ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಕಾಕ ಮತದಾರರ ಸೇವೆಯೇ ನನ್ನ ಗುರಿ’

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಪೌರ ಸನ್ಮಾನ
Last Updated 1 ಡಿಸೆಂಬರ್ 2019, 11:42 IST
ಅಕ್ಷರ ಗಾತ್ರ

ಗೋಕಾಕ: ‘ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸದ ದ್ಯೋತಕವಾಗಿ ನನ್ನನ್ನು ಸತತ ನಾಲ್ಕು ಬಾರಿ ಈ ವಿಧಾನಸಭಾ ಮತ ಕ್ಷೇತ್ರದಿಂದ ಆಯ್ಕೆಗೊಳಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ಹೀಗಾಗಿ, ಮತಕ್ಷೇತ್ರ ಸೇರಿದಂತೆ ಸಮಸ್ತ ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ’ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಮಯೂರ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪೌರ ಹಾಗೂ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಗೋಕಾಕ ಜನತೆ ನನಗಿಂದು ನೀಡುತ್ತಿರುವ ಈ ಪೌರ ಸನ್ಮಾನ ಇದು ಕೇವಲ ನನಗಾಗಿರದೇ ನನ್ನ ತಂದೆ–ತಾಯಿ ಆದಿಯಾಗಿ ಇಡೀ ಜಾರಕಿಹೊಳಿ ಕುಟುಂಬಕ್ಕೆ ನೀಡಿದ ಸನ್ಮಾನವಾಗಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

‘ಸಮಸ್ತ ನಾಗರಿಕರ ಅನುಕೂಲಕ್ಕಾಗಿ ಹಾಗೂ ನಗರದ ಸೌಂದರ್ಯ ವರ್ಧನೆಗಾಗಿ ಮಾಸ್ಟರ್‌ ಪ್ಲಾನ್ ಅನುಷ್ಠಾನಕ್ಕೆ ನಾಗರಿಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿರುವುದು ನಿಜಕ್ಕೂ ನೆಮ್ಮದಿ ಎಂದಿದೆ. ಎಲ್ಲ ಜಾತಿ ಹಾಗೂ ವರ್ಗಗಳಿಗೆ ಸೇರಿದ ಜನರಿಗೆ ನಾನು ಸಮಾನ ಪ್ರಾಧಾನ್ಯತೆ ನೀಡಿದ್ದೇನೆ. ಗೋಕಾಕ ನಗರವನ್ನು ಅಭಿವೃದ್ಧಿಪಡಿಸಿ ರಾಜ್ಯದ ಸುಂದರ ನಗರಗಳಲ್ಲಿ ಒಂದಾಗಿ ಮಾಡಬೇಕು ಎಂಬುದು ನನ್ನ ಮಹದಾಸೆ’ ಎಂದರು.

ರಾಜಕೀಯ ಕನಸು: ಸಚಿವರ ಸಹೋದರ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ‘ಜಾರಕಿಹೊಳಿ ಕುಟುಂಬ ಇಂಥ ಸನ್ಮಾನ ಸ್ವೀಕರಿಸಲು ತಗುಲಿದ ಸಮಯ 33 ವರ್ಷಗಳು! ಎಂದರಲ್ಲದೇ ‘ತಂದೆ ಲಕ್ಷ್ಮಣರಾವ್‌ ಅವರ ಕನಸಾಗಿದ್ದ ರಾಜಕೀಯ ಕನಸು ಇಂದು ನನಸಾಗಿದೆ’ ಎಂದು ಸಂತಸಪಟ್ಟರು.

‘ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ಮೂಲಕವೇ ನಾವು ಜನರಿಂದ ಮನ್ನಣೆ ಗಳಿಸಲು ಸಾಧ್ಯ ಎಂಬುದಕ್ಕೆ ಗೋಕಾಕ ತಾಲ್ಲೂಕಿನ ರಾಜಕೀಯವೇ ಸಾಕ್ಷಿ ಎಂದು ವಿಶ್ಲೇಷಿಸಿದ ಅವರು, ಭವಿಷ್ಯದ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪರಿಶ್ರಮ ವಹಿಸುವುದು ಅಗತ್ಯವಾಗಿದೆ’ ಎಂದರು.

‘ನಾನು ಇನ್ನೂ ಮುಂದಿನ 9 ವರ್ಷಗಳ ತನಕ ರಾಜಕೀಯದಲ್ಲಿ ಸಕ್ರಿಯವಾಗಿರಲು ಬಯಸಿದ್ದು, ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಸೂತ್ರಧಾರನನ್ನಾಗಿ ಒಬ್ಬ ಸೂಕ್ತ ಮತ್ತು ಅರ್ಹ ವ್ಯಕ್ತಿಯನ್ನು ನಿಯುಕ್ತಗೊಳಿಸುವೆ. ಆದರೆ ಕುಟುಂಬ ರಾಜಕಾರಣ ಮುಂದುವರಿಸುವ ದೃಷ್ಟಿಯಿಂದ ಕುಟುಂಬದ ಸದಸ್ಯರನ್ನು ಅರಭಾಂವಿ ಯಿಂದ ಚುನಾವಣಾ ಕಣಕ್ಕಿಳಿಸುವ ಇಚ್ಛೆ ಇಲ್ಲ’ ಎಂದು ಸ್ಪಷಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಸಿದ್ಧಲಿಂಗ ದಳವಾಯಿ ಹಾಗೂ ಜಿ.ಪಂ. ಸದಸ್ಯ ತುಕಾರಾಮ ಕಾಗಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ದೇವಪ್ಪ ಉಳ್ಳೇಗಡ್ಡಿ, ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಜಮಾದಾರ, ಉದ್ಯಮಿ ಲಖನ್‌ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ, ಪ್ರಭಾ ಶುಗರ್ಸ್‌ ಚೇರಮನ್‌ ಅಶೋಕ ಪಾಟೀಲ, ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ, ನಗರಸಭೆ ಸದಸ್ಯ ಎಸ್‌.ಎ. ಕೋತ್ವಾಲ್‌, ವಕೀಲರ ಸಂಘದ ಅಧ್ಯಕ್ಷ ಎಲ್‌.ಎನ್‌. ಬೂದಿಗೊಪ್ಪ, ವರ್ತಕರಾದ ಸೋಮಶೇಖರ ಮಗದುಮ್‌, ಕುಬೇಂದ್ರ ಕಲಾಲ್‌, ಮೊಹಸಿನ್‌ ಖ್ವಾಜಾ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಎ.ಜೆ. ಕೋಳಿ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ: ಇದಕ್ಕೂ ಮೊದಲು ನಗರದ ಮೆರಕನಟ್ಟಿ ಲಕ್ಷ್ಮೀದೇವಿ ಗುಡಿಯ ಆವರಣದಿಂದ ಸಚಿವ ಜಾರಕಿ ಹೊಳಿ ಅವರನ್ನು ತೆರೆದ ಜೀಪ್‌ನಲ್ಲಿ ಮೆರವಣಿಗೆ ಮೂಲಕ ಮಯೂರ ಶಾಲಾ ಆವರಣಕ್ಕೆ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿ ಗರು ಅವರ ಪರ ಹರ್ಷೋದ್ಗಾರಗಳನ್ನು ಮೊಳಗಿಸಿದರು. ಮೆರವಣಿಗೆ ಶಾಲಾ ಆವರಣ ತಲುಪುತ್ತಿದ್ದಂತೆಯೇ ಬೃಹತ್‌ ವೇದಿಕೆಯಲ್ಲಿ ಸಭೆಯಾಗಿ ಮಾರ್ಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT