ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಲೀನ್ ಬೌಲ್ಡ್ ಆಗಿದ್ದೆ; ಸಿಕ್ಸರ್‌ಗೆ ಅವಕಾಶ ಕೊಡಿ’

Last Updated 9 ಏಪ್ರಿಲ್ 2014, 8:21 IST
ಅಕ್ಷರ ಗಾತ್ರ

‘ಎರಡು ಬಾರಿ ಕ್ಲೀನ್ ಬೌಲ್ಡ್ ಆಗಿದ್ದೇನೆ. ಈಗ ಸಿಕ್ಸರ್ ಹೊಡೆಯಲು ಅವಕಾಶ ಕಲ್ಪಿಸಿ. ಮೋದಿ ಅಲೆ ಇದೆ ಎಂಬ ಪ್ರಚಾರಕ್ಕೆ ಮರುಳಾಗಬೇಡಿ. ಮೋದಿ ಪಕ್ಷದ ಸಂಸದರು ಐದು ವರ್ಷ ನಿಮಗಾಗಿ ಮಾಡಿದ್ದೇನು ಎಂಬ ಅವಲೋಕನ ಮಾಡಿ. ನಾನೂ ಯುವಕ. ಅಂತರರಾಷ್ಟ್ರೀಯ ಕ್ರೀಡಾಪಟು. ಅಭಿವೃದ್ಧಿಯ ಕನಸಿದೆ. ಎಲ್ಲರೂ ಸೇರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯೋಣ’.
ವಿಜಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಪ್ರಕಾಶ ರಾಠೋಡ ಅವರು ಜಿಲ್ಲೆಯ ಯುವಜನತೆ ಹಾಗೂ ಮತದಾರರಿಗೆ ಮಾಡಿದ ಮನವಿ ಇದು.

ಪ್ರಕಾಶ ರಾಠೋಡ ಬಿ.ಕಾಂ. ಎಂ.ಬಿ.ಎ. ಪದವೀಧರ. ಟೆಲಿಕಾಂ ಇಲಾಖೆಯಲ್ಲಿ 11 ವರ್ಷಗಳ ಕಾಲ ಉಪ ವ್ಯವಸ್ಥಾ­ಪಕ­ರಾಗಿ ಸೇವೆ ಸಲ್ಲಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ ಪಟು. ವಿಧಾನ ಪರಿಷತ್‌ ನಾಮಕರಣ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದವರು.  ಅವರ ತಂದೆ ದಿ.ಕೆ.ಟಿ. ರಾಠೋಡ ರಾಜ್ಯ ಸರ್ಕಾರದಲ್ಲಿ ಸಚಿವರು, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪ್ರಕಾಶ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಾರ.

*ಪ್ರಶ್ನೆ: ನೀವು ಗುರುತಿಸಿರುವ ಕ್ಷೇತ್ರದ ಸಮಸ್ಯೆ ಮತ್ತು ನಿಮ್ಮ ಆದ್ಯತೆ ಏನು?
ಪ್ರಕಾಶ:
ಜಿಲ್ಲೆಯ ಅಭಿವೃದ್ಧಿ ಆಗಬೇಕು. ಜಿಲ್ಲೆಯ ಧ್ವನಿ ಸಂಸತ್ತಿನಲ್ಲಿ ಮೊಳಗಬೇಕು. ಕೇಂದ್ರದ ಯೋಜನೆಗಳು ಜಿಲ್ಲೆಗೆ ಬರಬೇಕು. ರೈಲ್ವೆ ಸಂಪರ್ಕ ನಮ್ಮ ಜಿಲ್ಲೆಗೆ ಅತಿ ಕಡಿಮೆ. ಬ್ರಾಡ್‌ಗೇಜ್‌ ಬಂದಿದ್ದರೂ ರೈಲುಗಳು ಬರುತ್ತಿಲ್ಲ. ಇದ್ದ ರೈಲುಗಳ ವೇಗ ಹೆಚ್ಚುತ್ತಿಲ್ಲ ಮತ್ತು ಕೆಲ ರೈಲುಗಳಲ್ಲಿ ಸೀಟು ಕಾಯ್ದಿರಿಸುವ ಅವಕಾಶವೂ ಇಲ್ಲ. ವಿಜಾಪುರ ನಗರದಲ್ಲಿ ಮೂರು ರೈಲ್ವೆ ಲೇವಲ್‌ ಕ್ರಾಸಿಂಗ್‌ ಇವೆ. ಅವುಗಳಿಗೆ ಮೇಲ್ಸೇತುವೆ ನಿರ್ಮಿಸುವ ಕೆಲಸ ಆಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತು ತೋಟಗಾರಿಕೆ ಬೆಳೆಗಳ ರಫ್ತಿಗೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಸಬ್ಸಿಡಿ ಕೊಡುತ್ತದೆ. ವ್ಯವಸ್ಥಿತವಾಗಿ ಕೇಂದ್ರದ ಯೋಜನೆಗಳನ್ನು ತಂದರೆ ಸಾವಿರಾರು ಕೋಟಿ ಅನುದಾನ ಹರಿದು ಬರಲಿದೆ. ಇವು ಸಂಸದರು ಮಾಡಬೇಕಾದ ಕೆಲಸ. ಈ ಎಲ್ಲ ಕೆಲಸ ಮಾಡುವುದು ನನ್ನ ಆದ್ಯತೆ.

* ಪ್ರಶ್ನೆ: ನೀವು ‘ವೈಟ್ ಕಾಲರ್’ ಮನುಷ್ಯ, ವಿಜಾಪುರದಲ್ಲಿ ಇರುವುದೇ ಇಲ್ಲ ಎಂಬ ಆರೋಪ ಇದೆಯಲ್ಲ?
ಪ್ರಕಾಶ
: ಇದು ಸುಳ್ಳು ಆರೋಪ. ವಿರೋಧ ಪಕ್ಷದವರು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ನಾವೀಗ ಕುಳಿತು ಮಾತನಾಡುತ್ತಿರುವುದು ವಿಜಾಪುರದ ನನ್ನ ಸ್ವಂತ ಮನೆಯಲ್ಲಿ. ನಾನು ಇಲ್ಲಿಯೇ ಹುಟ್ಟಿದ್ದೇನೆ. ಈ ಜಿಲ್ಲೆಯ ಮಗ. ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ನೀನು ಅಂತರರಾಷ್ಟ್ರೀಯ ಕ್ರೀಡಾಪಟು. ಪಕ್ಷದ ಪ್ರಮುಖ ಜವಾಬ್ದಾರಿ ಹುದ್ದೆಯಲ್ಲಿರುವ ಮನುಷ್ಯ. ಆದರೆ, ವಿಜಾಪುರ ಜಿಲ್ಲೆಗೆ ಮಾತ್ರ ಏಕೆ ಸೀಮಿತ ಆಗುತ್ತಿಯಾ? ಎಂದು ಬೆಂಗಳೂರಿನಲ್ಲಿ ನನ್ನನ್ನು ಕೇಳುತ್ತಾರೆ. ಕಳೆದ ನಾಲ್ಕೂವರೆ ವರ್ಷದಿಂದ ಇಲ್ಲಿಯೇ ಇದ್ದು, ಇಡೀ ಜಿಲ್ಲೆ ಸುತ್ತಿದ್ದೇನೆ. ನಾನು ಭೇಟಿ ನೀಡಿರುವ ಪೈಕಿ ಶೇ.10ರಷ್ಟು ಹಳ್ಳಿಗಳಿಗೂ ಹಾಲಿ ಸಂಸದರು ಭೇಟಿ ನೀಡಿಲ್ಲ.

*ಪ್ರಶ್ನೆ: ಹಾಲಿ ಸಂಸದರ ಕಾರ್ಯವೈಖರಿ ತೃಪ್ತಿದಾಯಕವಾಗಿದೆಯೇ?
ಪ್ರಕಾಶ:
ರಮೇಶ ಜಿಗಜಿಣಗಿ ಅವರು ಐದು ವರ್ಷ ಸಂಸದರಾಗಿ ಈ ಜಿಲ್ಲೆಗೆ ಏನನ್ನೂ ಮಾಡಿಲ್ಲ. ಜಿಲ್ಲೆಯ ಬೇಡಿಕೆಗಳ ಬಗೆಗೆ ಸಂಸತ್ತಿನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ? ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಕೇಂದ್ರದ ಯೋಜನೆಗಳನ್ನು ತರಲು ಏನೇನು ಕ್ರಮ ಕೈಗೊಂಡಿದ್ದಾರೆ? ಕೂಡಗಿ ಸ್ಥಾವರ ತಮ್ಮ ಸಾಧನೆ ಎನ್ನುತ್ತಾರೆ. ವಾಸ್ತವವಾಗಿ ಸುಶೀಲ್‌ಕುಮಾರ ಶಿಂಧೆ ಅವರು ಇಂಧನ ಸಚಿವರಾಗಿದ್ದಾಗ ಎಂ.ಬಿ. ಪಾಟೀಲ ಮತ್ತು ಶಿವಾನಂದ ಪಾಟೀಲರ ಕೋರಿಕೆಯಂತೆ ಆ ಸ್ಥಾವರವನ್ನು ಜಿಲ್ಲೆಗೆ ಮಂಜೂರು ಮಾಡಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೆ ಪತ್ರ ಬರೆದಿದ್ದೇನೆ ಎಂದು ಜಿಗಜಿಣಗಿ ಹೇಳುತ್ತಾರೆ. ಪತ್ರ ಬರೆಯುವುದೇ ಸಾಧನೆ ಅಲ್ಲ. ಬೆನ್ನುಹತ್ತಿ ಕೆಲಸ ಮಾಡಿಸಿಕೊಂಡು ಕ್ಷೇತ್ರದ ಜನತೆಯ ಋಣ ತೀರಿಸಬೇಕು. ಇದರಲ್ಲಿ ಜಿಗಜಿಣಗಿ ವಿಫಲರಾಗಿದ್ದಾರೆ.

* ಪ್ರಶ್ನೆ: ನೀವೂ ವಿಧಾನ ಪರಿಷತ್‌ ಸದಸ್ಯರಾಗಿದ್ದೀರಿ, ಜಿಲ್ಲೆಗೆ ನಿಮ್ಮ ಕೊಡುಗೆ ಏನು?
ಪ್ರಕಾಶ:
ವಿಧಾನ ಪರಿಷತ್ ಸದಸ್ಯನಾಗಿ ವಿಜಾಪುರ ಜಿಲ್ಲೆಗೆ ನಾನು ಮಾಡಿದ ಕೆಲಸ ಮತ್ತು ಪರಿಷತ್‌ನಲ್ಲಿಯ ನನ್ನ ಹೋರಾಟವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇನೆ. ಜಿಗಜಿಣಗಿ ಅವರು ತಮ್ಮ ಸಾಧನೆಗಳನ್ನೂ ಪ್ರಕಟಿಸಲಿ. ಇನ್ನು ವಿಜಾಪುರ ನಗರದ ಒಳಚರಂಡಿ ಯೋಜನೆಗೆ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನಾವೆಲ್ಲ ಜಿಲ್ಲೆಯ ಕಾಂಗ್ರೆಸ್ಸಿಗರು ಸೇರಿ ಮಂಜೂರಾತಿ ಕೊಡಿಸಿದ್ದೆವು. ನಾನು ಏನೂ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ.

*ಪ್ರಶ್ನೆ: ಹಿಂದೆ ಎರಡು ಚುನಾವಣೆ ಎದುರಿಸಿದ್ದೀರಿ. ಆಗ ಮತ್ತು ಈಗಿನ ಚುನಾವಣೆಯಲ್ಲಿ ಏನು ವ್ಯತ್ಯಾಸ ಕಾಣುತ್ತೀದ್ದೀರಿ.
ಪ್ರಕಾಶ:
ಒಗ್ಗಟ್ಟಿನ ಪ್ರದರ್ಶನ ಮತ್ತು ಜನರ ಸ್ಪಂದನೆ ಹಿಂದಿನಗಿಂತ ಈಗ ಹೆಚ್ಚಾಗಿದೆ. ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಎಲ್ಲೆಡೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡು ಬಾರಿ ಸೋತಿದ್ದೇನೆ. ಇನ್ನೊಂದು ಅವಕಾಶ ನನ್ನ ಪಕ್ಷದಿಂದ ಸಿಗಲಿಕ್ಕಿಲ್ಲ. ಜಿಲ್ಲೆಯಲ್ಲಿ ನನ್ನ ಬಗ್ಗೆ ದೊಡ್ಡ ಅನುಕಂಪವಿದೆ. ಸರ್ಕಾರದ ಸಾಧನೆ ಮತ್ತು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈ ಎಲ್ಲ ಅಂಶಗಳು ದೊಡ್ಡ ಪ್ರಮಾಣದ ಮುನ್ನಡೆಗೆ ಕಾರಣವಾಗಲಿವೆ.

*ಪ್ರಶ್ನೆ: ನೀವು ಒಬ್ಬ ಕ್ರೀಡಾಪಟು. ಗೆದ್ದರೆ ಕ್ರೀಡಾ ಉತ್ತೇಜನಕ್ಕೆ ನಿಮ್ಮ ಕೊಡುಗೆ ಏನಿರುತ್ತದೆ?
ಪ್ರಕಾಶ:
ಸೈಕ್ಲಿಂಗ್‌ ವೆಲ್ಲೊಡ್ರೋಮ್‌, ಕ್ರಿಕೆಟ್‌ಗೆ ಸುಸಜ್ಜಿತ ಕ್ರೀಡಾಂಗಣ ಮತ್ತು ಒಂದು ಕ್ರಿಕೆಟ್‌ ಅಕಾಡೆಮಿ ಸ್ಥಾಪನೆ. ಹಾಕಿ–ಫುಟ್‌ಬಾಲ್‌, ಗ್ರಾಮೀಣ ಪ್ರದೇಶದಲ್ಲಿ ಕುಸ್ತಿಗೆ ಉತ್ತೇಜನ ನೀಡುವ ಯೋಜನೆ ಹಾಕಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT