ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀರೆ’ ಒಡಲಿಗೆ ಊರಿನ ತ್ಯಾಜ್ಯ

ಗೋಣಿಕೊಪ್ಪಲು: ಕಸ ವಿಲೇವಾರಿ ತಂದ ತಲೆನೋವು
Last Updated 4 ಡಿಸೆಂಬರ್ 2013, 6:54 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇತ್ತ ಪಟ್ಟಣವೂ ಅಲ್ಲದ, ಅತ್ತ ಹಳ್ಳಿಯೂ ಅಲ್ಲದ ದೊಡ್ಡದಾದ ಊರು ಗೋಣಿಕೊಪ್ಪಲು. ಇಲ್ಲಿ ಊರಿನ ಮಧ್ಯಭಾಗದಲ್ಲಿ ಕೀರೆ ಹೊಳೆ ಹರಿಯುತ್ತಿದೆ. ಇದು ಊರಿನ ಕಸದ ರಾಶಿಯಿಂದ ಮುಚ್ಚಿ ಹೋಗಿದೆ. ಗ್ರಾಮ ಪಂಚಾಯಿತಿ ಇಡೀ ಊರಿನ ತ್ಯಾಜ್ಯವನ್ನು ಹೊಳೆ ದಡಕ್ಕೆ ಹಾಕಿ ನದಿಯನ್ನು ಹಂತಹಂತವಾಗಿ ಮುಚ್ಚತೊಡಗಿದೆ.  ಇನ್ನು ಕೆಲವೇ ತಿಂಗಳಲ್ಲಿ ನದಿ ಸಂಪೂರ್ಣ ಮುಚ್ಚಿ ಹೋಗಲಿದೆ.

ಐದು ವರ್ಷಗಳ ಹಿಂದೆ ಕೀರೆ ಹೊಳೆ ಊರ ಹೊರ ಭಾಗದಲ್ಲಿ ಹರಿಯುತ್ತಿತ್ತು. ಆದರೆ, ಊರು ಬೆಳೆದಂತೆ ನದಿ ಮಧ್ಯಕ್ಕೆ ಸೇರಿ ಹೋಗಿದೆ. ಊರು ಸಣ್ಣದಿದ್ದಾಗ ಕಸ ವಿಲೇವಾರಿ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ, ಈಗ ಊರು ಬೆಳೆದಿದೆ. ಕಸದ ರಾಶಿಯೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಹೀಗಾಗಿ, ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿಗೆ ಬೇರೆ ದಾರಿ ಕಾಣುತ್ತಿಲ್ಲ. ಇಡೀ ತ್ಯಾಜ್ಯವನ್ನೆಲ್ಲ ಕೀರೆ ಹೊಳೆ ದಡಕ್ಕೆ ಹಾಕಿ ಹೊಳೆಯನ್ನು ಹಂತ ಹಂತವಾಗಿ ಮುಚ್ಚ ತೊಡಗಿದೆ.

ಈಗ ಮಳೆ ಇಲ್ಲ. ಹೊಳೆಯಲ್ಲಿ ಹೆಚ್ಚು ನೀರು ಹರಿಯುತ್ತಿಲ್ಲ. ಆದರೆ, ಮಳೆಗಾಲದಲ್ಲಿ ವಿಪರೀತ ನೀರು ಬರುತ್ತದೆ. ನದಿ ಉಕ್ಕಿ ಹರಿದು ಅಕ್ಕಪಕ್ಕದ ಮನೆಗಳೆಲ್ಲ ಜಲಾವೃತಗೊಳ್ಳುತ್ತವೆ. ಇಂತಹ ಸಮಸ್ಯೆ ಪ್ರತಿ ಮಳೆಗಾಲದಲ್ಲಿ ತಲೆದೋರಿದರೂ ಗ್ರಾಮ ಪಂಚಾಯಿತಿ ಕೀರೆ ಹೊಳೆ ದಡಕ್ಕೆ ಪ್ರತಿ ದಿನ ಮೂರು, ನಾಲ್ಕು   ಟ್ರ್ಯಾಕ್ಟರ್ ತ್ಯಾಜ್ಯ ಸುರಿಯುತ್ತಿದೆ.

ಇದು ಕೀರೆ ಹೊಳೆ ಸಮಸ್ಯೆಯಾದರೆ ಬಡಾವಣೆಯ ನಿವಾಸಿಗಳದ್ದು ಮತ್ತೊಂದು ಸಮಸ್ಯೆ. ತ್ಯಾಜ್ಯ ಸುರಿಯುವ ಪಕ್ಕದಲ್ಲಿ ವಾಸದ ಮನೆಗಳಿವೆ. ಕೊಳೆತ ಕಸದ ರಾಶಿ ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳ ಬದುಕು ನರಕಯಾತನೆ ಆಗಿದೆ. ಕಸದ ರಾಶಿಯನ್ನು ಕರಗಿಸಲು ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚುತ್ತಾರೆ. ಇದರ ಬೆಂಕಿ ಯಾವತ್ತೂ ಆರುವುದೇ ಇಲ್ಲ. ಹೊಗೆಯಾಡುತ್ತಾ ಕೆಟ್ಟ ವಾಸನೆ ಬರುತ್ತದೆ. 5 ವರ್ಷಗಳ ಹಿಂದೆ ಊರಿನ ಹೊರಭಾಗದಲ್ಲಿದ್ದು, ನೆಮ್ಮದಿಯಾಗಿ ಬದುಕುತ್ತಿದ್ದ ಜನತೆ ಈಗ ನರಕಯಾತನೆ ಅನುಭವಿಸುವಂತಾಗಿದೆ.

ದುರ್ವಾಸನೆ ಸಹಿಸಿಕೊಳ್ಳಲಾಗದ ನಿವಾಸಿಗಳು ಕಸ ಹಾಕುವ ಗ್ರಾಮ ಪಂಚಾಯಿತಿ ಜತೆ ನಿತ್ಯ ಜಗಳಕ್ಕೆ ಇಳಿಯುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಜಾಗದ ಸಮಸ್ಯೆ ಮುಂದೊಡ್ಡಿ ನಿವಾಸಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.

‘ಕಸ ವಿಲೇವಾರಿಗೆ ಸೂಕ್ತ ಪರಿಹಾರ’
ಊರಿನ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೃಹತ್‌ ರೂಪ ತಾಳಿದೆ. ಈ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಊರು ಬೆಳೆಯುತ್ತಿದೆ. ತ್ಯಾಜ್ಯವೂ ಹೆಚ್ಚುತ್ತಿದೆ. ಆದರೆ, ಅದರ ವಿಲೇವಾರಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಬೇಕು.

– ಪ್ರವಿಮೊಣ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ

‘ವೈಜ್ಞಾನಿಕ ಕ್ರಮ ಅಗತ್ಯ’

ಕಸದಿಂದ ಪ್ಲಾಸ್ಟಿಕ್‌ ಪ್ರತ್ಯೇಕಿಸಿ ಅದನ್ನು ಮರುಬಳಕೆಗೆ ಬಳಸಿಕೊಳ್ಳಬೇಕು. ಊರಿನ ವರ್ತಕರಿಗೆ ಪ್ಲಾಸ್ಟಿಕ್‌ ಸಂಗ್ರಹಿಸಲು ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾಗ್‌ ನೀಡಲಾಗುವುದು. ಕಸ ವಿಲೇವಾರಿಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸುವ ಅಗತ್ಯತೆ ಇದೆ. ಇದರ ಬಗ್ಗೆ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
– ಕುಲ್ಲಚಂಡ ಬೋಪಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  

‘ತ್ಯಾಜ್ಯ ವಿಲೇವಾರಿಗೆ ಚಿಂತಿಸಲಿ’

ಕಸ ಹಾಕುವುದಕ್ಕೆ ಸೂಕ್ತ ಜಾಗ ಹುಡುಕಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಗೋಣಿಕೊಪ್ಪಲು ಪಟ್ಟಣ ಕಸದ ರಾಶಿಯಾಗಿ ಸಾಂಕ್ರಾಮಿಕ ರೋಗಳ ಗೂಡಾಗಲಿದೆ. ಆಯಾ ಬಡಾವಣೆಯಲ್ಲಿ ಕಸ ಹಾಕುವುದು ಸೂಕ್ತವಲ್ಲ. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ
– ರಾಜೇಶ್‌, ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT