ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಸಿಗಾಗಿ ಸುದ್ದಿ ಎಂಬ ಕ್ಯಾನ್ಸರ್‌ ಕಾಯಿಲೆ’

Last Updated 14 ಸೆಪ್ಟೆಂಬರ್ 2013, 9:09 IST
ಅಕ್ಷರ ಗಾತ್ರ

ಧಾರವಾಡ: ‘ಇತ್ತೀಚಿನ ದಿನಗಳಲ್ಲಿ ಸಾರ್ವ­ತ್ರಿಕ ಚುನಾವಣೆ ವೇಳೆ ದುಡ್ಡು ಕೊಟ್ಟು ಪತ್ರಿಕೆಗಳಲ್ಲಿ ಸುದ್ದಿ ಬರೆಸುವ (ಪೇಡ್‌ ನ್ಯೂಸ್‌) ಹಾವಳಿ ಕ್ಯಾನ್ಸರ್‌ ರೋಗ­ದಂತೆ ಹರಡುತ್ತಿದೆ. ಇದು ಪತ್ರಿಕೋದ್ಯಮದ ನೈತಿಕತೆಗೆ ಸವಾಲು ಹಾಕು­ತ್ತಿದ್ದರೂ ಕೆಲ ಮಾಧ್ಯಮಗಳು ರೋಗವನ್ನು ಬೇಕೆಂತಲೇ ದೇಹದಲ್ಲಿ ಬಿಟ್ಟುಕೊಳ್ಳುತ್ತಿವೆ’ ಎಂದು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದ­ರಾಜನ್‌ ಕಳವಳ ವ್ಯಕ್ತಪಡಿಸಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾ­ಟಕ ವಿಶ್ವವಿದ್ಯಾಲಯವು ಶುಕ್ರ­ವಾರ ಸಿನೆಟ್‌ ಸಭಾಂಗಣದಲ್ಲಿ ಏರ್ಪಡಿ­ಸಿದ್ದ ಡಾ.ಎಸ್‌.ರಾಧಾಕೃಷ್ಣನ್‌ ಸ್ಮಾರಕ ಉಪನ್ಯಾಸ ಮಾಲೆಯಡಿ ‘ಸಮಕಾಲೀನ ಭಾರತದಲ್ಲಿ ಮಾಧ್ಯಮದ ಪಾತ್ರ’ ಕುರಿತು ಉಪನ್ಯಾಸ ನೀಡಿದ ಅವರು, ‘ಇತ್ತೀಚೆಗೆ ಕರ್ನಾಟಕ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ‘ಕಾಸಿಗಾಗಿ ಸುದ್ದಿ’ ಬರೆಯುವುದು ವ್ಯಾಪಕವಾಗಿ ನಡೆಯಿತು. ಸಣ್ಣ ಪತ್ರಿಕೆಗಳ ಮಾತಿರಲಿ ಬೃಹತ್‌ ಮಾಧ್ಯಮ ಸಂಸ್ಥೆಗಳೂ ದುಡ್ಡು ಪಡೆದು ರಾಜಕಾರಣಿಗಳ ಪರ ಬರೆ­ದವು. ಇವು ಪತ್ರಕರ್ತರ ವೃತ್ತಿಪರತೆಗೆ ಸವಾಲು. ಹೊರಗಿನ ಯಾವುದಾದರೂ ತಲ್ಲಣಗಳನ್ನು, ಬೆದರಿಕೆಗಳನ್ನು ತಡೆದು­ಕೊಳ್ಳಬಹುದು. ಇದು ಪತ್ರಿಕಾ ರಂಗದ ಒಳಗಿನಿಂದಲೇ ಆಗುತ್ತಿರುವ ವಿದ್ಯ­ಮಾನ. ಹಾಗಾಗಿ ಇದು ಅತ್ಯಂತ ಅಪಾಯಕಾರಿ’ ಎಂದರು.

‘1995ಕ್ಕೂ ಮೊದಲು ಕೇವಲ 35 ಚಾನೆಲ್‌ಗಳಿದ್ದವು.  ಈ ಸಂಖ್ಯೆ ಕಳೆದ ಮಾರ್ಚ್‌ ಅಂತ್ಯಕ್ಕೆ 840ಕ್ಕೇರಿದೆ. ಅದರಲ್ಲಿ 100ಕ್ಕೂ ಅಧಿಕ ಚಾನೆಲ್‌­ಗಳು ಸುದ್ದಿವಾಹಿನಿಗಳಾಗಿವೆ. ಸುದ್ದಿ­ವಾಹಿನಿ­ಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಪತ್ರಿಕೆಗಳ ಪ್ರಸರಣ ಸಂಖ್ಯೆ ಮಾತ್ರ ಕುಸಿತ ಕಾಣುತ್ತಿದೆ’ ಎಂದು ಹೇಳಿದರು.

ಪತ್ರಿಕಾ ರಂಗವನ್ನು ನಿಯಂತ್ರಣ­ದಲ್ಲಿಡಲು ರಾಜಕಾರಣಿ­ಗಳು, ಕಾರ್ಪೊ­ರೇಟ್‌ ಕುಳಗಳು ನಿರಂತರವಾಗಿ ಯತ್ನಿ­ಸು­ತ್ತಲೇ ಇರುತ್ತವೆ. ವಸ್ತುನಿಷ್ಠ ಸುದ್ದಿ ಬರೆದರೂ ಬಹುತೇಕ ಸಂದರ್ಭ­ಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ­ಗಳನ್ನು ಪತ್ರಿಕೆಯ ಸಂಪಾದ­ಕರು, ಪ್ರಕಾ­ಶಕರು ಹಾಗೂ ವರದಿ­ಗಾರರ ವಿರುದ್ಧ ದಾಖಲಿಸುತ್ತಾರೆ. ಅಂತಿಮ­­ವಾಗಿ ಎಷ್ಟೋ ಪ್ರಕರಣಗಳು ಖುಲಾಸೆ­ಯಾಗು­ತ್ತವೆ. ಆದರೂ ಮೊಕ­ದ್ದಮೆ ಹೂಡುವವರಿಗೆ ನಮ್ಮನ್ನು ಅವರ ತಂಟೆಗೆ ಬರದಂತೆ ತಡೆಯುವುದೇ ಆಗಿರು­ತ್ತದೆ.

ಐಟಿ ಕಾಯ್ದೆಯ ಹೆಸರಿ­ನಲ್ಲಿ ಪತ್ರಿಕೆಗಳ ಆನ್‌ಲೈನ್ ಸುದ್ದಿಗಳನ್ನು ಭೂತಗನ್ನಡಿ ಇಟ್ಟು ನೋಡಿ ಅವುಗ­ಳಲ್ಲೇ ತಪ್ಪನ್ನು ಹುಡುಕಿ ಪ್ರಕರಣ ದಾಖಲಿಸುತ್ತಾರೆ. ಪತ್ರಿಕೆಗಳನ್ನು ಮಣಿ­ಸಲು ಐಟಿ ಕಾಯ್ದೆಯ ದುರುಪಯೋಗ ಮಾಡಿಕೊಳ್ಳಲಾಗು­ತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಕುಲಪತಿ ಡಾ.ಎಚ್‌.ಬಿ.ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ಡಾ.­ಚಂದ್ರಮಾ ಕಣಗಲಿ, ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್‌.­ದುರ್ಗಾ­ದಾಸ್‌, ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT