ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಛೋಟಾ ಮುಂಬೈ’ಯಲ್ಲಿ ರಾಜಕಾರಣ ಮತ್ತು ವ್ಯಾಪಾರ!

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇನ್ನೂ ತನ್ನ ಒಡಲಲ್ಲಿ ಹಳ್ಳಿಯ ಗುಣಗಳನ್ನೇ ತುಂಬಿಕೊಂಡಿರುವ ಹುಬ್ಬಳ್ಳಿ ರಾಜ್ಯದ ಪ್ರಮುಖ ವ್ಯಾಪಾರಿ ಕೇಂದ್ರ. ಹೆಸರಿನಲ್ಲಿಯೇ ಹಳ್ಳಿ ಹೊಂದಿರುವ ಇದು ಗ್ರಾಮೀಣ ಪ್ರದೇಶದ ಆಚರಣೆಗಳನ್ನು ಇಟ್ಟುಕೊಂಡಿದೆ. ಈಗಲೂ ಜವಾರಿ ಎಮ್ಮೆಗಳು ಈ ನಗರದ ಮುಖ್ಯರಸ್ತೆಗಳಲ್ಲಿ ಯಾವ ಮುಲಾಜೂ ಇಲ್ಲದೆ ಸಾಗುತ್ತವೆ. ದಿನಾಲೂ ಅವುಗಳನ್ನು ಹೊಲಕ್ಕೆ ಮೇಯಲು ಹೊಡೆದುಕೊಂಡು ಹೋಗುವಂತೆ ಕೆಲವರು ಮುಖ್ಯರಸ್ತೆಯ ಮೇಲೆಯೇ ಹೊಡೆದುಕೊಂಡು ಸಾಗುತ್ತಾರೆ.

ಇಲ್ಲಿ ವ್ಯಾಪಾರ ರಾಜಕಾರಣದೊಳಗೋ, ರಾಜಕಾರಣದೊಳಗೆ ವ್ಯಾಪಾರವೋ ಎಂದು ಬಿಡಿಸಿ ಹೇಳುವುದು ಕಷ್ಟ. ವ್ಯಾಪಾರಿಗಳೂ ಇಲ್ಲಿ ರಾಜಕಾರಣಿಗಳಾಗಿದ್ದಾರೆ. ರಾಜಕಾರಣಿಗಳಾದವರೂ ವ್ಯಾಪಾರಕ್ಕೆ ಮುಂದಾಗಿದ್ದಾರೆ.

ಕಾಳುಕಡಿ ವ್ಯಾಪಾರಿಯಾಗಿದ್ದ ಚಂದ್ರಕಾಂತ ಬೆಲ್ಲದ ಶಾಸಕರಾಗಿದ್ದರು. ಆಟೋಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿದ್ದ ಅರವಿಂದ್‌ ಬೆಲ್ಲದ ಶಾಸಕರಾಗಿದ್ದಾರೆ. ಹುಬ್ಬಳ್ಳಿ– ಧಾರವಾಡ ಲೋಕಸಭಾ ಕ್ಷೇತ್ರದ ಈಗಿನ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಫಿನಾಯಿಲ್‌ ವ್ಯಾಪಾರಿ. ಕಾಂಗ್ರೆಸ್‌ ಅಭ್ಯರ್ಥಿ ವಿಜಯ್‌ ಕುಲಕರ್ಣಿ ಸ್ವಂತ ಡೇರಿ ಮಾಡಿಕೊಂಡು ಹಾಲಿನ ವ್ಯಾಪಾರ ನಡೆಸಿದ್ದಾರೆ. ಗುಜರಾತ್‌ನಿಂದ 500 ಮುರ್ರಾ ಎಮ್ಮೆಗಳನ್ನು ತರಿಸಿ ವ್ಯವಹಾರ ನಡೆಸಿದ್ದಾರೆ. ಎಮ್ಮೆಗಳನ್ನು ನೋಡಿಕೊಳ್ಳಲು ಗುಜರಾತ್‌ನವರನ್ನೇ ನೇಮಿಸಿದ್ದಾರೆ. ಆ ಮಟ್ಟಿಗೆ ಅವರಿಗೆ ಗುಜರಾತ್‌ ಮಾದರಿಯಾಗಿದೆ.

ಉದ್ಯಮಿಯಾಗಿದ್ದ ವಿಜಯ ಸಂಕೇಶ್ವರ ರಾಜಕಾರಣಿಯಾಗಿ ಬದಲಾದವರು. ಕಾಂಗ್ರೆಸ್‌ ಮುಖಂಡ ಶಂಕರಣ್ಣ ಮುನವಳ್ಳಿ ಎಪಿಎಂಸಿ ದಲ್ಲಾಳಿಯಾಗಿದ್ದವರು. ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ಅವರದು ವ್ಯಾಪಾರಿ ಹಿನ್ನೆಲೆಯ ಕುಟುಂಬ ಅಲ್ಲ. ಆದರೆ ಅವರು ರಾಜಕಾರಣಿಯಾದ ನಂತರ ಅವರ ಕುಟುಂಬ ರಿಯಲ್‌ ಎಸ್ಟೇಟ್‌ ದಂಧೆ ನಡೆಸುತ್ತಿದೆ. ಈಗ ವ್ಯಾಪಾರಿಗಳು, ರಾಜಕಾರಣಿಗಳು ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಬಹುತೇಕ ಸಹಕಾರ ಸಂಘ, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆ­ಗಳಲ್ಲಿಯೂ ವ್ಯಾಪಾರಿಗಳೇ ತುಂಬಿಕೊಂಡಿದ್ದಾರೆ. ಬಹುತೇಕ ಎಲ್ಲ ಪಕ್ಷದವರಿಗೂ ವ್ಯಾಪಾರಿಗಳೇ ಬೆನ್ನೆಲುಬು. ನರೇಂದ್ರ ಮೋದಿ ಈಗಾಗಲೇ ಹುಬ್ಬಳ್ಳಿಗೆ 2 ಬಾರಿ ಬಂದಿ­ದ್ದಾರೆ. ಮತ್ತೊಮ್ಮ ಬರುವ ಸಾಧ್ಯತೆಯೂ ಇದೆ ಎಂದು ಜೋಶಿ ಹೇಳುತ್ತಾರೆ. ಅವರ ಚುನಾವಣಾ ರ್‍್ಯಾಲಿಗೆ ವ್ಯಾಪಾರಿಗಳೇ ಹಣ ಕೊಡುತ್ತಾರೆ ಎಂಬ ಮಾಹಿತಿಯನ್ನು ಇಲ್ಲಿನ ರಾಜಕೀಯ ಕಾರ್ಯಕರ್ತರು ನೀಡುತ್ತಾರೆ. ಇದು ನರೇಂದ್ರ ಮೋದಿ ರ್‍್ಯಾಲಿಗೆ ಮಾತ್ರ ಅಲ್ಲ. ರಾಹುಲ್‌ ಗಾಂಧಿ ಬಂದರೂ ಹಣ ಕೊಡುವವರು ಇಲ್ಲಿನ ವ್ಯಾಪಾರಿಗಳೆ.

ಹುಬ್ಬಳ್ಳಿ ಒಂದು ಕಾಲಕ್ಕೆ ಹತ್ತಿ, ಈರುಳ್ಳಿ, ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧವಾಗಿತ್ತು. ಜೊತೆಗೆ ನಕಲಿ ಮದ್ಯಕ್ಕೂ ಇದು ಹೆಸರುವಾಸಿ ಆಗಿತ್ತು. ಕಮರಿಪೇಟೆಯ ದರ್ಬಾರ್‌ ಮುಗಿದ ನಂತರ ಈಗ ನಕಲಿ ಮದ್ಯ ತಯಾರಿಕೆ ಇಲ್ಲ. ಈದ್ಗಾ ವಿವಾದದಿಂದ ಕೋಮು ಗಲಭೆ ಹೆಚ್ಚಾಗಿ ಹತ್ತಿ, ಮೆಣಸಿನಕಾಯಿ ವ್ಯಾಪಾರ ಕೂಡ ಬ್ಯಾಡಗಿ, ರಾಣೆಬೆನ್ನೂರು, ಹಾವೇರಿಗೆ ಸ್ಥಳಾಂತರಗೊಂಡಿದೆ. ಈಗ ಉಳಿದಿ­ರು­ವುದು ಈರುಳ್ಳಿ, ಬಟ್ಟೆ ವ್ಯಾಪಾರ ಮಾತ್ರ. ಹೊಸದಾಗಿ ಇಲ್ಲಿ ಚಿನ್ನದ ಉದ್ಯಮ ಕೂಡ ಚಿಗುರೊಡೆಯುತ್ತಿದೆ.

1995ರ ನಂತರ ಈದ್ಗಾ ಮೈದಾನದ ವಿವಾದ ತಣ್ಣಗಾಗಿದೆ. ನಕಲಿ ಮದ್ಯದ ಉದ್ಯಮದ ವಿಜೃಂಭಣೆ ಕಾಲದಲ್ಲಿ ಯಾವುದು ನಕಲಿ, ಯಾವುದು ಅಸಲಿ ಎಂಬುದು ಗೊತ್ತಾಗದೇ ಇರುವಷ್ಟು ಚಾಕಚಕ್ಯತೆಯನ್ನು ಅದು ಬೆಳೆಸಿಕೊಂಡಿತ್ತು.  ಈಗಲೂ ಇದು ನಕಲಿ ಉದ್ಯಮಕ್ಕೆ ಹೆಸರುವಾಸಿ. ನಕಲಿ ಬಟ್ಟೆ, ನಕಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಇಲ್ಲಿ ಬೇಕಾಬಿಟ್ಟಿ ಬಿಕರಿಯಾಗುತ್ತವೆ. ಮುಂಬೈ ಮತ್ತು ಚೆನ್ನೈ ನಡುವಿನ ಸೇತುವೆ­ಯಾಗಿ ಹುಬ್ಬಳ್ಳಿ ಕೆಲಸ ಮಾಡುತ್ತದೆ.

ಹವಾಲಾ ಮತ್ತು ಮಟ್ಕಾ ದಂಧೆ ವ್ಯಾಪಕವಾಗಿದೆ. ಮಟ್ಕಾದ ಲೋಡ್‌ಗಟ್ಟಲೆ ಹಣ ಹುಬ್ಬಳಿ–ಕೊಲ್ಲಾಪುರದ ಮೂಲಕ ಮುಂಬೈಗೆ ಹೋಗುತ್ತದೆ. ಕ್ರಿಕೆಟ್‌ ಬೆಟ್ಟಿಂಗ್‌ ಇಲ್ಲಿ ವ್ಯಾಪಕವಾಗಿದೆ. ಈ ಎಲ್ಲ ಅಂಶಗಳೂ ಇಲ್ಲಿನ ಪೊಲೀಸರಿಗೆ, ರಾಜಕಾರಣಿಗಳಿಗೆ ಗೊತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಇಂತಹ ದಂಧೆ­ಯಲ್ಲಿ­ರುವವರು ಎಲ್ಲ ರಾಜಕಾರಣಿಗಳನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ.

ಮಟ್ಕಾ ದಂಧೆ ಮೊದಲು ಎಲ್ಲ ಬೀಡಾ ಅಂಗಡಿಗಳಲ್ಲಿ ನಡೆಯುತ್ತಿತ್ತು. ಈಗ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಮಟ್ಕಾ ಎರಡೂ ಮೊಬೈಲ್‌ಗಳಲ್ಲಿಯೇ ನಡೆಯುತ್ತವೆ. ಈ ಎರಡೂ ದಂಧೆಗಳ ದರ ನಿಗದಿಯಾಗುವುದು ಮಾತ್ರ ಮುಂಬೈನಲ್ಲಿ. ಕೊಪ್ಪಿಕರ ರಸ್ತೆಯಲ್ಲಿ ಮಾತಿಗೆ ಸಿಕ್ಕ ಏಜೆಂಟ್‌ ಒಬ್ಬರು ಕ್ರಿಕೆಟ್‌ ಬೆಟ್ಟಿಂಗ್‌ನ ವಾಸ್ತವಾಂಶವನ್ನು ಬಿಡಿಸಿ ಹೇಳಿದರು. ಈಗ ಸದ್ಯಕ್ಕೆ ಟಿ–20 ವಿಶ್ವಕಪ್‌ ನಡೆಯುತ್ತಿರುವುದರಿಂದ ಬೆಟ್ಟಿಂಗ್‌ ಇನ್ನೂ ರಾಜಕಾರಣಕ್ಕೆ ಹೊರಳಿಲ್ಲ. ಚುನಾವಣೆ ಹತ್ತಿರಕ್ಕೆ ಬಂದಾಗ ರಾಜಕೀಯ ಬೆಟ್ಟಿಂಗ್‌ ಮುಗಿಲು ಮುಟ್ಟುತ್ತದೆ. ಫಲಿತಾಂಶದ ಹೊತ್ತಿಗೆ ಅದು ಇನ್ನೂ ಹೆಚ್ಚಾಗುತ್ತದಂತೆ.

‘ಈಗ ರಾಜಕೀಯದ ಬೆಟ್ಟಿಂಗ್‌ ಇಲ್ವೇ’ ಎಂದು ಕೇಳಿದರೆ, ‘ಈಗಲೂ ಇದೆ. ಆದರೆ ರೇಟ್‌ ಕಡಿಮೆ’ ಎನ್ನುತ್ತಾರೆ ಅವರು. ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಬೆಟ್‌ ಕಟ್ಟಿದರೆ ಈಗ ನೂರಕ್ಕೆ 130 ರೂಪಾಯಿ ನೀಡಲಾಗುತ್ತದೆ. ಇತರ ಪಕ್ಷಗಳಿಗೆ ನೂರಕ್ಕೆ 165 ರೂಪಾಯಿ ನೀಡಲಾಗುತ್ತದೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು ಬೆಟ್‌ ಕಟ್ಟಿದರೆ ನೂರಕ್ಕೆ 120 ರೂಪಾಯಿ ಸಿಗುತ್ತದೆ. ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಬೆಟ್‌ ಕಟ್ಟಿದರೆ ನೂರಕ್ಕೆ 220 ರೂಪಾಯಿ ಸಿಗುತ್ತದೆ. ಅಂದರೆ ನೀವು ಕಟ್ಟುವ ನೂರು ರೂಪಾಯಿಗೆ ಪ್ರತಿಯಾಗಿ ನಿಮಗೆ ಕೊಡುವ ಹಣ ಹೆಚ್ಚಿದಷ್ಟೂ ಗೆಲುವಿನ ಸಾಧ್ಯತೆ ಕಡಿಮೆ ಎಂದು ಅವರು ಮಾಹಿತಿ ನೀಡುತ್ತಾರೆ.

ಬೆಟ್ಟಿಂಗ್‌ನಲ್ಲಿ ನರೇಂದ್ರ ಮೋದಿಗಿಂತ ರಾಹುಲ್‌ ಗಾಂಧಿ ಮುಂದೆ ಇದ್ದಾರೆ ಯಾಕೆ ಎಂದು ಪ್ರಶ್ನೆ ಮಾಡಿದರೆ ‘ಬೆಟ್ಟಿಂಗ್‌ ವ್ಯವಹಾರ ಇರುವುದೇ ಹಾಗೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು ಬೆಟ್‌ ಕಟ್ಟುವವರ ಸಂಖ್ಯೆ ಜಾಸ್ತಿ. ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಬೆಟ್‌ ಕಟ್ಟುವವರು ಕಡಿಮೆ. ಅದಕ್ಕೆ ಮೋದಿ ರೇಟ್‌ ಕಡಿಮೆ. ರಾಹುಲ್‌ ರೇಟ್‌ ಜಾಸ್ತಿ. ಕ್ರಿಕೆಟ್‌ನಲ್ಲಿಯೂ ಹೀಗೆ. ಭಾರತ– ನೆದರ್‌ಲೆಂಡ್‌ ಪಂದ್ಯ ನಡೆದಾಗ ಭಾರತಕ್ಕೆ ಕಡಮೆ ಹಣ. ನೆದರ್‌ಲೆಂಡ್‌ಗೆ ಹೆಚ್ಚು ಹಣ ಇತ್ತು. ಕ್ರಿಕೆಟ್‌ನಲ್ಲಿ ಫ್ಯಾನ್ಸಿ ಬೆಟ್ಟಿಂಗ್‌ ಕೂಡ ಇದೆ. ಮೊದಲ ಓವರ್‌ನಲ್ಲಿ ಎಷ್ಟು ರನ್‌ ಹೊಡೆಯುತ್ತಾರೆ. ಎಷ್ಟು ಸಿಕ್ಸರ್‌ ಹೊಡೆಯುತ್ತಾರೆ ಎನ್ನುವ ವಿಷಯ­ದಲ್ಲಿಯೂ ಬೆಟ್ಟಿಂಗ್‌ ನಡೆಯುತ್ತದೆ’ ಎಂದು ಅವರು ವಿವರಿಸುತ್ತಾರೆ..

ಇವೆಲ್ಲಾ ಹುಬ್ಬಳ್ಳಿ ಸಿಟಿಯ ಕತೆಯಾದರೆ ಗ್ರಾಮಾಂತರದಲ್ಲಿ ರಾಜಕೀಯ ಬೆಟ್ಟಿಂಗ್‌ ಇನ್ನೂ ಜೋರಾಗಿದೆ. ಅಲ್ಲಿ ಕುರಿ, ಕೋಳಿ, ಎಮ್ಮೆಯನ್ನೂ ಬೆಟ್‌ ಕಟ್ಟುತ್ತಾರೆ.

ಇಷ್ಟೆಲ್ಲಾ ಇದ್ದರೂ ಇಲ್ಲಿನ ಪಕ್ಕಾ ವ್ಯಾಪಾರಿಗಳು ಮಾತ್ರ ಈಗಿನ ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದೂ ಕೂಡ ಮುಂಬೈ ಅನುಕರಣೆ. ಮುಂಬೈ­ಯಲ್ಲಿ ವ್ಯಾಪಾರಿಗಳಿಗೂ ರಾಜಕಾರಣಿಗಳಿಗೂ ಸಂಬಂಧ ಇದೆ. ಆದರೆ ಅವರು ನೇರವಾಗಿ ರಾಜಕೀಯ ಮಾಡುವುದಿಲ್ಲ. ಅದಕ್ಕೇ ಅಲ್ಲಿ ಕನ್ನಡಿಗ ಜಾರ್ಜ್ ಫರ್ನಾಂಡಿಸ್‌ ಕೂಡ ಗೆಲ್ಲಲು ಸಾಧ್ಯವಾಗಿದ್ದು. ರಾಜಕಾರಣಿಗಳಿಗೆ ಹಣ ನೀಡುವ ವ್ಯಾಪಾರಿ­ಗಳು ಮತ ಚಲಾಯಿಸುವುದಕ್ಕೆ ಬರುವುದೂ ಕಷ್ಟ. ‘ಅಂಗಡಿ ಬಾಗಿಲು ಹಾಕಿ ಮತ ಚಲಾಯಿಸಲು ಬರಲೇನು? ಎಂದು ಅಲ್ಲಿನ ವ್ಯಾಪಾರಿಗಳು ಪ್ರಶ್ನೆ ಮಾಡು­ತ್ತಾರೆ. ಹಾಗೆಯೇ ಹುಬ್ಬಳ್ಳಿ ವ್ಯಾಪಾರಿಗಳೂ ಕೂಡ ಮತದಾನದ ಬಗ್ಗೆ ಉತ್ಸಾಹ ತೋರುವುದು ಕಡಿಮೆ’  ಎಂದು ಉದ್ಯಮಿ ಮದನ್‌ ದೇಸಾಯಿ ಹೇಳುತ್ತಾರೆ.

ಎಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಸಮಸ್ಯೆಗಳ ಸರಮಾಲೆ ಇದೆ. ಕುಡಿಯುವ ನೀರು, ಕಳಸಾ–ಬಂಡೂರಿ, ರಸ್ತೆ ಮುಂತಾದ ಬೇಕಾದಷ್ಟು ಸಮಸ್ಯೆಗಳಿವೆ. ಈ ಸಮಸ್ಯೆ­ಗಳನ್ನು ನಿವಾರಿಸುವ ಅಸಲಿ ನಾಯಕರ ಶೋಧದಲ್ಲಿ ಮತದಾರರು ತೊಡಗಿದ್ದಾರೆ. ರಾಜಕೀಯ ನಾಯಕರಲ್ಲಿ ಅಸಲಿ ಯಾರು, ನಕಲಿ ಯಾರು ಎನ್ನುವುದನ್ನು ಪತ್ತೆ ಮಾಡುವುದು ಕಷ್ಟ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT