ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂದ್ರಲೋಕ’ದಲ್ಲಿ ಬದುಕು ಗಗನ ಕುಸುಮವಲ್ಲ..

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಚಂದ್ರನನ್ನು ತೋರಿಸಿ ಮಕ್ಕಳಿಗೆ ತುತ್ತುಣಿಸುವುದು ರೂಢಿ. ಅದೇ ಚಂದ್ರಗ್ರಹದಲ್ಲಿ ಬದುಕು ಸಾಗಿಸುವಂತಾದರೆ!

ಹೌದು, ನಾಸಾ (ನ್ಯಾಷನಲ್‌ ಏರೋನಾಟಿಕ್ಸ್‌ ಅಂಡ್ ಸ್ಪೇಸ್‌ ಅಡ್ಮಿನಿಷ್ಟ್ರೇಶನ್‌) ಅನುದಾನದಲ್ಲಿ ಗಗನಯಾನಿಗಳು, ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದ ಪ್ರಮುಖರನ್ನೊಳಗೊಂಡ ಸ್ವತಂತ ತಂಡವೊಂದು ನಡೆಸಿದ ಸಂಶೋಧನೆಯೊಂದು ಇದು ಸಾಧ್ಯ ಎನ್ನುತ್ತಿದೆ. ಈ ಪ್ರಯತ್ನ ಕೈಗೂಡಿದ್ದೇ ಆದಲ್ಲಿ ಕೆಲವೇ ವರ್ಷಗಳಲ್ಲಿ ಭೂಮಿಯ ಉಪಗ್ರಹವಾದ ಚಂದ್ರನಲ್ಲಿ ಮನುಷ್ಯ ಜೀವನ ಸಾಗಿಸಬಹುದು.

ಮೂವರು ಗಗನಯಾನಿಗಳನ್ನು ಹೊತ್ತ ಅಪೊಲೊ-11 ಚಂದ್ರನಲ್ಲಿ ಇಳಿದು ಜುಲೈ 20ಕ್ಕೆ 46 ವಸಂತಗಳು ಪೂರ್ಣಗೊಂಡವು. ಆ ದಿನದಂದೇ ಚಂದ್ರ ನಿವಾಸದ ಯೋಜನೆಯ ಕೈಗೂಡಲಿದೆ ಎಂಬ ವಿಷಯ ಪ್ರಕಟಿಸಲಾಗಿದೆ ಎಂದು ದಿ ವರ್ಜ್‌ ಎಂಬ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಯಾವಾಗ ಮತ್ತು ಹೇಗೆ ಚಂದ್ರ ಗ್ರಹ ತಲುಪಬಹುದು ಎಂಬುದರ ಸಂಪೂರ್ಣ ಯೋಜನೆಯನ್ನು ನೆಕ್ಸ್‌ಜೆನ್ ಸ್ಪೇಸ್‌ ಎಲ್‌ಎಲ್‌ಸಿ ಸಿದ್ಧಪಡಿಸಿದೆ.

ಈ ಯೋಜನೆಯನ್ನು ನಾಸಾ ತಕ್ಷಣ ಕೈಗೆತ್ತಿಕೊಂಡರೆ 2017ರ ವೇಳೆಗೆ ಮೊದಲ ಹಂತದ ಪ್ರಯೋಗ ಪೂರ್ಣಗೊಳ್ಳಲಿದೆ. ನಂತರ ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ. ಚಂದ್ರ ಗ್ರಹದಲ್ಲಿ ಉಳಿದುಕೊಳ್ಳಲು ಶಾಶ್ವತ ತಾಣ ನಿರ್ಮಿಸುವ ಕೆಲಸ 2021ರಿಂದ ಆರಂಭವಾಗಲಿದ್ದು, ಆನಂತರದ ವರ್ಷದಲ್ಲಿ ಮನುಷ್ಯ ಅಲ್ಲಿಗೆ ತೆರಳಬಹುದಾಗಿದೆ.

ಮಾನವರನ್ನು ಚಂದ್ರ ಗ್ರಹಕ್ಕೆ ಕರೆದುಕೊಂಡು ಹೋಗುವುದಕ್ಕೆ ಸಂಬಂಧಿಸಿದಂತೆ ನಾಸಾ ಪ್ರಮುಖ ಕಂಪೆನಿಗಳಾದ ಸ್ಪೇಸ್‌ಎಕ್ಸ್‌, ಆರ್ಬಿಟಲ್‌ ಎಟಿಕೆ ಅಥವಾ ಯುನೈಟೆಡ್‌ ಲಂಚ್‌ ಅಲಯನ್ಸ್‌ಗಳ ಜತೆ ಸಾರ್ವಜನಿಕ–ಖಾಸಗಿ ಒಪ್ಪಂದ ಮಾಡಿಕೊಳ್ಳುವುದು ಒಳಿತು ಎಂದು ಸಂಶೋಧನೆ ಸಲಹೆ ನೀಡಿದೆ.

ಸದ್ಯ ಗಗನಕ್ಕೆ ಕೊಂಡೊಯ್ಯುವ ಪ್ರತಿ ಕೆಜಿ ವಸ್ತುವಿಗೆ ಸ್ಪೇಸ್‌ ಎಕ್ಸ್‌ ಸಂಸ್ಥೆಯು ನಾಸಾಗೆ 4,750 ಡಾಲರ್‌ (ಈಗಿನ ಲೆಕ್ಕದಲ್ಲಿ ₹3 ಲಕ್ಷಕ್ಕೂ ಅಧಿಕ)  ಶುಲ್ಕ ವಿಧಿಸುತ್ತಿದೆ. ಆದರೆ, ಅಪೊಲೊ ಎರಾ ಸ್ಟ್ಯಾಟರ್ನ್‌-ವಿ ಪ್ರತಿ ಕೆಜಿಗೆ 46 ಸಾವಿರ ಡಾಲರ್‌ ( ₹29.21 ಲಕ್ಷ) ಮತ್ತು ಸ್ಪೇಸ್‌ ಶಟಲ್‌ 60 ಸಾವಿರ ಡಾಲರ್‌  ( ₹38.10 ಲಕ್ಷ) ತೆಗೆದುಕೊಳ್ಳುತ್ತಿವೆ. ಆದ್ದರಿಂದ ಆರ್ಥಿಕವಾಗಿ ಸ್ಪೇಸ್ ಎಕ್ಸ್‌ ಸೇವೆಯೇ ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.

ಈಗಾಗಲೇ ತನ್ನ ಮುಂದಿನ ತಲೆಮಾರಿನ ರಾಕೆಟ್‌ ಸ್ಪೇಸ್‌ ಲಂಚ್‌ ಸಿಸ್ಟಂ (ಎಸ್‌ಎಲ್‌ಸಿ) ಮೂಲಕ ಚಂದ್ರನಲ್ಲಿಗೆ ಹೋಗುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆಯಾದರೂ, ಅಲ್ಲಿ ಉಳಿಯುವ ಯೋಜನೆ ಇಲ್ಲ. ನಾಸಾ ಖಾಸಗಿ ಸಂಸ್ಥೆಗಳ ಸಹಾಯ ಪಡೆದರೆ ಯೋಜಿತ 12 ಎಸ್‌ಎಲ್‌ಸಿಗಳಿಗೆ ಬದಲಾಗಿ ಮೂರು ರಾಕೆಟ್‌ಗಳಲ್ಲೇ ತೆರಳಬಹುದು. ಇದರಿಂದ ಆರ್ಥಿಕ ಹೊರೆಯೂ ತಪ್ಪಲಿದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ ನಾಸಾದ ನಾಲ್ವರು ಮಾಜಿ ಗಗನಯಾನಿಗಳು, ಆಡಳಿತ ಮಂಡಳಿಯ ಮಾಜಿ ಸದಸ್ಯರು, ವಾಣಿಜ್ಯ ಸ್ಪೇಸ್‌ಫ್ಲೈಟ್ ಕ್ಷೇತ್ರದ ಸದಸ್ಯನ್ನೊಳಗೊಂಡ 21ತಜ್ಞರ ತಂಡ ಈ ಸಂಶೋಧನಾ ವರದಿ ಸಿದ್ಧಪಡಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT