ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಟ್ಪಾ’ ಬಂದರೂ ಧಂ ನಿರಾತಂಕ

ನಗರ ಸಂಚಾರ
Last Updated 16 ಡಿಸೆಂಬರ್ 2013, 6:52 IST
ಅಕ್ಷರ ಗಾತ್ರ

ತುಮಕೂರು: ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’. ಬಸ್‌ ನಿಲ್ದಾಣ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಸೂಚನೆ ಕಾಣ­ಬಹುದು. ಆದರೆ ನಗರದಲ್ಲಿ ಎಲ್ಲಿಯೂ ಈ ಸೂಚನೆ ಪಾಲನೆಯಾಗುತ್ತಿಲ್ಲ.

ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ ಬರುತ್ತದೆ ಎಂದು ಭಾಷಣ ಬಿಗಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಂಬಂಧದ ಕಾಯ್ದೆ ಅನುಷ್ಠಾನದ ಕುರಿತು ಬಾಯಿ ಬಿಡುತ್ತಿಲ್ಲ.

ಭಾರತ ಒಂದರಲ್ಲೇ ಪ್ರತಿ ವರ್ಷ ಐದು ಲಕ್ಷ ಮಂದಿ ಸಿಗರೇಟು, ತಂಬಾಕು ಉತ್ಪನ್ನಗಳ ಸೇವನೆ­ಯಿಂದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್‌ ಸಾಕಷ್ಟು ಸೂಚನೆ ನೀಡಿದೆ. ಕೇಂದ್ರ, ರಾಜ್ಯ ಸರ್ಕಾರಗಳು ತಂಬಾಕು ಉತ್ಪನ್ನ, ಧೂಮಪಾನ ನಿಷೇಧ ಕಾಯ್ದೆಗಳನ್ನು ಜಾರಿಗೆ ತಂದರೂ ಪರಿಣಾಮಕಾರಿ ಅನುಷ್ಠಾನ ಕಂಡುಬರುತ್ತಿಲ್ಲ.

ನೇಪಥ್ಯಕ್ಕೆ ಸರಿದ ಕಾಯ್ದೆ: ತುಮಕೂರು ನಗರದಲ್ಲಿ ಸಿಗರೇಟು, ಇತರೆ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆ (ಕೋಟ್ಪಾ) ಜಾರಿ ನೇಪಥ್ಯಕ್ಕೆ ಸರಿ­ದಿದೆ. ಕಾಯ್ದೆ ಜಾರಿಗೆ ತರುವ ಹೊಣೆಗಾರಿಕೆಯನ್ನು ಪೊಲೀಸ್‌ ಇಲಾಖೆಗೆ ನೀಡಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಈಚೆಗೆ ‘ಕೋಟ್ಪಾ’ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ, ಮಾಹಿತಿ ನೀಡಲಾಗಿದೆ.

ಹೋಟೆಲ್‌, ರೆಸ್ಟೋರೆಂಟ್‌, ಶಾಲಾ, ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಅದು ಪಾಲನೆಯಾಗುತ್ತಿಲ್ಲ.

ಕಾನೂನು ಜಾರಿ ವಿಧಾನ: ‘ಕೋಟ್ಪಾ’ ಕಾಯ್ದೆ­ಯಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಸಬ್‌ಇನ್‌ಸ್ಪೆಕ್ಟರ್‌ ಅಥವಾ ಅವರಿಗಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ರೂ 200ರ ವರೆಗೆ ದಂಡ ವಿಧಿಸಬಹುದು.

ಸಿಗರೇಟು ಅಥವಾ ಹೊಗೆಸೊಪ್ಪು ಕುರಿತ ಜಾಹೀರಾತು ಪ್ರದರ್ಶಿಸಿದರೆ ರೂ 1000 ದಂಡ, 2 ವರ್ಷ ಜೈಲು ಶಿಕ್ಷೆ, ಅಪರಾಧ ಪುನರಾವರ್ತನೆ­ಯಾದರೆ ರೂ 5000 ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಬಹುದು.

18 ವರ್ಷದ ಒಳಗಿನವರು ಹಾಗೂ ಶಾಲಾ ಕಾಲೇಜುಗಳ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ರೂ 200ರ ವರೆಗೆ ದಂಡ, ಉತ್ಪಾದಕರಿಗೂ  ರೂ 5000 ದಂಡ, ಎರಡು ವರ್ಷ ಜೈಲು, ಅಪರಾಧ ಮರುಕಳಿಸಿದರೆ ರೂ 10 ಸಾವಿರ ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ.

ಕಾಣದ ಜಾಹೀರಾತು: ಸಿಗರೇಟು, ಇತರ ತಂಬಾಕು ಉತ್ಪನ್ನ ಮಾರಾಟ ಮಾಡುವ ಬಹುತೇಕ ಅಂಗಡಿಗಳಲ್ಲಿ ಕಾಯ್ದೆಯಂತೆ ಜಾಹೀರಾತು ಫಲಕ ಹಾಕದಿರುವುದು ಕಂಡುಬಂದಿದೆ. ತಂಬಾಕು ಉತ್ಪಾ­ದಕ ಕಂಪೆನಿಗಳ ಹೆಸರಿರುವ ಫಲಕ ಹಾಕಬಾರದೆಂಬ ಕಾನೂನಿದೆ.

ಆದರೆ ಯಾವೊಬ್ಬ ಮಾರಾಟಗಾರರು ಈ ಸೂಚನೆ ಪಾಲಿಸಿಲ್ಲ. ಧೂಮಪಾನ ನಿಷೇಧದ ಗುರುತನ್ನೂ ಫಲಕದಲ್ಲಿ ಪ್ರದರ್ಶಿಸಿಲ್ಲ. ಕಾಯ್ದೆ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಪೊಲೀಸರು ಈವರೆಗೂ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿಲ್ಲ.
ಧೂಮಪಾನ ವಲಯ: 30ಕ್ಕಿಂತ ಹೆಚ್ಚು ಕೊಠಡಿ ಹೊಂದಿರುವ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ನಿರ್ಮಾಣ ಮಾಡಬೇಕು. ನಗರದ ಯಾವ ಹೋಟೆಲ್, ವಸತಿಗೃಹದಲ್ಲೂ ಇದು ಕಂಡುಬರುವುದಿಲ್ಲ.

200ಕ್ಕೂ ಹೆಚ್ಚು ಪ್ರಕರಣ ದಾಖಲು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರ ವಿರುದ್ಧ ಕಳೆದ ಎರಡು ತಿಂಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ ಎಂದು ‘ಕೋಟ್ಪಾ’ ಜಾರಿ ನೋಡೆಲ್‌ ಅಧಿ­ಕಾರಿಯೂ ಆಗಿರುವ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ­ಯಾಗಿ ಕಾಯ್ದೆ ಅನುಷ್ಠಾನಗೊಳಿಸಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT