ಒಳಗೊಂಡಿದೆ. ಔತಣದ ಸವಿ ಹೆಚ್ಚಿಸಲು ದೇಶ ವಿದೇಶದ ಡೆಸರ್ಟ್‌ಗಳನ್ನು ಒಳಗೊಂಡ ಡೆಸರ್ಟ್ ಪ್ಲಾಟರ್‌ನ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸಿದ್ದೇವೆ. ಮಕ್ಕಳನ್ನು ಖುಷಿಯಾಗಿಡಲು ಲೈವ್‌ ಐಸ್‌ಕ್ರೀಂ ಜಾಯಿಂಟ್‌ಗಳನ್ನು ತೆರೆಯಲಾಗಿದೆ. ಊಟದ ನಡುವೆ ಸಾಂಟಾ ಕ್ಲಾಸ್ ಬಂದು ಗ್ರಾಹಕರನ್ನು ಸಂತೋಷ ಪಡಿಸುತ್ತಾನೆ. ಹಿನ್ನೆಲೆಯಲ್ಲಿ ತೇಲಿಬರುವ ಕ್ರಿಸ್ಮಸ್‌ ಸಂಗೀತ, ಲೈವ್ ಬ್ಯಾಂಡ್‌ಗಳ ನಿನಾದ ಇವೆಲ್ಲವೂ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಕ್ರಿಸ್ಮಸ್ ಭೋಜನದ ಸವಿಯನ್ನು ಇಮ್ಮಡಿಗೊಳಿಸುತ್ತವೆ’ ಎಂದು ಕ್ರಿಸ್ಮಸ್‌ ಬ್ರಂಚ್‌ನ ವಿವರಣೆ ನೀಡಿದರು ಮಹೇಶ್‌.

ಅಂದಹಾಗೆ, ಕ್ರಿಸ್ಮಸ್‌ ಬ್ರಂಚ್‌ 10 ಬಗೆಯ ವೆಜ್‌ ಮತ್ತು ನಾನ್‌ವೆಜ್‌ ಸ್ಟಾರ್ಟರ್, ಮುಖ್ಯ ಮೆನುವಿನಲ್ಲಿ 20 ಬಗೆಯ ಖಾದ್ಯ, 10 ಬಗೆಯ ಸಾಲಡ್‌, 20 ಬಗೆಯ ಡೆಸರ್ಟ್‌ಗಳನ್ನು ಒಳಗೊಂಡಿದೆ. ಬೆಲೆ ರೂ೮೯೯ (ಮದ್ಯಪಾನ ರಹಿತ), ರೂ೧,೧೯೯  (ಮದ್ಯಪಾನ ಸಹಿತ).
ಕಾವಾದ ಸಿಗ್ನೇಚರ್‌ ಡಿಶ್‌ಗಳು ಯಾವುವು ಎಂಬ ಪ್ರಶ್ನೆಗೆ ಮಹೇಶ್‌ ಉತ್ತರಿಸಿದ್ದು ಹೀಗೆ: ‘ಕಾವಾ ದಾಲ್‌ ಮತ್ತು ಟರ್ಕಿ ರೋಸ್ಟ್‌ ನಮ್ಮ ವಿಶೇಷ ಖಾದ್ಯಗಳು. ಉಳಿದಂತೆ, ಮುರ್ಗ್‌ಮಲೈ ಕಬಾಬ್‌, ಲ್ಯಾಂಬ್‌ಸೀಕ್‌ ಕಬಾಬ್‌, ಪಾಸ್ತಾ, ಬಿರಿಯಾನಿ ರುಚಿಯನ್ನು ಗ್ರಾಹಕರು ತುಂಬ ಮೆಚ್ಚಿಕೊಳ್ಳುತ್ತಾರೆ’. ವಿವರಣೆ ನೀಡಿದ ಬಳಿಕ ಮಹೇಶ್‌ ‘ಕಾವಾ ದಾಲ್‌’ ಸವಿಯುವ ಅವಕಾಶ ಮಾಡಿಕೊಟ್ಟರು. ಪಾಯಸದ ಮಾದರಿಯಲ್ಲಿದ್ದ ದಾಲ್‌ನ್ನು ಚಮಚದಲ್ಲಿ ಎತ್ತಿ ಬಾಯಿಗಿಟ್ಟುಕೊಂಡು ಮೆಲ್ಲುವಾಗ ರುಚಿಯ ಮೊಗ್ಗುಗಳು ಅರಳಿದವು. ರುಚಿ ತುಂಬ ಚೆನ್ನಾಗಿತ್ತು. ‘ಕಾವಾ ದಾಲ್‌’ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಮಹೇಶ್ ನಗುತ್ತಾ, ‘ಅದು ನಮ್ಮ ಸೀಕ್ರೆಟ್‌ ರೆಸಿಪಿ. ಅದನ್ನು ಯಾರಿಗೂ ಹೇಳುವುದಿಲ್ಲ’ ಎಂದು ಮಾತು ಮರೆಸಿದರು.

ಅಂದಹಾಗೆ, ಕಾವಾ ರೆಸ್ಟೋರೆಂಟ್‌ನಲ್ಲಿ ಕ್ರಿಸ್‌ಮಸ್‌ ಬ್ರಂಚ್‌ ಜೊತೆಗೆ ನಿತ್ಯವೂ ಸಿಗುವ ಲಂಚ್‌ ಮತ್ತು ಡಿನ್ನರ್‌ ಬಫೆ ಇದೆ. ಎಂಟು ಬಗೆಯ ಸ್ಟಾರ್ಟರ್ಸ್‌, 10 ಬಗೆಯ ಮುಖ್ಯ ಮೆನು, ಎಂಟು ಸಲಾಡ್‌ ಹಾಗೂ 10 ಡೆಸರ್ಟ್‌ಗಳನ್ನು ಒಳಗೊಂಡಿರುವ ಈ ಬಫೆಯ ಬೆಲೆ ರೂ399 (ಲಂಚ್‌), ರೂ499 (ಡಿನ್ನರ್‌) ತೆರಿಗೆ ಪ್ರತ್ಯೇಕ.

ಭಾನುವಾರದ ವಿಶೇಷ
ಹಾಗೆಯೇ, ತನ್ನ ಗ್ರಾಹಕರಿಗೆ ವಿಶೇಷ ಅನುಭವ ಮತ್ತು ರುಚಿಯನ್ನು ಒದಗಿಸುವ ಸಲುವಾಗಿ ಕಾವಾ ಪ್ರತಿ ಭಾನುವಾರದಂದು ವಿವಿಧ ಬಗೆಯ ಖಾದ್ಯಗಳನ್ನೊಳಗೊಂಡ ಸಂಡೇ ಬ್ರಂಚ್ ಪರಿಚಯಿಸಿದೆ.

ಭಾನುವಾರದ ಔತಣವು ರಸ್ತೆ ಬದಿಯಲ್ಲಿ ಸಿಗುವ ಭಾರತೀಯ ಮತ್ತು ಅಂತರರಾಷ್ಟ್ರೀಯ ಖಾದ್ಯಗಳಿಂದ ಕೂಡಿದ ಒಂದು ವರ್ಣಮಯ ಅನುಭವ ದಕ್ಕಿಸಿಕೊಡಲಿದೆ. ಪಾರಂಪರಿಕ ಕಬಾಬ್, ಭಾರತೀಯ ಮತ್ತು ಪಾಶ್ಚಿಮಾತ್ಯ ಸಾಲಡ್‌ಗಳು, ಸ್ವಾದಿಷ್ಟ ಕಾಟಿ ರೋಲ್‌ಗಳು, ಚಾಟ್ ಹಾಗೂ ಲೈವ್‌ ಆಗಿ ಸಿದ್ಧಗೊಳಿಸುವ ಪಾಸ್ತಾಗಳಲ್ಲಿ ಗ್ರಾಹಕರು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಇದರ ಬೆಲೆ ರೂ೫೯೯ ಮತ್ತು ರೂ೯೯೯. ತೆರಿಗೆ ಪ್ರತ್ಯೇಕ. ನಿತ್ಯದ ಊಟದ ಮೆನುವಿನಲ್ಲಿ ಒಂದು ವಿಶೇಷವಾದ ಬದಲಾವಣೆ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ.

ಹೊಸ ರುಚಿಗೆ ಹಾತೊರೆಯುವವರಿಗೆ ಹೇಳಿ ಮಾಡಿಸಿದಂತಿದೆ ಕಾವಾ ರೆಸ್ಟೋರೆಂಟ್‌. ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ವಾರಾಂತ್ಯವನ್ನು ಒಂದೊಳ್ಳೆ ಊಟ ಸವಿಯುವ ಮೂಲಕ ಕಳೆಯಬಯಸುವವರು ಇಲ್ಲಿಗೆ ಹೋಗಬಹುದು. 

ಸ್ಥಳ: ಕಾವಾ, ಫೇರ್‌ಫೀಲ್ಡ್‌ ಬೈ ಮ್ಯಾರಿಯೇಟ್‌, ೫೯ನೇ ಸಿ ಕ್ರಾಸ್, ೪ನೇ ಎಂ. ಬ್ಲಾಕ್, ರಾಜಾಜಿನಗರ. ಟೇಬಲ್ ಕಾಯ್ದಿರಿಸಲು: 080 4947 0020.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT