ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುರಿ’ಯ ಹಿಂದೆ... ಮುಂದೆ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುನಿಲ್: ಸರ್, ನಾನು ಗೂರ್ಖಾ. ಪಶ್ಚಿಮ ಬಂಗಾಳದವನು. ಇಲ್ಲಿ ಒಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಮಾಲೀಕ ವರ್ಷಕ್ಕೆ ಒಂದು ಸಲ ಸಂಬಳ ಕೊಡುತ್ತಾನೆ. ಈಗ ತಂಗಿ ಮದುವೆ ಫಿಕ್ಸ್ ಆಗಿದೆ. ಹಣ ಕೇಳಿದರೆ, ನಿನ್ನ ತಂಗಿಯನ್ನೂ ಇಲ್ಲಿ ಕರೆದುಕೊಂಡು ಬಾ, ನಮ್ಮ ಮನೆಯಲ್ಲೇ ಕೆಲಸಕ್ಕಿಟ್ಟುಕೊಳ್ಳುತ್ತೇನೆ ಅಂದ. ಇಬ್ಬರಿಗೂ ಮಾತಿಗೆ ಮಾತು ಬೆಳೆಯಿತು. ಆತನನ್ನು ಈ ಗನ್ನಿನಿಂದ ಶೂಟ್ ಮಾಡಿದ್ದೆ. ದಯವಿಟ್ಟು ನಮ್ಮೂರಿಗೆ ಹೋಗುವುದಕ್ಕೆ ರೈಲ್ವೆ ಟಿಕೆಟ್ ಕೊಡಿಸಿ....

ರಿಯಲ್ ಎಸ್ಟೇಟ್ ವ್ಯಕ್ತಿ: ಅಯ್ಯೋ... ಈ ವಿಚಾರವನ್ನು ಇಲ್ಲಿ ಯಾರಿಗೂ ಹೇಳಬೇಡ... ಮೊದಲು ನಿಮ್ಮೂರಿಗೆ ಹೋಗು. ಸುನಿಲ್‌: ಸರ್, ಈಗ ನಮ್ಮ ಮನೆಯಿಂದ ಫೋನ್ ಬಂದಿತ್ತು... ಈ ಕೊಲೆ ವಿಚಾರವನ್ನು ಯಾರಿಗೂ ಹೇಳಬೇಡ, ಊರಿಗೆ ಬಾ ಅಂತ. ಆದರೆ ನಿಮಗೆ ಹೇಳಿದ್ದೇನೆ, ಈಗ ನೀವು ಬದುಕುಳಿದರೆ ತಾನೇ. ತಬ್ಬಿಬ್ಬಾಗಿ, ಭಯಭೀತನಾದ ರಿಯಲ್ ಎಸ್ಟೇಟ್ ವ್ಯಕ್ತಿ, ತನ್ನ ಸಾವನ್ನು ತಪ್ಪಿಸಿಕೊಳ್ಳಲು ಸುನಿಲ್‌ ಮೇಲೆರಗಿ ಆತನ ಕೈಯನ್ನು ನಾಲ್ಕು ಬಾರಿ ನಲುಚಿಬಿಟ್ಟ!
                                                                                           ***
ಈ ಸನ್ನಿವೇಶವನ್ನು ಸಂತಸ ಮತ್ತು ಕೌತುಕದಿಂದ ನೋಡುತ್ತಿದ್ದ ವೀಕ್ಷಕರು ಮುಂದೇನಾಯಿತು ಎನ್ನುವಷ್ಟರಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿ ‘ಕುರಿ’ಯಾಗಿದ್ದ. ಬಂದೂಕು ಹಿಡಿದಿದ್ದ ಸುನಿಲ್ ಕೈ ಮುರುಟಿತ್ತು. ಇದು ಉದಯ ಟೀವಿಯ ‘ಕುರಿಗಳು ಸಾರ್ ಕುರಿಗಳು’ ಕಾರ್ಯಕ್ರಮದ ಸನ್ನಿವೇಶ.   ಈ ಕಾರ್ಯಕ್ರಮದ ಜನಪ್ರಿಯ ಮುಖ ಸುನಿಲ್‌ ಇಂತಹ ಅದೆಷ್ಟೋ ಪ್ರಸಂಗಗಳನ್ನು ಎದುರಿಸಿ, ತಾವು ಪೆಟ್ಟು ತಿಂದು ಜನರನ್ನು ನಗೆಯಲ್ಲಿ ತೇಲಿಸಿದ್ದಾರೆ.

ಇಲ್ಲಿಯವರೆಗೆ 65ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಸುನಿಲ್‌ ಅವರ ಚಹರೆ ಪ್ರೇಕ್ಷಕರ ನೆನಪಿನಲ್ಲಿರುವುದು ‘ಕುರಿ...’ಕಾರ್ಯಕ್ರಮದಿಂದ. ‘ಕುರಿ’ ಎಂದೇ ಅವರು ಪರಿಚಿತರು. ಹೆಣ್ಣಿನ ವೇಷ, ಪೂಜಾರಿ, ಹುಚ್ಚ, ಸ್ವಾಮೀಜಿ ಹೀಗೆ ವಿವಿಧ ಅವತಾರಗಳಲ್ಲಿ ತಮ್ಮ ಆಂಗಿಕ ಅಭಿನಯದಿಂದ ಗಮನಸೆಳೆದಿದ್ದಾರೆ. 

ಸುನಿಲ್ ಮೂಲತಃ ಹುಬ್ಬಳ್ಳಿಯವರು. ಅವರ ತಂದೆ 30 ವರ್ಷಗಳ ಹಿಂದೆ ಬದುಕು ಅರಸಿ ಬೆಂಗಳೂರು ಸೇರಿದವರು. ಬಾಲ್ಯದಿಂದಲೇ ಆರ್ಕೆಸ್ಟ್ರಾಗಳಲ್ಲಿ ಹಾಡುವುದು, ಮಿಮಿಕ್ರಿ ಮಾಡುವುದು ಸೇರಿದಂತೆ ಸಾಂಸ್ಕೃತಿಕ ಆಸಕ್ತಿ ಬೆಳೆಸಿಕೊಂಡ ಸುನಿಲ್‌ ಅವರ ಪ್ರತಿಭೆ ಅರಳಲು ಅಡ್ಡಿಯಾಗಿದ್ದು ಬಡತನ. 1800 ರೂಪಾಯಿ ಸಂಬಳಕ್ಕೆ ಅಲಂಕಾರ್‌ ಪ್ಲಾಜಾ, ಚಿಕ್ಕಪೇಟೆಯ ಬಟ್ಟೆ ಅಂಗಡಿಗಳಲ್ಲಿ ಐದಾರು ವರ್ಷ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿದರು ಸುನಿಲ್. ಚಪ್ಪಲಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಮಾತಿನ ಚಾಕಚಕ್ಯತೆಯ ಪರಿಣಾಮ ಸೂಪರ್‌ವೈಸರ್ ಸಹ ಆದರು. ಹೀಗೆ ಬದುಕು ಸಾಗುತ್ತಿದ್ದಾಗ ಅವರೊಳಗಿನ ಕಲಾವಿದನಿಗೆ ಅವಕಾಶ ಸಿಕ್ಕಿದ್ದು 2008ರಲ್ಲಿ.

‘ಲವ್‌’ ಚಿತ್ರದಲ್ಲಿ ನಾಯಕನ ಸ್ನೇಹಿತನ ಪಾತ್ರಕ್ಕೆ ಆಯ್ಕೆಯಾಗುವ ಮೂಲಕ ಅವರು ಸಿನಿಮಾರಂಗ ಪ್ರವೇಶಿಸಿದರು. ‘‘ಪತ್ರಿಕೆಯೊಂದರಲ್ಲಿ ಜಾಹೀರಾತು ನೋಡಿ ನಾನು ಆಡಿಷನ್ ಎದುರಿಸಲು ಹೋದೆ.  500ಕ್ಕೂ ಹೆಚ್ಚು ಜನ ಅಲ್ಲಿದ್ದರು. ಅಂತಿಮವಾಗಿ ನಾನು ಆಯ್ಕೆಯಾದೆ. ನನ್ನ ನಟನೆಯನ್ನು ಗುರ್ತಿಸಿದ್ದು ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ಕೆಲಸ ಮಾಡುತ್ತಿದ್ದ ಮಂಜು. ಮುಂದಿನ ದಿನಗಳಲ್ಲಿ ನನಗೆ ಚಿತ್ರರಂಗದಲ್ಲಿ ಹೆಚ್ಚು ಅವಕಾಶ ಕೊಡಿಸಿದವರೂ ಅವರೇ.

‘ಲವ್’ ನಂತರ ‘ಗೀಯ ಗೀಯ’ ಚಿತ್ರದಲ್ಲಿ ಅಭಿನಯಿಸಿದರೂ ನನಗೆ ಐಡೆಂಟಿಟಿ ತಂದುಕೊಡಲಿಲ್ಲ. ಆನಂತರ ಕೆಲ ಕಾಲ ಮನೆಯಲ್ಲಿನ ಕಷ್ಟದ ಕಾರಣಕ್ಕೆ ಬೇರೆ ಕೆಲಸದಲ್ಲಿ ತೊಡಗಿದೆ. ನಟನೆಯ ತರಬೇತಿ ಶಾಲೆಗಳಿಗೆ ಹೋಗಲು ಕಾಸಿರಲಿಲ್ಲ. ಕೆಲವು ದಿನಗಳಲ್ಲಿಯೇ ಉದಯ ಟೀವಿಯಲ್ಲಿ ಜಾಹೀರಾತು ನೀಡಿದರು; ‘ಕುರಿಗಳು’ ಕಾರ್ಯಕ್ರಮಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಎಂದು. ಅಲ್ಲಿ ಆಡಿಷನ್ ಎದುರಿಸಿದ ಮೊದಲ ದಿನವೇ ನನ್ನನ್ನೇ ಕುರಿ ಮಾಡಿದರು.

ಆದರೆ ನನ್ನ ನಟನೆ ಇಷ್ಟವಾಗಿತ್ತು. ಕುರಿಗಳು... 240 ಎಫಿಸೋಡ್ ಬಂದಿವೆ’’ ಎಂದು ಬದುಕಿನ ಏಳು–ಬೀಳುಗಳನ್ನು ನೆನಪಿಸಿಕೊಳ್ಳುತ್ತಾರೆ. ‘ಸ್ವತಂತ್ರ್ಯ ಪಾಳ್ಯ’, ‘ಹೊಂಗನಸು’, ‘ಪಲ್ಲಕ್ಕಿ’, ‘ಜೊತೆಗಾರ’ ಸೇರಿದಂತೆ ಇಲ್ಲಿಯವರೆಗೆ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಸುನಿಲ್ ನಟಿಸಿದ್ದಾರೆ. ‘ಕ್ಯೂ’, ‘ಅಂಗಾರಕ’, ‘ಸಡಗರ’ ಚಿತ್ರಗಳು ತೆರೆಕಾಣುವ ಸರದಿಯಲ್ಲಿವೆ. ಸುನಿಲ್ ಪಂಚಭಾಷಾ ಪ್ರವೀಣ. ತೆಲುಗಿನ ‘ಫೈರ್’, ‘ಮಧುರಂ ಮಧುರಂ’ ಮತ್ತಿತರ ಐದಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

‘ಜಯನಗರದಲ್ಲಿ ನಡೆದ ಒಂದು ಎಪಿಸೋಡು. ನನಗೆ ಹುಚ್ಚು ನಾಯಿ ಕಚ್ಚಿರುತ್ತದೆ. ನಾನು ನಾಯಿಯಂತೆ ಬೊಗಳುತ್ತ, ಒಬ್ಬ ದೃಢಕಾಯನ ಬಳಿ ಹೋದೆ. ಆತ ದೊಡ್ಡ ಸೂಟ್‌ಕೇಸನ್ನು ನನ್ನ ಕೈ ಮೇಲೆ ಎತ್ತಿಹಾಕಿದ. ಬೆರಳು ಮುರಿಯಿತು. ಇದು ನನ್ನ ನಟನೆಯ ಬಗ್ಗೆ ನನಗೆ ಅತಿಯಾದ ವಿಶ್ವಾಸದ ಬೆಳೆಸಲು ಕಾರಣವಾಯಿತು.

ದಡೂತಿ ವ್ಯಕ್ತಿಯನ್ನು ನನ್ನ ದೇಹಭಾಷೆಯಿಂದಲೇ ಹೆದರಿಸಿದ ಹೆಮ್ಮೆ ನನ್ನದಾಯಿತು’ ಎಂದು ಕಾರ್ಯಕ್ರಮದಿಂದಾದ ಮರೆಯದ ಅನುಭವ ನೆನಪಿಸಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಅವಕಾಶಗಳು ಚೆನ್ನಾಗಿ ಬರುತ್ತಿವೆ. ಆದರೆ ತಮಗೆ ಯಶಸ್ಸು ಮತ್ತು ಐಟೆಂಟಿಟಿ ಕೊಟ್ಟ ಕುರಿ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎನ್ನುವ ನಿಲುವು ಅವರದ್ದು.
–ಡಿ.ಎಂ.ಕುರ್ಕೆ ಪ್ರಶಾಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT