ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಲಿ’

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೃತೀಯ ಘಟಿಕೋತ್ಸವ
Last Updated 24 ಡಿಸೆಂಬರ್ 2013, 10:06 IST
ಅಕ್ಷರ ಗಾತ್ರ

ಬಾಗಲಕೋಟೆ: ರೈತ ಸಮುದಾಯದ ಆರ್ಥಿಕಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ತೋಟಗಾರಿಕೆ ವಿಶ್ವ­ವಿದ್ಯಾಲಯವು ‘ಉತ್ಪಾದಕರ ಕಂಪೆನಿ’­ಗಳ ಸ್ಥಾಪನೆಗೆ ಪ್ರಯತ್ನಿಸುತ್ತಿ­ರುವುದು ಶ್ಲಾಘನೀಯ. ರೈತರನ್ನು ಒಗ್ಗೂಡಿಸಿ ಉತ್ಪಾದನಾ ಕಂಪೆನಿಗಳನ್ನು ಅಭಿವೃದ್ಧಿ­ಪಡಿಸಬೇಕಿದೆ. ಇಂತಹ ಕಂಪೆನಿಗಳನ್ನು ಉತ್ತೇಜಿಸಿ ಉದ್ಯಮಶೀಲತೆ ಮತ್ತು ವಾಣಿಜ್ಯತೆಯ ರೂಪವನ್ನು ನೀಡಬೇಕಾದ ಅಗತ್ಯವಿದೆ ಎಂದು ಉದಯಪುರದ ಮಹಾರಾಣಾ ಪ್ರತಾಪ್‌ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎಲ್. ಮೆಹತಾ ಹೇಳಿದರು.

ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ತೃತೀಯ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ರೈತರ ಉತ್ಪನ್ನಗಳು ಅಂತರ­ರಾಷ್ಟ್ರೀಯ ಗುಣಮಟ್ಟದ ಮಾನದಂಡ­ಗಳನ್ನು ಪೂರೈಸಬೇಕಾಗಿದೆ. ಅಲ್ಲದೇ, ಅವುಗಳನ್ನು ಜಾಗತಿಕ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪಾದನೆ ಮಾಡ­ಬೇಕಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಜಾಗತಿಕ, ಮುಕ್ತ ಮಾರುಕಟ್ಟೆಯಲ್ಲಿ ಲಾಭ ಪಡೆಯಲು ಸಾಧ್ಯವಾಗುವಂತೆ ತರಬೇತಿ ನೀಡಬೇಕಿದೆ ಎಂದರು.

ದೇಶದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲೋತ್ತರ ನಷ್ಟವು ಗಮನಾರ್ಹ­ವಾಗಿದೆ. ಶೇ 20ರಿಂದ 30ರಷ್ಟು ಉತ್ಪನ್ನ ನಷ್ಟವಾಗುತ್ತಿದೆ. ಪ್ಯಾಕೇಜಿಂಗ್‌ ಮತ್ತು ಶೀತಲ ಸರಪಳಿ ನಿರ್ವಹಣೆ ಉತ್ತಮಗೊಳಿಸುವ ಮೂಲಕ ತೋಟಗಾರಿಕೆ ಉತ್ಪನ್ನ ನಷ್ಟವನ್ನು ಕಡಿಮೆ ಮಾಡಬೇಕಿದೆ ಎಂದು ಹೇಳಿದರು.

ಸಂಶೋಧನೆಯಲ್ಲಿ ಉತ್ತಮ ಪರಿಮಳ ಮತ್ತು ಪೌಷ್ಟಿಕಾಂಶ ಗುಣಮಟ್ಟದ ಜೊತೆಗೆ ಸಾಕಷ್ಟು ಜೀವಿತಾವಧಿಯನ್ನು ಹೊಂದಿರುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕಿದೆ ಎಂದರು.

ಭವಿಷ್ಯದ ಸಂಶೋಧನೆಗಳು ಕೇವಲ ಹೆಚ್ಚಿನ ಇಳುವರಿ ಕೊಡುವ ಪ್ರಬೇಧ­ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಸೀಮಿತವಾಗದೇ ಜೈವಿಕ ಮತ್ತು ಅಜೈವಿಕ ಒತ್ತಡಗಳಿಗೆ ಪ್ರತಿರೋಧ ಒಡ್ಡುವ ಪ್ರಬೇಧಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಹೇಳಿದರು.

ತೋಟಗಾರಿಕೆ ಅದರಲ್ಲೂ ವಿಶೇಷವಾಗಿ ಪುಷ್ಪಕೃಷಿ ಮತ್ತು ತರಕಾರಿ ವಲಯಗಳ ಅಭಿವೃದ್ಧಿಯಲ್ಲಿ ಖಾಸಗಿ ವಲಯಗಳ ಪಾಲ್ಗೊಳ್ಳುವಿಕೆಗೆ ಸೂಕ್ತ ವಾತಾವರಣ ಕಲ್ಪಿಸಬೇಕಾದ ಅಗತ್ಯವಿದೆ ಎಂದರು.

ನಮ್ಮ ಸಂಶೋಧನಾ ಮತ್ತು ಶಿಕ್ಷಣ ಗುಣಮಟ್ಟಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೊಳ್ಳ­ಬೇಕಾಗಿದೆ ಎಂದರು.
ತಾಂತ್ರಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ರೈತರ ಮೊಗದಲ್ಲಿ ಮೆರುಗು ಮತ್ತು ಸಂತೋಷವನ್ನುಂಟು ಮಾಡಬೇಕಿದೆ ಎಂದು ತಿಳಿಸಿದರು.

ಪದವಿ ಪಡೆದ ಯುವ ವಿಜ್ಞಾನಿಗಳು ವೃತ್ತಿಪರರಾಗಬೇಕು, ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು, ಕಠಿಣ ಪರಿಶ್ರಮ, ಅರ್ಪಣಾ ಮನೋಭಾವದಿಂದ ಘನತೆಯ ಅನ್ವೇಷಣೆಗೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ, ಶಾಸಕರಾದ ಎಚ್‌.ವೈ. ಮೇಟಿ, ಜೆ.ಟಿ.ಪಾಟೀಲ, ತೋಟಗಾರಿಕೆ ಮತ್ತು ರೇಷ್ಮಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರ­ಲಿಂಗೇಗೌಡ, ಕುಲಪತಿ ಡಾ.ಎಸ್‌.ಬಿ. ದಂಡಿನ್‌, ವಿಸ್ತರಣಾ ನಿರ್ದೇಶಕ ಡಾ.ಎ.ಬಿ. ಪಾಟೀಲ, ವಿದ್ಯಾರ್ಥಿ ಕಲ್ಯಾಣ ಡೀನ್‌ ವೈ.ಕೆ.ಕೋಟೆಕಲ್‌, ಕುಲಸಚಿವ ಎಂ.ಬಿ. ಮಾಡಲಗೇರಿ, ಚಿದಾನಂದ ಮನ್ಸೂರ್‌, ನಾಮನಿರ್ದೇಶಕರಾದ ಡಾ.ಮುನಿ­ಯಪ್ಪ, ಲಕ್ಷ್ಮಿ ಬಾಯಿ ಗೌರ್‌, ಎಚ್‌.ಕೆ. ಶ್ರೀಕಂಠ, ನಾಗೇಂದ್ರ, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಲ್‌. ಮಹೇಶ್ವರ್‌, ಶಿಕ್ಷಣ ನಿರ್ದೇಶಕ ಡಾ. ಬಿ.ರಾಜು, ಸಂಶೋಧನಾ ನಿರ್ದೇಶಕ ಜೆ. ವೆಂಕಟೇಶ್‌, ಡೀನ್‌ ಸ್ನಾತಕೋತ್ತರ ಎಂ.ಬಿ. ಗುಳೇದ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT